Oversleeping Effects: ಅತಿಯಾಗಿ ನಿದ್ದೆ ಮಾಡಿದ್ರೂ ಅಪಾಯ ತಪ್ಪಿದ್ದಲ್ಲ, ಹೆಚ್ಚು ನಿದ್ರೆ ಮಾಡಿದ್ರೆ ಈ 5 ಸಮಸ್ಯೆ ಬರಬಹುದು ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  Oversleeping Effects: ಅತಿಯಾಗಿ ನಿದ್ದೆ ಮಾಡಿದ್ರೂ ಅಪಾಯ ತಪ್ಪಿದ್ದಲ್ಲ, ಹೆಚ್ಚು ನಿದ್ರೆ ಮಾಡಿದ್ರೆ ಈ 5 ಸಮಸ್ಯೆ ಬರಬಹುದು ಎಚ್ಚರ

Oversleeping Effects: ಅತಿಯಾಗಿ ನಿದ್ದೆ ಮಾಡಿದ್ರೂ ಅಪಾಯ ತಪ್ಪಿದ್ದಲ್ಲ, ಹೆಚ್ಚು ನಿದ್ರೆ ಮಾಡಿದ್ರೆ ಈ 5 ಸಮಸ್ಯೆ ಬರಬಹುದು ಎಚ್ಚರ

ಮನುಷ್ಯನ ದೇಹಕ್ಕೆ ನಿದ್ದೆ ಅತಿ ಅವಶ್ಯ, ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆ ನಿದ್ದೆ ಮಾಡಬೇಕು ಅಂತಾರೆ. ನಿದ್ರೆ ಕೊರತೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿದ್ದೆ ಕಡಿಮೆ ಆದ್ರೆ ಒತ್ತಡ, ಹೃದಯಾಘಾತದಂತಹ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ಅಚ್ಚರಿಯ ಸಂಗತಿಯೆಂದರೆ ನಿದ್ದೆ ಕಡಿಮೆ ಆದ್ರೆ ಮಾತ್ರವಲ್ಲ ಹೆಚ್ಚಾದರೂ ಸಮಸ್ಯೆ ತಪ್ಪಿದ್ದಲ್ಲ.

Oversleeping Effects
Oversleeping Effects (PC: Canva)

ನಿದ್ದೆ ಮನುಷ್ಯನ ಜೀವನದ ಭಾಗವಷ್ಟೇ ಅಲ್ಲ, ಇದು ಅತಿ ಅವಶ್ಯ ಕೂಡ. ನಿದ್ದೆ ಸರಿಯಾಗಿಲ್ಲ ಅಂದ್ರೆ ನಮ್ಮ ಇಡೀ ದಿನ ಮೂಡ್ ಆಫ್‌ನಲ್ಲೇ ಕಳೆದುಹೋಗುತ್ತದೆ. ಯಾವಾಗ್ಲೂ ನಿದ್ದೆ ಕಡಿಮೆ ಆದ್ರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎಂಬುದನ್ನು ಓದುತ್ತಿರುತ್ತೀರಿ. ಆದರೆ ಇತ್ತೀಚಿನ ವರದಿಯ ಪ್ರಕಾರ ನಿದ್ದೆ ಅತಿಯಾಗೋದು ತೊಂದರೆಯೇ. ಹೆಚ್ಚು ನಿದ್ದೆ ಮಾಡಿದ್ರೆ ಸಮಸ್ಯೆಗಳು ಎದುರಾಗೋದು ಖಚಿತ.

ಒಂದು ದಿನದಲ್ಲಿ ನಿರ್ದಿಷ್ಟ ಸಮಯ ಅಂದರೆ 9 ಗಂಟೆಗಳಿಗಿಂತಲೂ ಹೆಚ್ಚು ನಿದ್ದೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬದಲಾವಣೆಯು ತಕ್ಷಣವೇ ಗೋಚರಿಸದಿದ್ದರೂ, ಇದು ದೀರ್ಘಾವಧಿಯಲ್ಲಿ ಅನೇಕ ಅಪಾಯಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಹಾಗಾದರೆ ಹೆಚ್ಚು ನಿದ್ದೆ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳು ಬರಬಹುದು ನೋಡಿ.

ಮಧುಮೇಹದ ಅಪಾಯ

ನಿದ್ರೆಯ ಸಮಯವು ಅವಧಿ ಮೀರಿದರೆ ಅದು ದೇಹದ ಸಿರ್ಕಾಡಿಯನ್ ಲಯದ ಅಡಚಣೆಗೆ ಕಾರಣವಾಗುತ್ತದೆ. ಪರಿಣಾಮವಾಗಿ, ಇನ್ಸುಲಿನ್ ಸೂಕ್ಷ್ಮತೆ ಮತ್ತು ಗ್ಲೂಕೋಸ್ ಮಟ್ಟದ ಏರಿಕೆಗೆ ಕಾರಣವಾಗುತ್ತದೆ. ಈ ಬದಲಾವಣೆಗಳು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಬೊಜ್ಜು ಬೆಳೆಯುತ್ತದೆ

ನೀವು ಫಿಟ್ ಆಗಿದ್ದೀರಿ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ನಿದ್ದೆ ಮಾಡುವಂತಿಲ್ಲ. ಅತಿಯಾಗಿ ನಿದ್ದೆ ಮಾಡುವುದು ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ನಿದ್ದೆಯು ಹಾರ್ಮೋನುಗಳ ನಿಯಂತ್ರಣಕ್ಕೆ ತೊಂದರೆ ಮಾಡುತ್ತದೆ. ಹಾರ್ಮೋನುಗಳ ವ್ಯತ್ಯಯದ ಕಾರಣದಿಂದ ಅತಿಯಾಗಿ ತಿನ್ನುತ್ತೇವೆ, ಇದು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಕಾರಣವಾಗಬಹುದು. ಬೊಜ್ಜು ಬೆಳೆಯುವುದು ಹಲವಾರು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಖಿನ್ನತೆ

ಅತಿಯಾದ ನಿದ್ರೆಯ ಮುಖ್ಯ ಲಕ್ಷಣವೆಂದರೆ ಖಿನ್ನತೆ. ಹೆಚ್ಚು ನಿದ್ರೆ ಮಾಡುವ ಜನರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಇದಲ್ಲದೆ, ಅವರು ಹಲವು ರೀತಿಯ ಮಾನಸಿಕ ಅಸ್ವಸ್ಥತೆಗಳೊಂದಿಗೆ ಬದುಕುತ್ತಾರೆ. ಅವರು ಸೋಮಾರಿತನಗಳಾಗಿರುತ್ತಾರೆ, ಆಕ್ಟಿವ್ ಆಗಿರಲು ಅವರಿಂದ ಸಾಧ್ಯವಾಗುವುದಿಲ್ಲ.

ಹೃದ್ರೋಗದ ಅಪಾಯ

ಅತಿಯಾದ ನಿದ್ದೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡದ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ ಮತ್ತು ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ.

ಮೂಳೆ, ಕೀಲುಗಳ ನೋವು

ಹಾಸಿಗೆಯ ಮೇಲೆ ದೀರ್ಘಕಾಲ ಮಲಗುವುದರಿಂದ ಬೆನ್ನು ನೋವು ಮತ್ತು ಕುತ್ತಿಗೆ ಬಿಗಿತ ಉಂಟಾಗುತ್ತದೆ. ಇವುಗಳೊಂದಿಗೆ ಇದು ತಲೆನೋವು ಮತ್ತು ದೈಹಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಅತಿಯಾದ ನಿದ್ದೆಯು ಸ್ನಾಯುಗಳು ಮತ್ತು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.

ದೀರ್ಘ ನಿದ್ರೆ ತಪ್ಪಿಸಲು ಮುನ್ನೆಚ್ಚರಿಕೆಗಳು 

ನಿದ್ದೆಯ ದಿನಚರಿ ರೂಢಿಸಿಕೊಳ್ಳುವುದು 

ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಅದೇ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ದೇಹಕ್ಕೆ ಜೈವಿಕ ವ್ಯವಸ್ಥೆಯನ್ನು ಹೊಂದಿಸುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹೆಚ್ಚು ಹೊತ್ತು ನಿದ್ದೆ ಮಾಡುವುದನ್ನು ತಡೆಯಲು ಇದರಿಂದ ಸಾಧ್ಯವಿದೆ.

ದಿನದಲ್ಲಿ ಹೆಚ್ಚು ಕಾಫಿ ಅಥವಾ ಚಹಾ 

ಕಾಫಿ, ಟೀ, ಸೋಡಾ ಅಥವಾ ಎನರ್ಜಿ ಡ್ರಿಂಕ್ಸ್‌ಗಳಂತಹ ಕೆಫೀನ್‌ಯುಕ್ತ ಪಾನೀಯಗಳನ್ನು ಹೆಚ್ಚು ಸೇವಿಸುವುದರಿಂದ ರಾತ್ರಿಯಲ್ಲಿ ನಿದ್ರಿಸುವುದು ಕಷ್ಟವಾಗುತ್ತದೆ. ಆದ್ದರಿಂದ, ಈ ಪಾನೀಯಗಳನ್ನು ರಾತ್ರಿಯ ಸಮಯಕ್ಕೆ ಮಿತಿಗೊಳಿಸಿ ಮತ್ತು ಹಗಲಿನಲ್ಲಿ ಮಧ್ಯಾಹ್ನ ಅಥವಾ ಬೆಳಿಗ್ಗೆ ಮಾತ್ರ ಅವುಗಳನ್ನು ಸೇವಿಸಿ. ಇದರಿಂದ ನಿದ್ದೆಯಲ್ಲಿ ವ್ಯತ್ಯಾಸವಾಗಿ ಹೆಚ್ಚು ನಿದ್ದೆ ಮಾಡುವುದನ್ನು ತಪ್ಪಿಸಬಹುದು.

ರಾತ್ರಿ ಹೊತ್ತು ಅತಿಯಾಗಿ ತಿನ್ನಬೇಡಿ

ರಾತ್ರಿಯಲ್ಲಿ ಹೆಚ್ಚು ಮಾಂಸವನ್ನು ತಿನ್ನುವುದನ್ನು ಒಳ್ಳೆಯದಲ್ಲ. ಇದು ನಿದ್ರಾ ಭಂಗ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ನೀವು ಅತಿಯಾಗಿ ನಿದ್ರಿಸುವ ಸಾಧ್ಯತೆ ಇದೆ. ರಾತ್ರಿ ವೇಳೆ ಲಘು ಆಹಾರ ಸೇವಿಸುವುದು ಉತ್ತಮ.

ರಾತ್ರಿಯಲ್ಲಿ ಬೆಳಕನ್ನು ಕಡಿಮೆ ಮಾಡಿ

ದೀಪಗಳು ಮತ್ತು ಸ್ಕ್ರೀನ್‌ಟೈಮ್‌ ನಿದ್ರೆಯ ಹಾರ್ಮೋನ್ ಮೆಲಟೋನಿನ್ ಅನ್ನು ಕಡಿಮೆ ಮಾಡಬಹುದು. ಆದ್ದರಿಂದ, ರಾತ್ರಿಯಲ್ಲಿ ಬೆಳಕನ್ನು ಕಡಿಮೆ ಮಾಡುವುದು ಮತ್ತು ಕನಿಷ್ಠ 30 ನಿಮಿಷಗಳ ಮೊದಲು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಪರದೆಯನ್ನು ಆಫ್ ಮಾಡುವುದು ಉತ್ತಮ.

ದೈಹಿಕ ವ್ಯಾಯಾಮ

ದಿನದಲ್ಲಿ ಕೆಲವು ವ್ಯಾಯಾಮಗಳನ್ನು ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಉದಾಹರಣೆಗೆ ಜಾಗಿಂಗ್, ವಾಕಿಂಗ್ ಅಥವಾ ಸಂಜೆಯ ಯೋಗ. ಇದು ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner