ಪ್ರತಿದಿನ ಕೋಳಿ ಮಾಂಸ ತಿಂದ್ರೆ ಕ್ಯಾನ್ಸರ್ ಬರುತ್ತೆ, ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಪಾಯ; ಅಧ್ಯಯನ ಕಂಡುಕೊಂಡ ಸತ್ಯವಿದು
ನಾನ್ವೆಜ್ ಪ್ರಿಯರಲ್ಲಿ ಹಲವರಿಗೆ ಚಿಕನ್ ಅಂದ್ರೆ ಇಷ್ಟ. ಸಾಕಷ್ಟು ಮಂದಿ ವಾರದಲ್ಲಿ ನಾಲ್ಕೈದು ಬಾರಿ ಚಿಕನ್ ತಿನ್ನುತ್ತಾರೆ. ಆದರೆ ಈ ರೀತಿ ನಿರಂತರವಾಗಿ ಚಿಕನ್ ತಿನ್ನೋದು ಅಪಾಯಕಾರಿ, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ದೇಹಕ್ಕೆ ಪ್ರೊಟೀನ್ ಒದಗಿಸುವ ಕಾರಣದಿಂದ ಹಲವರು ಪ್ರತಿದಿನ ಅಥವಾ ವಾರದಲ್ಲಿ ಐದರಿಂದ ಆರು ದಿನ ಚಿಕನ್ ತಿನ್ನುತ್ತಾರೆ. ಇನ್ನೂ ಕೆಲವು ನಾನ್ವೆಜ್ ಪ್ರಿಯರಿಗೆ ಚಿಕನ್ ಇಲ್ಲ ಎಂದರೆ ಊಟ ಸೇರುವುದಿಲ್ಲ. ಚಿಕನ್ ಪ್ರೊಟೀನ್ ಮೂಲ ಎಂಬ ಹಲವು ವರ್ಷಗಳ ನಂಬಿಕೆ ಈಗ ತಲೆ ಕೆಳಗಾಗಿದೆ. ಚಿಕನ್ ಪ್ರಿಯರಿಗೆ ಬೇಸರ ಹಾಗೂ ಗೊಂದಲ ಮೂಡಿಸುವ ಸುದ್ದಿಯೊಂದು ಹರಡುತ್ತಿದೆ.
ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ಕೋಳಿ ಮಾಂಸದ ನಿರಂತರ ಸೇವನೆಯು ಜಠರಗರುಳಿನ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಎಂದು ಹೇಳುತ್ತಿದೆ. ಕೋಳಿ ಮಾಂಸವನ್ನು ಪ್ರೋಟೀನ್ ಸಮೃದ್ಧ ಮತ್ತು ಆರೋಗ್ಯಕರ ಆಯ್ಕೆ ಎಂದು ದೀರ್ಘಕಾಲದಿಂದ ಪರಿಗಣಿಸುತ್ತಿದ್ದವರಿಗೆ ಈ ವಿಚಾರ ಆಘಾತವನ್ನುಂಟು ಮಾಡಿದೆ. ಹಾಗಾದರೆ ಈ ಅಧ್ಯಯನ ಹೇಳುವುದೇನು ನೋಡಿ.
ಅಧ್ಯಯನದ ಮುಖ್ಯಾಂಶಗಳು
2020 ರಿಂದ 2025ರ ಅವಧಿಯ ನಡುವೆ ನಡೆದ ಡಯೆಟರಿ ಗೈಡ್ಲೈನ್ಸ್ ಅಮೆರಿಕನ್ಸ್ (DGA) ಪ್ರಕಾರ, ವಾರಕ್ಕೆ 26 ಔನ್ಸ್ ಪ್ರಾಣಿ ಮಾಂಸವನ್ನು ತಿನ್ನುವುದನ್ನು ಸರಿಯಾದ ಪ್ರೋಟೀನ್ ಪ್ರಮಾಣವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕೋಳಿ ಉತ್ಪನ್ನಗಳು ಮತ್ತು ಮೊಟ್ಟೆಗಳು ಸೇರಿವೆ. ಆದಾಗ್ಯೂ ಅಧ್ಯಯನದ ಫಲಿತಾಂಶಗಳ ಪ್ರಕಾರ, ವಾರಕ್ಕೆ 10.5 ಔನ್ಸ್ಗಿಂತ ಹೆಚ್ಚು ಕೋಳಿ ಮಾಂಸ ತಿನ್ನುವುದರಿಂದ ಸಾವಿನ ಅಪಾಯವು ಶೇ 27 ರಷ್ಟು ಹೆಚ್ಚಾಗುತ್ತದೆ. ವಾರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ತಿನ್ನುವುದರಿಂದ ಜಠರಗರುಳಿನ ಕ್ಯಾನ್ಸರ್ ಬರುವ ಅಪಾಯವು ಶೇ 2.3 ರಷ್ಟು ಹೆಚ್ಚಾಗುತ್ತದೆ ಎಂದು ಈ ಅಧ್ಯಯನವು ಗಮನಿಸಿದೆ.
ಕೋಳಿ ಉತ್ಪನ್ನಗಳನ್ನು ತಿನ್ನುವುದು ಮಾನವನ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಕೆಲವು ಭೌಗೋಳಿಕ ಪ್ರದೇಶಗಳಲ್ಲಿ, ಸಸ್ಯಗಳು ಮತ್ತು ಪ್ರಾಣಿಗಳು ಸೇವಿಸುವ ಉತ್ಪನ್ನ ಹಾಗೂ ಬೆಳೆಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೀಟನಾಶಕಗಳನ್ನು ಭಾರಿ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಫಾರ್ಮ್ಗಳಲ್ಲಿ ಬೆಳೆಸಿದ ಕೋಳಿಗಳಲ್ಲಿ, ಅಡ್ಡಪರಿಣಾಮಗಳನ್ನು ಉಂಟುಮಾಡುವ ಪ್ರತಿಜೀವಕಗಳು ಮತ್ತು ಹಾರ್ಮೋನುಗಳನ್ನು ಹೊರಗಿನಿಂದ ಚುಚ್ಚಲಾಗುತ್ತದೆ.
ಈ ಅಧ್ಯಯನದ ಪ್ರಕಾರ, ವಾರಕ್ಕೆ 300ಗ್ರಾಂ ಗಿಂತ ಹೆಚ್ಚು ಮಾಂಸ ಸೇವಿಸುವುದರಿಂದ ಸಾವಿನ ಅಪಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ವಾಸ್ತವವಾಗಿ, ಪುರುಷರಿಗಿಂತ ಮಹಿಳೆಯರಿಗೆ ಅಪಾಯ ಹೆಚ್ಚು. ಆದಾಗ್ಯೂ, ನಮ್ಮ ಫಲಿತಾಂಶಗಳನ್ನು ದೃಢೀಕರಿಸಲು ಮತ್ತು ಸಂಸ್ಕರಿಸಿದ ಕೋಳಿ ಮಾಂಸ ಸೇವನೆಯ ಪರಿಣಾಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ‘ ಎಂದು ತಜ್ಞರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಬರೆದುಕೊಂಡಿದ್ದಾರೆ.
ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಸುವ ಚಿಕನ್ ಉತ್ಪನ್ನಗಳು ಸಂಪೂರ್ಣವಾಗಿ ಆರೋಗ್ಯಕರವಲ್ಲ ಎಂದು ಪರಿಗಣಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ವಿವಿಧ ದೇಶಗಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಕಷ್ಟು ಅಧ್ಯಯನ ನಡೆಯಬೇಕಿದೆ. ಮಾತ್ರವಲ್ಲ ಭಾರತೀಯರ ಮೇಲೂ ಇದು ಪರಿಣಾಮ ಬೀರುವುದೋ ಇಲ್ಲವೋ ಎಂಬುದು ಕೂಡ ಅಧ್ಯಯನದಿಂದ ತಿಳಿದುಬಂದಿಲ್ಲ.
ಕೋಳಿ ಮಾಂಸ ಹೀಗೆ ತಿಂದ್ರೆ ಅಪಾಯ ಹೆಚ್ಚು
ಕೋಳಿ ಮಾಂಸವು ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದೆ. ಸ್ಕಿನ್ ಔಟ್ ಮಾಂಸದಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳಿವೆ. ಸ್ನಾಯುಗಳ ಬಲ, ತೂಕ ನಿರ್ವಹಣೆ, ಹೃದಯದ ಆರೋಗ್ಯ ಮತ್ತು ಮೆದುಳಿನ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಆದರೆ ಕೋಳಿ ಮಾಂಸವನ್ನು ಚರ್ಮ ಸಹಿತವಾಗಿ ತಿಂದರೆ, ಅದರಲ್ಲಿ ಹೆಚ್ಚಿನ ಕೊಬ್ಬು ಇರುತ್ತದೆ. ಸಂಸ್ಕರಿಸಿದ ಕೋಳಿ ಮಾಂಸದಲ್ಲಿ ಹೆಚ್ಚಿನ ಸೋಡಿಯಂ ಇರುತ್ತದೆ. ಅವು ಕಲುಷಿತವಾಗಬಹುದು ಮತ್ತು ಪ್ರತಿಜೀವಕಗಳಂತಹ ಹಾನಿಗಳನ್ನು ಸಹ ತರಬಹುದು. ಆದ್ದರಿಂದ, ಕಡಿಮೆ ಕೊಬ್ಬಿನಂಶವಿರುವ ಗುಣಮಟ್ಟದ ಕೋಳಿ ಮಾಂಸವನ್ನು ತಿನ್ನುವುದು ಉತ್ತಮ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ