ಮಕ್ಕಳಿಗೆ ಬೇರು ನಾಳ ಚಿಕಿತ್ಸೆ ಅನಿವಾರ್ಯವೇ, ರೂಟ್ ಕೆನಾಲ್ ಥೆರಪಿ ಮಾಡಿಸುವ ಅವಶ್ಯವೇನು; ಇಲ್ಲಿದೆ ತಜ್ಞರ ಉತ್ತರ
ದಂತಕ್ಷಯ ದಂತಮಜ್ಜೆಗೆ ತಲುಪಿದ ಬಳಿಕ ದಂತಮಜ್ಜೆ ನಿಧಾನವಾಗಿ ಸಾಯುತ್ತದೆ. ಹಲ್ಲು ತನ್ನ ಬಿಳಿ ಬಣ್ಣ ಕಳೆದುಕೊಂಡು ತೆಲುಗುಲಾಬಿ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಹಂತದಲ್ಲಿ ಹಲ್ಲನ್ನು ಉಳಿಸಬೇಕಾದರೆ ಬೇರುನಾಳ ಚಿಕಿತ್ಸೆ ಮಾಡಬೇಕು ಅಥವಾ ಹಲ್ಲನ್ನು ಕೀಳಬೇಕಾಗುತ್ತದೆ. ಆದರೆ ಮಕ್ಕಳಿಗೆ ಬೇರುನಾಳ ಚಿಕಿತ್ಸೆ ಮಾಡಿಸಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೇರುನಾಳ ಚಿಕಿತ್ಸೆ ಎಂದರೆ ಹಲ್ಲಿನ ಬೇರಿನ ಭಾಗದಲ್ಲಿರುವ ನರವನ್ನು ತೆಗೆದು ಆ ಭಾಗಕ್ಕೆ ‘ಗಟ್ಟಾಪರ್ಚಾ’ ಎಂಬ ನಿರ್ಜೀವ ವಸ್ತುವನ್ನು ತುಂಬಿಸಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ‘ರೂಟ್ ಕೆನಾಲ್ ಥೆರಪಿ’ ಎನ್ನಲಾಗುತ್ತದೆ. ಆಡುಭಾಷೆಯಲ್ಲಿ ಚುಟುಕಾಗಿ RCT ಎನ್ನಲಾಗುತ್ತದೆ. ಸಾಮಾನ್ಯವಾಗಿ ಹಲ್ಲಿಗೆ ದಂತ ಕ್ಷಯವಾಗಿ ಅದು ಏನಾಮಲ್ ಪದರ ಮತ್ತು ಡೆಂಟಿನ್ ಪದರಗಳನ್ನು ದಾಟಿ ದಂತಮಜ್ಜೆಗೆ ತಲುಪಿದಾಗ ಅಸಾಧ್ಯವಾದ ನೋವು ಇರುತ್ತದೆ. ಒಮ್ಮೆ ದಂತ ಕ್ಷಯ ಹಲ್ಲಿನ ಮಧ್ಯಭಾಗದಲ್ಲಿರುವ ದಂತ ಮಜ್ಜೆ ಅಥವಾ ಡೆಂಟಲ್ ಪಲ್ಪ್ ಎಂಬ ಅಂಗಾಂಶಕ್ಕೆ ತಲುಪಿದ ಬಳಿಕ ಆ ಹಲ್ಲಿಗೆ ಸಾಂಪ್ರದಾಯಿಕವಾದ ಹಲ್ಲಿನ ಸಿಮೆಂಟ್, ಬೆಳ್ಳಿ, ಅಥವಾ ಇನ್ನಾವುದೋ ಬಿಳಿ ಬಣ್ಣದ ಸಿಮೆಂಟ್‍ಗಳನ್ನು ಹಾಕಲು ಸಾಧ್ಯವಿಲ್ಲ. ದಂತಕ್ಷಯ ದಂತಮಜ್ಜೆಗೆ ತಲುಪಿದ ಬಳಿಕ ದಂತಮಜ್ಜೆ ನಿಧಾನವಾಗಿ ಸಾಯುತ್ತದೆ. ಹಲ್ಲು ತನ್ನ ಬಿಳಿ ಬಣ್ಣವನ್ನು ಕಳೆದುಕೊಂಡು ತೆಲುಗುಲಾಬಿ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಹಂತದಲ್ಲಿ ಹಲ್ಲನ್ನು ಉಳಿಸಬೇಕಾದರೆ ಬೇರುನಾಳ ಚಿಕಿತ್ಸೆ ಮಾಡಬೇಕು ಅಥವಾ ಹಲ್ಲನ್ನು ಕೀಳಬೇಕಾಗುತ್ತದೆ. ಸಾಮಾನ್ಯವಾಗಿ ಶಾಶ್ವತ ಹಲ್ಲುಗಳಿಗೆ ಬೇರುನಾಳ ಚಿಕಿತ್ಸೆಯನ್ನು ಮಾಡಲು ಜನರು ಹಿಂಜರಿಯುವುದಿಲ್ಲ. ಆದರೆ ಮಕ್ಕಳ ಹಾಲು ಹಲ್ಲಿಗೆ ಬೇರು ನಾಳ ಚಿಕಿತ್ಸೆ ಮಾಡಲು ಹೆತ್ತವರು ಬಹಳ ಹಿಂದೆ ಮುಂದೆ ನೋಡುತ್ತಾರೆ.
ಮಕ್ಕಳಲ್ಲಿ ಹಾಲುಹಲ್ಲಿಗೆ ಮಾಡುವ ಈ ಬೇರುನಾಳ ಚಿಕಿತ್ಸೆಗೆ ‘ಫಲ್ಫೊಟಮಿ’ ಎನ್ನುತ್ತಾರೆ. ಈ ಚಿಕಿತ್ಸೆ ಮಾಡುವಾಗ ಸ್ಥಳೀಯ ಅರಿವಳಿಕೆ ಇಂಜೆಕ್ಷನ್ ನೀಡಿ ನೋವಾಗದಂತೆ ಮೊದಲು ಮಾಡುತ್ತಾರೆ. ಆ ಬಳಿಕ ಸತ್ತು ಹೋದ ಹಲ್ಲಿನ ಮಧ್ಯಭಾಗದಲ್ಲಿರುವ ದಂತ ಮಜ್ಜೆಯನ್ನು ಮತ್ತು ಹಲ್ಲಿನ ಬೇರಿನ ಭಾಗದಲ್ಲಿರುವ ದಂತ ಮಜ್ಜೆಯನ್ನು ಕಿತ್ತು ತೆಗೆಯಲಾಗುತ್ತದೆ. ಕೀವು ತುಂಬಿದ್ದರೆ ಔಷಧಿ ನೀಡಿದ ಬಳಿಕ ಕೀವನ್ನು ತೆಗೆದು ಹಲ್ಲಿನ ಒಳಭಾಗವನ್ನು ಶುಚಿಗೊಳಿಸಲಾಗುತ್ತದೆ. ಆ ಬಳಿಕ ಒಂದೆರಡು ಬಾರಿ ಶುಚಿಗೊಳಿಸಿದ ನಂತರ ಆ ಜಾಗಕ್ಕೆ ಔಷಧಿಯಿಂದ ಕೂಡಿರುವ ಸಿಮೆಂಟ್‍ನ್ನು ತುಂಬಿಸಿ ಪುನಃ ಕೀವು ಆಗದಂತೆ ಮಾಡುತ್ತಾರೆ. ಬಹಳ ಸುಲಭವಾದ ಸರಳವಾದ ಚಿಕಿತ್ಸೆ ಇದಾಗಿರುತ್ತದೆ. ಎಲ್ಲ ಮಕ್ಕಳು ಅಗತ್ಯವಿರುವ ಹಾಲು ಹಲ್ಲಿಗೆ ಖಂಡಿಂತವಾಗಿಯೂ ಈ ಚಿಕಿತ್ಸೆಯನ್ನು ಯಾವುದೇ ತೊಂದರೆ ಇಲ್ಲದೆ ಮಾಡಿಸಬಹುದು.
ಹೆತ್ತವರು ಯಾಕೆ ಹಿಂಜರಿಯುತ್ತಾರೆ?
1. ಹೇಗಾದರೂ ಬಿದ್ದು ಹೋಗುವ ಹಲ್ಲು ಎಂಬ ಧೋರಣೆಯಿಂದ ಹೆತ್ತವರು ನಿರ್ಲಕ್ಷ್ಯ ಮಾಡುತ್ತಾರೆ. ಬಿದ್ದು ಹೋಗುವ ಹಲ್ಲಿಗೆ ಯಾಕೆ ಸುಮ್ಮನೆ ಖರ್ಚು ಮಾಡುವುದು ಎಂಬ ಅತಿಬುದ್ಧಿವಂತಿಕೆ ಸರ್ವತಾ ಸಹ್ಯವಲ್ಲ.
2. ಮಕ್ಕಳ ಹಾಲು ಹಲ್ಲಿಗೆ ಬೇರು ನಾಳ ಚಿಕಿತ್ಸೆ ಮಾಡಿದ್ದಲ್ಲಿ ಮುಂದೆ ಬರುವ ಶಾಶ್ವತ ಹಲ್ಲಿಗೆ ಹೊರಬರಲು ಕಷ್ಟವಾಗಬಹುದು. ಹಾಲು ಹಲ್ಲು ಬಿದ್ದು ಹೋಗುವುದಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿ ಇದೆ. ಇದು ತಪ್ಪು ಕಲ್ಪನೆ. ಅದೇ ರೀತಿ ಕೀವು ತುಂಬಿದ ಹಾಲು ಹಲ್ಲಿಗೆ ಬೇರುನಾಳ ಚಿಕಿತ್ಸೆ ಮಾಡಿಸಿದರೆ ಒಳಗಿರುವ ಶಾಶ್ವತ ಹಲ್ಲಿಗೂ ಕೀವು ಹರಡಿ ವಿರೂಪವಾಗಬಹುದು ಎಂದು ಕೆಲವು ಹೆತ್ತವರು ಬೇರುನಾಳ ಚಿಕಿತ್ಸೆ ನೀಡಲು ಹಿಂಜರಿಯುತ್ತಾರೆ. ಇದು ಕೂಡ ತಪ್ಪು ಅಭಿಪ್ರಾಯವಾಗಿರುತ್ತದೆ.
ಮಕ್ಕಳಲ್ಲಿ ಬೇರು ನಾಳ ಚಿಕಿತ್ಸೆ ಏಕೆ ಮಾಡಿಸಬೇಕು?
1. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾಲು ಹಲ್ಲು ಅತಿ ಅವಶ್ಯಕ. ಹಾಲು ಹಲ್ಲು ಬಹಳ ಬೇಗ ಹಾಳಾಗಿ ಹೋದಲ್ಲಿ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಸ್ನೇಹಿತರಿಂದ ಗೇಲಿಗೊಳಗಾಗಿ ಆತಂಕಕ್ಕೊಳಗಾಗುತ್ತಾರೆ, ಸರಿಯಾದ ನೋವಿಲ್ಲದ ದೃಢವಾದ ದವಡೆ ಹಲ್ಲುಗಳು ಇಲ್ಲದಿದ್ದಲ್ಲಿ ಮಕ್ಕಳಿಗೆ ತಿಂದ ಆಹಾರವನ್ನು ಜಗಿಯಲು, ತಿನ್ನಲು ಸಾಧ್ಯವಾಗುವುದಿಲ್ಲ. ಇದರಿಂದ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಈ ಕಾರಣದಿಂದ ಹಲ್ಲು ನೋವು ಬಂದಾಗ ಮಕ್ಕಳಲ್ಲಿ ಬೇರುನಾಳ ಚಿಕಿತ್ಸೆ ಮಾಡಿಸಿ ಹಲ್ಲಿಗೆ ಕವರ್ ಹಾಕಿಸಿಕೊಳ್ಳುವುದು ಅನಿವಾರ್ಯ.
2. ಹಾಲು ಹಲ್ಲು ಬಿದ್ದು ಹೋಗುವ ಸಮಯಕ್ಕಿಂತ ಮೊದಲೇ ಬೇರುನಾಳ ಚಿಕಿತ್ಸೆ ಬದಲಾಗಿ ಹಲ್ಲು ಕೀಳಿಸಿದಲ್ಲಿ ಮುಂದೆ ಹುಟ್ಟುವ ಶಾಶ್ವತ ಹಲ್ಲುಗಳು ಸರಿಯಾಗಿ ಅದರ ಜಾಗದಲ್ಲಿಯೇ ಬರದೇ ಇರಬಹುದು. ಯಾಕೆಂದರೆ ಹಲ್ಲು ಬೇಗನೇ ಕೀಳಿಸಿದಲ್ಲಿ, ಅಕ್ಕಪಕ್ಕದ ಹಲ್ಲುಗಳು ಆ ಜಾಗಕ್ಕೆ ಜಾರಿಕೊಂಡು ಶಾಶ್ವತ ಹಲ್ಲುಗಳು ಓರೆಕೋರೆಯಾಗಿ ಬರುವಂತೆ ಮಾಡಬಹುದು. ನೈಸರ್ಗಿಕವಾದ ಹಾಲು ಹಲ್ಲುಗಳು ಅತಿ ಉತ್ತಮವಾದ ಜಾಗ ಉಳಿಕೆಯ ಮಾರ್ಗವೆಂದು ಚರಿತ್ರೆಯಿಂದ ಸಾಬೀತಾಗಿದೆ. ಇಂತಹ ಮಕ್ಕಳಿಗೆ ವಕ್ರದಂತ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಹಲ್ಲು ವಜ್ರಕ್ಕಿಂತಲೂ ಅಮೂಲ್ಯ ಆಸ್ತಿ
ಮಕ್ಕಳಲ್ಲಿ ಹಾಲು ಹಲ್ಲಿಗೆ ಮಾಡಿಸುವ ಬೇರುನಾಳ ಚಿಕಿತ್ಸೆ ಅಥವಾ ‘ಫಲ್ಫೊಟಮಿ’ ಚಿಕಿತ್ಸೆ ಎಂಬುದು ಅತ್ಯಂತ ಸುರಕ್ಷಿತ ಎಂದು ಹಲವಾರು ವರ್ಷಗಳಿಂದ ಸಾಬೀತಾಗಿದೆ. ಸಾಮಾನ್ಯವಾಗಿ ಈ ಚಿಕಿತ್ಸೆಯನ್ನು ಮಕ್ಕಳ ಹಲ್ಲಿನ ತಜ್ಞರಾದ ‘ಪೀಡೋಡೊಂಟಿಸ್ಟ್‘ ಈ ಚಿಕಿತ್ಸೆಯನ್ನು ಮಾಡುತ್ತಾರೆ. ಅವರು ಈ ಚಿಕಿತ್ಸೆಯಲ್ಲಿ ವಿಶೇಷ ತರಬೇತಿ ಹೊಂದಿರುತ್ತಾರೆ. ಸಾಮಾನ್ಯ ದಂತ ವೈದ್ಯರು ವಿಶೇಷ ತರಬೇತಿ ಪಡೆದ ಬಳಿಕ ಈ ಚಿಕಿತ್ಸೆ ಮಾಡುತ್ತಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ಚಿಕಿತ್ಸೆ ಮಾಡುವುದು ಸುಲಭದ ಕೆಲಸವಲ್ಲ. ಒಂದೆರಡು ಹಲ್ಲುಗಳಿಗೆ ‘ಫಲ್ಪೊಟಮಿ’ ಚಿಕಿತ್ಸೆ ಮಾಡುವುದಿದ್ದಲ್ಲಿ ಸ್ಥಳೀಯ ಅರಿವಳಿಕೆ ಚುಚ್ಚುಮದ್ದು ನೀಡಿ ದಂತ ಚಿಕಿತ್ಸಾಲಯದಲ್ಲಿಯೇ ಮಾಡಲಾಗುತ್ತದೆ. ಆದರೆ ನಾಲ್ಕೈದು ಹಲ್ಲುಗಳಿಗೆ ಈ ಚಿಕಿತ್ಸೆ ಮಾಡಿಸುವುದಿದ್ದಲ್ಲಿ ಅರಿವಳಿಕೆ ಮದ್ದು ನೀಡಿ ಮಕ್ಕಳನ್ನು ಸ್ಮೃತಿ ತಪ್ಪಿಸಿ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಪೂರ್ವ ತಯಾರಿ ಪರೀಕ್ಷೆಗಳು ಮತ್ತು ಹೆತ್ತವರ ಸಮ್ಮತಿ ಅತಿ ಅಗತ್ಯ. ಒಟ್ಟಿನಲ್ಲಿ ಮಕ್ಕಳ ಮಾನಸಿಕ ಸ್ಥಿತಿ, ಹೆತ್ತವರ ಸಹಕಾರ ಮತ್ತು ದಂತ ವೈದ್ಯರ ಕೌಶಲ ಇವೆಲ್ಲವೂ ಸರಿಯಾಗಿ ಕೂಡಿ ಬಂದಲ್ಲಿ ಈ ಹಾಲು ಹಲ್ಲಿನ ಬೇರುನಾಳ ಚಿಕಿತ್ಸೆ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ಹಲ್ಲು ಎನ್ನುವುದು ವಜ್ರಕ್ಕಿಂತಲೂ ಅಮೂಲ್ಯವಾದ ಆಸ್ತಿ ಎಂಬುದನ್ನು ಹೆತ್ತವರು ಮತ್ತು ಮಕ್ಕಳು ಅರಿತಲ್ಲಿ ದಂತ ವೈದ್ಯರ ಕೆಲಸ ಸುಲಭವಾಗುವುದಂತೂ ಸತ್ಯವಾದ ಮಾತು.
(ಲೇಖನ: ಡಾ. ಮುರಲೀ ಮೋಹನ ಚೂಂತಾರು, ದಂತವೈದ್ಯರು, ಮಂಗಳೂರು)
