Cholesterol Control: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳಗಿನ ಈ ಸರಳ ಅಭ್ಯಾಸಗಳು, ಹೃದಯ ಜೋಪಾನವಾಗಿರಬೇಕು ಅಂದ್ರೆ ಅನುಸರಿಸಿ
ಬೆಳಗಿನ ದಿನಚರಿಯು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರ ಆಧಾರದ ಮೇಲೆ ನಮ್ಮ ಆರೋಗ್ಯವು ನಿಂತಿರುತ್ತದೆ ಎನ್ನುವುದು ಸುಳ್ಳಲ್ಲ. ಬೆಳಿಗ್ಗೆ ನಾವು ಅನುಸರಿಸುವ ಈ ಕೆಲವು ಜೀವನಶೈಲಿಗೆ ಸಂಬಂಧಿಸಿದ ಅಭ್ಯಾಸಗಳು ಕೊಲೆಸ್ಟ್ರಾಲ್ ಕಡಿಮೆಯಾಗಲು ಸಹಾಯ ಮಾಡುತ್ತವೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ. ಅಂತಹ ಅಭ್ಯಾಸಗಳು ಯಾವುದು ನೋಡಿ.

ಕೊಲೆಸ್ಟ್ರಾಲ್ ಹೆಚ್ಚುವ ಕಾರಣ ಇತ್ತೀಚೆಗೆ ಹಲವರು ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಇನ್ನಿತರ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊಲೆಸ್ಟ್ರಾಲ್‌ಗೆ ಕೇವಲ ನಾವು ತಿನ್ನುವ ಆಹಾರ ಮಾತ್ರವಲ್ಲ, ನಮ್ಮ ಜೀವನಶೈಲಿ ಸೇರಿದಂತೆ ಹಲವು ಅಂಶಗಳು ಕಾರಣವಾಗುತ್ತವೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ನಾವು ನಮ್ಮ ಬೆಳಗಿನ ದಿನಚರಿಯ ಮೇಲೆ ಹೆಚ್ಚು ಗಮನ ಹರಿಸಬೇಕು.
ನಮ್ಮ ಬೆಳಗಿನ ದಿನಚರಿಯು ಅಪಧಮನಿಗಳಲ್ಲಿ ಮೇಣದಂಥ ವಸ್ತುವಿನ ಶೇಖರಣೆಯನ್ನು ಸಹ ನಿರ್ಧರಿಸುತ್ತದೆ. ಲಿಪಿಡ್ ಪ್ರೊಫೈಲ್ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಮತ್ತು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಅನ್ನು ಹೊಂದಿರುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳುವುದು ಹೃದಯದ ಆರೋಗ್ಯಕ್ಕೆ ನಿರ್ಣಾಯಕವಾಗಿದೆ.
ಹೆಚ್ಚಿನ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಅಪಧಮನಿಗಳಲ್ಲಿ ಪ್ಲೇಕ್ ಶೇಖರಣೆಗೆ ಕಾರಣವಾಗಬಹುದು, ಇದು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಪ್ಲೇಕ್ ರಚನೆಯನ್ನು ಹೆಚ್ಚಿಸುವುದರಿಂದ ರಕ್ತದ ಹರಿವಿಗೆ ಅಡ್ಡಿಪಡಿಸುತ್ತದೆ. ಹೃದಯ ಮತ್ತು ನಾಳಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಸಂಪೂರ್ಣ ಹೃದಯರಕ್ತನಾಳದ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತದೆ. ಆ ಕಾರಣಕ್ಕೆ ಬೆಳಗಿನ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನ ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಿದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹೀಗಿರಲಿ ಬೆಳಗಿನ ದಿನಚರಿ
ಬಿಸಿ ನಿಂಬೆ ಪಾನೀಯದಿಂದ ದಿನ ಆರಂಭಿಸಿ
ನಿಮ್ಮ ದಿನವನ್ನು ನಿಂಬೆ ರಸ ಸೇರಿಸಿದ ಬಿಸಿ ನೀರಿನಿಂದ ಆರಂಭಿಸಿ. ಈ ಸರಳ ಪಾನೀಯವು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಲಿಪಿಡ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ನಿಂಬೆಹಣ್ಣುಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಪಾನೀಯವು ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ನಾರಿನಾಂಶ ಸಮೃದ್ಧ ಉಪಹಾರ ಸೇವಿಸಿ
ನಿಮ್ಮ ಉಪಾಹಾರದಲ್ಲಿ ಕರಗುವ ನಾರಿನಾಂಶ ಅಧಿಕವಾಗಿರುವ ಆಹಾರವನ್ನು ಸೇರಿಸುವುದು ಮತ್ತೊಂದು ಪರಿಣಾಮಕಾರಿ ತಂತ್ರವಾಗಿದೆ. ಓಟ್ಸ್, ಚಿಯಾ ಬೀಜಗಳು, ಸೇಬು ಮತ್ತು ಬಾಳೆಹಣ್ಣಿನಂತಹ ಆಹಾರಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಕೊಲೆಸ್ಟ್ರಾಲ್ ಅನ್ನು ಬಂಧಿಸಲು ಸಹಾಯ ಮಾಡುತ್ತದೆ, ರಕ್ತಪ್ರವಾಹಕ್ಕೆ ಅದರ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಈ ಅಭ್ಯಾಸವು ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ, ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಇದು ತೂಕ ನಿರ್ವಹಣೆಗೂ ಸಹಕಾರಿ.
ಒಣಹಣ್ಣು, ಬೀಜಗಳ ಸೇವನೆ
ಉಪಾಹಾರದ ಜೊತೆ ಬಾದಾಮಿ, ವಾಲ್‌ನಟ್ ಅಥವಾ ಅಗಸೆಬೀಜಗಳಂತಹ ಕೆಲವು ಒಣಹಣ್ಣು ಹಾಗೂ ಬೀಜಗಳನ್ನು ಸೇರಿಸುವುದರಿಂದ ಹೃದಯದ ಆರೋಗ್ಯಕ್ಕೆ ಗಮನಾರ್ಹ ಉತ್ತೇಜನ ಸಿಗುತ್ತದೆ. ಈ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ, ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು LDL ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಒಣಹಣ್ಣುಗಳಲ್ಲಿ ಕ್ಯಾಲೊರಿ ಹೆಚ್ಚಿರುವ ಕಾರಣ ಸೇವಿಸುವ ಪ್ರಮಾಣದ ಮೇಲೆ ಗಮನ ಹರಿಸುವುದು ಅವಶ್ಯ.
ಬೆಳಗಿನ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ
ಬೆಳಗಿನ ವ್ಯಾಯಾಮವು ನಿಮ್ಮ ಚಯಾಪಚಯ ಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಒಂದು ಅದ್ಭುತ ಮಾರ್ಗವಾಗಿದೆ. ನಿಯಮಿತ ದೈಹಿಕ ಚಟುವಟಿಕೆಯು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ರಕ್ತಪ್ರವಾಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೃದಯ ಸ್ನಾಯುವನ್ನು ಬಲಪಡಿಸುವ ಮೂಲಕ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಮನಸ್ಸು ಶಾಂತವಾಗಿರಲಿ
ದೀರ್ಘಕಾಲದ ಒತ್ತಡವು ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಒಟ್ಟಾರೆ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಬೆಳಗಿನ ದಿನಚರಿಯಲ್ಲಿ ಮನಸ್ಸನ್ನು ಶಾಂತವಾಗಿರಿಸುವ ಅಭ್ಯಾಸಗಳು ಅಥವಾ ವಿಶ್ರಾಂತಿ ತಂತ್ರಗಳನ್ನು ಸೇರಿಸಿ. ಕೆಲವು ನಿಮಿಷಗಳ ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಳವಾದ ಉಸಿರಾಟವನ್ನು ಅಭ್ಯಾಸ ಮಾಡುವುದರಿಂದ ಒತ್ತಡದ ಹಾರ್ಮೋನುಗಳು ನಿಯಂತ್ರಣಕ್ಕೆ ಬರುತ್ತವೆ. ಇದು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದಿನದ ನಿಮ್ಮ ಊಟವನ್ನು ಯೋಜಿಸಿ
ಒಂದು ದಿನದಲ್ಲಿ ಮೂರು ಹೊತ್ತು ನಾವು ತಿನ್ನುವ ಆಹಾರ ಹೇಗಿರಬೇಕು ಎಂಬುದನ್ನು ನಿರ್ಧಾರ ಮಾಡುವುದು ಕೂಡ ಮುಖ್ಯವಾಗುತ್ತದೆ. ನಾರಿನಾಂಶ ಅಧಿಕವಾಗಿರುವ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರಯೋಜನಕಾರಿಯಾದ ಧಾನ್ಯದ ಬ್ರೆಡ್ ಮತ್ತು ಧಾನ್ಯಗಳನ್ನು ಆರಿಸಿ. ಕೆಂಪು ಮಾಂಸಕ್ಕೆ ಹೋಲಿಸಿದರೆ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಇರುವ ಮೀನು, ಕೋಳಿ ಅಥವಾ ದ್ವಿದಳ ಧಾನ್ಯಗಳಂತಹ ಮೂಲಗಳನ್ನು ಸೇರಿಸಿ. ಹೃದಯದ ಆರೋಗ್ಯವನ್ನು ಬೆಂಬಲಿಸುವ ಒಮೆಗಾ-3 ಕೊಬ್ಬಿನಾಮ್ಲಗಳ ಮೂಲಗಳಾದ ಅಗಸೆಬೀಜಗಳು ಮತ್ತು ವಾಲ್‌ನಟ್‌ಗಳನ್ನು ಹೆಚ್ಚು ಸೇವಿಸಿ. ಊಟ ತಿಂಡಿಯಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಅನಾರೋಗ್ಯಕರ ಆಹಾರ ಸೇವನೆಗೆ ಕಡಿವಾಣ ಹಾಕಬಹುದು.
ಆದರೆ ಒಂದು ವಿಚಾರ ನೆನಪಿಡಿ. ಈ ಅಭ್ಯಾಸಗಳಲ್ಲಿ ಸ್ಥಿರತೆ ಸಾಧಿಸುವುದು ಬಹಳ ಮುಖ್ಯ, ಸ್ಥಿರವಾದ ದಿನಚರಿಯಿಂದ ನೀವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಂಡು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ