Ear Cleaning: ಪಿನ್​​, ಬಡ್ಸ್​​ ಬಳಸಿ ಪ್ರತಿದಿನ ಕಿವಿ ಶುಚಿಗೊಳಿಸುತ್ತೀರಾ? ಹಾಗಿದ್ರೆ ಈ ವಿಚಾರ ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Ear Cleaning: ಪಿನ್​​, ಬಡ್ಸ್​​ ಬಳಸಿ ಪ್ರತಿದಿನ ಕಿವಿ ಶುಚಿಗೊಳಿಸುತ್ತೀರಾ? ಹಾಗಿದ್ರೆ ಈ ವಿಚಾರ ತಿಳಿದಿರಲಿ

Ear Cleaning: ಪಿನ್​​, ಬಡ್ಸ್​​ ಬಳಸಿ ಪ್ರತಿದಿನ ಕಿವಿ ಶುಚಿಗೊಳಿಸುತ್ತೀರಾ? ಹಾಗಿದ್ರೆ ಈ ವಿಚಾರ ತಿಳಿದಿರಲಿ

Ear Cleaning Everyday: ಕಿವಿ ಸ್ವಚ್ಛತೆಗಾಗಿ ಅನೇಕರು ಕಿವಿಯೊಳಗೆ ಪಿನ್‌ ಹಾಕುವುದು, ಬಡ್ಸ್‌ ಹಾಕುವುದು, ನೀರು ಅಥವಾ ಸೋಪಿನ ನೀರನ್ನು ಹಾಕಿ ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಇದರಿಂದಾಗಿ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ವಿವಿಧ ಸಮಸ್ಯೆಗಳನ್ನು ಹೊತ್ತ ಅನೇಕರು ವೈದ್ಯರ ಬಳಿ ಬಂದಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ ಎನ್ನುತ್ತಾರೆ ವೈದ್ಯರು.

ಬಡ್ಸ್​ ಬಳಸಿ ಕಿವಿ ಶುಚಿಗೊಳಿಸುವುದು
ಬಡ್ಸ್​ ಬಳಸಿ ಕಿವಿ ಶುಚಿಗೊಳಿಸುವುದು

ದೈಹಿಕ ಆರೋಗ್ಯ ಶುಚಿಯಲ್ಲಿ ಅನೇಕರು ಕಿವಿ ಶುಚಿತ್ವಕ್ಕೆ ಕೂಡ ಮಹತ್ವ ನೀಡುತ್ತಾರೆ. ಕೆಲವರಿಗಂತೂ ಪ್ರತಿದಿನ ಕಿವಿ ಸ್ವಚ್ಛಗೊಳಿಸುವುದುದೇ ಒಂದು ಚಟವಾಗಿ ಬಿಟ್ಟಿರುತ್ತದೆ. ಕಿವಿ ಸ್ವಚ್ಛತೆಗಾಗಿ ಅನೇಕರು ಕಿವಿಯೊಳಗೆ ಪಿನ್‌ ಹಾಕುವುದು, ಬಡ್ಸ್‌ ಹಾಕುವುದು, ನೀರು ಅಥವಾ ಸೋಪಿನ ನೀರನ್ನು ಹಾಕಿ ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಇದರಿಂದಾಗಿ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ವಿವಿಧ ಸಮಸ್ಯೆಗಳನ್ನು ಹೊತ್ತ ಅನೇಕರು ವೈದ್ಯರ ಬಳಿ ಬಂದಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ ಎನ್ನುತ್ತಾರೆ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ. ಸುನಿತಾ ಮಾಧವನ್.

ಕಿವಿಯನ್ನು ಪ್ರತಿನಿತ್ಯ ಶುಚಿಗೊಳಿಸುವುದು ಅನಿವಾರ್ಯವೇ ?

ದೈಹಿಕ ಆರೋಗ್ಯ ಎಂದ ಮೇಲೆ ಕಿವಿ ಶುಚಿತ್ವವೂ ಕೂಡ ಸೇರುತ್ತದೆ. ಹೀಗಾಗಿ ಜನರು ಕಿವಿಯೊಳಗೆ ಬಡ್ಸ್‌ ಹಾಕುವುದು, ಪಿನ್‌ ಹಾಕಿ ಶುಚಿ ಮಾಡಲು ಮುಂದಾಗುತ್ತಾರೆ. ಆದರೆ ಇದೊಂದು ಅಪಾಯಕಾರಿ ಕಾರ್ಯ ಎಂದರೆ ತಪ್ಪಿಲ್ಲ. ಏಕೆಂದರೆ ಈ ರೀತಿಯಾಗಿ ಶುಚಿಗೊಳಿಸಲು ಮುಂದಾಗುವವರು ಅನೇಕ ರೀತಿಯ ಕಿವಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಕಾಣಬಹುದು. ಹಾಗಾದ್ರೆ ಕಿವಿಯನ್ನು ಶುಚಿಗೊಳಿಸುವುದು ಹೇಗೆ ಎನ್ನುತ್ತೀರಾ? ಕಿವಿಯು ಸ್ವಯಂ ಶುಚಿಗೊಳಿಸುವ ಕಾರ್ಯವಿಧಾನವನ್ನು ಹೊಂದಿದೆ. ಹೀಗಾಗಿ ಕಿವಿಯಲ್ಲಿರುವ ವ್ಯಾಕ್ಸ್‌ ಕಾಲಕ್ರಮೇಣ ತನ್ನಿಂದ ತಾನೆ ಹೊರಬರುತ್ತದೆ. ಹಾಗಾಗಿ ನಾವು ಪ್ರತಿದಿನ ಕಿವಿಯನ್ನು ಸ್ವಚ್ಛಗೊಳಿಸಬೇಕಾಗಿಲ್ಲ. ಅದಾಗ್ಯೂ ಕಿವಿ ಸ್ವಚ್ಚಗೊಳಿಸಬೇಕೆಂದರೆ ಒಂದು ಮೃದು ಬಟ್ಟೆಯಿಂದ ಸ್ವಚ್ಚಗೊಳಿಸಿದರೆ ಸಾಕು ಎನ್ನುತ್ತಾರೆ ತಜ್ಞರು.

ಪ್ರತಿನಿತ್ಯ ಕಿವಿ ಶುಚಿ ಮಾಡುವುದರಿಂದ ಆಗುವ ತೊಂದರೆಗಳೇನು ?

ಕಿವಿ ತುಂಬಾನೆ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪ್ರತಿದಿನ ಕಿವಿ ತೊಳೆಯುತ್ತಿದ್ದರೆ ಅದರ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬಳಿಕ ತುರಿಕೆಯಾಗುವುದು ಅಥವಾ ಗಾಯಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ಕಿವಿಯನ್ನು ತೊಳೆಯುವುದು ಒಳ್ಳೆಯದಲ್ಲ. ಕೆಲವೊಮ್ಮೆ ಕಲುಷಿತ ನೀರಿನಲ್ಲಿ ಈಜಿದರೂ ಕೂಡ ಸೋಂಕುಗಳು ಕಾಣಬರುತ್ತವೆ. ಕಿವಿ ಸ್ವಚ್ಛತೆಗಾಗಿ ಪಿನ್‌ ಹಾಕುವುದು, ಬಡ್ಸ್‌ ಹಾಕುವುದರಿಂದಲೂ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ತಜ್ಞರ ಎಚ್ಚರಿಕೆ.

ಕಿವಿ ಶುಚಿಗೊಳಿಸಲು ವೈದ್ಯರ ಸಲಹೆಯೇನು ?

1) ತಲೆ ಸ್ನಾನ ಮಾಡುವಾಗ ಕಿವಿ ಹೊರಭಾಗದಲ್ಲಿ ವ್ಯಾಸಲಿನ್‌ ಲೇಪಿತ ಹತ್ತಿಯನ್ನು ಕಿವಿಯ ಮುಂಭಾಗದಲ್ಲಿ ಇರಿಸಿ.

2) ಕಿವಿಯಲ್ಲಿ ಕಡಿತ ಉಂಟಾದರೆ ಕೇವಲ ವ್ಯಾಕ್ಸ್‌ನಿಂದಲೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಒಣಗುವಿಕೆ ಮತ್ತು ಅಲರ್ಜಿಯಿಂದಲೂ ಕೂಡ ಕಿವಿಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಕಿವಿಯಲ್ಲಿ ಸ್ವತಃ ಯಾವುದೇ ಔಷಧಿಗಳನ್ನು ಲೇಪಿಸಬೇಡಿ.

3) ಶೀತದ ಸಂದರ್ಭದಲ್ಲಿ ನಿಮ್ಮ ಕಿವಿ ಬ್ಲಾಕ್‌ ಆಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

4) ಕಿವಿಯ ಹೊರಭಾಗದಲ್ಲಿ ಏನಾದರು ಕಸ ಕಂಡುಬಂದಲ್ಲಿ ನೀವೇ ಸ್ವತಃ ಮೃದು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.

ಕಿವಿ ಶುಚಿಗಾಗಿ ಏನು ಮಾಡಬಾರದು ?

1) ಪ್ರತಿದಿನ ಬೆಳಗೆದ್ದು ಕಿವಿ ಶುಚಿಗೊಳಿಸುವುದನ್ನೇ ಅಭ್ಯಾಸ ಮಾಡಬೇಡಿ.

2) ಕಿವಿ ಶುಚಿಗಾಗಿ ಕಿವಿಯಲ್ಲಿ ಬಡ್ಸ್‌, ಪಿನ್‌, ಬೆರಳು ಹಾಕುವುದು ಮತ್ತು ಇತರೆ ವಸ್ತುಗಳನ್ನು ಹಾಕದಿರಿ.

3) ಕಿವಿಯಲ್ಲಿ ಏನೇ ಸಮಸ್ಯೆಗಳು ಕಂಡುಬಂದರೆ ಸ್ವತಃ ಯಾವುದೇ ಔಷಧಗಳನ್ನು ಬಳಸಲು ಮುಂದಾಗದಿರಿ.

4) ಡಯಾಬಿಟಿಕ್‌ ರೋಗಿಗಳಲ್ಲಿ ಕಿವಿ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ಹೆಚ್ಚಿನ ಮುತುವರ್ಜಿವಹಿಸಿ.

5) ಕಿವಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ನೀರಿನ ಚಟುವಟಿಕೆಗಳಿಂದ ದೂರವಿರಿ.

Whats_app_banner