ನಮ್ಮ ಬದುಕನ್ನು ಹಾಳು ಮಾಡುವ 7 ದೈನಂದಿನ ಅಭ್ಯಾಸಗಳಿವು; ಈ ವಿಚಾರಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ
ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಈ ಕೆಲವು ಅಭ್ಯಾಸಗಳು ನಮ್ಮ ಬದುಕನ್ನು ನಾಶ ಮಾಡಬಹುದು. ಇವು ಮಾನಸಿಕವಾಗಿ, ದೈಹಿಕವಾಗಿ ನಾವು ಸಮಸ್ಯೆಗಳನ್ನು ಎದುರಿಸಲು ಕಾರಣವಾಗುತ್ತವೆ. ಅಂತಹ ಅಭ್ಯಾಸಗಳು ಯಾವುವು ನೋಡಿ.

ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲ ಹವ್ಯಾಸಗಳು ನಮ್ಮ ಜೀವನವನ್ನು ಸುಂದರವಾಗಿಸಿದರೆ, ಇನ್ನೂ ಕೆಲ ಅಭ್ಯಾಸಗಳು ಅದೇ ಜೀವನವನ್ನೇ ಅಪಾಯಕ್ಕೆ ದೂಡುತ್ತವೆ. ಒಳ್ಳೆಯ ಅಭ್ಯಾಸಗಳು ಯಶಸ್ಸು ತಂದುಕೊಟ್ಟರೆ, ಕೆಟ್ಟ ಅಭ್ಯಾಸಗಳು ನಮ್ಮ ನಾಶಕ್ಕೆ ಕಾರಣವಾಗುತ್ತವೆ. ಈ ಹವ್ಯಾಸಗಳು ನಮ್ಮ ಆರೋಗ್ಯದ ಮೇಲೆಯು ಅತಿಯಾಗಿ ಪರಿಣಾಮ ಬೀರಬಹುದು.
ನಮ್ಮ ಜೀವನವನ್ನೇ ಹಾಳು ಮಾಡುತ್ತಿರುವ ಕೆಲವು ದೈನಂದಿನ ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ. ಅಪ್ಪಿತಪ್ಪಿಯು ಈ ತಪ್ಪುಗಳನ್ನು ಜೀವನದಲ್ಲಿ ಮುಂದುವರಿಸಬೇಡಿ. ಇದರಿಂದ ನಾವು ಮಾನಸಿಕ ಮತ್ತು ದೈಹಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ತಪ್ಪುಗಳು ಯಾವುವು ನೋಡಿ.
1. ದೈಹಿಕವಾಗಿ ಸಕ್ರಿಯವಾಗದೇ ಇರುವುದು
ನಮ್ಮ ಜೀವನಶೈಲಿಯು ಕ್ರಿಯಾಶೀಲವಾಗಿದ್ದರೆ ಮಾತ್ರ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕವಾಗಿ ಸಕ್ರಿಯವಾಗಿಲ್ಲವೆಂದರೆ, ದೇಹದಲ್ಲಿರುವ ಸ್ನಾಯುಗಳು ದುರ್ಬಲವಾಗುತ್ತದೆ ಮತ್ತು ಚಯಾಪಚಯವನ್ನು ನಿಧಾನಗೊಳಿಸಿ, ಹೃದಯಸಂಬಂಧಿ ಹಾಗೂ ಮಧುಮೇಹದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ದೈಹಿಕವಾಗಿ ಸಕ್ರಿಯವಾಗಿರಲು ನಿತ್ಯ ವ್ಯಾಯಾಮ ಮತ್ತು ಸ್ಟ್ರೆಚಿಂಗ್‌ನಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
2. ನೀರು ಕುಡಿಯದೇ ಇರುವುದು
ಬಾಯಾರಿಕೆಗೆ ತಕ್ಕಷ್ಟೇ ನೀರು ಕುಡಿದರೆ ಸಾಕು ಎಂಬ ವಾದವು ಅನೇಕ ಕಾಯಿಲೆಗಳಿಗೆ ಆಮಂತ್ರಣ ನೀಡುತ್ತದೆ. ಮೂತ್ರಪಿಂಡದ ಕಲ್ಲುಗಳು, ನಿರ್ಜಲೀಕರಣ ಇತ್ಯಾದಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಳಪೆ ನೀರಿನ ಸೇವನೆಯು ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲಕ್ಕೆ ಕಾರಣವಾಗುತ್ತದೆ. ನಿಮ್ಮ ತ್ವಚ್ಛೆಗೆ ಸಂಬಂಧಿಸಿದ ಸಮಸ್ಯೆಗಳು ಬರಹುದು. ನಮ್ಮ ದೇಹಕ್ಕೆ ಇಂತಿಷ್ಟು ಪ್ರಮಾಣದ ನೀರಿನ ಅಗತ್ಯವಿದ್ದು ಅದನ್ನು ನಾವು ಪೂರೈಸಲೇಬೇಕಾಗುತ್ತದೆ.
3. ಜಂಕ್ ಫುಡ್ ಸೇವನೆ
ಹೊಸ ಜಮಾನದ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಪಿಜ್ಜಾ, ಬರ್ಗರ್, ಫ್ರಂಚ್ ಫ್ರೈಸ್, ಗರಿಗರಿಯಾದ ಫ್ರೈಡ್ ಚಿಕನ್ ಸೇರಿದಂತೆ ಇನ್ನಿತರ ಎಣ್ಣೆಭರಿತ/ ಜಂಕ್ ಫುಡ್ ಸೇವನೆ ಅಚ್ಚುಮೆಚ್ಚು. ಈ ಸೇವನೆಯು ಸ್ಥೂಲಕಾಯ, ಹೃದಯದ ಸಮಸ್ಯೆ, ಶುಗರ್, ಟೈಪ್ 2 ಡಯಾಬಿಟಿಸ್, ಫ್ಯಾಟಿ ಲಿವರ್, ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಜಂಕ್ ಫುಡ್ ತಡೆಯುವ ಮೂಲಕ ಪಥ್ಯಾಹಾರ, ಆರೋಗ್ಯಕರ ಆಹಾರ ಪದಾರ್ಥಗಳ ಸೇವನೆಯಿಂದ ಈ ಕಾಯಿಲೆಗಳನ್ನು ನಾವು ದೂರ ಇಡಬಹುದು.
4. ಚರ್ಮದ ಆರೈಕೆಯನ್ನು ನಿರ್ಲಕ್ಷಿಸುವುದು
ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯ ಹದಗೆಡುವ ಹಾಗೆ ಚರ್ಮದ ಆರೋಗ್ಯವೂ ಹದಗೆಡುತ್ತದೆ. ದಿನ ಕಳೆದಂತೆ ಚರ್ಮ ಸುಕ್ಕಾಗುವುದು, ಹೊಳಪವನ್ನು ಕಳೆದುಕೊಳ್ಳುವುದು, ತೇವಾಂಶ ಕಳೆದುಕೊಳ್ಳುವುದರ ಜೊತೆಗೆ ಇನ್ನಿತರ ಚರ್ಮದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಚರ್ಮದ ಆರೈಕೆಯನ್ನು ನಿರ್ಲಕ್ಷಿಸದೆ ಸಂರಕ್ಷಿಸುವುದು ಒಳ್ಳೆಯದು.
5. ಮಿತಿ ಮೀರಿದ ಆಹಾರ ಸೇವನೆ
ನಮ್ಮ ದೇಹದ ದೈನಂದಿನ ಕಾರ್ಯಚಟುವಟಿಕೆಗೆ ಅಗತ್ಯವಾಗಿರುವ ಶಕ್ತಿಯ ಉತ್ಪತ್ತಿಗೆ ಅನುಗುಣವಾಗಿ ಆಹಾರ ಸೇವನೆ ಮಾಡಿದರೆ, ಯಾವುದೇ ತೊಂದರೆ ಆಗುವುದಿಲ್ಲ. ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿಗೆ ವಿಟಮಿನ್, ನಾರಿನಾಂಶಗಳ ಸೇವನೆಯಿಂದ ಹೊಟ್ಟೆ ಉಬ್ಬರ ಜಾಸ್ತಿಯಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಬಿಟ್ಟೂ ಬಿಡದಂತೆ ಕಾಡುತ್ತದೆ.
6. ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುವುದು
ನಮ್ಮ ದೈನಂದಿನ ಜೀವನ ಪ್ರಾರಂಭವಾಗುವುದೇ ಬೆಳಿಗ್ಗೆಯ ತಿಂಡಿಯಿಂದ. ಇದು ದಿನದ ಅತ್ಯಂತ ಮಹತ್ವದ ಉಪಹಾರವಾಗಿದ್ದು, ನಮಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಅತಿಯಾದ ಒತ್ತಡವು ಬೆಳಿಗ್ಗೆಯ ತಿಂಡಿಯನ್ನು ಸ್ಕಿಪ್ ಮಾಡಲು ಪ್ರೇರೆಪಿಸುತ್ತದೆ. ಇದರಿಂದ ಶಕ್ತಿಯ ಮಟ್ಟ ಕಡಿಮೆಯಾಗುವುದು, ನೆನಪಿನ ಶಕ್ತಿಯನ್ನು ಕಡಿಮೆ ಮಾಡುವಲ್ಲಿ ಪ್ರೇರೆಪಿಸುತ್ತದೆ.
7. ನಿದ್ರೆಯ ಕೊರತೆ
ನಿದ್ರೆಯ ಕೊರತೆ ಅಥವಾ ನಿದ್ರಾಹೀನತೆಯು ನಮ್ಮ ದೈನಂದಿನ ಕಾರ್ಯನಿರ್ವಹಣೆಯಲ್ಲಿ ದುರ್ಬಲತೆಗೆ ಕಾರಣವಾಗುತ್ತದೆ. ನಿದ್ದೆ ಸಮಸ್ಯೆಯು (sleep disorder) ಸಾಮಾನ್ಯವಾಗಿ ಖಿನ್ನತೆ, ಆತಂಕ ಅಥವಾ ಇತರೆ ಮಾನಸಿಕ ಆರೋಗ್ಯಗಳಿಂದ ಸಂಭವಿಸುತ್ತವೆ. ಇದರಿಂದ ಉಸಿರುಕಟ್ಟುವಿಕೆ, ಪ್ಯಾರಾಸೋಮ್ನಿಯಾಸ್, ನಾರ್ಕೊಲೆಪ್ಸಿ ಮತ್ತು ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್‌ನಂತಹ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ