Cholesterol: ಗೊತ್ತೇ ಆಗದಂತೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳಿವು; ಇವುಗಳ ಸೇವನೆಗೆ ಇಂದೇ ಕಡಿವಾಣ ಹಾಕಿ
ಕನ್ನಡ ಸುದ್ದಿ  /  ಜೀವನಶೈಲಿ  /  Cholesterol: ಗೊತ್ತೇ ಆಗದಂತೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳಿವು; ಇವುಗಳ ಸೇವನೆಗೆ ಇಂದೇ ಕಡಿವಾಣ ಹಾಕಿ

Cholesterol: ಗೊತ್ತೇ ಆಗದಂತೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳಿವು; ಇವುಗಳ ಸೇವನೆಗೆ ಇಂದೇ ಕಡಿವಾಣ ಹಾಕಿ

ಕೊಲೆಸ್ಟ್ರಾಲ್ ಹೆಚ್ಚಾಗುವುದು ಬಹಳ ಅಪಾಯಕಾರಿ. ಇದರಿಂದ ಹೃದ್ರೋಗ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು. ಕೆಲವು ಆಹಾರಗಳು ಸದ್ದೇ ಆಗದಂತೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವಂತೆ ಮಾಡುತ್ತವೆ. ಅಂತಹ ಆಹಾರಗಳ ಸೇವನೆಗೆ ತಕ್ಷಣ ಕಡಿವಾಣ ಹಾಕಬೇಕು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ 6 ಆಹಾರಗಳು ಯಾವುವು ನೋಡಿ.

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ 6 ಆಹಾರಗಳು
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ 6 ಆಹಾರಗಳು (PC: Canva)

ಕೊಲೆಸ್ಟ್ರಾಲ್ ಇತ್ತೀಚಿಗೆ ಚಿಕ್ಕ ಮಕ್ಕಳಿಂದ ದೊಡ್ಡವರೆಗೆ ಹಲವರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹಕ್ಕೆ ಕೊಲೆಸ್ಟ್ರಾಲ್ ಅವಶ್ಯ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಜೀವಿತಾವಧಿಯೂ ಕಡಿಮೆಯಾಗುವ ಸಾಧ್ಯತೆ ಇದೆ. ನಡೆಯುವಾಗ ನಿಮಗೆ ಅಹಿತಕರ ಅನಿಸಿದರೆ, ಹಠಾತ್ ಉಸಿರಾಟದ ತೊಂದರೆ, ಎದೆನೋವು ಬಂದು ಹೋಗುವುದು ಅಥವಾ ಅತಿಯಾಗಿ ಆಯಾಸವಾದರೆ, ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಯಾವ ಆಹಾರಗಳು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಅವುಗಳನ್ನು ತಿನ್ನುವುದನ್ನು ನಿಲ್ಲಿಸಿ.

ಕೊಲೆಸ್ಟ್ರಾಲ್ ಎಂದರೇನು?

ಕೊಲೆಸ್ಟ್ರಾಲ್ ಒಂದು ಕೊಬ್ಬಿನ ವಸ್ತುವಾಗಿದ್ದು ಅದು ದೇಹದ ಜೀವಕೋಶಗಳಿಗೆ ಅವಶ್ಯಕವಾಗಿದೆ. ಇದು ಅಗತ್ಯಕ್ಕಿಂತ ಹೆಚ್ಚು ದೇಹವನ್ನು ಪ್ರವೇಶಿಸಿದರೆ, ಅದು ಕೆಟ್ಟ ಕೊಲೆಸ್ಟ್ರಾಲ್ ಆಗಿ ಬದಲಾಗುತ್ತದೆ. ನಮ್ಮ ದೇಹವೂ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಪಿತ್ತರಸ ಆಮ್ಲಗಳಂತಹ ಪ್ರಮುಖ ಸಂಯುಕ್ತಗಳ ಉತ್ಪಾದನೆಗೆ ಈ ಕೊಲೆಸ್ಟ್ರಾಲ್ ಅತ್ಯಗತ್ಯ. ಕೊಲೆಸ್ಟ್ರಾಲ್ ಲಿಪೊಪ್ರೋಟೀನ್‌ಗಳ ಮೂಲಕ ರಕ್ತಪ್ರವಾಹದಲ್ಲಿ ಚಲಿಸುತ್ತದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ. ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್‌), ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್‌). ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ ಅದು ಕೆಟ್ಟ ಕೊಲೆಸ್ಟ್ರಾಲ್ ಆಗುತ್ತದೆ.

ಕೊಲೆಸ್ಟ್ರಾಲ್ ಹೃದಯದ ಅಪಧಮನಿಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಅಪಧಮನಿಯ ಗೋಡೆಗಳ ಮೇಲೆ ಸಂಗ್ರಹವಾಗುತ್ತದೆ ಮತ್ತು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಇದು ಅಪಧಮನಿಗಳು ಸಂಕುಚಿತಗೊಳ್ಳಲು ಸಹ ಕಾರಣವಾಗುತ್ತದೆ. ಇದರಿಂದ ಹೃದಯವು ಕಷ್ಟಪಟ್ಟು ಕೆಲಸ ಮಾಡುತ್ತದೆ. ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಯೂ ಇದೆ. ಈ ಪರಿಸ್ಥಿತಿಗಳು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಕೆಲವು ರೀತಿಯ ಆಹಾರಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳಲು ಕಾರಣವಾಗಬಹುದು. ಅವು ನಿಮಗೆ ಗೊತ್ತೇ ಆಗದಂತೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ.

ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಬೇಕನ್‌ಗಳಂತಹ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಏಕೆಂದರೆ ಸಂಸ್ಕರಿಸಿದ ಮಾಂಸದಲ್ಲಿ ಶೇಖರಣೆಗಾಗಿ ಸೋಡಿಯಂ ಮತ್ತು ಸಂರಕ್ಷಕಗಳನ್ನು ತುಂಬಿಸಲಾಗುತ್ತದೆ. ಇವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಡೀಪ್ ಫ್ರೈಡ್ ಫ್ರೆಂಚ್ ಫ್ರೈಸ್, ಡೊನಟ್ಸ್ ಮತ್ತು ಚಿಕನ್ ನಗೆಟ್‌ಗಳಲ್ಲಿ ಟ್ರಾನ್ಸ್ ಫ್ಯಾಟ್‌ಗಳು ಅಧಿಕವಾಗಿರುತ್ತವೆ. ಈ ಟ್ರಾನ್ಸ್ ಕೊಬ್ಬುಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಂತಹ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ.

ಹಾಲು ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆನೆ ತೆಗೆದ ಹಾಲನ್ನು ಬಳಸುವುದು ಉತ್ತಮ. ಕೆನೆ ಇರುವ ಹಾಲಿನಲ್ಲಿ ಕೊಬ್ಬಿನಾಂಶವಿದ್ದು, ಇದನ್ನು ಕುಡಿಯುವುದು ಅಥವಾ ಆ ಹಾಲಿನಿಂದ ಮಾಡಿದ ಮೊಸರು, ಹಾಲು, ಬೆಣ್ಣೆ, ಚೀಸ್ ತಿನ್ನುವುದು ದೇಹದಲ್ಲಿ ಟ್ರಾನ್ಸ್ ಕೊಬ್ಬುಗಳನ್ನು ಹೆಚ್ಚಿಸುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತವೆ. ಕೆನೆರಹಿತ ಹಾಲನ್ನು ಅತಿಯಾಗಿ ಸೇವಿಸುವುದರಿಂದ ನಮಗೆ ತಿಳಿಯದೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ಹಾಲು ಕುಡಿಯುವಾಗ ಕೆನೆ ರಹಿತವಾಗಿ ಇರುವಂತೆ ನೋಡಿಕೊಳ್ಳಬೇಕು.

ಮಟನ್ ಕಡಿಮೆ ಮಾಡಿ

ಮಾಂಸಾಹಾರಿ ಪ್ರಿಯರು ಚಿಕನ್, ಮಟನ್, ಮೀನು ಮತ್ತು ಸೀಗಡಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಟನ್ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಿಲು ಕಾರಣವಾಗುತ್ತದೆ. ಇದರಲ್ಲಿ ಕಬ್ಬಿಣಾಂಶ ಮತ್ತು ಪ್ರೊಟೀನ್ ಹೇರಳವಾಗಿದ್ದರೂ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಮಟನ್ ತಿನ್ನದಿರುವುದು ಉತ್ತಮ.

ಪೇಸ್ಟ್ರಿಗಳು, ಕುಕೀಸ್, ಕೇಕ್‌ಳಂತಹ ಪದಾರ್ಥಗಳನ್ನು ತಿನ್ನದಿರುವುದು ಉತ್ತಮ. ಇವುಗಳಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಸಂಸ್ಕರಿಸಿದ ಸಕ್ಕರೆಯ ಪ್ರಮಾಣ ಕೂಡ ಅಧಿಕವಾಗಿದೆ. ಇದು ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಬೇಕರಿ ಉತ್ಪನ್ನಗಳನ್ನು ಆದಷ್ಟು ಕಡಿಮೆ ಸೇವಿಸುವುದು ಉತ್ತಮ.

ಜಂಕ್ ಆಹಾರಗಳು

ಟೇಕ್‌ ಅವೇ ಚೈನೀಸ್ ಆಹಾರಗಳು, ಚಿಪ್ಸ್, ಕ್ರ್ಯಾಕರ್ಸ್, ಮೈಕ್ರೋವೇವ್ ಪಾಪ್ ಕಾರ್ನ್‌ಗಳಂತಹ ಆಹಾರಗಳನ್ನು ದೊಡ್ಡ ಪ್ರಮಾಣದಲ್ಲಿ ತಿನ್ನುವುದನ್ನು ಕಡಿಮೆ ಮಾಡಬೇಕು. ಇವುಗಳು ಟ್ರಾನ್ಸ್ ಕೊಬ್ಬುಗಳು ಸ್ಯಾಚುರೇಟೆಡ್ ಕೊಬ್ಬುಗಳಾಗಲು ಕಾರಣವಾಗುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇವೆಲ್ಲವುಗಳ ಬದಲಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಪ್ರಯತ್ನಿಸಿ. ಇದರಿಂದ ಸಂಪೂರ್ಣ ಆರೋಗ್ಯ ವೃದ್ಧಿಯಾಗುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner