ದಾಳಿಂಬೆ ಹಣ್ಣಿನ ಜೊತೆ ತಿನ್ನಲೇಬಾರದಂತಹ 5 ವಸ್ತುಗಳಿವು; ಇದ್ರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಚ್ಚರ
ದಾಳಿಂಬೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಪ್ರತಿದಿನ ದಾಳಿಂಬೆ ತಿನ್ನುವುದರಿಂದ ರಕ್ತಹೀನತೆ, ರಕ್ತದೊತ್ತಡ ಸೇರಿದಂತೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ದಾಳಿಂಬೆ ಜೊತೆ ಈ ವಸ್ತುಗಳನ್ನು ಎಂದಿಗೂ ತಿನ್ನಬಾರದು, ಇದರಿಂದ ಆರೋಗ್ಯ ಕೆಡೋದು ಖಂಡಿತ.
ನಮ್ಮ ಆರೋಗ್ಯಕ್ಕೆ ಎಲ್ಲಾ ಹಣ್ಣುಗಳು ಉತ್ತಮ, ಆದರೆ ಅದರಲ್ಲೂ ದಾಳಿಂಬೆ ಹಣ್ಣು ಬಹಳ ಉತ್ತಮ. ಯಾಕೆಂದರೆ ಇದು ರಕ್ತವನ್ನ ವೃದ್ಧಿಸುವ ಗುಣವನ್ನು ಹೊಂದಿದೆ. ಮನುಷ್ಯನ ದೇಹಕ್ಕೆ ರಕ್ತ ಬಹಳ ಮುಖ್ಯ. ದಾಳಿಂಬೆ ಹಣ್ಣಷ್ಟೇ ಅಲ್ಲ ಸಿಪ್ಪೆ, ಬೀಜ ಎಲ್ಲವೂ ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನು ನೇರವಾಗಿ ತಿನ್ನಬಹುದು ಅಥವಾ ಸಲಾಡ್ ರೂಪದಲ್ಲೂ ತಿನ್ನಬಹುದು. ಜ್ಯೂಸ್ ಮಾಡಿ ಕುಡಿಯಬಹುದು. ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ಪ್ರತಿದಿನ ಒಂದೊಂದು ದಾಳಿಂಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ಹೃದಯ ಆರೋಗ್ಯ ಸುಧಾರಿಸುತ್ತದೆ. ಸಂಧಿವಾತ ನಿವಾರಿಸುತ್ತದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಈ ಹಣ್ಣಿನ ಜೊತೆ ಕೆಲವು ಆಹಾರಗಳನ್ನ ಸೇವಿಸಬಾರದು. ದಾಳಿಂಬೆ ಜೊತೆ ಇದನ್ನು ತಿಂದರೆ ಆರೋಗ್ಯಕ್ಕೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಹಾಗಾದರೆ ದಾಳಿಂಬೆ ಜೊತೆ ಯಾವೆಲ್ಲಾ ವಸ್ತುಗಳನ್ನು ತಿನ್ನಬಾರದು ನೋಡಿ.
ದಾಳಿಂಬೆ ಜೊತೆ ಯಾವುದನ್ನ ತಿನ್ನಬಾರದು
ವಾರ್ಫರಿನ್: ಇದು ರಕ್ತಹೆಪ್ಪುಗಟ್ಟುವುದು ನಿಯಂತ್ರಿಸುವ ಔಷಧಿ. ಇದು ರಕ್ತ ತೆಳುವಾಗಿಸುತ್ತದೆ. ಜರ್ನಲ್ ಆಫ್ ಫುಡ್ ಅಂಡ್ ಡ್ರಗ್ ಅನಾಲಿಸಿಸ್‌ನಲ್ಲಿ ಪ್ರಕಟವಾದ 2018ರ ಅಧ್ಯಯನದ ಪ್ರಕಾರ ದಾಳಿಂಬೆ ವಾರ್ಫರಿನ್ ಒಟ್ಟಿಗೆ ಸೇವಿಸಬಾರದು. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಯ ಪ್ರಮಾಣ ಹೆಚ್ಚಾಗಬಹುದು.
ನೈಟ್ರೆಂಡಿಪೈನ್: ಕ್ಯಾಲ್ಸಿಯಂಗೆ ಸಂಬಂಧಿಸಿದ ಔಷಧಿ ಇದಾಗಿದ್ದು, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರಿಗೆ ಇದನ್ನು ನೀಡಲಾಗುತ್ತದೆ. ತಜ್ಞರ ಪ್ರಕಾರ ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಈ ಔಷಧಿಯು ಕರುಳಿನಲ್ಲಿ ಚಯಾಚಪಯ ಕಡಿಮೆ ಆಗುವಂತೆ ಮಾಡಬಹುದು.
ಸಿಹಿ ಹಣ್ಣುಗಳು: ದಾಳಿಂಬೆಯನ್ನು ಉಪ ಆಮ್ಲೀಯ ಅಥವಾ ಕಡಿಮೆ ಆಮ್ಲೀಯ ಹಣ್ಣುಗಳೆಂದು ಪರಿಗಣಿಸಲಾಗುತ್ತದೆ. ಈ ಹಣ್ಣುಗಳನ್ನು ಬಾಳೆಹಣ್ಣಿನಂತಹ ಹಣ್ಣುಗಳೊಂದಿಗೆ ತಿನ್ನುವುದು ಒಳ್ಳೆಯದಲ್ಲ. ಈ ಎರಡನ್ನೂ ಒಟ್ಟಾಗಿ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
ಸ್ಟ್ಯಾಟಿನ್: ಸ್ಟ್ಯಾಟಿನ್‌ಗಳು ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಳಸುವ ಔಷಧಗಳಾಗಿವೆ. ಕೆಲವೊಂದು ಸಂದರ್ಭಗಳಲ್ಲಿ ಈ ಔಷಧಿಯನ್ನು ದಾಳಿಂಬೆಯೊಂದಿಗೆ ಸೇವಿಸುವುದರಿಂದ ರಾಬ್ಡೋಮಿಯೊಲಿಸಿಸ್ಗೆ ಕಾರಣವಾಗಬಹುದು, ಈ ಸ್ಥಿತಿಯು ಸ್ನಾಯು ಅಂಗಾಂಶವನ್ನು ಒಡೆಯುತ್ತದೆ ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ.
ACE ಪ್ರತಿರೋಧಕಗಳು: ಈ ಔಷಧಿಗಳನ್ನು ಮಧುಮೇಹ, ಮೂತ್ರಪಿಂಡದ ಸಮಸ್ಯೆ ನಿವಾರಣೆ ಹಾಗೂ ಹೃದಯಾಘಾತಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ದಾಳಿಂಬೆ ರಸವು ಈ ಔಷಧಿಗಳಂತೆಯೇ ಕೆಲವು ಗುಣಲಕ್ಷಣಗಳನ್ನು ಹೊಂದಿರಬಹುದು, ಇದು ಅವುಗಳನ್ನು ಹೆಚ್ಚು ಪ್ರಬಲವಾಗಿಸುತ್ತದೆ, ಇದರ ಪರಿಣಾಮವಾಗಿ ತಲೆತಿರುಗುವಿಕೆ ಮತ್ತು ತಲೆನೋವಿನಂತಹ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತದೆ.
ದಾಳಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಈ ಔಷಧಿಗಳು ಹಾಗೂ ಹಣ್ಣಿನ ಜೊತೆ ಸೇವಿಸಬೇಡಿ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
(ಗಮನಿಸಿ: ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಲೇಖನವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಲು ಮರೆಯದಿರಿ)