ಮಕ್ಕಳಲ್ಲಿ ಹೃದಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿದು; ಈ ವಿಚಾರದಲ್ಲಿ ಪೋಷಕರು ಎಂದಿಗೂ ಎಚ್ಚರ ತಪ್ಪಬಾರದು
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಲ್ಲಿ ಹೃದಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿದು; ಈ ವಿಚಾರದಲ್ಲಿ ಪೋಷಕರು ಎಂದಿಗೂ ಎಚ್ಚರ ತಪ್ಪಬಾರದು

ಮಕ್ಕಳಲ್ಲಿ ಹೃದಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿದು; ಈ ವಿಚಾರದಲ್ಲಿ ಪೋಷಕರು ಎಂದಿಗೂ ಎಚ್ಚರ ತಪ್ಪಬಾರದು

ಈ ಕಾಲದಲ್ಲಿ ಪೋಷಕರು ಮಕ್ಕಳ ಮೇಲೆ ಬಾಲ್ಯದಿಂದಲೂ ಹೆಚ್ಚಿನ ನಿಗಾ ವಹಿಸುವುದು ಅತಿ ಅವಶ್ಯ. ಮಗುವಿನ ತೂಕ, ಅವರ ಆಹಾರಕ್ರಮದ ಮೇಲೆ ವಿಶೇಷ ಗಮನ ಹರಿಸಬೇಕು. ಯಾಕೆಂದರೆ ಇತ್ತೀಚೆಗೆ ಚಿಕ್ಕ ಮಕ್ಕಳು ಕೂಡ ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದು, ಇದು ದೊಡ್ಡವರಾದ ಅವರು ಹಲವು ಸಮಸ್ಯೆಗಳನ್ನು ಎದುರಿಸಲು ಕಾರಣವಾಗಬಹುದು. ಇದರಿಂದ ಮಕ್ಕಳ ಹೃದಯಕ್ಕೂ ಅಪಾಯ ತಪ್ಪಿದ್ದಲ್ಲ.

ಮಕ್ಕಳಲ್ಲಿ ಹೃದಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣ
ಮಕ್ಕಳಲ್ಲಿ ಹೃದಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣ (PC: Canva)

ಇತ್ತೀಚಿನ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿದೆ. ಬೊಜ್ಜಿನಿಂದ ತೂಕವು ಏರಿಕೆಯಾಗುತ್ತಿದೆ. ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಬಹಳ ಹೆಚ್ಚಿದ್ದರೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಬಾಲ್ಯದ ಸ್ಥೂಲಕಾಯವು ಬಹಳ ಅಪಾಯಕಾರಿ. ಇದು ವಯಸ್ಸಾದಂತೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 1975ರಲ್ಲಿ, 5 ರಿಂದ 19 ವರ್ಷ ವಯಸ್ಸಿನ ಮಕ್ಕಳಲ್ಲಿ ಕೇವಲ ಶೇ 1ರಷ್ಟು ಬೊಜ್ಜು ಇತ್ತು. 2016ರ ಹೊತ್ತಿಗೆ, ಶೇ 8ರಷ್ಟು ಹುಡುಗರು ಮತ್ತು ಶೇ 6ರಷ್ಟು ಹುಡುಗಿಯರು ಬೊಜ್ಜಿನ ಸಮಸ್ಯೆ ಹೊಂದಿದ್ದರು. ಆ ಸಂಖ್ಯೆ ಈಗ ಸಾಕಷ್ಟು ಹೆಚ್ಚಿದೆ ನಿರೀಕ್ಷಿಸಲಾಗಿದೆ. ಬಾಲ್ಯದ ಸ್ಥೂಲಕಾಯವು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸ್ಥೂಲಕಾಯಕ್ಕೆ ಪ್ರಮುಖ ಕಾರಣ

ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್‌ನಂತಹ ಅನಾರೋಗ್ಯಕರ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನಲ್ಲಿ ಕನ್ಸಲ್ಟೆಂಟ್ ನಿಯೋನಾಟಾಲಜಿಸ್ಟ್, ಪೀಡಿಯಾಟ್ರಿಶಿಯನ್ ಆಗಿರುವ ಡಾ. ಅಭಿಷೇಕ್ ಚೋಪ್ರಾ ಎಚ್‌ ಲೈಫ್‌ಸ್ಟೈಲ್ ನೀಡಿದ ಸಂದರ್ಶನದಲ್ಲಿ ‘ದೈಹಿಕ ಚಟುವಟಿಕೆಯ ಕೊರತೆ, ಸಂಸ್ಕರಿಸಿದ ಆಹಾರಗಳ ಅನಿಯಮಿತ ಬಳಕೆ, ರೆಡಿ ಫುಡ್‌ ಮತ್ತು ಹೆಚ್ಚಿನ ಕ್ಯಾಲೋರಿ ಅಂಶ ಹೊಂದಿರುವ ಆಹಾರಗಳು ಪ್ರಪಂಚದಾದ್ಯಂತ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಲು ಕಾರಣವಾಗಿವೆ. ಆನುವಂಶಿಕ ಅಂಶಗಳ ಹೊರತಾಗಿ, ಅವರು ಬೆಳೆಯುವ ಸಾಮಾಜಿಕ ಪರಿಸರವೂ ಒಂದು ಅಂಶವಾಗಿದೆ‘ ಎಂದು ಡಾ. ಅಭಿಷೇಕ್ ಚೋಪ್ರಾ ಬಹಿರಂಗಪಡಿಸುತ್ತಾರೆ.

ಬೊಜ್ಜು ಹೊಂದಿರುವ ಮಕ್ಕಳಲ್ಲಿ ಈ ಸಮಸ್ಯೆಗಳು

ಸ್ಥೂಲಕಾಯದಿಂದಾಗಿ ಬಾಲ್ಯದಿಂದಲೇ ಸಮಸ್ಯೆಗಳು ಆರಂಭವಾಗುತ್ತವೆ ಮತ್ತು ಪ್ರೌಢಾವಸ್ಥೆಯ ನಂತರವೂ ಮುಂದುವರಿಯುತ್ತದೆ ಎಂದು ಅಭಿಷೇಕ್ ಹೇಳುತ್ತಾರೆ. ಬಾಲ್ಯದಿಂದಲೂ ಸ್ಥೂಲಕಾಯತೆವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ.‘ಬಾಲ್ಯದಿಂದಲೂ ಸ್ಥೂಲಕಾಯದ ಸಮಸ್ಯೆ ಹೊಂದಿರುವವರಲ್ಲಿ ಅಧಿಕ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು ಮತ್ತು ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳು ಕಾಣಿಸುತ್ತವೆ. ಇವು ಪ್ರೌಢಾವಸ್ಥೆಯವರೆಗೂ ಮುಂದುವರೆಯುತ್ತವೆ. ಈ ಅಂಶಗಳ ಸಂಯೋಜನೆಯು ಅಪಧಮನಿಗಳು ಮತ್ತು ಹೃದಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಬಾಲ್ಯದಲ್ಲಿ ಬೊಜ್ಜು ಹೊಂದಿರುವ ಮಕ್ಕಳು ವಯಸ್ಕರಿಗಿಂತ ಐದು ಪಟ್ಟು ಅಧಿಕ ತೂಕವನ್ನು ಹೊಂದಿರುತ್ತಾರೆ. ಆ ಕಾರಣಕ್ಕೆ ಬಾಲ್ಯದಲ್ಲಿ ಬೊಜ್ಜು ಬರದಂತೆ ಎಚ್ಚರ ವಹಿಸಬೇಕು. ಬಂದರೂ ಶೀಘ್ರ ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು.

ಕಡಿಮೆ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವ ಮಕ್ಕಳಿಗೆ ಹೋಲಿಸಿದರೆ, 40 ಪ್ರತಿಶತಕ್ಕಿಂತ ಹೆಚ್ಚಿನ BMI ಹೊಂದಿರುವ ಮಕ್ಕಳು ಮಧ್ಯವಯಸ್ಸಿನಲ್ಲಿ ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ. ‘ಹೆಚ್ಚಿನ ಬಿಎಂಐ, ರಕ್ತದೊತ್ತಡ, ಕೊಲೆಸ್ಟ್ರಾಲ್ ಜೊತೆಗೆ ವಯಸ್ಸಾದ ನಂತರ ಧೂಮಪಾನದಂತಹ ಅಭ್ಯಾಸಗಳು ಸೇರಿದರೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಡಾ. ಅಭಿಷೇಕ್ ಹೇಳುತ್ತಾರೆ.

ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ

ಮಕ್ಕಳಲ್ಲಿ ಬೊಜ್ಜು ಕಡಿಮೆ ಮಾಡಲು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಅಭಿಷೇಕ್ ಚೋಪ್ರಾ ಹೇಳುತ್ತಾರೆ. ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.

  • ಮಕ್ಕಳಿಗೆ ಸಂಸ್ಕರಿಸಿದ, ರೆಡಿ ಫುಡ್‌ ಮತ್ತು ಜಂಕ್ ಫುಡ್‌ಗಳನ್ನು ನೀಡಬಾರದು. ಪೋಷಕಾಂಶಗಳಿಲ್ಲದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಇಂತಹ ಆಹಾರಗಳನ್ನು ನೀಡದೇ ಇರುವುದು ಉತ್ತಮ.
  • ಜೀವಸತ್ವಗಳು, ಖನಿಜಗಳು ಮತ್ತು ನಾರಿನಾಂಶದಲ್ಲಿ ಸಮೃದ್ಧವಾಗಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ.
  • ಮಕ್ಕಳಿಗೆ ದಿನಕ್ಕೆ ಮೂರು ಊಟ ನೀಡಬೇಕು. ಊಟದ ನಡುವೆ ಹೆಚ್ಚು ತಿನ್ನಬೇಡಿ. ದಿನಕ್ಕೆರಡು ಬಾರಿ ಆರೋಗ್ಯಕರ ಆಹಾರಗಳನ್ನು ನೀಡಬೇಕು. ಆರೋಗ್ಯಕರ ಆಹಾರ ಸೇವಿಸುವ ಅಭ್ಯಾಸವನ್ನು ರೂಢಿಸಬೇಕು.
  • ದೈಹಿಕ ಚಟುವಟಿಕೆಗಾಗಿ ಮಕ್ಕಳು ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ತೊಡಗುವಂತೆ ಮಾಡಬೇಕು. ದೈಹಿಕ ಚಟುವಟಿಕೆಯ ಬಗ್ಗೆ ಅವರಿಗೆ ಶಿಕ್ಷಣ ನೀಡಬೇಕು.
  • ಮಕ್ಕಳಿಗೆ ಹಣ್ಣಿನ ರಸದ ಬದಲು ಹಣ್ಣುಗಳನ್ನು ತಿನ್ನಿಸಬೇಕು. ಜ್ಯೂಸ್ ಮಾಡಿದರೆ ಪೋಷಕಾಂಶಗಳು ಲಭಿಸುವುದಿಲ್ಲ.

ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸ್ಥೂಲಕಾಯತೆ ಮುಂದುವರಿದರೆ, ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ ಮತ್ತು ಅವರ ಸಲಹೆಯನ್ನು ಅನುಸರಿಸಿ. ಸ್ಥೂಲಕಾಯ ಕಡಿಮೆಯಾಗಲು ಮಕ್ಕಳಿಗೆ ವ್ಯಾಯಾಮ, ಯೋಗಗಳನ್ನು ಅಭ್ಯಾಸ ಮಾಡಿಸಿ. ಕ್ರೀಡೆಯಲ್ಲಿ ತೊಡಗುವಂತೆ ಮಾಡಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner