ಮಧುಮೇಹವು ಶ್ವಾಸಕೋಶದ ಆರೋಗ್ಯದ ಯಾವ ರೀತಿ ಪರಿಣಾಮ ಬೀರುತ್ತೆ, ಈ ಬಗ್ಗೆ ಎಚ್ಚರ ವಹಿಸುವುದು ಹೇಗೆ; ಇಲ್ಲಿದೆ ತಜ್ಞರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಧುಮೇಹವು ಶ್ವಾಸಕೋಶದ ಆರೋಗ್ಯದ ಯಾವ ರೀತಿ ಪರಿಣಾಮ ಬೀರುತ್ತೆ, ಈ ಬಗ್ಗೆ ಎಚ್ಚರ ವಹಿಸುವುದು ಹೇಗೆ; ಇಲ್ಲಿದೆ ತಜ್ಞರ ಸಲಹೆ

ಮಧುಮೇಹವು ಶ್ವಾಸಕೋಶದ ಆರೋಗ್ಯದ ಯಾವ ರೀತಿ ಪರಿಣಾಮ ಬೀರುತ್ತೆ, ಈ ಬಗ್ಗೆ ಎಚ್ಚರ ವಹಿಸುವುದು ಹೇಗೆ; ಇಲ್ಲಿದೆ ತಜ್ಞರ ಸಲಹೆ

ಇತ್ತೀಚಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬಹಳ ಜನರನ್ನು ಕಾಡುತ್ತಿದೆ. ಈ ಕಾಯಿಲೆ ಇರುವವರು ಸಾಕಷ್ಟು ಎಚ್ಚರ ವಹಿಸಬೇಕು, ಆರೋಗ್ಯ ಕಾಳಜಿ ಮಾಡಬೇಕು. ಇದು ದೇಹದ ಇತರ ಅಂಗಗಳಿಗೂ ಹಾನಿ ಮಾಡುವ ಸಾಧ್ಯತೆ ಇದೆ. ಮಧುಮೇಹದಿಂದ ಶ್ವಾಸಕೋಶದ ಆರೋಗ್ಯಕ್ಕೆ ಹಾನಿಯಾಗುವುದೇ, ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ನೋಡಿ.

ಮಧುಮೇಹ ಮತ್ತು ಶ್ವಾಸಕೋಶದ ಆರೋಗ್ಯ
ಮಧುಮೇಹ ಮತ್ತು ಶ್ವಾಸಕೋಶದ ಆರೋಗ್ಯ (PC: Canva)

ಮಧುಮೇಹವು ದೀರ್ಘಕಾಲ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ಇದು ಜೀವನಪೂರ್ತಿ ಬೆಂಬಿಡದಂತೆ ಇರುತ್ತದೆ. ಇದನ್ನು ನಿಯಂತ್ರಣ ಮಾಡಬಹುದೇ ವಿನಃ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೇ ಇಲ್ಲ. ಮಧುಮೇಹಿಗಳು ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಿದೆ. ಮಧುಮೇಹ ಇರುವವರು ಎಚ್ಚರ ವಹಿಸದಿದ್ದರೆ ಮೂತ್ರಪಿಂಡಗಳು, ಹೃದಯ ಮತ್ತು ಯಕೃತ್ತಿನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ಅಲ್ಲದೇ ಶ್ವಾಸಕೋಶದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಧುಮೇಹವು ಶ್ವಾಸಕೋಶದ ಸಾಮರ್ಥ್ಯ, ಶ್ವಾಸನಾಳದ ಕಾರ್ಯ ಮತ್ತು ಶ್ವಾಸಕೋಶದ ಪ್ರಸರಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ಹೊಂದಿರುವ ಜನರ ಉಸಿರಾಟದ ಸ್ನಾಯುಗಳು ನಿಷ್ಕ್ರಿಯವಾಗುತ್ತವೆ. ಅವರ ಶ್ವಾಸಕೋಶಗಳು ಪೂರ್ಣವಾಗಿ ತೆರೆಯಲು ಸಾಧ್ಯವಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಉಸಿರುಗಟ್ಟುವಂತಹ ಅನುಭವ ಆಗಬಹುದು ಎಂದು ಹೇಳುತ್ತಾರೆ ಮುಂಬೈನ ಸೈಫಿ ಆಸ್ಪತ್ರೆಯ ಕನ್ಸಲ್ಟೆಂಟ್ ಎಂಡೋಕ್ರೈನಾಲಜಿಸ್ಟ್ ಡಾ. ಶೆಹ್ಲಾ ಶೇಖ್.

ಡಯಾಬಿಟಿಕ್ ನ್ಯೂರೋಪತಿ ಎಂದರೇನು?

ಡಯಾಬಿಟಿಕ್ ನ್ಯೂರೋಪತಿ ಸಾಮಾನ್ಯವಾಗಿ ನರಮಂಡಲದ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಶ್ವಾಸಕೋಶದ ಕಾರ್ಯವನ್ನು ನಿಯಂತ್ರಿಸಬಹುದು. ವಾಯುಮಾರ್ಗ ಸಂಕುಚಿತವಾದಾಗ ಶ್ವಾಸಕೋಶದಲ್ಲಿ ಉಂಟಾದ ಉದ್ರೇಕಕಾರಿಗಳು ಅಥವಾ ರೋಗಕಾರಕಗಳನ್ನು ತೆರವುಗೊಳಿಸಲು ರೋಗಿಗೆ ಕಷ್ಟವಾಗಬಹುದು. ಈ ಸಮಯದಲ್ಲಿ ಉಸಿರಾಡಲು ಕೂಡ ತೊಂದರೆ ಎದುರಾಗಬಹುದು. ಆ ಕಾರಣಕ್ಕೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ.

ಮಧುಮೇಹ ಇರುವವರ ಶ್ವಾಸಕೋಶಗಳು ಸೋಂಕಿಗೆ ತುತ್ತಾಗಬಹುದು. ಮಧುಮೇಹವು ಶ್ವಾಸಕೋಶದ ಸೋಂಕಿನ ಅಪಾಯವನ್ನು ಸಹ ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ ‘ಶ್ವಾಸನಾಳದ ಮೇಲ್ಮೈ ದ್ರವದಲ್ಲಿ ಹೆಚ್ಚಿನ ಗ್ಲೂಕೋಸ್ ಇರುವ ಕಾರಣ, ಪ್ರತಿರಕ್ಷಣಾ ವ್ಯವಸ್ಥೆಯು ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಧುಮೇಹ ಹೊಂದಿರುವ ಜನರು ಬೇಗನೆ ಶ್ವಾಸಕೋಶದ ಸೋಂಕಿಗೆ ಒಳಗಾಗುತ್ತಾರೆ. ಹೆಚ್ಚಿನ ಮಟ್ಟದ ಆಕ್ಸಿಡೇಟಿವ್ ಒತ್ತಡದಿಂದಾಗಿ, ಕ್ಲಿಯರೆನ್ಸ್ ಸಿಸ್ಟಮ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಸಮಯದಲ್ಲಿ ಸೋಂಕು, ನ್ಯುಮೋನಿಯಾ ಇತ್ಯಾದಿಗಳು ಹರಡುವ ಸಾಧ್ಯತೆ ಹೆಚ್ಚು.

ಕ್ಷಯರೋಗದ ಅಪಾಯ?

ಮಧುಮೇಹ ಇರುವವರಲ್ಲಿ ಶ್ವಾಸಕೋಶದ ಆರೋಗ್ಯವೂ ಹದಗೆಡುವುದು ಮಾತ್ರವಲ್ಲದೇ, ಕ್ಷಯರೋಗಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಮಧುಮೇಹ ರೋಗಿಗಳಿಗೂ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು. ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗುತ್ತವೆ.

ಮಧುಮೇಹ ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಅಧಿಕ ರಕ್ತದ ಗ್ಲೂಕೋಸ್ ಮಟ್ಟವು ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಆಹಾರ ಪದ್ಧತಿ, ವ್ಯಾಯಾಮ ಮತ್ತು ಔಷಧಿಗಳ ಮೂಲಕ ನಿಯಂತ್ರಣದಲ್ಲಿ ಇಡಬೇಕು. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ. ಸಕ್ಕರೆ ಮತ್ತು ಮೈದಾದಿಂದ ಮಾಡಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅಧಿಕ ನಾರಿನಂಶವಿರುವ ಆಹಾರವನ್ನು ಸೇವಿಸಿ. ಅಧಿಕ ತೂಕವನ್ನು ಕಡಿಮೆ ಮಾಡಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner