ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಿದು, ಪೋಷಕರೇ ಈ ವಿಚಾರದಲ್ಲಿ ಎಡವದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಿದು, ಪೋಷಕರೇ ಈ ವಿಚಾರದಲ್ಲಿ ಎಡವದಿರಿ

ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಿದು, ಪೋಷಕರೇ ಈ ವಿಚಾರದಲ್ಲಿ ಎಡವದಿರಿ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮಕ್ಕಳು ಹೃದಯ ಸಂಬಂಧಿ ಸಮಸ್ಯೆ ಎದುರಿಸಲು ಕಾರಣಗಳು ಹಲವು. ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಪೋಷಕರು ಗಮನ ಹರಿಸಬೇಕು, ಈ ವಿಚಾರಗಳಲ್ಲಿ ಎಂದಿಗೂ ಎಡವಬಾರದು (ಬರಹ: ಪ್ರೀತಿ ಮೊದಲಿಯಾರ್)

ಮಕ್ಕಳಲ್ಲಿ ಹೃದಯಾಘಾತ ಹೆಚ್ಚಲು ಕಾರಣ
ಮಕ್ಕಳಲ್ಲಿ ಹೃದಯಾಘಾತ ಹೆಚ್ಚಲು ಕಾರಣ (PC: Canva)

ಪ್ರಸ್ತುತ ಬಹುತೇಕ ಎಲ್ಲಾ ಕಡೆಗಳಲ್ಲಿ ಕೇಳಿಬರುವ ಸುದ್ದಿ, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು. ಕೇವಲ ವೃದ್ಧರಷ್ಟೇ ಅಲ್ಲ. ಏಳೆಂಟು ವರ್ಷದ ಮಗು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿದೆ. ಹಾಗಿದ್ದರೆ, ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಆಗಲು ಯಾವುದು ಮುಖ್ಯ ಕಾರಣ ಎನ್ನುವುದನ್ನು ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ವೃದ್ಧರಿಗಿಂತ ಹೆಚ್ಚಾಗಿ ಮಕ್ಕಳಲ್ಲೇ ಹೃದಯಾಘಾತ ಅಥವಾ ಹೃದ್ರೋಗ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಳಪೆ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲ ಒತ್ತಡಗಳು ಮಕ್ಕಳ ಹೃದಯವನ್ನು ಅಪಾಯಕ್ಕೆ ತಳ್ಳುವ ಸಂಭವನೀಯ ಘಟನೆಗಳು ಕೂಡ ಹೆಚ್ಚಾಗುತ್ತಿದೆ. ಹೌದು! ಮಕ್ಕಳನ್ನು ಶಾಲೆ, ಟ್ಯೂಷನ್ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ವಿಶ್ರಾಂತಿಯಿಲ್ಲದಂತೆ ಮಾಡುತ್ತಿರುವುದು ಸಾಮಾನ್ಯ. ಇದರ ಹೊರತಾಗಿಯೂ ಸ್ವಲ್ಪ ಸಮಯ ಸಿಕ್ಕರೆ ಮೊಬೈಲ್‌ಗಳಿಗೆ ಅಡಿಕ್ಟ್ ಆಗಿಬಿಡುತ್ತಾರೆ. ಇನ್ನು ಫಾಸ್ಟ್‌ಫುಡ್‌ ಸಂಸ್ಕೃತಿಯಂತೆ ಬೆಳೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಅಜಾಗೂರಕತೆ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು.

2022 ರಲ್ಲಿ ಶೇ 9-12 ರಷ್ಟಿದ್ದ ಭಾರತದ ಹೃದಯ ಸಂಬಂಧಿ ತೊಂದರೆಗಳ ದರ, ಕಳೆದ 2024-25 ರಲ್ಲಿ ಶೇ 18-20 ಕ್ಕೆ ಏರಿರುವುದು ಆತಂಕಕಾರಿ. ಈ ನಡುವೆ, ಕೇವಲ ಗ್ಯಾಸ್ಟ್ರಿಕ್‌ನಿಂದ ಎದೆನೋವು ಬಂದರೂ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದರೆ, ಹೃದಯಾಘಾತದ ಪ್ರಮಾಣ ಹೆಚ್ಚಲು ಕಾರಣ, ಹೃದಯ ಆರೋಗ್ಯ ಜೋಪಾನ ಮಾಡೋದು ಹೇಗೆ ಎಂಬ ವಿವರ ಇಲ್ಲಿದೆ.

ಹೃದಯಾಘಾತಕ್ಕೆ ಕಾರಣಗಳು

1. ಕೌಟುಂಬಿಕ ಇತಿಹಾಸ:

ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗ ಅಥವಾ ಹೃದಯಾಘಾತವಾಗಿದ್ದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚು ಗಮನವಹಿಸಬೇಕು. ಮಕ್ಕಳ ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರಬೇಡಿ. ಆರೋಗ್ಯಕರ ಆಹಾರ, ವ್ಯಾಯಾಮದ ಮೇಲೆ ಗಮನ ಹರಿಸಿ. ಆರಂಭದಲ್ಲಿ ತೋರುವ ಚಿಕ್ಕ ನಿರ್ಲಕ್ಷ್ಯವು ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ.

2. ಮಕ್ಕಳು ಹೃದ್ರೋಗ/ ಹೃದಯಾಘಾತದಿಂದ ಬಳಲುತ್ತಿದ್ದರೆ ಹೆಚ್ಚಿನ ಗಮನವಿರಲಿ

ನಿಮ್ಮ ಮಗು ಯಾವುದಾದರೂ ಗಂಭೀರವಾದ ಹೃದ್ರೋಗ ಅಥವಾ ಹೃದಯಾಘಾತದಿಂದ ಬಳಲುತ್ತಿದ್ದರೆ ಹೆಚ್ಚಿನ ಕಾಳಜಿ ವಹಿಸಿ. ಆಹಾರದ ಕುರಿತು ಹೆಚ್ಚಿನ ಗಮನವಿರಲಿ. ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ, ಅವರು ಕೊಡುವ ಸಲಹೆಗಳನ್ನು ತಪ್ಪದೇ ಪಾಲಿಸಿ. ಹಾಗೂ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ನೀಡಿ.

3. ಹುಟ್ಟುವಾಗಲೇ ಆವರಿಸುವ ಹೃದಯದ ಸಮಸ್ಯೆ

ಹೌದು, ಕೆಲ ಮಕ್ಕಳು ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಗರ್ಭದಲ್ಲಿರುವಾಗಲೇ ಹೃದಯ ರಚನೆಯಲ್ಲಿ ಅಸಹಜತೆಗಳಿದ್ದು, ರಕ್ತ ಪರಿಚಲನೆ ಕ್ರಮಬದ್ಧವಾಗಿರುವುದಿಲ್ಲ. ಗರ್ಭಿಣಿ ಹೆಂಗಸರು ತಮ್ಮ ಗರ್ಭವಸ್ಥೆಯ ಸಂದರ್ಭದಲ್ಲಿ ಆದಷ್ಟು ಎಚ್ಚರಿಕೆಯಿಂದಿರಿ.

4. ಕೆಲ ಕಾಯಿಲೆ ಮತ್ತು ಮಾತ್ರೆಗಳ ಬಗ್ಗೆ ಎಚ್ಚರದಿಂದಿರಿ

ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ಕಾಯಿಲೆಗಳನ್ನು ಹೊಂದಿರುವ ಚಿಕ್ಕಮಕ್ಕಳ ಮೇಲೆ ಹೆಚ್ಚು ನಿಗಾವಹಿಸಿ. ಇದಲ್ಲದೇ ಮಕ್ಕಳಿಗೆ ಕೊಡುವ ಹೆಚ್ಚಿನ ಪ್ರಮಾಣದ ಮಾತ್ರೆಗಳು ಹೃದಯ ಸ್ತಂಭನವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೈಕೆಯಲ್ಲಿ ಹೆಚ್ಚು ರಿಸ್ಕ್ ಗಳನ್ನು ತೆಗೆದುಕೊಳ್ಳದೇ ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಿ.

5. ಕಲಿಕೆಯ ಒತ್ತಡ ಹೇರದಿರಿ

ಪ್ರಸ್ತುತ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದು, ನಿಮ್ಮ ಮಕ್ಕಳ ಮೇಲೆ ಕಲಿಕೆಗೆ ಸಂಬಂಧಿಸಿದಂತೆ ಹೆಚ್ಚು ಒತ್ತಡ ಹೇರಬೇಡಿ. ಹೀಗಾಗಲೇ ಶಾಲೆ, ಟ್ಯೂಷನ್, ಇತರ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿರುವ ಮಕ್ಕಳಿಗೆ ಸ್ವಲ್ಪ ಸಮಯ ಹೊರಗೆ ಕಳೆಯಲು ಬಯಸುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಿ. ಇಲ್ಲದಿದ್ದಲ್ಲಿ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಎಚ್ಚರವಹಿಸಿ.

ಇದ್ದಕ್ಕಿದ್ದಂತೆ ಮಕ್ಕಳಿಗೆ ಹೃದಯಘಾತವಾದರೆ ಏನು ಮಾಡಬೇಕು?

ಮಕ್ಕಳಿಗೆ ಹೃದಯಸಂಬಂಧಿ ಕಾಯಿಲೆಗಳಿದ್ದಾಗ ಪ್ರತಿನಿತ್ಯ ಅವರ ಚಟುವಟಿಕೆ, ಆಹಾರ ಕ್ರಮದ ಮೇಲೆ ನಿಗಾವಹಿಸಿ. ಒಮ್ಮೆಲೇ ಹೃದಯಘಾತವಾದಲ್ಲಿ ಜೋರಾಗಿ ಕೂಗಿ. ಮಗು ನಿಮ್ಮ ಧ್ವನಿಗೆ ಪ್ರತಿಕ್ರಿಯಿಸುತ್ತಿದೆಯೇ, ಉಸಿರಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಕಸ್ಮಾತ್ ಮಗು ಉಸಿರಾಡದಿದ್ದಲ್ಲಿ ಸಿಪಿಆರ್ ಮಾಡಿ. ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆಮಾಡಿ. ಸಮೀಪ ಆಸ್ಪತ್ರೆಗಳಿದ್ದಲ್ಲಿ ತಡಮಾಡದೇ ನೀವೆ ಕರೆದುಕೊಂಡು ಹೋಗಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner