Onion Juice: ಹೊಟ್ಟೆ ನೋವು ಶಮನಕ್ಕೆ ಈರುಳ್ಳಿ ರಸ ಕುಡಿಯಬಹುದೇ? ಆನಿಯನ್ ಜ್ಯೂಸ್ ಯಾರು ಕುಡಿಯಬಾರದೆಂದು ತಿಳಿಯಿರಿ
Onion Juice benefits: ಈರುಳ್ಳಿಯ ಆರೋಗ್ಯ ಪ್ರಯೋಜನಗಳು ಹಲವು.ಇದನ್ನು ಶತಮಾನಗಳಿಂದಲೂ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ. ಹಿಂದೆಲ್ಲಾ ಹೊಟ್ಟೆ ನೋವಿಗೆ ಈರುಳ್ಳಿ ರಸವನ್ನು ಕುಡಿಯಲು ಕೊಡಲಾಗುತ್ತಿತ್ತು. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಈರುಳ್ಳಿ ರಸವು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೂದಲಿನ ಆರೋಗ್ಯ, ಸೌಂದರ್ಯ ಹೆಚ್ಚಳಕ್ಕೂ ಇದು ಸಹಾಯ ಮಾಡುತ್ತದೆ. ಇದು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಸಲ್ಫರ್ ಸಂಯುಕ್ತಗಳಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಶತಮಾನಗಳಿಂದಲೂ ಸಾಂಪ್ರದಾಯಿಕ ಔಷಧವಾಗಿಯೂ ಬಳಸಲಾಗುತ್ತಿದೆ.
ಈರುಳ್ಳಿ ರಸವನ್ನು ಅನೇಕ ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ. ತಲೆಗೂದಲಿನ ಬುಡಕ್ಕೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಅನ್ನೋದು ನಂಬಿಕೆ. ಅಷ್ಟೇ ಅಲ್ಲ, ಆರೋಗ್ಯಕ್ಕೂ ಇದರ ಪ್ರಯೋಜನ ಹಲವು. ಹಿಂದೆಲ್ಲಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಅವರಿಗೆ ಈರುಳ್ಳಿಯನ್ನು ರಸವನ್ನು ಕುಡಿಯಲು ಕೊಡಲಾಗುತ್ತಿತ್ತು. ನಿಜವಾಗಿಯೂ ಈರುಳ್ಳಿ ರಸವನ್ನು ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆಯೇ? ಹಾಗೂ ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಈರುಳ್ಳಿಯಲ್ಲಿರುವ ಪೋಷಕಾಂಶಗಳು
ಈರುಳ್ಳಿಯನ್ನು ಸಸ್ಯಾಹಾರ ಮಾತ್ರವಲ್ಲದೆ ಮಾಂಸಾಹಾರ ಖಾದ್ಯಗಳಿಗೂ ಬಳಸಲಾಗುತ್ತದೆ. ಮಾಂಸಾಹಾರಿಗಳಿಗಂತೂ ಈರುಳ್ಳಿಯಿಲ್ಲದ ಅಡುಗೆಯಿಲ್ಲ ಎಂಬಂತಾಗಿದೆ. ಪ್ರತಿದಿನವೂ ಈರುಳ್ಳಿ ನಮ್ಮ ಆಹಾರದ ಭಾಗವಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈರುಳಿಯಲ್ಲಿ 2.8 ಗ್ರಾಂ ಸೋಡಿಯಂ, 102.2 ಗ್ರಾಂ ಪೊಟ್ಯಾಸಿಯಮ್, 7 ಗ್ರಾಂ ಕಾರ್ಬೋಹೈಡ್ರೇಟ್‍ಗಳು, 1.2 ಗ್ರಾಂ ಫೈಬರ್, 3 ಗ್ರಾಂ ಸಕ್ಕರೆ, 0.8 ಗ್ರಾಂ ಪ್ರೋಟೀನ್ ಮತ್ತು 28 ಗ್ರಾಂ ಕ್ಯಾಲೊರಿಗಳಿವೆ. ಇವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
ಈರುಳ್ಳಿ ರಸ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆಯೇ?
ಈರುಳ್ಳಿಯಲ್ಲಿ ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳಿವೆ. ಇದು ಇ.ಕೋಲಿಯಂತಹ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈರುಳ್ಳಿ ರಸವು ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಈರುಳ್ಳಿ ರಸವು ಹೊಟ್ಟೆ ನೋವನ್ನು ಕಡಿಮೆ ಮಾಡಬಹುದು. ಹೊಟ್ಟೆಯ ಸಮಸ್ಯೆಯ ಸ್ವರೂಪವನ್ನು ಅವಲಂಬಿಸಿ ಹೊಟ್ಟೆ ನೋವು ಕಡಿಯಾಗಬಹುದು. ಇದನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಈರುಳ್ಳಿ ರಸವನ್ನು ಕುಡಿಯುವುದರಿಂದ ಹೊಟ್ಟೆ ನೋವು ಶಮನವಾಗುತ್ತದೆ ಎಂಬುದಕ್ಕೆ ವೈದ್ಯಕೀಯ ಪುರಾವೆಯಿಲ್ಲ.
ಈರುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ಬಿ ಸಮೃದ್ಧವಾಗಿದೆ. ಇದರಲ್ಲಿ ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಕೂಡ ಇದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಈರುಳ್ಳಿ ರಸವು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವುದರ ಹೊರತಾಗಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
ಪ್ರತಿದಿನ ಈರುಳ್ಳಿ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ವಿಶೇಷವಾಗಿ ಪ್ರಿಡಯಾಬಿಟಿಸ್ ಇರುವವರಿಗೆ, ಪ್ರತಿದಿನ ಹಸಿ ಈರುಳ್ಳಿಯನ್ನು ತಿನ್ನುವುದು ಪ್ರಯೋಜನಕಾರಿ. ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಈರುಳ್ಳಿ ರಸವನ್ನು ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.
ಮೂಳೆಗಳಿಗೆ ಪ್ರಯೋಜನಕಾರಿ
ಈರುಳ್ಳಿ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಈರುಳ್ಳಿ ರಸವನ್ನು ಕುಡಿಯುವುದರಿಂದ ಋತುಬಂಧಕ್ಕೊಳಗಾದ ಮಹಿಳೆಯರಿಗೆ ಪ್ರಯೋಜನವಾಗುತ್ತದೆ. ಇದು ಅವರ ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
ಈರುಳ್ಳಿ ರಸವನ್ನು ಯಾರು ಕುಡಿಯಬಾರದು?
ಕೆಲವು ಜನರಿಗೆ, ಈರುಳ್ಳಿ ರಸವನ್ನು ಕುಡಿಯುವುದರಿಂದ ಹಾನಿಯಾಗಬಹುದು. ಯಾರೆಲ್ಲಾ ಕುಡಿಯಬಾರದು ಅನ್ನೋದು ಇಲ್ಲಿದೆ.
- ಈರುಳ್ಳಿ ತಿನ್ನುವುದರಿಂದ ಅಲರ್ಜಿ ಉಂಟಾಗುವ ಸಮಸ್ಯೆ ಇರುವವರು ಇದರ ರಸ ಕುಡಿಯುವುದು ಉತ್ತಮವಲ್ಲ. ಅಲರ್ಜಿ ಸಮಸ್ಯೆ ಅಂದರೆ ಚರ್ಮದ ದದ್ದುಗಳು, ಊತ, ಉಸಿರಾಟದ ತೊಂದರೆ ಅಥವಾ ಜೀರ್ಣಕಾರಿ ಸಮಸ್ಯೆಗಳು ಸೇರಿವೆ. ಈ ತೊಂದರೆ ಇರುವವರು ಈರುಳ್ಳಿ ರಸ ಕುಡಿಯಬೇಡಿ.
- ಗ್ಯಾಸ್ಟ್ರಿಕ್ ಅಥವಾ ವಾಯು ಸಮಸ್ಯೆ ಹೊಂದಿರುವವರು ಕೂಡ ಈರುಳ್ಳಿ ರಸವನ್ನು ಕುಡಿಯುವುದರಿಂದ ಲಕ್ಷಣಗಳು ಉಲ್ಬಣಗೊಳ್ಳಬಹುದು.
- ಈರುಳ್ಳಿ ರಸವು ರಕ್ತದೊತ್ತಡವನ್ನು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ ಎಂದು ಹೇಳಲಾಗಿದೆ. ಕಡಿಮೆ ರಕ್ತದೊತ್ತಡ ಹೊಂದಿದ್ದರೆ ಅಥವಾ ಅಧಿಕ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಈರುಳ್ಳಿ ರಸ ಕುಡಿಯಬೇಡಿ. ಇದರಿಂದ ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
- ಸೂಕ್ಷ್ಮ ಹೊಟ್ಟೆ ಅಥವಾ ಹುಣ್ಣು ಇರುವ ಜನರು ಈರುಳ್ಳಿ ರಸವನ್ನು ಕುಡಿಯಬಾರದು. ಇದು ಹೊಟ್ಟೆಯ ಒಳಪದರವನ್ನು ಕೆರಳಿಸುವ ಸಾಧ್ಯತೆಯಿದೆ.
- ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಕೂಡ ಈರುಳ್ಳಿ ರಸವನ್ನು ಕುಡಿಯುವುದು ಉತ್ತಮವಲ್ಲ. ಏಕೆಂದರೆ ಇದು ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು.
- ಮಕ್ಕಳಿಗೂ ಈರುಳ್ಳಿ ರಸವನ್ನು ಕುಡಿಸುವುದು ಉತ್ತಮವಲ್ಲ. ಮಗುವಿಗೆ ಈರುಳ್ಳಿ ರಸ ಕುಡಿಸಿ ಆ ಮಗು ಮೃತಪಟ್ಟಂತಹ ದುರ್ಘಟನೆಗಳು ಕೆಲವೆಡೆ ನಡೆದಿವೆ. ಹೀಗಾಗಿ ಯಾವಾಗಲೂ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸುವುದು ಸೂಕ್ತ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)