ದೇಹದಲ್ಲಿ ಕಾಣಿಸುವ ನಿರ್ಜಲೀಕರಣದ ಸಂಕೇತಗಳಿವು; ಈ ಲಕ್ಷಣಗಳನ್ನ ನಿರ್ಲಕ್ಷ್ಯ ಮಾಡಿದರೆ ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ
ದಿನಕ್ಕೆ ನಾವು ಎಷ್ಟು ಲೋಟ ನೀರು ಕುಡಿಯಬೇಕು ಎಂಬುದು ಹಲವರಿಗೆ ತಿಳಿದಿಲ್ಲ. ದೇಹದಲ್ಲಿ ನೀರಿನ ಕೊರತೆಯಾದರೆ ಡೀಹೈಡ್ರೇಷನ್ ಸಮಸ್ಯೆ ಆಗುತ್ತದೆ. ನೀರಿನ ಕೊರತೆಯಾದಾಗ ಕಾಣಿಸುವ ಈ ಸಂಕೇತಗಳನ್ನು ನಿರ್ಲಕ್ಷ್ಯ ಮಾಡಬಾರದು. ಇದನ್ನು ಕಡೆಗಣಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ.
ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಅತ್ಯಗತ್ಯ. ಕೆಲಸದ ಒತ್ತಡ ಅಥವಾ ಮರೆವಿನ ಕಾರಣದಿಂದ ನೀವು ದಿನದಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ, ದೇಹದಲ್ಲಿ ನಿರ್ಜಲೀಕರಣದ ಲಕ್ಷಣಗಳು ಕಾಣಿಸುತ್ತವೆ. ಆದಾಗ್ಯೂ, ನಿರ್ಜಲೀಕರಣದ ಈ ಚಿಹ್ನೆಗಳು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಅವರ ದೇಹ ಮತ್ತು ಆರೋಗ್ಯವನ್ನು ಅವಲಂಬಿಸಿ, ನಿರ್ಜಲೀಕರಣದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅವುಗಳನ್ನು ಗಮನಿಸಿ, ಕಾಳಜಿ ವಹಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ನಿರ್ಲಕ್ಷ್ಯ ಮಾಡಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ನಿರ್ಜಲೀಕರಣವು ನಿಮ್ಮ ದೇಹದ ಪ್ರಮುಖ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ನಿರ್ಜಲೀಕರಣವು ನಿಮ್ಮ ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಇದು ಜೀರ್ಣಕ್ರಿಯೆ ಮತ್ತು ಸ್ನಾಯುವಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮಗೆ ವಿವಿಧ ರೀತಿಯ ನೋವನ್ನು ಉಂಟುಮಾಡುತ್ತದೆ. ನಿರ್ಜಲೀಕರಣದ ಪ್ರಮುಖ ಲಕ್ಷಣಗಳು ಯಾವುದು ನೋಡಿ.
ಚರ್ಮದ ಮೇಲೆ ಸುಕ್ಕುಗಳು
ನಿರ್ಜಲೀಕರಣವು ಚರ್ಮವನ್ನು ಶುಷ್ಕಗೊಳಿಸುತ್ತದೆ. ಚರ್ಮವು ಹಾನಿಗೊಳಗಾದಂತೆ ಕಾಣುತ್ತದೆ. ಇದರ ಪರಿಣಾಮವು ಚರ್ಮದ ಮೇಲೆ ಸುಕ್ಕುಗಳು ಮತ್ತು ತುರಿಕೆಗೆ ಕಾರಣವಾಗುತ್ತದೆ. ನೀವು ಸಮಸ್ಯೆಯನ್ನು ಗುರುತಿಸದಿದ್ದರೆ ಚರ್ಮದ ಟೋನ್‌ಗೆ ಅಪಾಯವಾಗಬಹುದು.
ತೀವ್ರ ಆಯಾಸ
ಸಾಕಷ್ಟು ನೀರು ಕುಡಿಯದಿದ್ದರೆ, ನಮ್ಮ ದೇಹದ ಜೀವಕೋಶಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹದಲ್ಲಿ ಶಕ್ತಿಯೂ ಕಡಿಮೆಯಾಗುತ್ತದೆ. ಪರಿಣಾಮ ನೀವು ಯಾವುದೇ ದೈಹಿಕ ಚಟುವಟಿಕೆ ಮಾಡದಿದ್ದರೂ ತುಂಬಾ ಸುಸ್ತಾಗಿ ಕಾಣುತ್ತೀರಿ. ಪದೇ ಪದೇ ಆಯಾಸವಾಗುತ್ತದೆ. ತೀವ್ರ ಆಯಾಸದಿಂದ ಕಂಗಾಲಾಗುತ್ತೀರಿ.
ವಿಪರೀತ ತಲೆನೋವು
ನಿರ್ಜಲೀಕರಣವು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಇದು ತಲೆನೋವು ಅಥವಾ ಮೈಗ್ರೇನ್‌ಗೆ ಕಾರಣವಾಗಬಹುದು. ಅತಿಯಾದ ತಲೆನೋವಿನಿಂದ ವಾಕರಿಕೆ, ವಾಂತಿ ಬರುವುದು ಮುಂತಾದ ಲಕ್ಷಣಗಳು ಕಾಣಿಸಬಹುದು.
ಮೂತ್ರದ ಬಣ್ಣದಲ್ಲಿ ಬದಲಾವಣೆ
ಮೂತ್ರದ ಬಣ್ಣದಿಂದ ನಿರ್ಜಲೀಕರಣದ ಚಿಹ್ನೆಗಳನ್ನು ನಾವು ಸುಲಭವಾಗಿ ಗುರುತಿಸಬಹುದು. ಮೂತ್ರ ಬಣ್ಣದ ಹಳದಿ ಅಥವಾ ಕಂದಾಗಿದ್ದರೆ ನಿರ್ಜಲೀಕರಣಗೊಂಡಿರುವುದರ ಸಂಕೇತವಾಗಿದೆ. ಸಾಮಾನ್ಯವಾಗಿ, ದೇಹದಿಂದ ಹೆಚ್ಚುವರಿ ತ್ಯಾಜ್ಯವನ್ನು ಹೊರಹಾಕಲು ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಆದರೆ ನೀವು ಸಾಕಷ್ಟು ನೀರು ಕುಡಿಯದಿದ್ದರೆ ಅದು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಮಲಬದ್ಧತೆ ಸಮಸ್ಯೆ
ನಿರ್ಜಲೀಕರಣದಿಂದ ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ದೇಹವು ಕರುಳಿನಲ್ಲಿರುವ ತ್ಯಾಜ್ಯವನ್ನು ನೀರಿನ ಸಹಾಯದಿಂದ ಹೊರಹಾಕುತ್ತದೆ. ದೇಹಕ್ಕೆ ಅಗತ್ಯ ಇರುವಷ್ಟು ನೀರು ನೀಡಲು ಸಾಧ್ಯವಾಗದಿದ್ದರೆ ಮಲಬದ್ಧತೆಗೆ ಕಾರಣವಾಗಬಹುದು.
ಉಸಿರಿನ ದುರ್ವಾಸನೆ
ನಮ್ಮ ಬಾಯಿಯಲ್ಲಿರುವ ಲಾಲಾರಸವು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ ಅದು ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ಬಾಯಿಯ ದುರ್ವಾಸನೆ ಉಂಟಾಗುತ್ತದೆ.
ಸ್ನಾಯು ನೋವು
ನಿರ್ಜಲೀಕರಣವು ಸ್ನಾಯುವಿನ ಚಲನೆಗೆ ಮುಖ್ಯವಾದ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳನ್ನು ಖಾಲಿ ಮಾಡುತ್ತದೆ. ನಿಮ್ಮ ದೇಹವು ನಿರ್ಜಲೀಕರಣಗೊಂಡರೆ ಸ್ನಾಯು ನೋವು ಹೆಚ್ಚಾಗುತ್ತದೆ.
ತಲೆತಿರುಗುವಿಕೆ ಅಥವಾ ಮೂರ್ಛೆ
ದೇಹವು ನಿರ್ಜಲೀಕರಣಗೊಂಡರೆ, ಮೆದುಳಿಗೆ ಹೋಗುವ ಆಮ್ಲಜನಕದ ಪ್ರಮಾಣವು ಕಡಿಮೆಯಾಗುತ್ತದೆ. ತಲೆಸುತ್ತು ಬರುತ್ತೆ. ಕೆಲವೊಮ್ಮೆ ಮೂರ್ಛೆ ಬರುತ್ತೆ. ಅಲ್ಲದೆ ನಿಗದಿತ ಅವಧಿಯಲ್ಲಿ ಒಮ್ಮೆ ಮೂತ್ರ ವಿಸರ್ಜನೆಗೆ ಹೋಗಬೇಕು. ನೀವು ದೀರ್ಘಕಾಲ ಮೂತ್ರ ವಿಸರ್ಜನೆ ಮಾಡದೇ ಇದ್ದರೆ, ನಿಮ್ಮ ದೇಹಕ್ಕೆ ಸಾಕಷ್ಟು ನೀರು ಸಿಗುತ್ತಿಲ್ಲ ಎಂದರ್ಥ.
ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸರಾಸರಿ 8 ಗ್ಲಾಸ್ ನೀರು ಕುಡಿಯಬೇಕು. ಊಟಕ್ಕೆ ಮೊದಲು ಒಂದು ಲೋಟ ನೀರು ನಂತರ ತುಂಬಾ ಮುಖ್ಯ. ಕನಿಷ್ಠ ದಿನದಲ್ಲಿ 3 ಲೀಟರ್ ನೀರು ಕುಡಿಯಬೇಕು.
ವಿಭಾಗ