ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಕಣ್ಣು, ಮುಖದಲ್ಲಿ ಗೋಚರಿಸಬಹುದು ಈ ಕೆಲವು ಲಕ್ಷಣ, ಕಡೆಗಣಿಸಿದ್ರೆ ಹೃದಯಕ್ಕೆ ಅಪಾಯ ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಕಣ್ಣು, ಮುಖದಲ್ಲಿ ಗೋಚರಿಸಬಹುದು ಈ ಕೆಲವು ಲಕ್ಷಣ, ಕಡೆಗಣಿಸಿದ್ರೆ ಹೃದಯಕ್ಕೆ ಅಪಾಯ ತಿಳಿದಿರಲಿ

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಕಣ್ಣು, ಮುಖದಲ್ಲಿ ಗೋಚರಿಸಬಹುದು ಈ ಕೆಲವು ಲಕ್ಷಣ, ಕಡೆಗಣಿಸಿದ್ರೆ ಹೃದಯಕ್ಕೆ ಅಪಾಯ ತಿಳಿದಿರಲಿ

ಇತ್ತೀಚಿನ ಕಳಪೆ ಜೀವನಶೈಲಿಯು ಕೊಲೆಸ್ಟ್ರಾಲ್‌ ಹೆಚ್ಚಲು ಕಾರಣವಾಗುತ್ತಿದೆ. ಹಲವರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವಂತಾಗಿದೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಧಿಕವಿರಬಹುದು ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ಕಣ್ಣು, ಮುಖದಲ್ಲಿ ಗೋಚರಿಸುವ ಈ ಲಕ್ಷಣಗಳನ್ನು ಗಮನಿಸಿ. ಇದನ್ನು ಕಡೆಗಣನೆ ಮಾಡದಿರಿ.

ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ಸೂಚಿಸುವ ಲಕ್ಷಣಗಳು
ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ಸೂಚಿಸುವ ಲಕ್ಷಣಗಳು (PC: Canva)

ನಮ್ಮ ಜೀವತಾವಧಿಯನ್ನು ತಗ್ಗಿಸುವ ಅಥವಾ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವ ಆರೋಗ್ಯ ಸಮಸ್ಯೆಗಳಲ್ಲಿ ಹೈ ಕೊಲೆಸ್ಟ್ರಾಲ್ ಅಥವಾ ಹೈಪರ್ಲಿಪಿಡೆಮಿಯಾವೂ ಒಂದು. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಹೃದ್ರೋಗ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಕೊಲೆಸ್ಟ್ರಾಲ್ ಎನ್ನುವುದು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಮೇಣದಂತಹ ವಸ್ತು. ಇದು ಅಧಿಕವಾದ್ರೆ ಆರೋಗ್ಯಕ್ಕೆ ಹಾನಿ ಖಚಿತ.

ಜಡ ಜೀವನಶೈಲಿ ಹಾಗೂ ಚಟುವಟಿಕೆ ಇಲ್ಲದೇ ಇರುವುದರ ಜೊತೆಗೆ ಅನಾರೋಗ್ಯಕರ ಆಹಾರ ಸೇವನೆಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಲು ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ಎಡಿಎಲ್‌ ಎಂದು ಕರೆಯಲಾಗುತ್ತದೆ. ಇವು ನಮ್ಮ ರಕ್ತನಾಳಗಳಲ್ಲಿ ಕೊಬ್ಬಿನಾಂಶ ಶೇಖರಣೆಯನ್ನು ಉಂಟು ಮಾಡಬಹುದು. ಇದರಿಂದಾಗಿ ಅಪಮಧಮನಿಗಳಲ್ಲಿ ರಕ್ತ ಹರಿಯುವುದು ಕಷ್ಟಕರವಾಗುತ್ತದೆ. ಇದು ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆದರೆ ದೇಹದಲ್ಲಿ ಗೋಚರವಾಗುವ ಈ ಕೆಲವು ಲಕ್ಷಣಗಳನ್ನು ಗುರುತಿಸುವ ಮೂಲಕ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದನ್ನು ಗುರುತಿಸಬಹುದು ಮಾತ್ರವಲ್ಲ, ಹೃದ್ರೋಗಕ್ಕೆ ಒಳಗಾಗುವುದನ್ನು ತಪ್ಪಿಸುವ ಸಾಧ್ಯತೆ ಹೆಚ್ಚು. ಜಡಜೀವನ ಶೈಲಿಯು ಇತ್ತೀಚೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದು, ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ.

ಕೊಲೆಸ್ಟ್ರಾಲ್ ಹೆಚ್ಚಾದರೆ ಸಾಮಾನ್ಯವಾಗಿ ಯಾವುದೇ ಲಕ್ಷಣಗಳು ಗೋಚರವಾಗುವುದಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ ಇದು ಮುಖ ಅಥವಾ ಕಣ್ಣುಗಳ ಮೇಲೆ ಕಾಣಿಸಿಕೊಳ್ಳಬಹುದು. ಕಾರ್ನಿಯಾದಲ್ಲಿ ಬೂದು ಬಣ್ಣದ ಬಿಳಿ ಉಂಗುರಗಳು, ಚರ್ಮದಲ್ಲಿ ಹಳದಿ ಬಣ್ಣದ ತೇಪೆ, ಕಣ್ಣುಗಳ ಸುತ್ತ ಊದಿಕೊಳ್ಳುವುದು ಈ ಲಕ್ಷಣಗಳು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದು ಹಾಗೂ ಕೂಡಲೇ ಜೀವನಶೈಲಿಯ ಮೇಲೆ ಗಮನ ಹರಿಸಬೇಕು ಎಂಬುದನ್ನು ಸೂಚಿಸುತ್ತದೆ.

ಕೊಲೆಸ್ಟ್ರಾಲ್ ಹೆಚ್ಚಾಗಿರುವುದನ್ನು ಸೂಚಿಸುವ 5 ಲಕ್ಷಣಗಳು

ಕಣ್ರಪ್ಪೆಗಳ ಮೇಲೆ ಹಳದಿ ಕಲೆಗಳು

ಚರ್ಮದ ಮೇಲೆ, ವಿಶೇಷವಾಗಿ ಕಣ್ಣುರೆಪ್ಪೆಗಳ ಸುತ್ತ ಹಳದಿ ಬಣ್ಣದ ತೇಪೆ ಉಂಟಾಗುವುದನ್ನು ಕ್ಸಾಂಥೆಲಾಸ್ಮಾ ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗಿದೆ ಎಂಬುದನ್ನು ಸೂಚಿಸುತ್ತದೆ. ಅವು ಹೆಚ್ಚಾಗಿ ಹಾನಿಕರವಲ್ಲದಿದ್ದರೂ, ಅವುಗಳ ಉಪಸ್ಥಿತಿಯು ಹೃದಯರಕ್ತನಾಳದ ಕಾಯಿಲೆಗಳನ್ನು ಹೆಚ್ಚುವ ಸಾಧ್ಯತೆಯನ್ನು ಸೂಚಿಸುತ್ತದೆ. ಈ ರೀತಿಯ ಲಕ್ಷಣಗಳು ನಿಮ್ಮಲ್ಲೂ ಗೋಚರಿಸಿದರೆ ನೀವು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಕಾರ್ನಿಯಾದ ಅಂಚಿನಲ್ಲಿ ಬದಲಾವಣೆ 

ಆರ್ಕಸ್ ಸೆನಿಲಿಸ್, ಕಾರ್ನಿಯಾದ ಅಂಚಿನ ಸುತ್ತಲೂ ಬಿಳಿ ಅಥವಾ ಬೂದು ಬಣ್ಣದಲ್ಲಿ ಉಂಟಾಗುವ ಉಂಗುರ ಮಾದರಿಯು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ 45 ವರ್ಷಕ್ಕಿಂತ ಕಡಿಮೆ ಇರುವವರಲ್ಲಿ ಈ ಲಕ್ಷಣಗಳು ಗೋಚರಿಸಿದರೆ ಇದು ಕೊಲೆಸ್ಟ್ರಾಲ್ ಹೆಚ್ಚಾಗಿರುವುದನ್ನು ಸೂಚಿಸುವ ಪ್ರಮುಖ ಲಕ್ಷಣವಾಗಿದೆ.

ಕಾರ್ನಿಯಾ ಸುತ್ತ ಉಂಗುರ ರೂಪಗೊಳ್ಳುವುದು

40 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾರ್ನಿಯಲ್ ಆರ್ಕಸ್, ಇದು ಕಾರ್ನಿಯಾವನ್ನು ಸುತ್ತುವರೆದಿರುವ ಬಿಳಿ ಅಥವಾ ಬೂದು ಬಣ್ಣದ ಉಂಗುರವಾಗಿದ್ದು, ಆರ್ಕಸ್ ಸೆನಿಲಿಸ್‌ನಂತೆಯೇ ಇರುತ್ತದೆ. ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳ ಸಂಕೇತವೂ ಆಗಿರಬಹುದು

ಚರ್ಮದ ಪಿಗ್ಮಂಟೇಷನ್‌

ಹೈಪರ್ಲಿಪಿಡೆಮಿಯಾ ಎಂಬುದು ರಕ್ತದಲ್ಲಿ ಅಧಿಕ ಪ್ರಮಾಣದ ಲಿಪಿಡ್‌ಗಳು ವಿಶೇಷವಾಗಿ ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಉಂಟಾಗುವ ಸಮಸ್ಯೆಯಾಗಿದೆ. ಇದು ಕ್ಸಾಂಥೋಡರ್ಮಾ ಎನ್ನುವ ಚರ್ಮ ಹಳದಿಯಾಗುವ ಸಮಸ್ಯೆಗೆ ಕಾರಣವಾಗಬಹುದು. ಈ ಮುಖ ಹಾಗೂ ಕಣ್ಣುಗಳ ಸುತ್ತಲೂ ಸಾಮಾನ್ಯವಾಗಿ ಚರ್ಮ ಹಳದಿಯಾಗುತ್ತದೆ. ಚರ್ಮದ ಪದರಗಳಲ್ಲಿ ಕೊಲೆಸ್ಟ್ರಾಲ್‌ನಲ್ಲಿ ಹೆಚ್ಚು ಸಂಗ್ರಹವಾಗುವುದು ಬಣ್ಣ ಬದಲಾವಣೆಗೆ ಕಾರಣವಾಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದನ್ನು ಸೂಚಿಸುವ ಕಾರಣ ಈ ಬಗ್ಗೆ ಗಮನ ಹರಿಸುವುದು ಅಗತ್ಯ.

ಹಳದಿ ಬಣ್ಣದ ಮೊಡವೆಗಳು

ಚರ್ಮದ ಮೇಲ್ಮೈ ಕೆಳಗೆ ಇರುವ ನಿರ್ದಿಷ್ಟ ಕೋಶಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಕ್ಸಾಂಥೋಮಾಸ್ ಎಂದು ಕರೆಯಲ್ಪಡುವ ಸಮಸ್ಯೆ ಎದುರಾಗುತ್ತದೆ. ಅವುಗಳ ಗಾತ್ರ ಮತ್ತು ಆಕಾರವನ್ನು ಅವಲಂಬಿಸಿ ಅವು ಸಣ್ಣ ಹಳದಿ ಬಣ್ಣದ ಮೊಡವೆಗಳು ಅಥವಾ ಉಬ್ಬಿಕೊಂಡಂತೆ ಕಾಣಿಸಬಹುದು. ಇವು ಹೆಚ್ಚಾಗಿ ಮುಖದ ಮೇಲೆ ಕೆನ್ನೆ, ಕಣ್ಣುರೆಪ್ಪೆಗಳ ಮೇಲೆ, ಕಣ್ಣುಗಳ ಸುತ್ತಲಿನ ಪ್ರದೇಶದಲ್ಲಿ ಕಂಡುಬರುತ್ತದೆ. ಇದರಿಂದ ನೋವು ಉಂಟಾಗುವುದಿಲ್ಲ, ಆದರೆ ಇದು ಹೆಚ್ಚಿನ ಕೊಲೆಸ್ಟ್ರಾಲ್ ಇರುವುದನ್ನು ಸೂಚಿಸುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner