ದೈವಿಕ ಹಿನ್ನೆಲೆಯಷ್ಟೇ ಅಲ್ಲ, ಸಂಜೆ ಹೊತ್ತು ಮನೆಯಲ್ಲಿ ಧೂಪ ಹಾಕುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಸಂಜೆ ಹೊತ್ತಿಗೆ ಹಲವರ ಮನೆಯಲ್ಲಿ ಧೂಪ ಹಾಕುವ ಪದ್ಧತಿ ಇದೆ. ಬಹುತೇಕರು ಇದಕ್ಕೆ ದೈವಿಕ ಹಿನ್ನೆಲೆ ಕಾರಣ ಎಂದುಕೊಳ್ಳುತ್ತಾರೆ. ಆದರೆ ಇದರಿಂದ ವೈಜ್ಞಾನಿಕ ಪ್ರಯೋಜನಗಳು ಕೂಡ ಇವೆ ಎನ್ನುವುದು ಹಲವರಿಗೆ ತಿಳಿದಿಲ್ಲ. ದೈನಂದಿನ ಜೀವನದಲ್ಲಿ ಇದು ಎಷ್ಟು ಮುಖ್ಯ, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಹಿಂದೂ ಸಂಪ್ರದಾಯದಲ್ಲಿ ಸಂಜೆ ಸಮಯದಲ್ಲಿ ಮನೆಯಲ್ಲಿ ಧೂಪದ್ರವ್ಯವನ್ನು ಬೆಳಗುವುದು ಜನಪ್ರಿಯ ಸಂಪ್ರದಾಯ. ಇದು ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಮನೆಯಲ್ಲಿ ನಕಾರಾತ್ಮ ಅಂಶವನ್ನು ಹೋಗಲಾಡಿಸಿ, ಶಾಂತಿ ಮತ್ತು ಸಂತೋಷವನ್ನು ತರುತ್ತದೆ. ಅದರೊಂದಿಗೆ, ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ವಿವಿಧ ಧೂಪಗಳ ಪ್ರಯೋಜನಗಳು ಹೀಗಿವೆ.
1. ಬೇವಿನ ಎಲೆಗಳ ಧೂಪ
ಹಿಂದಿನಿಂದಲೂ ಬೇವಿನ ಎಲೆಗಳ ಧೂಪ ಹಾಕುತ್ತಿದ್ದರು. ಬೇವಿನ ಎಲೆಗಳ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯ ಮೂಲಕ, ಮನೆಯಲ್ಲಿ ಋತುಮಾನದ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಲ್ಲದೆ ಬೇವಿನ ಸೊಪ್ಪಿನ ಹೊಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ನೆಮ್ಮದಿ ತರುತ್ತದೆ. ಬೇವಿನ ಋಣಾತ್ಮಕತೆಯನ್ನು ಹೀರಿಕೊಳ್ಳುವ ಶಕ್ತಿಯು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಧನಾತ್ಮಕ ಮತ್ತು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.
ಲೋಬಾನ, ಸುಗಂಧದ್ರವ್ಯಗಳ ಧೂಪ
ಸಂಜೆಯ ಸಮಯದಲ್ಲಿ ಸುಗಂಧ ದ್ರವ್ಯ, ಲೋಬಾನ ಅಥವಾ ಶ್ರೀಗಂಧದಂತಹ ವಸ್ತುಗಳಿಂದ ಮನೆಯಲ್ಲಿ ಧೂಪ ಹಾಕುವುದರಿಂದ ನಕಾರಾತ್ಮಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಆಯುರ್ವೇದದ ಪ್ರಕಾರ ಉಸಿರಾಟದ ತೊಂದರೆ ಇದ್ದರೆ ಹಸುವಿನ ಸಗಣಿಗೆ ಸ್ವಲ್ಪ ಲೋಬಾನ ಅಥವಾ ಶ್ರೀಗಂಧ ಮತ್ತು ತುಪ್ಪ ಸೇರಿಸಿ ಹೊಗೆಯಾಡಿಸಬೇಕು. ಹೀಗೆ ಮಾಡುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಈ ಪ್ರಕ್ರಿಯೆಯು ಮನಸ್ಸಿಗೆ ಶಾಂತಿಯನ್ನು ಸಹ ನೀಡುತ್ತದೆ. ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕುತ್ತದೆ.
ಲವಂಗ, ಕರ್ಪೂರದ ಧೂಪ
ಲವಂಗ ಮತ್ತು ಕರ್ಪೂರ ಹಚ್ಚುವುದು ಹಳೆಯ ಸಂಪ್ರದಾಯ. ಇದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಇವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಮನೆಯಲ್ಲಿ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ಇತರ ರೋಗಗಳನ್ನು ಕೊಲ್ಲಲು ಈ ಧೂಪದ್ರವ್ಯ ಉತ್ತಮ.
ಅಲ್ಲದೆ ಕರ್ಪೂರ ಮತ್ತು ಲವಂಗದ ವಾಸನೆಯು ಸ್ಟ್ರೆಸ್ ಬಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಬಿಡುಗಡೆಯಾಗುವ ಪರಿಮಳವು ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದು ಮನೆಯಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಜಿಸುತ್ತದೆ.
ದಾಲ್ಚಿನ್ನಿ ಎಲೆಯಿಂದ ಧೂಪ ಹಾಕುವುದು
ದಾಲ್ಚಿನ್ನಿ ಎಲೆಗಳು (ಬೇ ಎಲೆಗಳು) ಎಲ್ಲಕ್ಕಿಂತ ಬಲವಾದ ಪರಿಮಳವನ್ನು ಉತ್ಪತ್ತಿ ಮಾಡುತ್ತವೆ. ಅವುಗಳನ್ನು ಧೂಪದ್ರವ್ಯವಾಗಿ ಸುಡುವುದರಿಂದ ಮನಸ್ಸು ನಿರಾಳವಾಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ದಾಲ್ಚಿನ್ನಿ ಎಲೆಯ ಧೂಪವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ಎಲೆಯ ಹೊಗೆಯ ಶಕ್ತಿಯು ದೇಹದಲ್ಲಿ ಗಮನಾರ್ಹವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಸಂಜೆ ಹೊತ್ತು ಧೂಪ ಹಾಕುವುದರ ಪ್ರಯೋಜನಗಳು
ಮನಃಶಾಂತಿ: ಸಂಜೆ ಧೂಪವನ್ನು ಹಚ್ಚುವುದರಿಂದ ಮನಸ್ಸಿನ ಒತ್ತಡ ಮತ್ತು ಖಿನ್ನತೆ ದೂರವಾಗುತ್ತದೆ.
ದೈಹಿಕ ಆರೋಗ್ಯ: ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ದೇಹವನ್ನು ನಿಯಮಿತವಾಗಿ ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ರಕ್ತ ಪರಿಚಲನೆ: ಬೇವಿನ ಎಲೆಗಳು, ಲವಂಗ ಮತ್ತು ಕರ್ಪೂರದಂತಹ ವಸ್ತುಗಳು ರಕ್ತ ಪರಿಚಲನೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ನಕಾರಾತ್ಮಕ ಅಂಶವನ್ನು ತೊಡೆದುಹಾಕುವುದು: ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ಜೊತೆಗೆ ದೇಹದಿಂದಲೂ ನಕಾರಾತ್ಮಕ ಅಂಶ ದೂರಾಗುತ್ತದೆ.
ಈ ಸಂಪ್ರದಾಯವನ್ನು ಪಾಲಿಸುವುದರಿಂದ ಮನಸ್ಸಿಗೆ ಶಾಂತಿ, ಸಂತೋಷ ಮತ್ತು ಆರೋಗ್ಯ ಸಿಗುತ್ತದೆ. ದೈವಿಕ ಉದ್ದೇಶಗಳಿಂದಲೂ ಧೂಪ ಹಾಕುವುದು ವಿಶೇಷ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)