ಜೀರ್ಣಕ್ರಿಯೆಯಿಂದ ಚರ್ಮದ ಆರೋಗ್ಯದವರೆಗೆ; ಶುಂಠಿ-ಅರಿಶಿನ ಮಿಶ್ರಿತ ಪಾನೀಯ ಕುಡಿಯುವುದರ ಪ್ರಯೋಜನಗಳಿವು
ಶುಂಠಿ ಮತ್ತು ಅರಿಶಿನ ಪಾನೀಯ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ತಯಾರಿಸುವ ವಿಧಾನ ಹಾಗೂ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ: ಪ್ರೀತಿ)

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಮಾತಿನಂತೆ ನಿಮ್ಮ ಬೆಳಗ್ಗಿನ ದಿನಚರಿಯಲ್ಲಿ ಶುಂಠಿ ಮತ್ತು ಅರಿಶಿನ ಪಾನೀಯ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಪಾನೀಯವನ್ನು ತಯಾರಿಸಲು ವಿವಿಧ ವಿಧಾನಗಳಿದ್ದು, ಅದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಶುಂಠಿ ಮತ್ತು ಅರಿಶಿನ ಪಾನೀಯ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಉತ್ತಮ ಜಿರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೈಸರ್ಗಿಕ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅಲ್ಲದೆ ಚರ್ಮದ ಕಾಂತಿಯನ್ನು ಉತ್ತೇಜಿಸುವವರೆಗೆ ವ್ಯಾಪಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಪಾನೀಯಕ್ಕೆ ತೆಂಗಿನ ನೀರು, ಕಾಳುಮೆಣಸು, ಕಿತ್ತಳೆ ರಸ, ಜೇನುತುಪ್ಪ ಸೇರಿದಂತೆ ಇತರೆ ಪದಾರ್ಥಗಳನ್ನು ಸೇರಿಸಬಹುದು. ಅತಿಯಾದರೆ ಅಮೃತವು ವಿಷವೆಂಬತೆ ಹೆಚ್ಚಾಗಿ ಈ ಪಾನೀಯವನ್ನು ಸೇವಿಸುವುದು ಒಳ್ಳೆಯದಲ್ಲ. ಮಿತವಾಗಿ ಸೇವಿಸಬೇಕು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ
ಶುಂಠಿ ಮತ್ತು ಅರಿಶಿನದ ಪಾನೀಯ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಸಿಪ್ಪೆ ಸುಲಿದು ಕತ್ತರಿಸಿದ ಶುಂಠಿ ಬೇರು - ¼ ಕಪ್, ಸಿಪ್ಪೆ ಸುಲಿದು ಕತ್ತರಿಸಿದ ಅರಿಶಿನ ಬೇರು - ¼ ಕಪ್, ನಿಂಬೆ ರಸ - ½ ಕಪ್, 1 ಕಪ್ ನೀರು, ½ ಚಮಚ ಕಾಳುಮೆಣಸು, 1 ರಿಂದ 2 ಚಮಚ ಜೇನುತುಪ್ಪ.
ತಯಾರಿಸುವ ವಿಧಾನ: ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಳ್ಳಿ ಅಥವಾ ಕುಟ್ಟಾಣಿಯಲ್ಲಿ ಕುಟ್ಟಿ ಪುಡಿ ಮಾಡಬಹುದು. ಜರಡಿ ಅಥವಾ ಹತ್ತಿ ಬಟ್ಟೆ ಸಹಾಯದಿಂದ ಮಿಶ್ರಣದ ತಿರುಳನ್ನು ಸೋಸಿ, ರಸ ತೆಗೆಯಿರಿ. ಈ ರಸವನ್ನು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಿಟ್ಟು, ಒಂದು ವಾರದವರೆಗೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ವಾರದ ಬಳಿಕ ಈ ಪಾನೀಯವನ್ನು ಕುಡಿಯಬಹುದು.
ಶುಂಠಿ-ಅರಶಿನ ಮಿಶ್ರಿತ ಪಾನೀಯ ಕುಡಿಯುವುದರ ಪ್ರಯೋಜನಗಳು
ನಿಯಮಿತವಾಗಿ ಶುಂಠಿ-ಅರಿಶಿನ ಮಿಶ್ರಿತ ಪಾನೀಯ/ಜ್ಯೂಸ್ ಅನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಬೀರುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:
ಉರಿಯೂತಕ್ಕೆ ಉತ್ತಮ ಪರಿಹಾರ: ಶುಂಠಿ ಮತ್ತು ಅರಿಶಿನ ಎರಡೂ ನೈಸರ್ಗಿಕ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಶುಂಠಿಯಲ್ಲಿ ಜಿಂಜರಾಲ್ ಮತ್ತು ಅರಿಶಿನದಲ್ಲಿ ಕರ್ಕ್ಯುಮಿನ್‍ನಂತಹ ಸಂಯುಕ್ತಗಳನ್ನು ಹೊಂದಿದೆ. ಈ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಧಿವಾತ, ಹೃದಯ ಕಾಯಿಲೆ ಮತ್ತು ಮಧುಮೇಹ ಸೇರಿದಂತೆ ಹಲವಾರು ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಶುಂಠಿ ಮತ್ತು ಅರಿಶಿನ ಎರಡೂ ನೈಸರ್ಗಿಕ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು, ಜೀವಸತ್ವಗಳು ಮತ್ತು ಆಂಟಿಮೈಕ್ರೊಬಿಯಲ್ ಅನ್ನು ಹೊಂದಿವೆ. ಅರಿಶಿನ ಕರ್ಕ್ಯುಮಿನ್ ರೋಗನಿರೋಧಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲು ಸಹಾಯ ಮಾಡಿದರೆ, ಶುಂಠಿಯಲ್ಲಿ ಜಿಂಜರಾಲ್‌ನಂತಹ ಸಂಯುಕ್ತಗಳಿವೆ. ಇವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಮತ್ತು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ.
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ: ಹೊಟ್ಟೆ ಉಬ್ಬರ ಅಥವಾ ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಶುಂಠಿ ಮತ್ತು ಅರಿಶಿನದ ಜ್ಯೂಸ್ ಒಳ್ಳೆಯ ಪರಿಹಾರವಾಗಿದೆ. ಇದರಿಂದ ವಾಕರಿಕೆಯನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಅಲ್ಲದೆ ಜೀರ್ಣಾಂಗದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟಾಕ್ಸಿನ್ ತೆಗೆದು ಹಾಕಲು ಸಹಕಾರಿ: ಈ ಪಾನೀಯ ಸೇವನೆಯಿಂದ ಯಕೃತ್ತಿನ ಕಾರ್ಯವನ್ನು ಹೆಚ್ಚಿಸುವ ಮೂಲಕ ಮತ್ತು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ದೇಹದಿಂದ ಟಾಕ್ಸಿನ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆ ಮತ್ತು ಕೊಬ್ಬಿನ ಚಯಾಪಚಯವನ್ನು ಸುಗಮಗೊಳಿಸುತ್ತದೆ.
ಚರ್ಮದ ಆರೋಗ್ಯ ಹೆಚ್ಚಿಸುತ್ತದೆ: ಶುಂಠಿ ಮತ್ತು ಅರಿಶಿನದಲ್ಲಿರುವ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಅಕಾಲಿಕ ವಯಸ್ಸಾಗುವಿಕೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡುತ್ತವೆ. ಮೊಡವೆಗಳ ನಿವಾರಣೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಶುಂಠಿ ಮತ್ತು ಅರಿಶಿನದ ಜ್ಯೂಸ್ ತಯಾರಿಸುವ ವಿಧಾನ
ವಿಧಾನ 1: ಖಾರದ ಶುಂಠಿ-ಅರಿಶಿನ ಜ್ಯೂಸ್
ಬೇಕಾಗುವ ಸಾಮಾಗ್ರಿಗಳು: ಸಿಪ್ಪೆ ಸುಲಿದು ಕತ್ತರಿಸಿದ ಶುಂಠಿ ಮತ್ತು ಅರಿಶಿನ ಬೇರು - ¼ ಕಪ್, ½ ಚಮಚ ಕೆಂಪುಮೆಣಸು ಮತ್ತು ಕರಿಮೆಣಸು, ½ ಕಪ್ ಕಿತ್ತಳೆ ರಸ ಮತ್ತು ನಿಂಬೆ ರಸ, 1 ಕಪ್ ನೀರು, 1 ಚಮಚ ಜೇನುತುಪ್ಪ (ಬೇಕಿದ್ದರೆ ಮಾತ್ರ)
ತಯಾರಿಸುವ ವಿಧಾನ: ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಳ್ಳಿ ಅಥವಾ ಕುಟ್ಟಾಣಿಯಲ್ಲಿ ಕುಟ್ಟಿ ಪುಡಿ ಮಾಡಬಹುದು. ಜರಡಿ ಅಥವಾ ಹತ್ತಿ ಬಟ್ಟೆ ಸಹಾಯದಿಂದ ಮಿಶ್ರಣದ ತಿರುಳನ್ನು ಸೋಸಿ, ರಸ ತೆಗೆದರೆ ಜ್ಯೂಸ್ ಸಿದ್ಧ.
ವಿಧಾನ 2: ಗ್ರೀನ್ ಡಿಟಾಕ್ಸ್ ಪಾನೀಯ
ಬೇಕಾಗುವ ಸಾಮಾಗ್ರಿಗಳು: ಸಿಪ್ಪೆ ಸುಲಿದು ಕತ್ತರಿಸಿದ ಶುಂಠಿ ಮತ್ತು ಅರಿಶಿನ ಬೇರು - ¼ ಕಪ್, ½ ಚಮಚ ಕರಿಮೆಣಸು, ½ ಕಪ್ ನಿಂಬೆ ಮತ್ತು ಸೌತೆಕಾಯಿ ರಸ, 1 ಚಮಚ ಆಪಲ್ ಸೈಡರ್ ವಿನೆಗರ್, 1-2 ಚಮಚ ಜೇನುತುಪ್ಪ (ಬೇಕಿದ್ದರೆ)
ತಯಾರಿಸುವ ವಿಧಾನ: ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಳ್ಳಿ. ಜರಡಿ ಅಥವಾ ಹತ್ತಿ ಬಟ್ಟೆ ಸಹಾಯದಿಂದ ಮಿಶ್ರಣದ ತಿರುಳನ್ನು ಸೋಸಿ, ರಸ ತೆಗೆಯಿರಿ. ಸೌತೆಕಾಯಿ ಮತ್ತು ಆಪಲ್ ಸೈಡರ್ ವಿನೆಗರ್ ಯಕೃತ್ತನ್ನು ಶುದ್ಧೀಕರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ವಿಧಾನ 3: ಗೋಲ್ಡನ್ ಗ್ಲೋ ಶಾಟ್
ಬೇಕಾಗುವ ಸಾಮಾಗ್ರಿಗಳು: ಸಿಪ್ಪೆ ಸುಲಿದು ಕತ್ತರಿಸಿದ ಶುಂಠಿ ಮತ್ತು ಅರಿಶಿನ ಬೇರು - ¼ ಕಪ್, ½ ಟೀ ಚಮಚ ದಾಲ್ಚಿನ್ನಿ ಪುಡಿ ಮತ್ತು ಕರಿಮೆಣಸು, ½ ಕಪ್ ತೆಂಗಿನ ನೀರು ಮತ್ತು ಅನಾನಸ್ ರಸ, 1 ಚಮಚ ಜೇನುತುಪ್ಪ.
ತಯಾರಿಸುವ ವಿಧಾನ: ಎಲ್ಲಾ ಪದಾರ್ಥಗಳನ್ನು ನಯವಾಗುವವರೆಗೆ ಮಿಶ್ರಣ ಮಾಡಿ ಸೋಸಿ, ಒಂದು ವಾರದವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸಿ. ನಂತರ ಪ್ರತಿನಿತ್ಯ 30-50 ಮಿಲಿ ಕುಡಿಯಿರಿ.
ಶುಂಠಿ ಮತ್ತು ಅರಿಶಿನ ಪಾನೀಯದಿಂದ ಬೀರುವ ಅಡ್ಡಪರಿಣಾಮಗಳು
ಯಾವುದೇ ಮನೆಮದ್ದನ್ನು ನಿಯಮಿತವಾಗಿ ಸೇವಿಸಿದರೆ ಹಾನಿಕಾರಕವಲ್ಲ. ಈ ಜ್ಯೂಸ್ ಕೆಲವರಲ್ಲಿ ಆಮ್ಲೀಯದ ಪರಿಣಾಮವಾಗಿ ಹೊಟ್ಟೆ ನೋವು ಅಥವಾ ಉಬ್ಬುವಿಕೆಯಂತಹ ಸಮಸ್ಯೆಗಳು ಕಂಡುಬರಬಹುದು. ರಕ್ತ ಶುದ್ಧಿಕರಣಗೊಳಿಸುವ ಮಾತ್ರೆ ತೆಗೆದುಕೊಳ್ಳುವವರು ಮತ್ತು ಚರ್ಮದ ಸಮಸ್ಯೆ, ಅಲರ್ಜಿ ಇರುವವರು ಈ ಪಾನೀಯ ಸೇವಿಸಿದರೆ ಸಮಸ್ಯೆ ಉಂಟಾಗಬಹುದು. ಹೆಚ್ಚಾಗಿ ಅರಿಶಿನ ಸೇವಿಸಿದರೆ ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಯಾವುದೇ ಮನೆಮದ್ದನ್ನು ಸೇವಿಸುವುದ್ದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳುವುದು ಸೂಕ್ತ.
