ಗ್ಯಾಸ್ ಫ್ಲೇಮ್‌ನಲ್ಲಿ ಚಪಾತಿ ಕಾಯಿಸುವ ಅಭ್ಯಾಸ ನಿಮ್ಗೂ ಇದ್ರೆ ಇಂದೇ ಸ್ಟಾಪ್ ಮಾಡಿ, ಯಾಕೆ ಅಂತ ಇಲ್ನೋಡಿ
ಚಪಾತಿ ಅಥವಾ ರೊಟ್ಟಿ ಮಾಡುವಾಗ ನೇರವಾಗಿ ಗ್ಯಾಸ್ ಫ್ಲೇಮ್‌ನಲ್ಲಿ ಕಾಯಿಸುವ ಅಭ್ಯಾಸ ನಿಮಗೂ ಇದ್ರೆ, ಈ ಅಭ್ಯಾಸವನ್ನು ಇಂದೇ ಸ್ಟಾಪ್ ಮಾಡಿ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಇದರಿಂದ ಏನೆಲ್ಲಾ ಅಡ್ಡಪರಿಣಾಮಗಳು ಉಂಟಾಗುತ್ತವೆ ನೋಡಿ.

ಅನ್ನ ತಿನ್ನೋದು ನಿಮಗೆ ಹಿಡಿಸೊಲ್ವಾ ಅಥವಾ ತೂಕ ಹೆಚ್ಚುತ್ತೆ ಅನ್ನೋ ಕಾರಣಕ್ಕೆ ರೊಟ್ಟಿ, ಚಪಾತಿ ತಿನ್ನೋದು ಅಭ್ಯಾಸ ಮಾಡಿದ್ದೀರಾ. ಅದು ಖಂಡಿತ ಒಳ್ಳೆಯ ಅಭ್ಯಾಸ. ಮೃದುವಾದ ರೊಟ್ಟಿ, ಚಪಾತಿ ತಿಂತಿದ್ರೆ ಯಾರಿಗೆ ತಾನೇ ಇಷ್ಟವಾಗೊಲ್ಲ ಹೇಳಿ. ಹಿಂದಿನ ಕಾಲದಲ್ಲಿ ಜನರು ಕೆಂಡ ಅಥವಾ ಕಟ್ಟಿಗೆ ಬೆಂಕಿಯಲ್ಲಿ ಚಪಾತಿ, ರೊಟ್ಟಿ ಸುಟ್ಟು ತಿಂತಾ ಇದ್ರು. ಇದರ ರುಚಿಯಂತೂ ಆಹಾ ಸ್ವರ್ಗ. ಆದರೆ ಈಗ ಅದೆಲ್ಲಾ ಬರೀ ಕನಸಷ್ಟೇ. ಕಟ್ಟಿಗೆ ಒಲೆಗಳು ಹೇಳ ಹೆಸರಿಲ್ಲದಂತಾಗಿವೆ. ಈ ಜಾಗಕ್ಕೆ ಈಗ ಗ್ಯಾಸ್ ಸ್ಟವ್‌ಗಳು ಬಂದಿವೆ. ಹಾಗಾಗಿ ಜನರು ರೋಟಿ ಅಥವಾ ಚಪಾತಿಗಳನ್ನು ಗ್ಯಾಸ್ ಸ್ಟವ್ ಮೇಲೆ ಮಾಡುವ ರೂಢಿ ಮಾಡಿಕೊಂಡಿದ್ದಾರೆ. ರೊಟ್ಟಿ ಅಥವಾ ಚಪಾತಿ ಮೃದುವಾಗಿರಬೇಕು ಎಂಬ ಕಾರಣಕ್ಕೆ ಗ್ಯಾಸ್ ಸ್ಟೌನ ಫ್ಲೇಮ್ ಮೇಲೆ ನೇರವಾಗಿ ಸುಡುತ್ತಾರೆ ಅಥವಾ ಕಾಯಿಸುತ್ತಾರೆ. ಇದು ಚಪಾತಿಯನ್ನು ಮೃದುವಾಗಿಸುವ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನೂ ತರುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಗ್ಯಾಸ್ ಸ್ಟೌ ಉರಿಯಲ್ಲಿ ನೇರವಾಗಿ ಚಪಾತಿ ಹಾಗೂ ರೋಟಿ ಕಾಯಿಸುವುದು ಅಪಾಯ ಎಂಬುದನ್ನು ಸಾಬೀತು ಮಾಡಿವೆ. ಯಾಕೆಂದರೆ ಅವು ಅತ್ಯಧಿಕ ಉರಿಯಲ್ಲಿ ಬೆಂದಿರುತ್ತವೆ. ಇದು ಅನಿಲದಿಂದ ಉತ್ಪತ್ತಿಯಾಗುವ ಕಾರ್ಸಿನೋಜೆನ್‌ಗಳಂತಹ ಹಾನಿಕಾರಕ ಸಂಯುಕ್ತಗಳಿಗೆ ನಿಮ್ಮನ್ನು ಒಡ್ಡಿಕೊಳ್ಳುವಂತೆ ಮಾಡುತ್ತದೆ. ಇದು ಕ್ಯಾನ್ಸರ್ ಸೇರಿದಂತೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು.
ʼರೊಟ್ಟಿ ಅಥವಾ ಚಪಾತಿಯನ್ನು ಅರ್ಧ ತವಾದ ಮೇಲೆ ಬೇಯಿಸಿ ಅಥವಾ ನೇರ ಉರಿಯ ಮೇಲೆ ಬೇಯಿಸುವುದು ಭಾರತದಲ್ಲಿ ಸಾಮಾನ್ಯ. ಆದರೆ ಇದರಿಂದ ಚಪಾತಿ ಮೃದುವಾಗುತ್ತೆ ಎನ್ನುವುದಕ್ಕಿಂತ ಆರೋಗ್ಯ ಸಮಸ್ಯೆಗಳು ಹೆಚ್ಚುವುದೇ ಅಧಿಕ. ಇದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಿರಿ.
ವಿಷಕಾರಿ ಅಂಶ ಸೇರುತ್ತದೆ
ಗ್ಯಾಸ್ ಫ್ಲೇಮ್‌ನಲ್ಲಿ ರೊಟ್ಟಿ ಅಥವಾ ಚಪಾತಿ ಸುಡುವುದರಿಂದ ಬೇಗನೆ ಕಾಯುತ್ತದೆ ಎಂಬುದು ನಿಜ. ಆದರೆ ಇದಕ್ಕೆ ವಿಷಕಾರಿ ಅಂಶಗಳು ಅಂಟಿಕೊಳ್ಳುತ್ತವೆ. ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೈಸರ್ಗಿಕ ಅಡುಗೆ ಅನಿಲಗಳು ಕಾರ್ಬನ್ ಮೊನೋಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್‌ಗಳಂತಹ ಮಾಲಿನ್ಯಕಾರಕಗಳನ್ನು ಹೊರ ಸೂಸುತ್ತದೆ. ಈ ಮಾಲಿನ್ಯಕಾರಕಗಳು ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾದಾಗ ಆರೋಗ್ಯದ ತೊಂದರೆಗಳು ಉಂಟಾಗಬಹುದು.
ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು
ವಿಶ್ವ ಆರೋಗ್ಯ ಸಂಸ್ಥೆಯು ಮಾಲಿನ್ಯಕಾರಕಗಳ ಮಟ್ಟವನ್ನು ಅಸುರಕ್ಷಿತ ಎಂದು ಪರಿಗಣಿಸಿದೆ. ಇವುಗಳು ಉಸಿರಾಟ ಕಾಯಿಲೆಗಳು ಹಾಗೂ ಹೃದಯರಕ್ತನಾಳದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆ ಕಾರಣಕ್ಕೆ ರೊಟ್ಟಿಯನ್ನು ನೇರವಾಗಿ ಗ್ಯಾಸ್ ಉರಿಯಲ್ಲಿ ಬೇಯಿಸುವುದು ಅಪಾಯಕಾರಿ.
ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ
ರೊಟ್ಟಿ ಅಥವಾ ಇಂತಹ ಯಾವುದೇ ಖಾದ್ಯಗಳನ್ನು ನೇರವಾಗಿ ಗ್ಯಾಸ್ ಫ್ಲೇಮ್ ಬೇಯಿಸುವುದರಿಂದ ಹೆಚ್ಚಿನ ತಾಪಮಾನದ ಕಾರಣ ಕಾರ್ಸಿನೋಜೆನ್‌ಗಳು ಬಿಡುಗಡೆಯಾಗುತ್ತವೆ. ಆದರೆ ಅಧ್ಯಯನಗಳ ಪ್ರಕಾರ ಈ ಅಂಶವು ಕ್ಯಾನ್ಸರ್ ಹರಡಲು ಕಾರಣವಾಗಬಹುದು. ಈ ಸಂಯುಕ್ತಗಳು ಕಾಲಾನಂತರದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸಬಹುದು.
ಗ್ಯಾಸ್ ಫ್ಲೇಮ್‌ನಲ್ಲಿ ಚಪಾತಿ ಅಥವಾ ರೊಟ್ಟಿ ಬೇಯಿಸುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ವಿಚಾರವಾಗಿ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ. ಆದರೂ ಇದರಿಂದ ಅಪಾಯಗಳು ಹೆಚ್ಚುವ ಸಾಧ್ಯತೆ ಇರುವ ಕಾರಣದಿಂದ ಗ್ಯಾಸ್ ಫ್ಲೇಮ್‌ನಲ್ಲಿ ಬೇಯಿಸುವುದನ್ನು ನಿಲ್ಲಿಸುವುದು ಉತ್ತಮ.
ರೊಟ್ಟಿಯನ್ನು ತವಾದಲ್ಲಿ ಬೇಯಿಸುವುದು ಉತ್ತಮ ಏಕೆ?
ರೊಟ್ಟಿಯನ್ನು ನೇರವಾಗಿ ಗ್ಯಾಸ್ ಫ್ಲೇಮ್ ಮೇಲೆ ಬೇಯಿಸುವುದಕ್ಕಿಂತ ತವಾದ ಮೇಲೆ ಬೇಯಿಸುವುದು ಉತ್ತಮ. ತವಾದ ಮೇಲ್ಮೈ ಸಮತಟ್ಟಾಗಿರುವ ಕಾರಣ ಇದು ಶಾಖವನ್ನು ಸಮವಾಗಿ ಹರಡುತ್ತದೆ. ಅಲ್ಲದೇ ಚಪಾತಿ ನೀಟಾಗಿ ಬೆಂದಿದೆ ಎಂಬುದನ್ನು ಸಾಬೀತು ಮಾಡುತ್ತದೆ. ಅಲ್ಲದೆ ಅಲ್ಲಲ್ಲಿ ಕಪ್ಪಾಗುವುದನ್ನು ತಡೆಯುತ್ತದೆ. ತವಾದ ಮೇಲೆ ರೊಟ್ಟಿ ಸುಡುವುದರಿಂದ ಅತಿಯಾದ ಕರ್ರಿಂಗ್ ಅಕ್ರಿಲಾಮೈಡ್‌ನಂತಹ ಹಾನಿಕಾರ ಸಂಯುಕ್ತದ ಹರಡುವಿಕೆಯು ಕಡಿಮೆಯಾಗುತ್ತದೆ.
ತವಾದಲ್ಲಿ ಚಪಾತಿ ಕಾಯಿಸುವುದರಿಂದ ಅತಿಯಾದ ತಾಪಮಾನಕ್ಕೆ ಒಡ್ಡಿಕೊಳ್ಳುವ ಸಾಧ್ಯತೆಯೂ ಕಡಿಮೆ. ಇದು ಆರೋಗ್ಯಕರ ಅಡುಗೆ ಕ್ರಮವಾಗಿದೆ. ಹೆಚ್ಚುವರಿಯಾಗಿ, ತವಾವನ್ನು ಬಳಸುವುದು ಅಡುಗೆ ತಾಪಮಾನದ ಮೇಲೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ, ಇದು ರೋಟಿ ಹಿಟ್ಟಿನಲ್ಲಿ ಬಳಸುವ ಪದಾರ್ಥಗಳ ಪೌಷ್ಟಿಕಾಂಶದ ಮೌಲ್ಯವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಚಪಾತಿ ಕಾಯಿಸುವ ಸರಿಯಾದ ವಿಧಾನ
ಮೃದುವಾದ ರೊಟ್ಟಿ ಅಥವಾ ಚಪಾತಿ ತಯಾರಿಸಲು ಮೊದಲು ಹಿಟ್ಟನ್ನು ಚೆನ್ನಾಗಿ ಕಲೆಸಿ, ನಾದಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಹಾಗೇ ಇಡಿ. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಅದನ್ನು ಅಂಗೈ ಗಾತ್ರಕ್ಕೆ ತಟ್ಟಿಕೊಳ್ಳಿ. ನಂತರ ಲಟ್ಟಿಸಿಕೊಳ್ಳಿ. ತವಾವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಅದರ ಮೇಲೆ ಚಪಾತಿಗಳನ್ನು ಹಾಕಿ. ಎರಡು ಕಡೆ ಕಾಯಿಸಿ. ಚಪಾತಿಯಿಂದ ಕೊಂಚ ಒತ್ತಿ ಆಗ ತಾನಾಗಿಯೇ ಚಪಾತಿ ಉಬ್ಬುತ್ತದೆ. ನಂತರ ಇದಕ್ಕೆ ಎಣ್ಣೆ ಹಚ್ಚಿ ಮತ್ತೆ ಎರಡೂ ಕಡೆ ಕಾಯಿಸಿ, ಈಗ ನಿಮ್ಮ ಮುಂದೆ ರುಚಿಯಾದ, ಮೃದುವಾದ ಚಪಾತಿ ತಿನ್ನಲು ಸಿದ್ಧ.
ನೋಡಿದ್ರಲ್ಲ, ಚಪಾತಿಯನ್ನು ಗ್ಯಾಸ್ ಫ್ಲೇಮ್ ಮೇಲೆ ಕಾಯಿಸುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂದು. ನೀವು ಈ ತಪ್ಪು ಮಾಡ್ತಾ ಇದ್ರೆ ಖಂಡಿತ ನಿಲ್ಲಿಸಿ. ರುಚಿಗಿಂತ ಆರೋಗ್ಯ ಮುಖ್ಯ ಎನ್ನುವುದನ್ನು ಮರೆಯಬೇಡಿ.
(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ