ಹಬ್ಬದ ಸಂಭ್ರಮದ ನಡುವೆ ಹೃದಯದ ಆರೋಗ್ಯ ಕಡೆಗಣಿಸದಿರಿ; ದೀಪಾವಳಿ ಸಮಯದಲ್ಲಿ ಹೃದಯ ಜೋಪಾನ ಮಾಡಲು ಇಲ್ಲಿದೆ 8 ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಹಬ್ಬದ ಸಂಭ್ರಮದ ನಡುವೆ ಹೃದಯದ ಆರೋಗ್ಯ ಕಡೆಗಣಿಸದಿರಿ; ದೀಪಾವಳಿ ಸಮಯದಲ್ಲಿ ಹೃದಯ ಜೋಪಾನ ಮಾಡಲು ಇಲ್ಲಿದೆ 8 ಟಿಪ್ಸ್

ಹಬ್ಬದ ಸಂಭ್ರಮದ ನಡುವೆ ಹೃದಯದ ಆರೋಗ್ಯ ಕಡೆಗಣಿಸದಿರಿ; ದೀಪಾವಳಿ ಸಮಯದಲ್ಲಿ ಹೃದಯ ಜೋಪಾನ ಮಾಡಲು ಇಲ್ಲಿದೆ 8 ಟಿಪ್ಸ್

ಹಬ್ಬಗಳ ಸಂದರ್ಭದಲ್ಲಿ ಸಂಭ್ರಮದ ನಡುವೆ ಬಹುತೇಕರು ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹಬ್ಬ ಎಂದರೆ ಬಗೆ ಬಗೆಯ ತಿನಿಸುಗಳು ಸಾಮಾನ್ಯ. ಅದರೊಂದಿಗೆ ದೀಪಾವಳಿ ಹಬ್ಬದಲ್ಲಿ ಮಾಲಿನ್ಯವೂ ಜೊತೆಯಾಗುತ್ತದೆ. ಹೆಚ್ಚು ಕೊಬ್ಬಿನಾಂಶ-ಸಿಹಿಯಂಶ ಇರುವ ತಿನಿಸುಗಳನ್ನು ತಿನ್ನುವುದು, ಶಬ್ದಮಾಲಿನ್ಯ- ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಹೃದಯಕ್ಕೆ ಹಾನಿಯಾಗಬಹುದು ಎಚ್ಚರ.

ಹಬ್ಬದ ಸೀಸನ್‌ನಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ
ಹಬ್ಬದ ಸೀಸನ್‌ನಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ (PC: Canva)

ದೇಶದಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ದೀಪಾವಳಿಯಲ್ಲಿ ಬಗೆ ಬಗೆಯ ತಿನಿಸುಗಳು, ಪಟಾಕಿ ಸದ್ದು ಎಲ್ಲವೂ ಜೋರಾಗಿಯೇ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ನಾವು ಆರೋಗ್ಯದ ಕಾಳಜಿ ವಹಿಸುವುದು ಕಡಿಮೆ. ಹೃದಯದ ಸಮಸ್ಯೆ ಇರುವವರು ಕೂಡ ಆರೋಗ್ಯವನ್ನು ಕಡೆಗಣಿಸುತ್ತಾರೆ. ಜೀವನಶೈಲಿ ಮತ್ತು ಆಹಾರವು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ.

ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಮತ್ತು ಪೋಷಣೆಯಂತಹ ಅಭ್ಯಾಸಗಳು ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯ ಸುಧಾರಿಸಲು ಬಹಳ ಮುಖ್ಯ. ಆದರೆ ಹಬ್ಬದ ದಿನಗಳಲ್ಲಿ ನಾವು ದೈಹಿಕ ಚಟುವಟಿಕೆಗಳ ಮೇಲೆ ಗಮನ ಹರಿಸುವುದು ಕಡಿಮೆ, ತಿನ್ನುವ ಆಹಾರಗಳನ್ನು ಕೂಡ ಮಿತಿ ಇಲ್ಲದೇ ತಿನ್ನುತ್ತೇವೆ. ಹಬ್ಬದ ಆಹಾರಗಳಲ್ಲಿ ಹೆಚ್ಚಾಗಿ ಸಕ್ಕರೆಗಳು, ಕೊಬ್ಬು ಹಾಗೂ ಸೋಡಿಯಂ ಅಂಶ ಅಧಿಕವಾಗಿರುತ್ತದೆ. ಇದು ಒತ್ತಡ ಹೆಚ್ಚಲು ಮತ್ತು ಅಡ್ಡಿಪಡಿಸಿದ ದಿನಚರಿಗಳೊಂದಿಗೆ ಸೇರಿಕೊಂಡು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಅಲ್ಲದೇ ಇದರಿಂದ ಹೃದಯದ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಹಬ್ಬದ ಸಮಯದಲ್ಲಿ ಹೃದಯದ ಕಾಳಜಿ ಮಾಡಲು ಇಲ್ಲಿದೆ 10 ಟಿಪ್ಸ್‌.

ಆರೋಗ್ಯಕರ ಹಬ್ಬದ ಆಹಾರಗಳು

ಸಾಮಾನ್ಯವಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚು ಸಕ್ಕರೆ ಹಾಗೂ ಕೊಬ್ಬಿನಾಂಶ ಇರುವ ಆಹಾರಗಳ ಸೇವನೆಗೆ ಒತ್ತು ನೀಡಲಾಗುತ್ತದೆ. ಇದು ಹೃದಯದ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಗಿರುತ್ತದೆ. ಒಂದು ದಿನ ತಿಂದರೆ ಏನಾಗುವುದಿಲ್ಲ ಎನ್ನುವ ಮನೋಭಾವವು ಹೃದಯಕ್ಕೆ ಮಾರಕವಾಗಬಹುದು. ಅದರ ಬದಲು ಬೆಲ್ಲ, ಡ್ರೈಫ್ರೂಟ್ಸ್‌, ನಟ್ಸ್‌ನಿಂದ ಮಾಡಿದ ತಿನಿಸುಗಳನ್ನು ತಿನ್ನುವುದಕ್ಕೆ ಆದ್ಯತೆ ಕೊಡಿ. ಇದರಿಂದ ಕಡುಬಯಕೆ ನಿವಾರಣೆಯಾಗುವ ಜೊತೆಗೆ ಪ್ರಯೋಜನಕಾರಿ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ. ಈ ಪರ್ಯಾಯಗಳು ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಬೆಂಬಲಿಸುತ್ತದೆ. ಆ ಮೂಲಕದ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.

ಸಾಕಷ್ಟು ನೀರು ಕುಡಿಯುವುದು

ರಕ್ತದ ಪ್ರಮಾಣ ಮತ್ತು ಸರಿಯಾದ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಅವಶ್ಯಕ.ಹಬ್ಬಗಳ ಸಮಯದಲ್ಲಿ, ಆಲ್ಕೋಹಾಲ್ ಮತ್ತು ಕೆಫೀನ್ ಅಂಶ ಇರುವ ಪಾನೀಯಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನೀರಿನ ಬಾಟಲಿಯನ್ನು ಒಯ್ಯುವುದು ಮತ್ತು ನೀರಿನ ಸೇವನೆಯ ಬಗ್ಗೆ ಎಚ್ಚರದಿಂದಿರುವುದು ಹೃದಯದ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಉಪ್ಪಿನಾಂಶ ಸೇವನೆಗೆ ಮಿತಿ ಹಾಕುವುದು

ಹಬ್ಬದ ಸಮಯದಲ್ಲಿ ಮಾಡುವ ಆಹಾರಗಳು ಮತ್ತು ತಿಂಡಿಗಳಲ್ಲಿ ಉಪ್ಪಿನಾಂಶ ಹೆಚ್ಚಿರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹಾಗಾಗಿ ಉಪ್ಪಿನ ಕಡಿಮೆ ಇರುವ ಆಹಾರಗಳನ್ನ ಸೇವಿಸುವುದಕ್ಕೆ ಆದ್ಯತೆ ನೀಡಿ. ಉಪ್ಪಿನ ಬದಲು ಮಸಾಲೆಗಳು ಹಾಗೂ ಗಿಡಮೂಲಿಕೆಗಳನ್ನು ಬಳಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಇದರಿಂದ ಹೃದಯದ ಮೇಲೆ ಒತ್ತಡದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ

ಹಬ್ಬದ ಸಂದರ್ಭಗಳಲ್ಲಿ ಪಾರ್ಟಿ ಹೆಸರಿನಲ್ಲಿ ಹೆಚ್ಚು ಆಲ್ಕೋಹಾಲ್ ಸೇವವಿಸುವ ಅಭ್ಯಾಸ ಹಲವರಿಗಿದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಬಡಿತ ಏರುಪೇರಾಗಬಹುದು. ಹಾಗಾಗಿ ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಹೃದಯದ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಮತ್ತು ನಿರ್ಜಲೀಕರಣವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದರಿಂದ ರಕ್ತದೊತ್ತಡದ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ.

ಆಹಾರದ ಭಾಗವನ್ನು ನಿಯಂತ್ರಿಸಿ

ಅತಿಯಾಗಿ ತಿನ್ನುವುದು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಆ ಕಾರಣಕ್ಕೆ ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. ಉತ್ಕೃಷ್ಟ ಆಹಾರಗಳು ಸಹ ದೇಹವನ್ನು ಓವರ್‌ಲೋಡ್‌ ಮಾಡದೆಯೇ ಸತ್ಕಾರಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಸೇವಿಸುವ ಆಹಾರದ ಪ್ರಮಾಣವನ್ನು ನಿಯಂತ್ರಿಸುವ ಅಭ್ಯಾಸ ಮಾಡುವ ಮೂಲಕ ಇದ್ದಕ್ಕಿದ್ದಂತೆ ರಕ್ತದ ಪ್ರಮಾಣ ಏರಿಕೆಯಾಗುವುದನ್ನು ತಡೆಯಬಹುದು. ಅತಿಯಾದ ಕೊಬ್ಬಿನಾಂಶ ಇರುವ ಆಹಾರಗಳ ಸೇವಿಸದೇ ಇರುವುದು ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ದೈಹಿಕ ಚಟುವಟಿಕೆಗಾಗಿ ಸಮಯವನ್ನು ಮೀಸಲಿಡಿ

ಹಬ್ಬದ ಸಮಯದಲ್ಲಿ ಅತಿಯಾಗಿ ತಿನ್ನುವುದು, ದೇಹ ಮನಸ್ಸಿನ ಮೇಲೆ ಒತ್ತಡ ಇರುವುದು ಸಹಜ. ಅಂತಹ ಸಂದರ್ಭದಲ್ಲಿ ನಿಯಮಿತವಾದ ದೈಹಿಕ ಚಟುವಟಿಕೆ ಬಹಳ ಮುಖ್ಯವಾಗುತ್ತದೆ. ಬೆಳಗಿನ ನಡಿಗೆ ಅಥವಾ ಕೆಲವು ಯೋಗ ಸ್ಟ್ರೆಚ್‌ಗಳಂತಹ ಸರಳ ಚಟುವಟಿಕೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತಪರಿಚಲನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯವೂ ಸುಧಾರಿಸುತ್ತದೆ.

ನಾರಿನಾಂಶ ಸಮೃದ್ಧ ಆಹಾರ ಸೇವನೆ

ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ನಾರಿನಾಂಶ ಸಮೃದ್ಧ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿರಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಆಹಾರಗಳು ಹೆಚ್ಚಿನ ಕ್ಯಾಲೋರಿ ಆಹಾರಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ನಾರಿನಾಂಶ ಅಧಿಕವಾಗಿರುವ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

ವಿಶ್ರಾಂತಿ ಮತ್ತು ನಿದ್ರೆಗೆ ಆದ್ಯತೆ ನೀಡಿ

ಹಬ್ಬದ ಸಮಯದಲ್ಲಿ ಬಹಳ ಹೊತ್ತಿನವರೆಗೆ ನಿದ್ದೆ ಬಿಡುವುದು, ನಿದ್ರೆಯ ವೇಳಾಪಟ್ಟಿಗೆ ಅಡ್ಡಿಯಾಗುವುದು ಸಹಜ. ಇದು ರಕ್ತದೊತ್ತಡ ಮತ್ತು ಒತ್ತಡದ ಹಾರ್ಮೋನ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಗುಣಮಟ್ಟದ ನಿದ್ರೆಯು ಹೃದಯವನ್ನು ಚೇತರಿಸಿಕೊಳ್ಳಲು ಮತ್ತು ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯವಾಗುತ್ತದೆ. ವಿಶ್ರಾಂತಿಗೆ ಆದ್ಯತೆ ನೀಡುವುದು ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಇದು ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಈ ಎಲ್ಲವೂ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ.

ಹಬ್ಬದ ಸಂದರ್ಭದಲ್ಲಿ ಸಂಭ್ರಮ, ಖುಷಿಯ ಕಾರಣಕ್ಕೆ ಹೃದಯ ಅಥವಾ ಸಂಪೂರ್ಣ ಆರೋಗ್ಯದ ಕಾಳಜಿ ಮಾಡುವವರು ಕಡಿಮೆ. ಆದರೆ ಒಂದೆರಡು ದಿನದ ಖುಷಿಯು ಕೆಲವು ದಿನಗಳವರೆಗೆ ಆರೋಗ್ಯ ಸಮಸ್ಯೆ ಎದುರಿಸಲು ಕಾರಣವಾಗಬಹುದು. ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಮೇಲಿನ ಟಿಪ್ಸ್ ಪಾಲಿಸೋದು ಮರಿಬೇಡಿ.

Whats_app_banner