ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಇದ್ಯಾ, ಹಾಗಿದ್ರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು
ಹಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಕಾಫಿ, ಟೀ ಕುಡಿದಿಲ್ಲ ಅಂದ್ರೆ ದಿನವಿಡೀ ಏನೋ ಕಳೆದುಕೊಂಡ ಭಾವ ಆವರಿಸುವುದು ಸಹಜ. ಆದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವರಿಂದ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುವುದು ಸುಳ್ಳಲ್ಲ, ಇದರಿಂದ ಏನೆಲ್ಲಾ ತೊಂದರೆಗಳಾಗುತ್ತವೆ ನೋಡಿ.

ಬೆಳಿಗ್ಗೆ ಎದ್ದಾಕ್ಷಣ ಬಿಸಿಬಿಸ ಕಾಫಿ ಕುಡಿತಾ ಪೇಪರ್ ಓದೋದು, ಮೊಬೈಲ್ ನೋಡೋದು ಮಾಡ್ತಿದ್ರೆ ಆಹಾ ಅನ್ನಿಸದೇ ಇರದು. ಹಲವರು ಬೆಳಿಗ್ಗೆ ಎದ್ದಾಕ್ಷಣ ಮೊದಲು ಮಾಡುವ ಕೆಲಸ ಕಾಫಿ ಹೀರುವುದು. ಕಾಫಿ ಕುಡಿಯುವುದರಿಂದ ದೇಹ ಮನಸ್ಸಿಗೆ ಚೈತನ್ಯ ಸಿಗುತ್ತದೆ. ಏನೋ ಆಹ್ಲಾದಕರ ಭಾವ ಮೂಡುತ್ತದೆ. ಆದರೆ ಈ ಎಲ್ಲಾ ಅಂಶಗಳನ್ನು ಹೊರತು ಪಡಿಸಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಸಾಕಷ್ಟು ಅಪಾಯಗಳಿವೆ.
ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ಎದುರಾಗಬಹುದು. ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೂ ಇದು ಅಡ್ಡಿಯಾಗಬಹುದು. ಆ ಮೂಲಕ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳಲು ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸುತ್ತವೆ. ಈ ಅಭ್ಯಾಸವು ಆಸಿಡ್ ರಿಫ್ಲಕ್ಸ್ ಅನ್ನು ಉಲ್ಬಣಗೊಳಿಸುತ್ತದೆ ಮತ್ತು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದರಿಂದ ಒತ್ತಡವೂ ಹೆಚ್ಚುವುದು ಸಾಮಾನ್ಯ. ನೀವು ಕಾಫಿ ಲವರ್ ಆಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ರೆ ಈ ಲೇಖನ ಓದಿ.
ʼಕಾಫಿ ನಿಮಗೆ ದಿನವಿಡೀ ತಾಜಾತನದ ಅನುಭವ ಹಾಗೂ ದೇಹಕ್ಕೆ ಚೈತನ್ಯ ನೀಡಿದರೂ ಸಹ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಪಾಯ ತಪ್ಪಿದ್ದಲ್ಲ, ಇದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ಪೌಷ್ಟಿಕ ತಜ್ಞೆ ದೀಪ್ತಿ ಲೋಕೇಶಪ್ಪ. ಇಲ್ಲಿ ಅವರು ಬೆಳಗಿನ ವೇಳೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ.
ಆತಂಕ ಹಾಗೂ ನಡುಕ
ಕೆಫೀನ್ ಅಂಶ ಹೊಂದಿರುವ ಕಾಫಿಯು ನಮ್ಮನ್ನು ಸದಾ ಎಚ್ಚರವಾಗಿರಿಸುತ್ತದೆ ಹಾಗೂ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅದಾಗ್ಯೂ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಆತಂಕ, ಹೆದರಿಕೆ ಹಾಗೂ ಮೈ ನಡುಗುವ ಲಕ್ಷಣಗಳು ವೃದ್ಧಿಯಾಗಬಹುದು. ಇದರಿಂದ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಅಲ್ಲದೇ ಗಮನ ಕೇಂದ್ರೀಕರಿಸಲು ಕೂಡ ಕಷ್ಟವಾಗಬಹುದು.
ಆಸಿಡಿಟಿ ಪ್ರಮಾಣ ಹೆಚ್ಚಬಹುದು
ಕಾಫಿಯು ಆಸಿಡಿಟಿ ಅಂಶವನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದು ಹೊಟ್ಟೆಯಲ್ಲಿ ಆಸಿಡಿಟಿ ಪ್ರಮಾಣವನ್ನು ಹೆಚ್ಚಿಸಬಹುದು. ʼಕೆಫಿನ್ ಹಾಗೂ ಹೆಚ್ಚಿನ ಆಮ್ಲೀಯತೆಯ ಮಟ್ಟಗಳ ಸಂಯೋಜನೆಯು ಹೊಟ್ಟೆಯ ಒಳಪರದವನ್ನು ಕೆರಳಿಸಬಹುದು. ಇದು ಎದೆಯುರಿ, ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ನಂತರದ ದಿನಗಳಲ್ಲಿ ಜಠರದ ಉರಿಯೂತ, ಜಠರದ ಹುಣ್ಣುಗಳಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು
ಕೆರಳಿಸುವ ಕರುಳಿನ ಸಹ ಲಕ್ಷಣಗಳು ಅಥವಾ ಕರುಳಿನ ಉರಿಯೂತದ ಸಮಸ್ಯೆಯಂತಹ ಕೀರ್ಣಕಾರಿ ಸಮಸ್ಯೆಗಳಿರುವ ವ್ಯಕ್ತಿಗಳು ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಅಲ್ಲದೆ ಇದರಿಂದ ಅತಿಸಾರ, ಕಿಬ್ಬೊಟ್ಟೆ ನೋವು ಇಂತಹ ಸಮಸ್ಯೆಗಳನ್ನು ಹೆಚ್ಚಿಸಬಹುದು. ಜೀರ್ಣ ವ್ಯವಸ್ಥೆಯ ಸೂಕ್ಷ್ಮ ಸಮತೋಲನಕ್ಕೆ ಇದು ಅಡ್ಡಿ ಪಡಿಸಬಹುದು.
ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ
ಕಾಫಿಯು ಟ್ಯಾನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಸೇರಿದಂತೆ ಕೆಲವು ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಪಡಿಸುತ್ತದೆ. . "ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆಯು ಈ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ತಡೆಯುತ್ತದೆ, ಇದು ಕಾಲಾನಂತರದಲ್ಲಿ ಪೋಷಕಾಂಶಗಳ ಕೊರತೆಗಳಿಗೆ ಕಾರಣವಾಗುತ್ತದೆʼ ಎಂದು ದೀಪ್ತಿ ವಿವರಿಸುತ್ತಾರೆ.
ಒತ್ತಡದ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ
ಕೆಫಿನ್ ಮೂತ್ರಜನಕಾಂಗದ ಗ್ರಂಥಿಗಳಿಂದ ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಬಿಡುಗಡೆಯನು ಉತ್ತೇಜಿಸುತ್ತದೆ. ಕಾರ್ಟಿಸೋಲ್ ಹಾರ್ಮೋನ್ ಒತ್ತಡದ ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾರ್ಟಿಸೋಲ್ ಪ್ರಮಾಣ ಏರಿಕೆಯಾದರೆ ಇದು ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಪ್ರತಿರಕ್ಷಣಾ ಕಾರ್ಯ ದುರ್ಬಲವಾಗುವುದು, ಮನಸ್ಥಿತಿಯಲ್ಲಿ ಚಾಂಚಲ್ಯ ಉಂಟಾಗುವುದು ಹೀಗೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಒತ್ತಡ ಸಂಬಂಧಿಸಿ ಇನ್ನಿತರ ಸಮಸ್ಯೆಗಳನ್ನೂ ವೃದ್ಧಿಸಬಹುದು.
ರಕ್ತದಲ್ಲಿನ ಸಕ್ಕರೆಯ ಅಂಶ ಏರಿಳಿತ
ಕೆಫಿನ್ ಇನ್ಸುಲಿನ್ ಸೂಕ್ಷ್ಮತೆ ಮತ್ತು ಗೊಕ್ಲೋಸ್ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತ ಉಂಟಾಗಲು ಕಾರಣವಾಗಬಹುದು. ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಕಾಫಿಯು ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಕೆಯ ಕಾರಣವಾಗಬಹುದು. ಇದರಿಂದ ಆಯಾಸ, ಕಿರಿಕಿರಿಯಂತಹ ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ಕೆಫಿನ್ ಅತಿಯಾದ ಸಕ್ಕರೆ ಸೇವನೆಯನ್ನೂ ಪ್ರೇರೇಪಿಸಬಹುದು. ಈ ರೀತಿ ಸಕ್ಕರೆ ಮಟ್ಟದಲ್ಲಿನ ವ್ಯತ್ಯಾಸವು ಕಾಲ ನಂತರದಲ್ಲಿ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು. ಜೊತೆಗೆ ಟೈಪ್ 2 ಮಧುಮೇಹದ ಅಪಾಯ ವೃದ್ಧಿಯಾಗಲು ಕಾರಣವಾಗಬಹುದು.
ನಿರ್ಜಲೀಕರಣ
ಕೆಫೀನ್ ಮೂತ್ರವರ್ಧಕವಾಗಿದೆ. ಅತಿಯಾದ ಕೆಫಿನ್ ಸೇವನೆಯು ಪದೇ ಪದೇ ಮೂತ್ರ ಮಾಡುವಂತೆ ಮಾಡಬಹುದು. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಲು ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆಯಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದು ಹೆಚ್ಚು ನೀರು ಕುಡಿಯದೇ ಇದ್ದರೆ, ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ನಿರ್ಜಲೀಕರಣದಿಂದ ತಲೆನೋವು, ತಲೆ ತಿರುಗುವುದು, ಆಯಾಸದಂತಹ ಸಮಸ್ಯೆಗಳು ಎದುರಾಗಬಹುದು. ಇದು ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಹುದು.
ಈ ರೀತಿ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳು ಉಂಟಾಗಬಹುದು. ಆ ಕಾರಣದಿಂದ ಬೆಳಿಗ್ಗೆ ಎದ್ದಾಕ್ಷಣ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ. ಬೆಳಗಿನ ಉಪಾಹಾರದ ನಂತರ ಕಾಫಿ ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ದಿನದಲ್ಲಿ ಗರಿಷ್ಠ 2 ಕಪ್ ಕಾಫಿ ಮಾತ್ರ ಸೇವಿಸಿ. ಅದಕ್ಕಿಂತ ಹೆಚ್ಚಿನ ಕಾಫಿ ಕುಡಿಯುವುದರಿಂದಲೂ ಅಪಾಯ ಹೆಚ್ಚು. ಕಾಫಿ ಕುಡಿಯುವ ಅಭ್ಯಾಸವುಳ್ಳವರು ಸಾಕಷ್ಟು ನೀರು ಕುಡಿಯಬೇಕು. ಜೊತೆಗೆ ಪೋಷ್ಟಿಕಾಂಶವುಳ್ಳ ಆಹಾರ ಸೇವನೆಯತ್ತಲೂ ಗಮನ ಹರಿಸಬೇಕು.
(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ