ಏನಿದು ಬ್ರೆಕಿಯಲ್ ಪ್ಲೆಕ್ಸಸ್? ಮಗು ಹುಟ್ಟುವಾಗ ಎದುರಾಗುವ ಈ ತೊಂದರೆ ಭವಿಷ್ಯಕ್ಕೆ ಮಾರಕವಾಗಬಹುದು, ನಿರ್ಲಕ್ಷ್ಯ ಮಾಡದಿರಿ
ಹೆರಿಗೆಯ ಸಮಯದಲ್ಲಿ ಎದುರಾಗುವ ಈ ಒಂದು ಸಮಸ್ಯೆಯಿಂದ ಮಗುವಿನ ಭವಿಷ್ಯಕ್ಕೆ ಕಂಟಕ ಎದುರಾಗಬಹುದು. ಇದೊಂದು ಅಪರೂಪದ ತೊಂದರೆಯಾಗಿದ್ದು ಅದಕ್ಕೆ ಪ್ರಸೂತಿ ಸಂಬಂಧಿತ ಬ್ರೆಕಿಯಲ್ ಪ್ಲೆಕ್ಸಸ್ ಪಾಲ್ಸಿ ಎಂದು ಕರೆಯುತ್ತಾರೆ.

ಹೆರಿಗೆಯ ಸಮಯದಲ್ಲಿ ಸಾಮಾನ್ಯವಾಗಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಆದರೆ ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ ಭುಜದ ಡಿಸ್ಟೋಸಿಯಾದಂತಹ ಸಮಸ್ಯೆಗಳು ಎದುರಾಗಬಹುದು.ಇದರಿಂದ ಉಂಟಾಗುವ ಸಮಸ್ಯೆಗಳಲ್ಲಿ ಒಂದು ಪ್ರಸೂತಿ ಸಂಬಂಧಿತ ಬ್ರೆಕಿಯಲ್ ಪ್ಲೆಕ್ಸಸ್ ಪಾಲ್ಸಿ (OBPP), ಇದು ಹೆರಿಗೆಯ ಸಮಯದಲ್ಲಿ ಸಂಭವಿಸಬಹುದಾದ ನರಗಳ ಗಾಯವಾಗಿದೆ. ಇದು ನವಜಾತ ಶಿಶುವಿನ ತೋಳು ದುರ್ಬಲಗೊಳ್ಳಲು ಅಥವಾ ತೀವ್ರತರವಾದ ಸಂದರ್ಭಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಒಬಿಪಿಪಿಯಿಂದ ಉಂಟಾಗುವ ತೊಂದರೆಗಳು, ಅದರ ರೋಗಲಕ್ಷಣಗಳನ್ನು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಶೀಘ್ರವಾಗಿ ಗುರುತಿಸುವುದು ಮತ್ತು ತ್ವರಿತ ಚಿಕಿತ್ಸೆ ಪಡೆಯುವುದು, ದೀರ್ಘಕಾಲದಲ್ಲಿ ಸಂಭವಿಸಬಹುದಾದ ತೊಡಕುಗಳನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಪ್ರಸೂತಿ ಸಂಬಂಧಿತ ಬ್ರೆಕಿಯಲ್ ಪ್ಲೆಕ್ಸಸ್ ಪಾಲ್ಸಿ ಎಂದರೇನು?
ಒಬಿಪಿಪಿ ಎಂಬುದು ಹೆರಿಗೆಯ ಸಮಯದಲ್ಲಿ ಉಂಟಾಗುವ ಗಾಯವಾಗಿದ್ದು, ಇದರಿಂದ ಬೆನ್ನುಮೂಳೆಯನ್ನು ಭುಜ, ತೋಳು ಮತ್ತು ಕೈಗಳಿಗೆ ಸಂಪರ್ಕಿಸುವ ನರಗಳು ಎಳೆತಕ್ಕೆ ಒಳಗಾಗುವುದು ಅಥವಾ ಹರಿದು ಹೋಗಬಹುದು. ಈ ನರಗಳು ತೋಳಿನಲ್ಲಿ ಚಲನೆ ಮತ್ತು ಸಂವೇದನೆಯನ್ನು ನಿಯಂತ್ರಿಸುತ್ತವೆ. ಆದ್ದರಿಂದ ಅವು ಹಾನಿಗೊಳಗಾದರೆ ತೋಳು ದುರ್ಬಲವಾಗಬಹುದು, ತೋಳಿನ ಚಲನೆ ಕಡಿಮೆಯಾಗಬಹುದು ಅಥವಾ ಸರಿಯಾಗಿ ಬೆಳವಣಿಗೆ ಹೊಂದದೇ ಇರಬಹುದು.
ಒಬಿಪಿಪಿಗೆ ಸಾಮಾನ್ಯ ಕಾರಣವೆಂದರೆ ಭುಜದ ಡಿಸ್ಟೋಸಿಯಾ, ಇದು ಮಗುವಿನ ತಲೆ ಹೊರಬಂದ ನಂತರ ತಾಯಿಯ ಶ್ರೋಣಿಯ ಮೂಳೆಯ ಹಿಂದೆ ಭುಜವು ಸಿಲುಕಿಕೊಂಡಾಗ ಸಂಭವಿಸುತ್ತದೆ. ಹೆರಿಗೆಯ ಸಮಯದಲ್ಲಿ, ಮಗುವನ್ನು ಬಿಡಿಸಲು ಪ್ರಯತ್ನಿಸುವಾಗ ಭುಜ ಎಳೆತಕ್ಕೆ ಒಳಗಾಗಬಹುದು ಅಥವಾ ಹಿಗ್ಗಬಹುದು ಅಥವಾ ನರಗಳು ಹರಿದು ಹೋಗಬಹುದು.
ಜನನದ ನಂತರ ಒಬಿಪಿಪಿಯ ಸಾಮಾನ್ಯ ಸಂಕೇತಗಳು
ಹೆಚ್ಚಿನ ಒಬಿಪಿಪಿ ಪ್ರಕರಣಗಳು ಜನನದ ಸ್ವಲ್ಪ ಸಮಯದ ನಂತರ ಕಾಣಿಸಿಕೊಳ್ಳುತ್ತವೆ.
ಸಾಮಾನ್ಯ ಲಕ್ಷಣಗಳು ಇಲ್ಲಿವೆ:
* ಒಂದು ತೋಳು ತಾನಾಗಿಯೇ ಚಲಿಸದಿರುವುದು.
* ಸಡಿಲವಾಗಿ ನೇತಾಡುವ ಅಥವಾ ಅಸಾಮಾನ್ಯ ಸ್ಥಾನದಲ್ಲಿ ತಿರುಗಿದ ತೋಳು.
* ಗಾಯಗೊಂಡ ಬದಿಯ ಕೈಯ ಹಿಡಿತ ದುರ್ಬಲವಾಗಿರುವುದು.
* ಶಿಶು ಗಾಬರಿಗೊಂಡಾಗ ಸಾಧಾರಣವಾಗಿ ಕಂಡುಬರುವ ಮೋರೋ ರಿಫ್ಲೆಕ್ಸ್ ಅಥವಾ ಸ್ಟಾರ್ಟಲ್ ರಿಫ್ಲೆಕ್ಸ್ ಎಂದು ಕರೆಯಲ್ಪಡುವ ಪ್ರತಿಕ್ರಿಯೆಗಳು ಗಾಯಗೊಂಡ ದೇಹದ ಬದಿಯಲ್ಲಿ ಸಂಭವಿಸುವುದಿಲ್ಲ
ಕೆಲವು ಸೌಮ್ಯ ಗಾಯಗಳು ಕೆಲವು ವಾರಗಳು ಅಥವಾ ತಿಂಗಳುಗಳಲ್ಲಿ ಸ್ವಯಂ-ಪ್ರೇರಿತವಾಗಿ ಗುಣವಾಗಬಹುದು. ಆದರೆ ಗಂಭೀರವಾದ ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿರಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಸಮಸ್ಯೆಯನ್ನು ಮೊದಲೇ ಕಂಡುಹಿಡಿಯುವುದು ಮತ್ತು ಅದನ್ನು ತ್ವರಿತವಾಗಿ ಚಿಕಿತ್ಸೆ ನೀಡುವುದು ನಿರ್ಣಾಯಕವಾಗಿದೆ.
ಒಬಿಪಿಪಿ ಗಮನಕ್ಕೆ ಬಾರದೆ ಹೋದಾಗ: ಬೇಬಿ ಶಾಹಿದಾಳ ಕಥೆ
ನರಶಸ್ತ್ರಚಿಕಿತ್ಸಕರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ತನ್ನ ತೋಳನ್ನು ಮತ್ತೆ ಬಳಸಲು ಸಾಧ್ಯವಾದ ಬೆಂಗಳೂರಿನ 2 ವರ್ಷದ ಬಾಲಕಿ ಬೇಬಿ ಶಾಹಿದಾ (ಹೆಸರು ಬದಲಾಯಿಸಲಾಗಿದೆ)ಳ ಕಥೆ ಇದು.
ಮಗು ಶಾಹಿದಾ ಪೂರ್ಣಾವಧಿಯಲ್ಲಿ ಜನಿಸಿದಳು, ಆದರೆ ಹೆರಿಗೆಯಲ್ಲಿ ಭುಜದ ಡಿಸ್ಟೋಸಿಯಾದ ಸಮಸ್ಯೆ ಉಂಟಾಯಿತು. ಜನನದ ನಂತರ ಅವಳ ಬಲಗೈ ಹೆಚ್ಚು ಚಲಿಸದಿದ್ದರೂ, ಅದು ತನ್ನಿಂದ ತಾನೇ ಸರಿಯಾಗುತ್ತದೆ ಎಂದು ಭಾವಿಸಿದ ಅವಳ ಕುಟುಂಬ ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಲಿಲ್ಲ. ಅವಳಿಗೆ ಎರಡು ವರ್ಷ ತುಂಬುವ ಹೊತ್ತಿಗೆ, ಶಾಹಿದಾಳ ತೋಳು ದುರ್ಬಲವಾಗಿತ್ತು. ಭುಜದ ಬಳಿ ಗಟ್ಟಿಯಾಗಿತ್ತು ಮತ್ತು ಅವಳು ತನ್ನ ಮಣಿಕಟ್ಟು ಅಥವಾ ಬೆರಳುಗಳನ್ನು ಸುಲಭವಾಗಿ ಚಲಿಸಲು ಸಾಧ್ಯವಾಗಲಿಲ್ಲ.
ಆಕೆಯ ಪೋಷಕರು ಕೊನೆಗೆ ನರಶಸ್ತ್ರಚಿಕಿತ್ಸಕರನ್ನು ಭೇಟಿಯಾದರು. ಎಲೆಕ್ಟ್ರೋಮ್ಯೋಗ್ರಫಿ (EMG) ಮತ್ತು ಇಮೇಜಿಂಗ್ನಂತಹ ಸುಧಾರಿತ ಪರೀಕ್ಷೆಗಳನ್ನು ಬಳಸಿಕೊಂಡು ನೋಡಿದಾಗ ಮಗುವಿಗೆ ಸಂಪೂರ್ಣ ಬ್ರೆಕಿಯಲ್ ಪ್ಲೆಕ್ಸಸ್ ಗಾಯವಾಗಿರುವುದು ಪತ್ತೆಯಾಯಿತು.
ಸ್ವಲ್ಪ ಸಮಯದವರೆಗೆ ಈ ಸ್ಥಿತಿಯನ್ನು ನಿರ್ಲಕ್ಷಿಸಿದ್ದರಿಂದ, ಫಿಸಿಯೋಥೆರಪಿಯಂತಹ ಚಿಕಿತ್ಸೆಗಳು ಕೆಲಸ ಮಾಡಲಿಲ್ಲ ಮತ್ತು ನೈಸರ್ಗಿಕ ಗುಣಪಡಿಸುವಿಕೆಯ ಅವಕಾಶವು ಮುಗಿದು ಹೋಗಿತ್ತು. ತಕ್ಷಣದ ಕ್ರಮ ಕೈಗೊಳ್ಳುವ ಅಗತ್ಯವಾಗಿತ್ತು.
ತೀವ್ರತರವಾದ ಒಬಿಪಿಪಿ ಚಿಕಿತ್ಸೆ: ಶಸ್ತ್ರಚಿಕಿತ್ಸಾ ಕ್ರಮ
ಶಾಹಿದಾಳ ತೋಳಿನ ಚಲನೆ ಮತ್ತು ಕ್ರಿಯೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ಸಂಕೀರ್ಣವಾದ ನರ ಶಸ್ತ್ರಚಿಕಿತ್ಸೆಯನ್ನು ನಡೆಸಲು ವೈದ್ಯರು ವಿವರವಾದ ವಿಧಾನವನ್ನು ನಿರ್ಧರಿಸಿದರು. ಅವಳ ಕಾರ್ಯವಿಧಾನವು ಈ ಕೆಳಗಿನವುಗಳನ್ನು ಒಳಗೊಂಡಿತ್ತು:
• ಭುಜದ ಬಿಗಿತವನ್ನು ಬಿಡುಗಡೆ ಮಾಡಲು ಮತ್ತು ಕೀಲಿನ ಚಲನಶೀಲತೆಯನ್ನು ಸುಧಾರಿಸಲು ಶಸ್ತ್ರಚಿಕಿತ್ಸೆ.
• ಭುಜದ ಚಲನೆಯನ್ನು ಸುಧಾರಿಸಲು ಸ್ನಾಯುರಜ್ಜು ಸರಿಸಲು ಶಸ್ತ್ರಚಿಕಿತ್ಸೆ.
• ಮೊಣಕೈ ಮತ್ತು ಮಣಿಕಟ್ಟಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡಲು ಪಕ್ಕೆಲುಬುಗಳ ನಡುವಿನ ನರಗಳನ್ನು ತೋಳಿಗೆ ಸ್ಥಳಾಂತರ ಶಸ್ತ್ರಚಿಕಿತ್ಸೆ.
ಶಸ್ತ್ರಚಿಕಿತ್ಸೆ ಕಷ್ಟಕರವಾಗಿತ್ತು, ಆದರೆ ತಜ್ಞರ ಸಹಾಯದಿಂದ ಅದನ್ನು ಯಶಸ್ವಿಯಾಗಿ ಮಾಡಲಾಯಿತು. ಕೆಲವು ತೀವ್ರವಾದ ಫಿಸಿಯೋಥೆರಪಿಯ ನಂತರ, ಕೆಲವು ವಾರಗಳಲ್ಲಿ ಆಕೆಯ ತೋಳಿನಲ್ಲಿ ಚಲನೆಯ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ಇಂತಹ ಸಂದರ್ಭಗಳಲ್ಲಿ ಸಮಯ ಬಹಳ ಮುಖ್ಯವಾಗುತ್ತದೆ. ಹೆಚ್ಚು ಸಮಯ ಕಾಯುವುದರಿಂದ ಚೇತರಿಕೆ ತುಂಬಾ ಕಷ್ಟವಾಗಬಹುದು. ಅದೃಷ್ಟವಶಾತ್, ನಾವು ಮಗುವಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಯಿತು.
ಒಬಿಪಿಪಿ ರೋಗನಿರ್ಣಯ ಮತ್ತು ಚಿಕಿತ್ಸೆ
ಮಗುವಿಗೆ ಒಬಿಪಿಪಿ ಇದೆ ಎಂದು ಪೋಷಕರಿಗೆ ಅನುಮಾನವಿದ್ದರೆ, ಈ ಕೆಳಗಿನ ವಿವರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ:
1. ಶಿಶುಗಳಲ್ಲಿ ಕೈ ಅಥವಾ ತೋಳಿನ ಚಲನೆ ಇಲ್ಲದೇ ಇರುವುದು, ದುರ್ಬಲ ಹಿಡಿತ ಅಥವಾ ಅಸಾಮಾನ್ಯ ತೋಳಿನ ಸ್ಥಾನದಂತಹ ಆರಂಭಿಕ ಸಂಕೇತಗಳನ್ನು ಗಮನಿಸಿ.
2. ಮೌಲ್ಯಮಾಪನಕ್ಕಾಗಿ ತಜ್ಞರನ್ನು ವಿಶೇಷವಾಗಿ ಮಕ್ಕಳ ನ್ಯೂರೊಲೊಜಿಸ್ಟ್ ಅಥವಾ ನ್ಯೂರೋಸರ್ಜನ್ ಅವರನ್ನು ಸಂಪರ್ಕಿಸಿ.
3. ರೋಗಲಕ್ಷಣಗಳು ಕೆಲವು ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, EMG ಮತ್ತು MRI ನಂತಹ ರೋಗನಿರ್ಣಯ ಪರೀಕ್ಷೆಗಳನ್ನು ಮಾಡಿಸಿ.
4. ಸೌಮ್ಯವಾದ ಪ್ರಕರಣಗಳಿಗೆ ಆರಂಭಿಕ ಹಂತದ ಫಿಸಿಯೋಥೆರಪಿ ಸಹಾಯಕವಾಗಬಹುದು.
5. ಮೊದಲ 3 ರಿಂದ 6 ತಿಂಗಳೊಳಗೆ ಯಾವುದೇ ಸುಧಾರಣೆ ಇಲ್ಲದಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.
6. ಶಸ್ತ್ರಚಿಕಿತ್ಸೆಯ ನಂತರ ಪೂರ್ಣ ಚಲನಶೀಲತೆಯನ್ನು ಮರಳಿ ಪಡೆಯಲು ಪುನರ್ವಸತಿ ಮುಖ್ಯವಾಗಿದೆ.
ದೀರ್ಘಕಾಲೀನ ಹಾನಿಯನ್ನು ತಡೆಗಟ್ಟುವುದು
ಶಾಹಿದಾಳ ಸ್ಥಿತಿಯಲ್ಲಿ ಆದಂತೆ, ಚಿಕಿತ್ಸೆಯನ್ನು ವಿಳಂಬ ಮಾಡುವುದರಿಂದ ದೀರ್ಘಕಾಲೀನ ಅಂಗವೈಕಲ್ಯ ಉಂಟಾಗಬಹುದು. ಆರಂಭಿಕ ಹಂತದ ರೋಗನಿರ್ಣಯ, ಪೋಷಕರು ಜಾಗೃತರಾಗಿರುವುದು ಮತ್ತು ಮಗುವನ್ನು ತಜ್ಞರ ಬಳಿಗೆ ಕರೆದೊಯ್ಯುವುದು ಬಹಳ ಮುಖ್ಯ. ಇದರಿಂದ ಮಗುವಿನ ಬದುಕನ್ನು ಬದಲಿಸಲು ಸಾಧ್ಯವಿದೆ. ಒಬಿಪಿಪಿ ಅನ್ನು ಯಾವಾಗಲೂ ತಡೆಗಟ್ಟಲು ಸಾಧ್ಯವಾಗದಿದ್ದರೂ, ಅದನ್ನು ಮೊದಲೇ ಪತ್ತೆ ಮಾಡಿದರೆ ಅದರ ಪರಿಣಾಮಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಇದು ಕೇವಲ ಚಲನೆಯನ್ನು ಮರಳಿ ಪಡೆಯುವುದಷ್ಟೇ ಅಲ್ಲ, ಈ ಮಗುವಿಗೆ ಇತರ ಮಕ್ಕಳಂತೆ ಆಟವಾಡಲು, ಕಲಿಯಲು ಮತ್ತು ಬೆಳೆಯಲು ಅವಕಾಶವನ್ನು ನೀಡುವುದು ಕೂಡ ಆಗಿದೆ.
ಹೆರಿಗೆ ಪ್ರಕ್ರಿಯೆಯು ಸೂಕ್ಷ್ಮವಾಗಿದ್ದು, ಭುಜದ ಡಿಸ್ಟೋಸಿಯಾದಂತಹ ಸಮಸ್ಯೆಗಳು ಉಂಟಾದಾಗ, ಅವು ಶಾಶ್ವತ ಪರಿಣಾಮಗಳನ್ನು ಬೀರುತ್ತವೆ. ಶಿಶು ಶಾಹಿದಾ ಅವಳ ಕಥೆಯು ಅನುಭವಿ ವೈದ್ಯರು ಮತ್ತು ತ್ವರಿತ ಚಿಕಿತ್ಸೆಗಳು ಹಾನಿಯನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ನಿಧಾನವಾಗಿ ಭರವಸೆಯನ್ನು ಮರಳಿ ತರಬಹುದು ಎಂಬುದನ್ನು ತೋರಿಸುತ್ತದೆ.
(ಲೇಖನ: ಡಾ.ಅಬ್ದುಲ್ ಅಜೀಜ್ ರಿಯಾಝ್, ಕನ್ಸಲ್ಟೆಂಟ್ - ನ್ಯೂರೋಸರ್ಜರಿ, ಮಣಿಪಾಲ್ ಆಸ್ಪತ್ರೆ ವರ್ತೂರು ಮತ್ತು ವೈಟ್ಫೀಲ್ಡ್)
ವಿಭಾಗ