ಮೊದಲ ಬಾರಿಗೆ ತಾಯಿಯಾಗುತ್ತಿದ್ದೀರಾ: ಸುರಕ್ಷಿತ ಗರ್ಭಧಾರಣೆಗಾಗಿ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಇಲ್ಲಿದೆ
ಮೊದಲ ಬಾರಿಗೆ ತಾಯಿ ಆಗುತ್ತಿರುವ ಮಹಿಳೆಗೆ ತಾವು ಏನು ಮಾಡಬೇಕು ಏಮು ಮಾಡಬಾರದು ಎಂಬ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಧಾರಣೆಗಾಗಿ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು. ಇದು ನಿಮಗೆ ಸಹಾಯಕವಾಗಬಹುದು.
ಗರ್ಭಧಾರಣೆ ಎನ್ನುವುದು ಪ್ರತಿಯೊಬ್ಬ ಮಹಿಳೆಗೆ ಅದ್ಭುತ ಪ್ರಯಾಣ. ಅದರಲ್ಲೂ ಮೊದಲ ಬಾರಿಗೆ ಗರ್ಭಿಣಿಯಾಗಿದ್ದರೆ ಉತ್ಸಾಹ, ನಿರೀಕ್ಷೆ ತುಂಬಾ ಇರುತ್ತದೆ. ಮೊದಲ ಬಾರಿಗೆ ತಾಯಿಯಾಗುವುದು ಅಂದ್ರೆ ಉತ್ಸಾಹ ಮತ್ತು ನಿರೀಕ್ಷೆ ಇರುವುದು ಸಹಜ. ಈ ಸಮಯದಲ್ಲಿ ಸಿಟ್ಟು, ಕೋಪ, ಅಳು, ಹತಾಶೆ ಇತ್ಯಾದಿ ಭಾವನೆಗಳು ಉಂಟಾಗುವುದು ಕೂಡ ಸಹಜ. ಮುಖ್ಯವಾಗಿ ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಧಾರಣೆಯತ್ತ ಗಮನಕೊಡುವುದು ಅತ್ಯಗತ್ಯ. ಸುರಕ್ಷಿತ ಗರ್ಭಧಾರಣೆಗಾಗಿ ಏನು ಅನುಸರಿಸಬೇಕು, ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಸುರಕ್ಷಿತ ಗರ್ಭಧಾರಣೆಗಾಗಿ ಈ ಸಲಹೆ ಅನುಸರಿಸಬಹುದು
ಸಮತೋಲಿತ ಆಹಾರವನ್ನು ಸೇವಿಸಿ: ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶ ಭರಿತ ಆಹಾರ ಸೇವಿಸುವುದು ಬಹಳ ಮುಖ್ಯ. ಜೀವಸತ್ವಗಳು, ಖನಿಜಗಳು ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಸೇವಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಬಹಳ ಉತ್ತಮ. ಆಹಾರದಲ್ಲಿ ಸೊಪ್ಪು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಪ್ರೋಟೀನ್ಗಳು ಹಾಲು ಮತ್ತು ಮೊಸರನ್ನು ಸೇವಿಸಬೇಕು. ಗರ್ಭಿಣಿಯಾಗಿದ್ದಾಗ ಅತ್ಯಂತ ಅಗತ್ಯವಾಗಿ ಸೇವಿಸಲೇಬೇಕಾದ ಅಂಶವೆಂದರೆ ಫೋಲಿಕ್ ಆಮ್ಲ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವಿರುವ ಮಾತ್ರೆಗಳು. ಅಲ್ಲದೆ, ದಿನವಿಡೀ ಸಾಕಷ್ಟು ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟೆಡ್ ಆಗಿರಿಸುವತ್ತ ಗಮನಕೊಡಬೇಕು.
ಪ್ರಸವಪೂರ್ವ ಜೀವಸತ್ವಗಳನ್ನು ತೆಗೆದುಕೊಳ್ಳಬಹುದು: ಪ್ರಸವಪೂರ್ವ ಜೀವಸತ್ವಗಳಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಸರಿಯಾದ ಪೋಷಕಾಂಶಗಳು ಇರುತ್ತವೆ. ವಿಶೇಷವಾಗಿ, ಪ್ರಸವಪೂರ್ವ ಜೀವಸತ್ವಗಳು ಮಗುವಿನ ಬೆಳವಣಿಗೆಯನ್ನು ಬೆಂಬಲಿಸಲು ಫೋಲಿಕ್ ಆಮ್ಲ, ಡಿಎಚ್‍ಎ ಮತ್ತು ಕಬ್ಬಿಣದ ಅಂಶವನ್ನು ಹೊಂದಿರುತ್ತವೆ.
ನಿಯಮಿತ ತಪಾಸಣೆಗಳನ್ನು ಮಾಡಿ: ನಿಯಮಿತವಾಗಿ ವೈದ್ಯರಲ್ಲಿ ಭೇಟಿ ನೀಡಿ ಸಮಾಲೋಚನೆ ನಡೆಸುವುದು ಅಥವಾ ಮಾರ್ಗದರ್ಶನ ಪಡೆಯುವುದು ಅತ್ಯಗತ್ಯ. ಮಗುವಿನ ಬೆಳವಣಿಗೆಗೆ ಇದು ಸಹಕಾರಿ. ಅಲ್ಲದೆ, ಇದು ನಿಮ್ಮ ಗರ್ಭಾವಸ್ಥೆಯ ಉದ್ದಕ್ಕೂ ಆರೋಗ್ಯ ಹೇಗಿದೆ ಎಂಬುದನ್ನೂ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಹೀಗಾಗಿ ವೈದ್ಯರ ಸಲಹೆಗಳನ್ನು ಅನುಸರಿಸಿ, ನಿಯಮಿತವಾಗಿ ತಪಾಸಣೆ ಮಾಡುವುದು ಬಹಳ ಮುಖ್ಯ.
ದೈಹಿಕವಾಗಿ ಸಕ್ರಿಯರಾಗಿರಿ: ಏರೋಬಿಕ್ ವ್ಯಾಯಾಮಗಳು, ವಾಕಿಂಗ್, ಈಜು ಅಥವಾ ಪ್ರಸವಪೂರ್ವ ಯೋಗದಂತಹ ಗರ್ಭಿಣಿಯರು ಮಾಡಬಹುದಾದ ವ್ಯಾಯಾಮಗಳನ್ನು ಮಾಡಬಹುದು. ಇದು ದೇಹದ ತೂಕವನ್ನು ನಿಯಂತ್ರಿಸುತ್ತದೆ, ಜೊತೆಗೆ ಒತ್ತಡದಿಂದ ದೂರವಿರಿಸುತ್ತದೆ. ಆದರೆ, ಗರ್ಭಿಣಿಯರು ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಫಿಟ್‌ನೆಸ್ ದಿನಚರಿಯನ್ನು ಪ್ರಾರಂಭಿಸುವ ಮುನ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಅತ್ಯಗತ್ಯ.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ: ಗರ್ಭಾವಸ್ಥೆಯಲ್ಲಿ ಭಾವನೆಗಳ ತಲ್ಲಣ ಕಂಡು ಬರುವುದು ಸಾಮಾನ್ಯ. ಸಣ್ಣ-ಪುಟ್ಟ ವಿಚಾರಕ್ಕೂ ಕೋಪ ಬರುವುದು ಅಥವಾ ಅಳು ಬರುವುದು ಸಾಮಾನ್ಯ. ಹೀಗಾಗಿ ಮನಸ್ಸನ್ನು ಗಟ್ಟಿಯಾಗಿರಿಸಿಕೊಳ್ಳಬೇಕು. ಇದಕ್ಕಾಗಿ ಧ್ಯಾನ ಮುಂತಾದ ವಿಶ್ರಾಂತಿ ತಂತ್ರಗಳನ್ನು ಅನುಸರಿಸಬಹುದು. ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದನ್ನು ಪತಿಯೊಂದಿಗೆ ಅಥವಾ ವೈದ್ಯರೊಂದಿಗೆ ತಿಳಿಸಬಹುದು. ಅನಗತ್ಯ ಒತ್ತಡವನ್ನು ತಪ್ಪಿಸಲು ಯಾವಾಗಲೂ ಧನಾತ್ಮಕವಾಗಿರಲು ಪ್ರಯತ್ನಿಸಬಹುದು.
ಸುರಕ್ಷಿತ ಗರ್ಭಧಾರಣೆಗಾಗಿ ಏನು ಮಾಡಬಾರದು
ಧೂಮಪಾನ ಅಥವಾ ಮದ್ಯಪಾನ ಮಾಡಬಾರದು: ಗರ್ಭಧಾರಣೆಯ ಸಮಯದಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡಲೇಬಾರದು. ಇದು ಜನ್ಮತಾಳಲಿರುವ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಶಿಶುವಿನ ಅವಧಿಪೂರ್ವ ಜನನ, ಕಡಿಮೆ ತೂಕದ ಅಪಾಯ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಗರ್ಭಾವಸ್ಥೆಯಲ್ಲಿ ಎಲ್ಲಾ ರೀತಿಯ ಧೂಮಪಾನ ಮತ್ತು ಮದ್ಯಪಾನ ಮಾತ್ರವಲ್ಲದೆ ತಂಬಾಕು ಸೇವನೆಯನ್ನೂ ಮಾಡಬಾರದು. ಅಲ್ಲದೆ ಧೂಮಪಾನ ಸೇದುವವರಿಂದಲೂ ದೂರವಿರಬೇಕು.
ಪಾಶ್ಚರೀಕರಿಸದ ಅಥವಾ ಕಚ್ಚಾ ಆಹಾರವನ್ನು ಸೇವಿಸಬಾರದು: ಕೆಲವು ಆಹಾರಗಳು ಲಿಸ್ಟೇರಿಯಾ ಮತ್ತು ಸಾಲ್ಮೊನೆಲ್ಲಾಗಳಂತಹ ಬ್ಯಾಕ್ಟೀರಿಯಾವನ್ನು ತರಬಹುದು. ಇವೆರಡೂ ಗರ್ಭಾವಸ್ಥೆಯಲ್ಲಿ ಗಂಭೀರ ಅಪಾಯಗಳನ್ನು ಉಂಟುಮಾಡುತ್ತವೆ. ಆಹಾರದಿಂದ ಹರಡುವ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಲು ಪಾಶ್ಚರೀಕರಿಸದ ಹಾಲು, ಚೀಸ್, ಹಸಿ ಮೊಟ್ಟೆಗಳು, ಸುಶಿ ಮತ್ತು ಸರಿಯಾಗಿ ಬೇಯಿಸದ ಮಾಂಸವನ್ನು ಸೇವಿಸಬಾರದು.
ವೈದ್ಯರನ್ನು ಸಂಪರ್ಕಿಸದೆ ಔಷಧಿಗಳನ್ನು ತೆಗೆದುಕೊಳ್ಳಬಾರದು: ಕೆಲವೊಮ್ಮೆ ಔಷಧಿಗಳೂ ಸಹ ಮಗುವಿಗೆ ಹಾನಿಕಾರಕವಾಗಬಹುದು. ಗರ್ಭಾವಸ್ಥೆಯಲ್ಲಿ ವೈದ್ಯರು ಸೂಚಿಸುವ ಔಷಧಿಗಳನ್ನು ಮಾತ್ರವೇ ತೆಗೆದುಕೊಳ್ಳಬೇಕು. ನೀವಾಗಿಯೇ ಏನಾದರೂ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು.
ಕೆಫೀನ್ ಅನ್ನು ಅತಿಯಾಗಿ ಸೇವಿಸಬಾರದು: ಗರ್ಭಿಣಿಯರು ಟೀ, ಕಾಫಿಯನ್ನು ಅತಿಯಾಗಿ ಸೇವಿಸಬಾರದು. ಹೆಚ್ಚಿನ ಮಟ್ಟದ ಕೆಫೀನ್ ಗರ್ಭಪಾತ ಮತ್ತು ಶಿಶುವಿನ ಅವಧಿಪೂರ್ವ ಜನನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕಾಫಿ, ಟೀ ಸೇವಿಸುತ್ತಿದ್ದರೆ ದಿನಕ್ಕೆ ಒಂದು ಸಣ್ಣ ಕಪ್ ಮಾತ್ರ ಸೇವಿಸಿ. ಚಹಾ, ಕಾಫಿ ಮಾತ್ರವಲ್ಲದೆ ಸೋಡಾ, ಚಾಕೋಲೇಟ್ ಸೇರಿದಂತೆ ಯಾವುದೇ ಕೆಫೀನ್ ಅಂಶವಿರುವ ಆಹಾರಗಳನ್ನು ಸೇವಿಸಬಾರದು.
ದೇಹದ ಸಂಕೇತಗಳನ್ನು ನಿರ್ಲಕ್ಷಿಸಬೇಡಿ: ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ನೋವುಂಟಾಗುವುದು, ರಕ್ತಸ್ರಾವ, ತಲೆತಿರುಗುವಿಕೆ ಅಥವಾ ಇನ್ನಿತರೆ ಏನೇ ಸಮಸ್ಯೆ ಕಂಡು ಬಂದರೂ ನಿರ್ಲಕ್ಷ್ಯ ಸಲ್ಲದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ವಿಭಾಗ