ಅನ್ನ ತಿನ್ನುವುದಿಲ್ಲವಾದರೆ ಸೇವಿಸಿ ಈ 3 ವಿಧದ ಸಿರಿಧಾನ್ಯಗಳನ್ನ: ರುಚಿಯಲ್ಲೂ ಉತ್ತಮ, ಆರೋಗ್ಯಕ್ಕೂ ಪ್ರಯೋಜನಕಾರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅನ್ನ ತಿನ್ನುವುದಿಲ್ಲವಾದರೆ ಸೇವಿಸಿ ಈ 3 ವಿಧದ ಸಿರಿಧಾನ್ಯಗಳನ್ನ: ರುಚಿಯಲ್ಲೂ ಉತ್ತಮ, ಆರೋಗ್ಯಕ್ಕೂ ಪ್ರಯೋಜನಕಾರಿ

ಅನ್ನ ತಿನ್ನುವುದಿಲ್ಲವಾದರೆ ಸೇವಿಸಿ ಈ 3 ವಿಧದ ಸಿರಿಧಾನ್ಯಗಳನ್ನ: ರುಚಿಯಲ್ಲೂ ಉತ್ತಮ, ಆರೋಗ್ಯಕ್ಕೂ ಪ್ರಯೋಜನಕಾರಿ

ನೀವು ಅನ್ನ ತಿನ್ನುವುದನ್ನು ನಿಲ್ಲಿಸಿದ್ದು, ಮತ್ತೆ ಅನ್ನದ ರುಚಿಯನ್ನು ನಾಲಿಗೆ ಬಯಸಿದರೆಈ3ಸಿರಿಧಾನ್ಯಗಳನ್ನು ತಿನ್ನಬಹುದು. ಅಕ್ಕಿಗೆ ಪರ್ಯಾಯವಾಗಿ ಈ ಸಿರಿಧಾನ್ಯಗಳನ್ನು ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಹಾಗಿದ್ದರೆ ಈ ಸಿರಿಧಾನ್ಯಗಳು ಯಾವ್ಯಾವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅನ್ನದ ಬದಲು ಈ 3 ವಿಧದ ಸಿರಿಧಾನ್ಯಗಳನ್ನು ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ
ಅನ್ನದ ಬದಲು ಈ 3 ವಿಧದ ಸಿರಿಧಾನ್ಯಗಳನ್ನು ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ (shutterstock)

ಮೂರು ಹೊತ್ತು ಅನ್ನವನ್ನು ತಿನ್ನುವವನನ್ನು ರೋಗಿ ಎಂದು ಹೇಳಲಾಗುತ್ತದೆ. ಹೀಗಾಗಿ ಕೆಲವರು ಅದರಲ್ಲೂ ಮಧುಮೇಹದಿಂದ ಬಳಲುತ್ತಿರುವವರು, ಅಧಿಕ ತೂಕ ಹೊಂದಿರುವವರು ಅನ್ನವನ್ನು ಸೇವಿಸುವುದು ತೀರಾ ಕಮ್ಮಿ ಅಥವಾ ತಿನ್ನುವುದೇ ಇಲ್ಲ. ಇಂಥವರು ಆಹಾರದಿಂದ ಅಕ್ಕಿಯನ್ನು ಸಂಪೂರ್ಣವಾಗಿ ಹೊರಗಿಡುತ್ತಾರೆ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಹೆಚ್ಚಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಲ್ಲದೆ ತೂಕವನ್ನು ಹೆಚ್ಚಿಸುತ್ತದೆ. ಆದರೆ, ಅನ್ನ ತಿನ್ನಲು ಇಷ್ಟಪಡುವ ಜನರಿಗೆ ಅನ್ನವಿಲ್ಲದೆ ಊಟ ಮಾಡುವುದು ಎಂದರೆ ಅದು ಅಪೂರ್ಣವಿದ್ದಂತೆ. ಅಂತಹವರು ಅಕ್ಕಿಗೆ ಬದಲಾಗಿ ಈ 3 ಬಗೆಯ ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಬಹುದು. ಇದು ನೋಡಲು ಅಕ್ಕಿಯಂತೆಯೇ ಇದೆ.

ಅಕ್ಕಿ ಬದಲು ಈ 3 ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ

ಹಾರಕ ಸಿರಿಧಾನ್ಯ: ಪಲಾವ್ ಎಂದರೆ ಇಷ್ಟ, ಆದರೆ ಅಕ್ಕಿಯಿಂದ ಮಾಡಿರುವ ಪಲಾವ್ ಬೇಡ ಎಂದಿದ್ದರೆ ಈ ಹಾರಕ ಸಿರಿಧಾನ್ಯ ಆಯ್ಕೆ ಮಾಡಬಹುದು. ಇದು ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಪೌಷ್ಟಿಕಾಂಶಗಳ ಆಗರವಾಗಿರುವ ಈ ಧಾನ್ಯವನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಕ್ಯಾಲೊರಿ ಪ್ರಮಾಣ ಕಡಿಮೆ ಇರುವುದರಿಂದ ತೂಕ ಇಳಿಕೆಗೂ ಸಹಕಾರಿಯಾಗಿದೆ.

ನವಣೆ: ಹಾರಕ ಸಿರಿಧಾನ್ಯಕ್ಕೆ ಬದಲಿಯಾಗಿ ನವಣೆಯನ್ನು ತಿನ್ನಬಹುದು. ಇದರಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ಬಿ12 ಇದೆ. ಅಷ್ಟೇ ಅಲ್ಲ, ಇದರಲ್ಲಿ ಜೀವಸತ್ವಗಳು, ವಿಟಮಿನ್ ಇ, ಬಿ ಜೀವಸತ್ವಗಳು, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ರಂಜಕದಂತಹ ಇತರ ಖನಿಜಗಳಿಂದ ಸಮೃದ್ಧವಾಗಿದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮಾತ್ರವಲ್ಲದೆ ಹೃದಯದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಕೆಗೂ ಸಹಕಾರಿಯಾಗಿದೆ. ಅಲ್ಲದೆ ಉರಿಯೂತದ ವಿರುದ್ಧ ಹೋರಾಡುತ್ತದೆ. ಇದರಲ್ಲಿರುವ ನಾರಿನಂಶವು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಊದಲು ಸಿರಿಧಾನ್ಯ: ನೀವು ಪಲ್ಯ ಅಥವಾ ಮೊಸರಿನೊಂದಿಗೆ ಅನ್ನವನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಊದಲು ಸಿರಿಧಾನ್ಯವನ್ನು ಪ್ರಯತ್ನಿಸಬಹುದು. ಇದು ಅನ್ನವನ್ನು ತಿನ್ನುವ ಹಾಗೆಯೇ ರುಚಿಯನ್ನು ನೀಡುತ್ತದೆ. ಇದನ್ನು ತಿನ್ನುವುದರಿಂದ ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ದೀರ್ಘಕಾಲ ಕಂಪ್ಯೂಟರ್ ಮುಂದೆ ಕುಳಿತೇ ಕೆಲಸ ಮಾಡುವವರು ಊದಲು ಸಿರಿಧಾನ್ಯ ಸೇವಿಸಬಹುದು. ಯಾಕೆಂದರೆ ಇದು ಸುಲಭದಲ್ಲಿ ಜೀರ್ಣವಾಗುತ್ತದೆ. ಅಲ್ಲದೆ, ಅಜೀರ್ಣ, ಹೊಟ್ಟೆನೋವು, ಮಲಬದ್ಧತೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಒಟ್ಟಿನಲ್ಲಿ ಅಕ್ಕಿಗೆ ಪರ್ಯಾಯವಾಗಿ ಈ ಸಿರಿಧಾನ್ಯಗಳ ಸೇವನೆಯಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಪೌಷ್ಟಿಕಾಂಶಗಳ ಆಗರವಾಗಿರುವ ಇವುಗಳ ಸೇವನೆಯು ಮಧುಮೇಹ ನಿಯಂತ್ರಿಸುವುದು, ತೂಕ ಇಳಿಕೆ ಮಾತ್ರವಲ್ಲದೆ ಹಲವು ಆರೋಗ್ಯ ಲಾಭಗಳನ್ನು ನೀಡುತ್ತವೆ.

Whats_app_banner