Genital Itching: ಮಳೆಗಾಲದಲ್ಲಿ ಗುಪ್ತಾಂಗದ ತುರಿಕೆಯಿಂದ ಹಿಂಸೆ ಅನುಭವಿಸ್ತಾ ಇದೀರಾ, ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು
ಮಳೆಗಾಲದಲ್ಲಿ ಚರ್ಮದ ಅಲರ್ಜಿ ಸಾಮಾನ್ಯ. ಅದರಲ್ಲೂ ಈ ಸಮಯದಲ್ಲಿ ಜನನಾಂಗದ ಭಾಗದಲ್ಲಿ ಹೆಚ್ಚು ತುರಿಕೆ ಉಂಟಾಗುತ್ತದೆ. ಇದರಿಂದ ಹೇಳಿಕೊಳ್ಳಲಾಗದ ಹಿಂಸೆ ಅನುಭವಿಸುತ್ತಿರುತ್ತೇವೆ. ಹಾಗಾದರೆ ಈ ತುರಿಕೆ ಉಂಟಾಗಲು ಕಾರಣವೇನು, ಇದರ ನಿವಾರಣೆಗಿರುವ ಮನೆಮದ್ದುಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕೆಲವೊಮ್ಮೆ ಸಮಸ್ಯೆ ಚಿಕ್ಕದಾದ್ರೂ ಅದರ ಪರಿಣಾಮ ಮಾತ್ರ ದೊಡ್ಡದಾಗಿರುತ್ತದೆ. ಅದಕ್ಕೆ ಜನನಾಂಗದ ತುರಿಕೆ ಉತ್ತಮ ಉದಾಹರಣೆ. ಜನನಾಂಗ ಅಥವಾ ಗುಪ್ತಾಂಗದ ಭಾಗದಲ್ಲಿ ತುರಿಕೆ ಉಂಟಾದ್ರೆ ತೀರಾ ಹಿಂಸೆ ಅನ್ನಿಸುತ್ತದೆ. ಪುರುಷ ಹಾಗೂ ಮಹಿಳೆ ಇಬ್ಬರಿಗೂ ಜನನಾಂಗದ ತುರಿಕೆ ಸಮಸ್ಯೆ ಎದುರಾಗುತ್ತದೆ.
ಜನನಾಂಗದ ಸುತ್ತ ತುರಿಕೆ ಅಶುದ್ಧತೆಯ ಸೂಚನೆಯಾಗಿದೆ. ಪ್ಯುಬಿಕ್ ಕೂದಲಿನಲ್ಲಿ ತುರಿಕೆ ಹಲವಾರು ಕಾರಣಗಳನ್ನು ಸೂಚಿಸುತ್ತದೆ. ಇದು ಕಾಂಟ್ಯಾಕ್ಟ್ ಡರ್ಮಟೈಟಿಸ್‌ನಿಂದ ರೇಜರ್ ಬರ್ನ್‌ವರೆಗೆ ಹಲವು ಕಾರಣಗಳಿಂದ ಉಂಟಾಗುತ್ತದೆ. ಅಲ್ಲಿ ತುರಿಕೆ ಉಂಟಾದಾಗ ವಿಪರೀತ ಹಿಂಸೆಯಾಗುತ್ತದೆ. ನಮಗೆ ತಿಳಿಯದಂತೆ ಕೈ ಆ ಭಾಗದ ಬಳಿ ಹೋಗಿ ತುರಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ಕೂಡ ಮುಜುಗರ ಎನ್ನಿಸುತ್ತದೆ. ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಈ ಸಮಸ್ಯೆ ಹೋಗಲಾಡಿಸಲು ಕೆಲವು ನೈಸರ್ಗಿಕ ಮಾರ್ಗಗಳಿವೆ.
ಗುಪ್ತಾಂಗದ ತುರಿಕೆಗೆ ಕಾರಣಗಳು
1. ರೇಜರ್ ಬರ್ನ್: ಜನನಾಂಗದ ಭಾಗದಲ್ಲಿನ ಕೂದಲು ಸ್ವಚ್ಛ ಮಾಡಲು ರೇಜರ್ ಬಳಕೆ ಮಾಡಿದ್ದರೆ ತುರಿಕೆ ಮತ್ತು ಸಣ್ಣ ಗೀರುಗಳು ಉಂಟಾಗಬಹುದು. ಇದರಿಂದ ಆ ಭಾಗದಲ್ಲಿ ಚರ್ಮವು ಕೆಂಪಾಗುತ್ತದೆ.
2. ಕಾಂಟ್ಯಾಕ್ಟ್ ಡರ್ಮಟೈಟಿಸ್: ಯಾವುದೇ ಹೊಸ ಉತ್ಪನ್ನವನ್ನು ಬಳಸಲು ಪ್ರಾರಂಭಿಸುವುದು ಸಹ ತುರಿಕೆಗೆ ಕಾರಣವಾಗಬಹುದು. ಹೊಸದಾಗಿ ಬಳಸಿದ ಸಾಬೂನುಗಳು, ಲೋಷನ್‌ಗಳು ಮತ್ತು ಇತರ ಶುಚಿಗೊಳಿಸುವ ಉತ್ಪನ್ನಗಳು ಕಾಂಟ್ಯಾಕ್ಟ್ ಡರ್ಮಟೈಟಿಸ್‌ಗೆ ಕಾರಣವಾಗಬಹುದು. ಇದರಿಂದ ಗುಪ್ತಾಂಗದ ಭಾಗದಲ್ಲಿ ದದ್ದುಗಳು ಉಂಟಾಗುತ್ತವೆ.
3. ಯೀಸ್ಟ್ ಸೋಂಕು: ಯೀಸ್ಟ್ ಗಾಳಿಯಾಡದ ತೇವಾಂಶ ಇರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಸಮಸ್ಯೆಯು ಚರ್ಮವು ಕೂಡಿರುವ ಕಡೆ, ಯೋನಿಯ ಬಳಿ ಹೆಚ್ಚು ಗೋಚರಿಸುತ್ತದೆ. ಬಿಗಿಯಾದ ಒಳ ಉಡುಪು, ಜನನಾಂಗದ ಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವುದು, ಸ್ನಾನದ ನಂತರ ಬಟ್ಟೆಯನ್ನು ಒಣಗಿಸದೇ ಧರಿಸುವುದು ಸೋಂಕುಗಳಿಗೆ ಕಾರಣವಾಗಬಹುದು.
4. ಎಕ್ಸಿಮಾ: ರೋಗಲಕ್ಷಣಗಳು ಕೆಂಪು ದದ್ದುಗಳು, ರಿಂಗ್‌ವರ್ಮ್ ರೀತಿಯ ಕಜ್ಜಿಗಳು ಮತ್ತು ಸ್ಕ್ರಾಚ್ ಮಾಡಿದಾಗ ನೀರು ಒಸರುವುದು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಮೊಣಕೈ ಮತ್ತು ಮೊಣಕಾಲುಗಳಲ್ಲಿ ಕಂಡುಬರುತ್ತದೆ. ಆದರೆ ಈ ಸಮಸ್ಯೆ ಜನನಾಂಗದ ಬಳಿಯೂ ಉಂಟಾಗಬಹುದು.
ರೋಗಲಕ್ಷಣಗಳು ಯಾವುವು?
* ಯಾವಾಗಲೂ ತುರಿಸಿಕೊಳ್ಳಬೇಕು ಎನ್ನುವ ಭಾವನೆ ಮೂಡುವುದು.
* ಚರ್ಮ ಕೆಂಪಾಗುವುದು ಮತ್ತು ಊತ
* ಕೆಂಪು ದದ್ದು
* ಕೀವು ತುಂಬಿದ ಮೊಡವೆಗಳು
* ಚರ್ಮದ ಶುಷ್ಕತೆ
* ಹೆಚ್ಚು ಅಥವಾ ಕಡಿಮೆ ಊತ
* ಸ್ಕ್ರಾಚಿಂಗ್ ನಂತರ ನೋವು
* ತುರಿಕೆ ಜೊತೆ ಸುಟ್ಟು ಹೋದಂತಹ ಅನುಭವ
ಜನನಾಂಗದ ತುರಿಕೆ ನಿವಾರಣೆಗೆ ಮನೆಮದ್ದು
1. ಅಲೋವೆರಾ ಜೆಲ್: ಅಲೋವೆರಾ ಚರ್ಮವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ತುರಿಕೆ ಮತ್ತು ದದ್ದುಗಳನ್ನು ಕಡಿಮೆ ಮಾಡುತ್ತದೆ. ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ಇದು ಬಹಳಷ್ಟು ಅಮೈನೋ ಆಮ್ಲಗಳನ್ನು ಸಹ ಒಳಗೊಂಡಿದೆ. ಹಾಗಾಗಿ ಅಲೋವೆರಾವನ್ನು ನೇರವಾಗಿ ತುರಿಕೆ ಇರುವ ಜಾಗಕ್ಕೆ ಹಚ್ಚಬಹುದು. ಕಾಲು ಗಂಟೆ ಬಿಟ್ಟು ತೊಳೆಯಿರಿ.
2. ತೆಂಗಿನೆಣ್ಣೆ: ತೆಂಗಿನೆಣ್ಣೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಚರ್ಮವನ್ನು ತೇವವಾಗಿಡುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ಸೋಂಕುಗಳನ್ನು ತಡೆಯುತ್ತದೆ. ಇದು ಚರ್ಮವನ್ನು ತುರಿಕೆಯಿಂದ ರಕ್ಷಿಸುತ್ತದೆ ಮತ್ತು ಯಾವುದೇ ದದ್ದುಗಳನ್ನು ತಡೆಯುತ್ತದೆ. ತುರಿಕೆ ಇರುವ ಜಾಗಕ್ಕೆ ಶುದ್ಧ ತೆಂಗಿನೆಣ್ಣೆಯನ್ನು ಹಚ್ಚಿ. ಕಾಲು ಗಂಟೆಯಿಂದ ಇಪ್ಪತ್ತು ನಿಮಿಷಗಳ ನಂತರ ತೊಳೆದರೆ ಸಾಕು.
3. ಗ್ರೀಕ್ ಮೊಸರು: ಗ್ರೀಕ್ ಮೊಸರು ಜನನಾಂಗದ ತುರಿಕೆ ಕಡಿಮೆ ಮಾಡುತ್ತದೆ. ಯೀಸ್ಟ್ ಸೋಂಕುಗಳಿಗೆ ಇದು ಉತ್ತಮ ಪರಿಹಾರವಾಗಿದೆ. ಮೊಸರು ಮತ್ತು ಜೇನುತುಪ್ಪದ ಮಿಶ್ರಣವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಸೋಂಕು ಬೇಗ ಕಡಿಮೆಯಾಗುತ್ತದೆ.
4. ಅಡಿಗೆ ಸೋಡಾ: ಬೇಕಿಂಗ್ ಸೋಡಾ ಚರ್ಮದ ತುರಿಕೆ ಮತ್ತು ಯೀಸ್ಟ್ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಇದು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ. ನಿಮ್ಮ ಸ್ನಾನದ ನೀರಿಗೆ ನೀವು ಕಾಲು ಕಪ್ ಅಡಿಗೆ ಸೋಡಾವನ್ನು ಸೇರಿಸಬಹುದು ಅಥವಾ ಪೇಸ್ಟ್ ತಯಾರಿಸಬಹುದು ಮತ್ತು ಸಮಸ್ಯೆ ಇರುವ ಜಾಗಕ್ಕೆ ಉಜ್ಜಬಹುದು.
5. ಐಸ್‌ಪ್ಯಾಕ್: ತುರಿಕೆ ಅನಿಯಂತ್ರಿತವಾಗಿದ್ದರೆ, ಐಸ್ ಪ್ಯಾಕ್ ಅನ್ನು ಯಾವುದಾದರೂ ಬಟ್ಟೆಯಲ್ಲಿ ಸುತ್ತಿ ಸ್ವಲ್ಪ ಹೊತ್ತು ಇಟ್ಟರೆ ಫಲಿತಾಂಶ ಸಿಗುತ್ತದೆ.
ತುರಿಕೆ ಆರಂಭವಾದ ತಕ್ಷಣ ಈ ಸಲಹೆಗಳನ್ನು ಅನುಸರಿಸಿ ನೋಡಿ. ಆದರೆ ದಿನ ಕಳೆದಂತೆ ತುರಿಕೆ ಹೆಚ್ಚಾದರೆ ಕೂಡಲೇ ಚರ್ಮ ವೈದ್ಯರನ್ನು ಸಂಪರ್ಕಿಸಿ, ಇದನ್ನು ನಿರ್ಲಕ್ಷ್ಯ ಮಾಡಬೇಡಿ.
