Diabetes Warning: ಹೆಚ್ಚಿದ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು ಎಚ್ಚರ, ಈ ಸಲಹೆ ಪಾಲಿಸಲು ಮರಿಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Diabetes Warning: ಹೆಚ್ಚಿದ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು ಎಚ್ಚರ, ಈ ಸಲಹೆ ಪಾಲಿಸಲು ಮರಿಬೇಡಿ

Diabetes Warning: ಹೆಚ್ಚಿದ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು ಎಚ್ಚರ, ಈ ಸಲಹೆ ಪಾಲಿಸಲು ಮರಿಬೇಡಿ

ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಕಳಪೆ ಜೀವನಶೈಲಿಯ ಜೊತೆಗೆ ಒತ್ತಡವೂ ಕೂಡ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತವಾಗಲು ಪ್ರಮುಖ ಕಾರಣವಾಗುತ್ತಿದೆ. ಒತ್ತಡವನ್ನು ನಿವಾರಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ನಾವು ಪಾಲಿಸಬೇಕಾದ 6 ಪರಿಣಾಮಕಾರಿ ವಿಧಾನಗಳಿವು.

ಹೆಚ್ಚಿದ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು ಎಚ್ಚರ
ಹೆಚ್ಚಿದ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು ಎಚ್ಚರ (PC: Canva)

ಒತ್ತಡವು ಇತ್ತೀಚಿನ ಜೀವನಶೈಲಿಯ ಭಾಗವಾಗಿದೆ. ಅತಿಯಾದ ಒತ್ತಡವು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ನಿಭಾಯಿಸುವ ಕಾರ್ಯವಿಧಾನವಾಗಿ ಜನರು ಅಧಿಕ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಎದುರಾಗಬಹುದು. ಒತ್ತಡ ಹೆಚ್ಚಾದಷ್ಟೂ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. 

ಒತ್ತಡವು ನಮ್ಮ ಆರೋಗ್ಯವನ್ನು ಹೇಗೆ ಹಾಳು ಮಾಡುತ್ತದೆ?

ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ವಾಶಿಯ ಫೋರ್ಟಿಸ್ ಹಿರಾನಂದಾನಿ ಆಸ್ಪತ್ರೆಯ ಮನೋವೈದ್ಯ ಡಾ. ಕೇದಾರ್ ಟಿಲ್ವೆ ‘ರೋಗಿಗಳಲ್ಲಿ ಒತ್ತಡದ ಪ್ರಮಾಣ ಹೆಚ್ಚಿದಾಗ ಔಷಧಿಗಳನ್ನು ತಪ್ಪಿಸುವ ಸಾಧ್ಯತೆ ಹೆಚ್ಚು. ಇದು ಅವರ ಸಕ್ಕರೆ ಮಟ್ಟದಲ್ಲಿ ತೀವ್ರ ಏರಿಳಿತಕ್ಕೆ ಕಾರಣವಾಗುತ್ತದೆ. ಇಂತಹ ವ್ಯಕ್ತಿಗಳು ಒತ್ತಡದಲ್ಲಿರುವಾಗ ಗಮನವಿಲ್ಲದಂತೆ ಇರುತ್ತಾರೆ, ಇದರಿಂದ ಅವರಿಗೇ ಅರಿಯದಂತೆ ಹೆಚ್ಚುವರಿ ಔಷಧಿಗಳನ್ನು ಅಥವಾ ಅನುಚಿತ ಡೋಸೇಜ್ ಅನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ‘ ಎನ್ನುತ್ತಾರೆ.

‘ಒತ್ತಡ ಹೆಚ್ಚಾಗುವುದರಿಂದ ಆಲ್ಕೋಹಾಲ್, ನಿಕೋಟಿನ್ ಮತ್ತು ಕ್ಯಾನಬಿಸ್‌ನಂತಹ ಹಾನಿಕಾರಕ ಪದಾರ್ಥಗಳ ಸೇವನೆಗೂ ಕಾರಣವಾಗಬಹುದು. ಇದು ಆ ವ್ಯಕ್ತಿಯ ಮಧುಮೇಹವನ್ನು ಉಲ್ಬಣಗೊಳಿಸುತ್ತದೆ, ಅಲ್ಲದೇ ಮಧುಮೇಹದಿಂದ ಉಂಟಾಗುವ ತೊಡಕುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಒತ್ತಡ ಮತ್ತು ಕಳಪೆ ಗ್ಲೈಸೆಮಿಕ್ ನಿಯಂತ್ರಣವು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಅಕಾಲಿಕ ಸ್ಖಲನ ಮತ್ತು ಲೈಂಗಿಕ ಬಯಕೆಯ ಕೊರತೆಯಂತಹ ಲೈಂಗಿಕ ಅಸ್ವಸ್ಥತೆಗಳಿಗೂ ಕಾರಣವಾಗುತ್ತದೆ‘ ಎಂದು ವೈದ್ಯರು ಹೇಳುತ್ತಾರೆ.

ಒತ್ತಡ ನಿವಾರಿಸಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ ತಗ್ಗಿಸಲು ತಜ್ಞರ ಸಲಹೆ

ಡಾ. ಕೇದಾರ್ ಟಿಲ್ವೆ ಒತ್ತಡವನ್ನು ನಿರ್ವಹಿಸಲು ಕೆಲವು ತಂತ್ರಗಳನ್ನು ಶಿಫಾರಸು ಮಾಡಿದ್ದಾರೆ, ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ಅಂತಹ 6 ಪರಿಣಾಮಕಾರಿ ತಂತ್ರಗಳು ಯಾವುವು ಎಂಬುದನ್ನು ನೋಡೋಣ. 

  • ಮೈಂಡ್‌ಫುಲ್‌ನೆಸ್‌:  5 ಇಂದ್ರೀಯಗಳಿಗೆ ವ್ಯಾಯಾಮ ನೀಡುವುದು, ಧ್ಯಾನ ಹಾಗೂ ಉಸಿರಾಟದ ತಂತ್ರಗಳನ್ನು ಆಧರಿಸಿದ ಅಭ್ಯಾಸಗಳು ವರ್ತಮಾನದ ಮೇಲೆ ಗಮನಹರಿಸಲು ಅವಕಾಶ ನೀಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದು ಮೈಂಡ್‌ಫುಲ್‌ನೆಸ್‌ಗೆ ಅವಕಾಶ ನೀಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವೂ ನಿಯಂತ್ರಣದಲ್ಲಿ ಇರುತ್ತದೆ. 
  • ತಿನ್ನುವುದರ ಮೇಲೆ ಹಿಡಿತ: ಬುದ್ದಿವಂತಿಕೆಯಿಂದ ತಿನ್ನುವುದು ಅತಿಯಾಗಿ ತಿನ್ನುವ ಹಠಾತ್ ಪ್ರವೃತ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
  • ಖಿನ್ನತೆ ಅಥವಾ ಆತಂಕದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಖಿನ್ನತೆ-ಶಮನಕಾರಿಗಳ ಬಳಕೆಯು ಉತ್ತಮ ಗ್ಲೈಸೆಮಿಕ್ ನಿಯಂತ್ರಣದೊಂದಿಗೆ ಸಂಬಂಧಿಸಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ, ಇದು HbA1C ಮಟ್ಟದಲ್ಲಿ ಸುಧಾರಣೆಯಾಗಿ ಕಂಡುಬರುತ್ತದೆ. ಇದರಿಂದ ಒತ್ತಡ ನಿವಾರಣೆ ಸಾಧ್ಯವಿದೆ. ಅಂತಹ ಸಮಸ್ಯೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. 

    ಇದನ್ನೂ ಓದಿ: ಫಲವಂತಿಕೆಯ ಮೇಲೂ ಪರಿಣಾಮ ಬೀರುತ್ತೆ ಮಧುಮೇಹ; ಹೀಗಿರಲಿ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳ ಜೀವನಶೈಲಿ
  • ಮಾದಕ ದ್ರವ್ಯ ಬಳಕೆಯನ್ನು ನಿಯಂತ್ರಿಸಲು ಆಪ್ತಸಮಾಲೋಚಕರು, ಮನೋವೈದ್ಯರ ಸಲಹೆ ಪಡೆಯುವುದು, ಅರಿವಿನ ವರ್ತನೆಯ ಚಿಕಿತ್ಸೆ (CBT) ಅಥವಾ ಪ್ರೇರಕ ವರ್ಧನೆ ಚಿಕಿತ್ಸೆಯು ಔಷಧಿಗಳ ಜೊತೆ ಒತ್ತಡ ನಿವಾರಿಸಿ ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ.  
  • ಯೋಗ, ಧ್ಯಾನದ ನಿಯಮಿತ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪ್ರಯೋಜನಗಳನ್ನು ನೀಡುತ್ತದೆ.
  • ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಹೊಂದಿರುವುದು ಮತ್ತು ಸರಿಯಾದ ದೈನಂದಿನ ದಿನಚರಿಯನ್ನು ಅನುಸರಿಸುವುದು ಸಹ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ. 

ಮಧುಮೇಹ ಇಂದು ಎಳೆ ವಯಸ್ಸಿನವರನ್ನೂ ಕಾಡುತ್ತಿದೆ. ಅತಿಯಾದ ಒತ್ತಡವು ಮಧುಮೇಹ ಹೆಚ್ಚಲು ಪ್ರಮುಖ ಕಾರಣವಾಗುತ್ತಿದೆ. ಹಾಗಾಗಿ ಒತ್ತಡ ನಿರ್ವಹಣೆಯ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅದಕ್ಕಾಗಿ ಈ ಮೇಲಿನ ತಂತ್ರಗಳನ್ನು ತಪ್ಪದೇ ನಿರ್ವಹಿಸುವುದು ಮುಖ್ಯವಾಗುತ್ತದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner