ರಾತ್ರಿ ಹೊತ್ತಿನಲ್ಲೇ ಕೆಮ್ಮು ಜಾಸ್ತಿ ಆಗುತ್ತಾ? ಇದಕ್ಕೆ ಕಾರಣ, ಮನೆಮದ್ದು ತಿಳ್ಕೊಳ್ಳಿ, ನೆಮ್ಮದಿಯಿಂದ ನಿದ್ದೆ ಮಾಡಬಹುದು
ನಿರಂತರ ಕೆಮ್ಮಿನ ಸಮಸ್ಯೆ ಇರುವವರು ರಾತ್ರಿ ಹೊತ್ತಿನಲ್ಲಿ ಬಹಳ ತೊಂದರೆ ಎದುರಿಸುತ್ತಾರೆ. ಇದಕ್ಕೆ ಕಾರಣ ರಾತ್ರಿ ವೇಳೆಯಲ್ಲೇ ಕೆಮ್ಮು ಜೋರಾಗುತ್ತದೆ. ಇದರಿಂದ ನಿದ್ದೆಯೂ ಹಾಳಾಗುತ್ತದೆ. ಹಾಗಾದರೆ ರಾತ್ರಿ ಸಮಯದಲ್ಲೇ ಕೆಮ್ಮು ಜೋರಾಗೋದು ಯಾಕೆ, ಇದರ ನಿವಾರಣೆಗೆ ಇರುವ ಸಿಂಪಲ್ ಟ್ರಿಕ್ಸ್‌ಗಳು ಯಾವುವು, ಇಲ್ಲಿದೆ ಉತ್ತರ.
ಋತುಮಾನ ಬದಲಾದ ಕೂಡಲೇ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜ. ಅದರಲ್ಲೂ ಬದಲಾದ ವಾತಾವರಣವು ಕೆಮ್ಮು, ಕಫ, ಜ್ವರದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ರಾತ್ರಿ ಹೊತ್ತಿನಲ್ಲಿ ತೊಂದರೆ ಹೆಚ್ಚು. ಯಾಕೆಂದರೆ ನಿರಂತರ ಕೆಮ್ಮು ರಾತ್ರಿ ಸಮಯದಲ್ಲಿ ಹೆಚ್ಚಾಗುತ್ತದೆ. ಏನೇ ಪ್ರಯತ್ನಪಟ್ಟರೂ ಕೆಮ್ಮು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಉಸಿರೇ ನಿಂತು ಹೋಗುವಷ್ಟು ಕೆಮ್ಮು ಬರುತ್ತದೆ. ಹಾಗಾದರೆ ಈ ಸಮಸ್ಯೆ ಎಲ್ಲರಿಗೂ ಇರುತ್ತಾ, ಇದಕ್ಕೆ ಕಾರಣವೇನು.
ರಾತ್ರಿ ಹೊತ್ತು ಕೆಮ್ಮು, ನೆಗಡಿ ಜಾಸ್ತಿ ಆಗೋದು ಏಕೆ?
ಕೆಮ್ಮು, ನೆಗಡಿ ಮೇಲಿನ ಅಧ್ಯಯನಗಳು ಇದರ ಬಗೆಗಿನ ವಿವಿಧ ಅಂಶಗಳನ್ನು ಬಹಿರಂಗ ಪಡಿಸಿವೆ. ದಿನದ ಸಮಯಕ್ಕೆ ಅನುಗುಣವಾಗಿ ಅವು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಸಿದೆ. ದೇಹದ ಸಿರ್ಕಾಡಿಯನ್ ರಿದಮ್ ಎನ್ನುವುದು 24 ಗಂಟೆಗಳ ಕಾಲ ಕೆಲಸ ಮಾಡುವ ಒಂದು ರೀತಿ ಆಂತರಿಕ ಪ್ರಕ್ರಿಯೆಯಾಗಿದೆ. ಇದು ರೋಗನಿರೋಧಕ ಕೋಶಗಳ ಚಿಕಿತ್ಸೆ ಮತ್ತು ಉರಿಯೂತದಲ್ಲಿ ತೊಡಗಿಕೊಂಡಿದೆ. ಇದು ಸಂಜೆ ಮತ್ತು ರಾತ್ರಿ ಹೊತ್ತಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ.
ವೈದ್ಯರ ಪ್ರಕಾರ, ಈ ಜೀವಕೋಶದ ದಾಳಿಯು ನೆಗಡಿಯ ಅನೇಕ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅಲ್ಲದೆ ಒತ್ತಡ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಬೆಳಿಗಿನ ಹೊತ್ತು ಹೆಚ್ಚು ಕ್ರಿಯಾಶೀಲವಾಗಿದ್ದು, ರಾತ್ರಿ ಸಮಯದಲ್ಲಿ ನಿಧಾನವಾಗುತ್ತದೆ. ಇದು ಕಾರ್ಟಿಸೋಲ್ ಮತ್ತು ಉರಿಯೂತದ ನಡುವಿನ ಸಂಬಂಧವನ್ನು ಸಂಕೀರ್ಣಗೊಳಿಸುತ್ತದೆ. ಸಿರ್ಕಾಡಿಯನ್ ರಿದಮ್ ಕ್ರಿಯಾಶೀಲವಾಗಿರುವುದು ಹಾಗೂ ಕಾರ್ಟಿಸೋಲ್ ಲೋಡೌನ್ ಆಗುವುದು ರಾತ್ರಿ ಹೊತ್ತಿನಲ್ಲಿ ವಿವಿಧ ರೀತಿಯ ರೋಗಲಕ್ಷಣಗಳು ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ. ರಾತ್ರಿ ಮಲಗಿದ್ದಾಗ ಮೂಗಿನ ಲೋಳೆಯು ಬರಿದಾಗಲು ಕಷ್ಟವಾಗುತ್ತದೆ, ಇದರಿಂದ ಉಸಿರು ಕಟ್ಟಿಕೊಳ್ಳುವುದು, ಉಸಿರಾಡಲು ಕಷ್ಟವಾಗುವುದು ಆಗುತ್ತದೆ. ಇದು ಕೆಮ್ಮ ಹೆಚ್ಚಾಗಲು ಕಾರಣವಾಗುತ್ತದೆ.
ಈ ಸಮಸ್ಯೆಗಳ ಜೊತೆಗೆ, ಶ್ವಾಸಕೋಶಗಳು ಸಿರ್ಕಾಡಿಯನ್ ರಿದಮ್‌ನಿಂದ ಪ್ರಭಾವಿತವಾಗುತ್ತವೆ. ಇದು ರಾತ್ರಿಯಲ್ಲಿ ವಾಯುಮಾರ್ಗಗಳನ್ನು ಕಿರಿದಾಗುವಂತೆ ಮಾಡುತ್ತದೆ. ಇದು ಕೆಮ್ಮಿನ ಲಕ್ಷಣಗಳು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.
ರಾತ್ರಿಯ ಕೆಮ್ಮನ್ನು ನಿರ್ವಹಿಸುವ ಮತ್ತು ಕಡಿಮೆ ಮಾಡುವ ವಿಧಾನಗಳು
ನಿಮಗೂ ರಾತ್ರಿ ಹೊತ್ತು ಕೆಮ್ಮು ಜೋರಾಗ್ತಾ ಇರುತ್ತಾ, ಕೆಮ್ಮಿನ ಕಾರಣದಿಂದ ಸರಿಯಾಗಿ ನಿದ್ದೆ ಮಾಡಲು ಆಗ್ತಾ ಇಲ್ವಾ, ಹಾಗಾದ್ರೆ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ನೋಡಿ, ಇದರಿಂದ ಆದಷ್ಟು ಬೇಗ ಗುಣ ಪರಿಹಾರ ಕಂಡುಕೊಳ್ಳಬಹುದು.
ಹಬೆ ತೆಗೆದುಕೊಳ್ಳುವುದು: ಮೂಗು ಮತ್ತು ಗಂಟಲನ್ನು ಶಮನಗೊಳಿಸಲು ಹಬೆ ಉಸಿರಾಡುವುದು ಮುಖ್ಯ. ಇದರಿಂದ ದೇಹದಾದ್ಯಂತ ಬೆಚ್ಚಗಾಗಿ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಇದರಿಂದ ಕೆಮ್ಮು ಕಡಿಮೆಯಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತದೆ.
ಜೇನುತುಪ್ಪವನ್ನು ಸೇವಿಸಿ: ಮಲಗುವ ಸಮಯಕ್ಕೆ ಕನಿಷ್ಠ ಅರ್ಧ ಗಂಟೆ ಮೊದಲು ಒಂದು ಚಮಚ ಜೇನುತುಪ್ಪ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ರಾತ್ರಿ ವೇಳೆಯಲ್ಲಿ ಕಾಣಿಸುವ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ವಿಶೇಷವಾಗಿ ಮಕ್ಕಳಲ್ಲಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಮೂಗು ಸ್ವಚ್ಛ ಮಾಡುವುದು: ನಿಮ್ಮ ಮೂಗು ತೊಳೆಯಲು ನೀವು ಉಪ್ಪುನೀರನ್ನು ಎಚ್ಚರಿಕೆಯಿಂದ ಬಳಸಬಹುದು, ಇದು ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡಲು ಕೆಲವು ಪ್ರಯೋಜನಗಳನ್ನು ಹೊಂದಿದೆ. ಆದರೆ ಮೂಗಿನಿಂದ ಉಪ್ಪು ನೀರು ಗಂಟಲಿಗೆ ಹೋಗದಂತೆ ನೋಡಿಕೊಳ್ಳಿ.
ದಿಂಬುಗಳನ್ನು ಬಳಸಿ: ಮೂಗು ಕಟ್ಟಿರುವುದು ಮತ್ತು ಸೈನಸ್‌ಗಳಿಂದ ಮೂಗಿನ ನಾಳಗಳನ್ನು ಸುಧಾರಿಸಲು ಸಹಾಯ ಮಾಡಲು, ತಲೆಯ ಹಿಂದೆ ಹೆಚ್ಚುವರಿ ದಿಂಬುಗಳನ್ನು ಇರಿಸಿ. ನೇರವಾಗಿ ಮಲಗುವ ಅಭ್ಯಾಸ ಮಾಡಿ. ನೇರವಾಗಿ, ಆರಾಮದಾಯಕವಾಗಿ ಮಲಗುವುದು ಕೆಮ್ಮು ನಿವಾರಣೆಗೆ ಸಹಾಯ ಮಾಡುತ್ತದೆ.
ಡಿಕೊಂಗಸ್ಟೆಂಟ್‌ಗಳನ್ನು ಇಟ್ಟುಕೊಳ್ಳಿ: ಮೂಗಿಗೆ ರಕ್ತದ ಹರಿವನ್ನು ಕಡಿಮೆ ಮಾಡುವ ಮೂಲಕ ಡಿಕೊಂಗಸ್ಟೆಂಟ್‌ಗಳು ಕಾರ್ಯನಿರ್ವಹಿಸುತ್ತವೆ, ಇದು ಮೂಗಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ದೀರ್ಘಕಾಲದ ಕೆಮ್ಮು ನಿವಾರಣೆಗೆ ಇಲ್ಲಿದೆ ಮನೆಮದ್ದು