ಮೂತ್ರ ವಿಸರ್ಜಿಸಿದ ತಕ್ಷಣ ನೀರು ಕುಡಿಯುತ್ತೀರಾ; ಈ ಅಭ್ಯಾಸ ಒಳ್ಳೆಯದಲ್ಲ ಎನ್ನುವ ವೈದ್ಯರ ಕಾರಣ ಹೀಗಿದೆ
ಕೆಲವರಿಗೆ ಮೂತ್ರ ವಿಸರ್ಜಿಸಿದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆ. ಆದರೆ, ಹಾಗೆ ನೀರು ಕುಡಿಯುವ ಅಭ್ಯಾಸ ಒಳ್ಳೆಯದಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಕಾರಣವೂ ಇದೆ. ಮೂತ್ರ ವಿಸರ್ಜಿಸಿದ ಎಷ್ಟು ಸಮಯದ ನಂತರ ನೀರು ಕುಡಿದರೆ ಉತ್ತಮ?ಇಲ್ಲಿದೆ ಇನ್ನಷ್ಟು ಮಾಹಿತಿ.
ಹೊಸ ವರ್ಷದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹಲವು ಸಂಕಲ್ಪಗಳನ್ನು ನೀವೆಲ್ಲಾ ಮಾಡಿರುತ್ತೀರಿ. ದಿನಕ್ಕೆ ಇಷ್ಟು ಲೀಟರ್ ನೀರು ಕುಡಿಯುತ್ತೇನೆ, ಅರ್ಧ ಗಂಟೆ ವಾಕ್ ಮಾಡುತ್ತೇನೆ, ಜಿಮ್‌ಗೆ ಹೋಗುತ್ತೇನೆ, ಪ್ರತಿದಿನ ಯೋಗ ಮಾಡುತ್ತೇನೆ ಎಂದು ಕೂಡ ಹಲವರು ನಿರ್ಧಾರ ಮಾಡಿರಬಹುಗು. ಆದರೆ, ಅದರ ಜತೆಗೆ, ಕೆಲವೊಂದು ಅಭ್ಯಾಸಗಳು ನಿಮಗೆ ಸಮಸ್ಯೆ ಉಂಟುಮಾಡಬಹುದು. ದೇಹದ ಆರೋಗ್ಯ ಕಾಪಾಡಿಕೊಳ್ಳಲು ನೀವು ಇಂತಿಷ್ಟು ನೀರು ಕುಡಿಯಲೇಬೇಕು.
ಕೆಲವರು ಮೂತ್ರ ವಿಸರ್ಜಿಸಿದ ತಕ್ಷಣವೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾಯಿತು ಎನ್ನುವ ಭ್ರಮೆಯಲ್ಲಿ ಗಟಗಟನೇ ನೀರು ಕುಡಿಯುತ್ತಾರೆ. ಆದರೆ, ವಾಶ್‌ರೂಮ್‌ಗೆ ಹೋಗಿ ಬಂದ ತಕ್ಷಣವೇ ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಹಾಗೆಯೇ ನಿಂತುಕೊಂಡು ನೀರು ಕುಡಿಯಬಾರದು, ಊಟವಾದ ತಕ್ಷಣ ನೀರು ಕುಡಿಯಬಾರದು ಎಂದೂ ಹೇಳುತ್ತಾರೆ. ಅದಕ್ಕೆ ಕಾರಣವೂ ಇದೆ. ಹಾಗಾದರೆ, ಮೂತ್ರ ವಿಸರ್ಜಿಸಿದ ತಕ್ಷಣವೇ ನೀರು ಕುಡಿಯಬಾರದು ಎಂದಾದರೆ, ಎಷ್ಟು ಹೊತ್ತಿನ ಬಳಿಕ ನೀರು ಕುಡಿಯಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಮೂತ್ರ ವಿಸರ್ಜಿಸಿದ ತಕ್ಷಣವೇ ನೀರು ಕುಡಿಯಬಾರದು
ಆಯುರ್ವೇದ ಮತ್ತು ವೈದ್ಯಕೀಯ ಶಾಸ್ತ್ರದ ಪ್ರಕಾರ, ಮೂತ್ರ ವಿಸರ್ಜಿಸಿದ ತಕ್ಷಣವೇ ನೀರು ಕುಡಿಯುವುದರಿಂದ ಕಿಬ್ಬೊಟ್ಟೆ ಮತ್ತು ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಂಭವವಿದೆ. ಮೂತ್ರ ವಿಸರ್ಜನೆಯ ಸಂಪೂರ್ಣ ಪ್ರಕ್ರಿಯೆ ಕಿಡ್ನಿ ಮತ್ತು ಕಿಬ್ಬೊಟ್ಟೆಯ ಮೇಲೆ ಅವಲಂಬಿಸಿದ್ದು, ಪರಸ್ಪರ ಸಂಯೋಜಿತವಾಗಿರುತ್ತದೆ. ಹೀಗಾಗಿ ಮೂತ್ರ ವಿಸರ್ಜನೆಯಾದ ತಕ್ಷಣವೇ ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಹಾಗೆ ಕುಡಿದರೆ ಅಧಿಕ ಒತ್ತಡದಿಂದ, ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.
ನೀರು ಕುಡಿಯಲು ಸೂಕ್ತ ಸಮಯ ಯಾವುದು?
ವಾಶ್‌ರೂಮ್ ಬಳಸಿದ ಕೂಡಲೇ ನೀರು ಕುಡಿಯಬಾರದು ಎಂದಾದರೆ ಎಷ್ಟು ಸಮಯದ ಬಳಿಕ ನೀರು ಕುಡಿಯಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಮೂತ್ರ ವಿಸರ್ಜನೆಯ ಬಳಿಕ ಕನಿಷ್ಠ 20 ನಿಮಿಷದ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ವೈದ್ಯರ ಸಲಹೆ. ಈ ರೀತಿ ಮಾಡುವುದರಿಂದ ಮೂತ್ರಪಿಂಡದಲ್ಲಿರುವ ಕಲ್ಮಶ ಸೂಕ್ತ ರೀತಿಯಲ್ಲಿ ವಿಸರ್ಜನೆಯಾಗುತ್ತದೆ ಮತ್ತು ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವುದಿಲ್ಲ. ತೀವ್ರ ಬಾಯಾರಿಕೆಯಾಗಿದ್ದಲ್ಲಿ ನೀರು ಕುಡಿಯಬಹುದು, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಸ್ವಲ್ಪ ಸಮಯದ ನಂತರ ನೀರು ಕುಡಿಯುವುದರಿಂದ ದೇಹಕ್ಕೆ ಪ್ರಯೋಜನವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ದಿನಕ್ಕೆಷ್ಟು ನೀರು ಕುಡಿಯಬೇಕು?
ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆರೋಗ್ಯಕರ ಜೀವನಕ್ಕೆ ಮನುಷ್ಯ ದಿನಕ್ಕೆ ಕನಿಷ್ಠ ಸರಾಸರಿ ಎರಡು ಲೀಟರ್ ನೀರು ಕುಡಿಯಲೇಬೇಕು. ಹಾಗೆಂದು ಎರಡೇ ಲೀಟರ್ ನೀರು ಕುಡಿಯುವುದಲ್ಲ. ಅದು ಕನಿಷ್ಠ ಪ್ರಮಾಣವಾಗಿದ್ದು, ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರನ್ನು ಕುಡಿಯಬೇಕು. ಹಾಗಂತ ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುವುದಲ್ಲ. ಅದರ ಬದಲು, ಕನಿಷ್ಠ ಗಂಟೆಗೊಮ್ಮೆ ಆದರೂ, 1 ಲೋಟ ನೀರು ಕುಡಿಯಲೇಬೇಕು. ಹಾಗೆಯೇ, ಬೆಳಗ್ಗೆ ಎದ್ದ ಕೂಡಲೇ, ಬ್ರಶ್ ಮಾಡಿ, ಟೀ-ಕಾಫಿ ಕುಡಿಯುವ ಬದಲು, 1 ಗ್ಲಾಸ್ ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ದೇಹದ ಆರೋಗ್ಯ ಉತ್ತಮವಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)