ಈ ತರಕಾರಿಗಳನ್ನು ಬಿಸಿ ನೀರಿನಲ್ಲಿ ತೊಳೆಯದೆ ತಿನ್ನಬೇಡಿ: ಹುಳುಗಳು ಹೊಟ್ಟೆ ಸೇರಬಹುದು, ಇರಲಿ ಎಚ್ಚರ
ಪ್ರತಿಯೊಬ್ಬರೂ ಅಡುಗೆ ಮಾಡುವ ಮೊದಲು ತರಕಾರಿಯನ್ನು ಚೆನ್ನಾಗಿ ತೊಳೆಯುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ,ಕೆಲವು ತರಕಾರಿಗಳನ್ನು ತಣ್ಣೀರಿನಿಂದ ತೊಳೆದರೆ ಸಾಕಾಗುವುದಿಲ್ಲ. ಬಿಸಿ ನೀರಿನಿಂದ ತೊಳೆದು ತಿನ್ನಬೇಕಾದ ತರಕಾರಿ ಯಾವುದು ಎಂಬುದನ್ನು ತಿಳಿಯಿರಿ.
ತರಕಾರಿ ಬೆಳೆಯುವ ಸಮಯದಲ್ಲಿ ಉತ್ತಮ ಫಸಲು ಹಾಗೂ ರೋಗಗಳಿಂದ ತಡೆಯಲು ಕೀಟನಾಶಕಗಳನ್ನು ಬಳಕೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಪರಿಸರ ಮಾಲಿನ್ಯ ಅಥವಾ ಧೂಳು ತರಕಾರಿಗಳ ಮೇಲಿನ ಬ್ಯಾಕ್ಟೀರಿಯಾ ಮತ್ತು ಅದರೊಳಗಿನ ಸೂಕ್ಷ್ಮ ಜೀವಿಗಳು ವಿವಿಧ ರೋಗಕಾರಕಗಳಾಗಿವೆ. ಇವುಗಳಲ್ಲಿ ಯಾವುದಾದರೂ ಹೊಟ್ಟೆಗೆ ಹೋದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಮಾರುಕಟ್ಟೆಯಿಂದ ತಂದ ತರಕಾರಿಗಳನ್ನು ಚೆನ್ನಾಗಿ ತೊಳೆದು ಅಡುಗೆ ಮಾಡುವುದು ಉತ್ತಮ. ತರಕಾರಿಯನ್ನು ಅಡುಗೆ ಮಾಡುವ ಮೊದಲು ನೀರಿನಿಂದ ತೊಳೆಯಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಲವು ತರಕಾರಿಗಳನ್ನು ಹೆಚ್ಚು ಎಚ್ಚರಿಕೆಯಿಂದ ತೊಳೆಯಬೇಕು.
ಸಾಮಾನ್ಯವಾಗಿ, ಜನರು ತಾಜಾ ತರಕಾರಿಯನ್ನು ತಣ್ಣೀರಿನಿಂದ ತೊಳೆದು ನಂತರ ಬೇಯಿಸುತ್ತಾರೆ. ಆದರೆ, ಕೆಲವೊಂದನ್ನು ತಣ್ಣೀರಿನಿಂದ ತೊಳೆಯುವುದು ಮಾತ್ರ ಸಾಕಾಗುವುದಿಲ್ಲ. ಬಿಸಿ ನೀರಿನಿಂದ ಹಾಗೂ ಸ್ವಲ್ಪ ಉಪ್ಪಿನಿಂದ ತೊಳೆಯಬೇಕು. ವಿಶೇಷವಾಗಿ ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಬಿಸಿ ನೀರಿನಿಂದ ತೊಳೆಯಬೇಕು. ಯಾವೆಲ್ಲಾ ತರಕಾರಿಗಳನ್ನು ತೊಳೆಯಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಈ ತರಕಾರಿಗಳನ್ನು ಬಿಸಿ ನೀರಿನಿಂದ ತೊಳೆಯಿರಿ
ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪು ಸಂಪೂರ್ಣವಾಗಿ ತಾಜಾವಾಗಿ ಕಾಣುತ್ತದೆ. ಆದರೆ, ಇದರ ಬಳಕೆಯ ಬಗ್ಗೆ ಜಾಗರೂಕರಾಗಿರಬೇಕು. ಕೆಲವರು ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ತಂದ ಕೂಡಲೇ ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತಾರೆ. ಇನ್ನು ಕೆಲವರು ಅದನ್ನು ತೊಳೆದು ಒಣಗಿಸಿದ ತಕ್ಷಣ ಸಂಗ್ರಹಿಸುತ್ತಾರೆ. ಆದರೆ, ಕೊತ್ತಂಬರಿ ಸೊಪ್ಪು ಬಳಸುವ ಮೊದಲು ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ತಣ್ಣೀರಿನಿಂದ ಸ್ವಚ್ಛಗೊಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೊತ್ತಂಬರಿ ಸೊಪ್ಪನ್ನು ಬಳಸುವ ಮೊದಲು, ಉಗುರುಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ತೊಳೆಯಿರಿ.
ಹೂಕೋಸು, ಬ್ರೊಕೋಲಿ: ಹೂಕೋಸು ಮತ್ತು ಬ್ರೊಕೋಲಿ ಯಾವಾಗಲೂ ಕೀಟಗಳಿಗೆ ಒಡ್ಡಿಕೊಳ್ಳುತ್ತವೆ. ಹೂಕೋಸನ್ನು ಯಾವಾಗಲೂ ಉಪ್ಪು ಬೆರೆಸಿದ ಉಗುರುಬೆಚ್ಚಗಿನ ನೀರಿನಿಂದ ತೊಳೆಯಬೇಕು. ಬ್ರೊಕೋಲಿಯನ್ನು ಬಳಸುವ ಮೊದಲು ಕನಿಷ್ಠ ಎರಡರಿಂದ ಮೂರು ಬಾರಿ ಬಿಸಿ ನೀರಿನಲ್ಲಿ ತೊಳೆಯುವುದು ಅವಶ್ಯಕ. ಈ ರೀತಿ ಮಾಡುವುದರಿಂದ ಒಳಗೆ ಅಡಗಿರುವ ಕೀಟಗಳು ಹೊರಬರುತ್ತವೆ ಅಥವಾ ಸಾಯುತ್ತವೆ. ಇಲ್ಲದಿದ್ದರೆ ಅವು ನಿಮ್ಮ ಹೊಟ್ಟೆಗೆ ಪ್ರವೇಶಿಸಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಎಲೆಕೋಸು: ಎಲೆಕೋಸಿನಲ್ಲಿ ಮೆದುಳನ್ನು ತಲುಪುವ ಕೀಟಗಳಿವೆ. ಅವು ಚಪ್ಪಟೆಯಾಗಿರುತ್ತವೆ. ಅಲ್ಲದೆ ಇದು ಕೊಳೆ, ಹುಳುಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಹೆಚ್ಚಾಗಿರುತ್ತವೆ. ಆದ್ದರಿಂದ ಎಲೆಕೋಸನ್ನು ಬಳಸುವ ಮೊದಲು ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಚೆನ್ನಾಗಿ ತೊಳೆಯಬೇಕು.
ಬೇರು ಹೊಂದಿರುವ ತರಕಾರಿಗಳು: ಆಲೂಗಡ್ಡೆ, ಕ್ಯಾರೆಟ್, ಮೂಲಂಗಿ, ಬೀಟ್ರೂಟ್ ಮುಂತಾದ ಬೇರು ತರಕಾರಿಯನ್ನು ತಣ್ಣೀರಿನಿಂದ ತೊಳೆಯುವ ಬದಲು ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಇದರಿಂದ ಯಾವುದೇ ಬ್ಯಾಕ್ಟೀರಿಯಾ ಅಥವಾ ಕೀಟಗಳು ನಿಮ್ಮ ದೇಹವನ್ನು ಪ್ರವೇಶಿಸುವುದಿಲ್ಲ.
ಬದನೆಕಾಯಿ ಮತ್ತು ಬೀನ್ಸ್: ಬದನೆಕಾಯಿ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆದ ನಂತರವೂ ಕನಿಷ್ಠ ಐದರಿಂದ ಹತ್ತು ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಇಡಬೇಕು. ಆ ನಂತರ ಬಳಸಬೇಕು.
ಟೊಮೆಟೊ: ಟೊಮೆಟೊವನ್ನು ರೋಗದಿಂದ ಪಾರು ಮಾಡಲು ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳನ್ನು ಬಳಸಾಗುತ್ತದೆ. ತಣ್ಣೀರಿನಿಂದ ತೊಳೆಯುವುದರಿಂದ ಟೊಮೆಟೊ ಸಂಪೂರ್ಣವಾಗಿ ಸ್ವಚ್ಛಗೊಳುವುದಿಲ್ಲ. ಇದರಲ್ಲಿ ಉಳಿಯುವ ಕೀಟಗಳು ಮತ್ತು ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಬಿಸಿ ನೀರಿನಿಂದ ತೊಳೆಯುವುದರಿಂದ ರಾಸಾಯನಿಕಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ. ಟೊಮೆಟೊವನ್ನು ಬಿಸಿ ನೀರಿನಿಂದ ತೊಳೆಯದೆ ಬಳಸಬೇಡಿ.
ಮೇಲೆ ತಿಳಿಸಿರುವ ತರಕಾರಿಗಳನ್ನು ಬಹುತೇಕ ಮಂದಿ ತಣ್ಣೀರಿನಲ್ಲೇ ತೊಳೆಯುತ್ತಾರೆ. ತಣ್ಣೀರಿನಲ್ಲಿ ಎಷ್ಟೇ ಸ್ವಚ್ಛಗೊಳಿಸಿದರೂ ಸಾಕಾಗುವುದಿಲ್ಲ. ಹೀಗಾಗಿ ಇವುಗಳನ್ನು ಬಿಸಿನೀರಿನಿಂದ ತೊಳೆಯುವುದು ಬಹಳ ಮುಖ್ಯ.