ಡಯಾಬಿಟಿಸ್ ಇರುವವರು ತಿನ್ನಲೇಬಾರದಂತಹ ಒಣಹಣ್ಣುಗಳಿವು; ‌ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತಕ್ಷಣ ಏರಿಕೆಯಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಡಯಾಬಿಟಿಸ್ ಇರುವವರು ತಿನ್ನಲೇಬಾರದಂತಹ ಒಣಹಣ್ಣುಗಳಿವು; ‌ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತಕ್ಷಣ ಏರಿಕೆಯಾಗುತ್ತೆ

ಡಯಾಬಿಟಿಸ್ ಇರುವವರು ತಿನ್ನಲೇಬಾರದಂತಹ ಒಣಹಣ್ಣುಗಳಿವು; ‌ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತಕ್ಷಣ ಏರಿಕೆಯಾಗುತ್ತೆ

ಒಣಹಣ್ಣುಗಳಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಉತ್ತಮ. ಆದರೆ ಕೆಲವು ವಿಧದ ಒಣಹಣ್ಣುಗಳನ್ನು ಮಧುಮೇಹಿಗಳು ತಿನ್ನುವುದನ್ನು ತಪ್ಪಿಸಬೇಕು. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಅಂತಹ ಒಣಹಣ್ಣುಗಳು ಯಾವುವು ನೋಡಿ. ನೀವು ಮಧುಮೇಹಿಗಳಾಗಿದ್ದರೆ ಈ ಹಣ್ಣುಗಳ ಸೇವನೆಗೆ ಇಂದೇ ಕಡಿವಾಣ ಹಾಕಿ.

ಡಯಾಬಿಟಿಸ್ ಇರುವವರು ತಿನ್ನಲೇಬಾರದಂತಹ ಒಣಹಣ್ಣುಗಳಿವು
ಡಯಾಬಿಟಿಸ್ ಇರುವವರು ತಿನ್ನಲೇಬಾರದಂತಹ ಒಣಹಣ್ಣುಗಳಿವು (PC: Canva)

ಬಹುತೇಕ ಎಲ್ಲಾ ರೀತಿಯ ಒಣಹಣ್ಣುಗಳು ಅಥವಾ ಡ್ರೈಫ್ರೂಟ್ಸ್‌ಗಳು ಹೆಚ್ಚಿನ ಪೋಷಕಾಂಶವನ್ನು ಹೊಂದಿರುತ್ತವೆ. ಇವು ಆರೋಗ್ಯಕ್ಕೂ ಬಹಳ ಉತ್ತಮ. ಆದಾಗ್ಯೂ, ಮಧುಮೇಹ ಇರುವವರು ಕೆಲವು ಒಣ ಹಣ್ಣುಗಳನ್ನು ಹೆಚ್ಚು ತಿನ್ನಬಾರದು. ಏಕೆಂದರೆ ಕೆಲವು ವಿಧದ ಒಣ ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಬಹುದು. ಹಾಗಾದರೆ ಮಧುಮೇಹ ಇರುವವರು ಯಾವ ಒಣ ಹಣ್ಣುಗಳನ್ನು ಸೇವಿಸಬಾರದು ಎಂಬ ವಿವರ ಇಲ್ಲಿದೆ.

ಅಂಜೂರ

ಅಂಜೂರವನ್ನು ತಿನ್ನುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಆದರೂ ಮಧುಮೇಹ ಇರುವವರು ಈ ಒಣಹಣ್ಣನ್ನು ತಿನ್ನಬಾರದು. ಇದರಲ್ಲಿ ಶೇ ಶೇ 50 ರಿಂದ 60ರಷ್ಟು ಸಕ್ಕರೆ ಅಂಶ ಇರುತ್ತದೆ. ಹಾಗಾಗಿ ಇದನ್ನು ತಿಂದರೆ ದೇಹದಲ್ಲಿನ ಸಕ್ಕರೆ ಮಟ್ಟ ಸಾಕಷ್ಟು ಏರಿಕೆಯಾಗುತ್ತದೆ. ಇದು ಫ್ರಕ್ಟೋಸ್, ಗ್ಲೂಕೋಸ್ ಮತ್ತು ಡೆಕ್ಸ್ಟ್ರೋಸ್‌ನಂತಹ ಸಕ್ಕರೆ ಅಂಶಗಳನ್ನು ಹೊಂದಿರುತ್ತದೆ. ಹಾಗಾಗಿ ಮಧುಮೇಹಿಗಳು ಈ ಹಣ್ಣಿನಿಂದ ದೂರವಿರಬೇಕು.

ಒಣಗಿದ ಚೆರ್ರಿ

ಒಣ ಚೆರ್ರಿ ಕೂಡ ಮಧುಮೇಹಿಗಳಿಗೆ ಉತ್ತಮವಲ್ಲ. ಇದರಲ್ಲಿ ಶೇ 40 ರಷ್ಟು ಸಕ್ಕರೆಯಂಶ ಇರುತ್ತದೆ. ಒಣಗಿದ ಚೆರ್ರಿಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಮಧುಮೇಹ ಇರುವವರು ತಾಜಾ ಚೆರ್ರಿಗಳನ್ನು ಮಿತವಾಗಿ ತಿನ್ನಬಹುದು.

ಖರ್ಜೂರ

ಖರ್ಜೂರದಲ್ಲಿ ಪೋಷಕಾಂಶಗಳು ಹೆಚ್ಚಿದ್ದರೂ ಸಕ್ಕರೆ ಅಂಶ ಕೂಡ ಅದೇ ಮಟ್ಟದಲ್ಲಿದೆ. ಖರ್ಜೂರದಲ್ಲಿ ಶೇ 70ರಷ್ಟು ಸಕ್ಕರೆ ಇರುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಅಧಿಕವಾಗಿದೆ. ಅದಕ್ಕಾಗಿಯೇ ಖರ್ಜೂರವನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹ ಇರುವವರಿಗೆ ಖರ್ಜೂರ ಒಳ್ಳೆಯದಲ್ಲ. ಅದಕ್ಕಾಗಿಯೇ ಅವುಗಳನ್ನು ಅತಿಯಾಗಿ ತಿನ್ನಬಾರದು.

ಒಣಗಿಸಿದ ಬಾಳೆಹಣ್ಣು, ಮಾವು

ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳಿವೆ. ಆದಾಗ್ಯೂ, ಬಾಳೆಹಣ್ಣನ್ನು ಹುರಿಯುವುದು, ಸಕ್ಕರೆ-ಲೇಪಿತ ಮತ್ತು ಸಂಸ್ಕರಣೆ ಮಾಡುವುದರಿಂದ ಅವುಗಳ ಕ್ಯಾಲೋರಿ ಸಾಂದ್ರತೆಯನ್ನು ಹೆಚ್ಚಿಸಬಹುದು. ಬಾಳೆಹಣ್ಣಿನ ಚಿಪ್ಸ್ ಮತ್ತು ಸಂಸ್ಕರಿಸಿದ ಒಣ ಬಾಳೆಹಣ್ಣುಗಳನ್ನು ತಿನ್ನುವುದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ, ಬಾಳೆಹಣ್ಣುಗಳು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿವೆ. ಅಲ್ಲದೆ, ಒಣಗಿದ ಮತ್ತು ಸಂಸ್ಕರಿಸಿದ ಮಾವಿನಹಣ್ಣುಗಳನ್ನು ಹೆಚ್ಚು ಸೇವಿಸಬೇಡಿ, ಇದು ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಮಧುಮೇಹಿಗಳು ತಿನ್ನಬಹುದಾದ ಒಣಹಣ್ಣುಗಳು

ಮಧುಮೇಹ ಇರುವವರು ಕಡಿಮೆ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಬೀಜಗಳು ಮತ್ತು ಒಣ ಹಣ್ಣುಗಳನ್ನು ತಿನ್ನಬಹುದು. ಬಾದಾಮಿ, ವಾಲ್‌ನಟ್ಸ್, ಪಿಸ್ತಾ, ಗೋಡಂಬಿ, ಕಡಲೆಕಾಯಿಗಳನ್ನು ಸೇವಿಸಬಹುದು. ಅವು ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯಕ್ಕೂ ಅವು ಪ್ರಯೋಜನಕಾರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner