ಮೊಸರಿನೊಂದಿಗೆ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ, ಕರುಳಿನ ಆರೋಗ್ಯಕ್ಕೆ ಹಾನಿಯಾಗಬಹುದು ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  ಮೊಸರಿನೊಂದಿಗೆ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ, ಕರುಳಿನ ಆರೋಗ್ಯಕ್ಕೆ ಹಾನಿಯಾಗಬಹುದು ಎಚ್ಚರ

ಮೊಸರಿನೊಂದಿಗೆ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ, ಕರುಳಿನ ಆರೋಗ್ಯಕ್ಕೆ ಹಾನಿಯಾಗಬಹುದು ಎಚ್ಚರ

ಮೊಸರು ಆರೋಗ್ಯಕ್ಕೆ ಬಹಳ ಉತ್ತಮ, ಇದರಿಂದ ಕರುಳಿನ ಆರೋಗ್ಯವೂ ಸುಧಾರಿಸುತ್ತದೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಆದರೆ ಮೊಸರಿನೊಂದಿಗೆ ಈ ಕೆಲವು ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಆರೋಗ್ಯಕ್ಕೆ ಹಾನಿಯಾಗಬಹುದು ಎಚ್ಚರ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯೂ ಹದಗೆಡಬಹುದು.

ಮೊಸರಿನ ಜೊತೆ ತಿನ್ನಬಾರದಂತಹ ಆಹಾರಗಳು
ಮೊಸರಿನ ಜೊತೆ ತಿನ್ನಬಾರದಂತಹ ಆಹಾರಗಳು (PC: Canva)

ಪ್ರತಿದಿನ ಒಂದು ಕಪ್ ಮೊಸರು ತಿನ್ನುವುದರಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯುತ್ತವೆ. ನಾವೂ ತುಂಬಾ ಆರೋಗ್ಯವಾಗಿರುತ್ತೇವೆ ಎಂಬುದನ್ನು ಕೇಳಿರುತ್ತೇವೆ. ಆದಾಗ್ಯೂ, ಮೊಸರಿನ ಜೊತೆಗೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಕರುಳಿಗೆ ಹಾನಿಯನ್ನೂ ಉಂಟು ಮಾಡಬಹುದು.

ಮೊಸರು ತಿನ್ನುವುದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಇದು ತುಂಬಾ ಉತ್ತಮ. ಆದರೆ ಕೆಲವು ಆಹಾರಗಳನ್ನು ಮೊಸರಿನ ಜೊತೆಗೆ ಸೇವಿಸಿದರೆ, ಆ ಆಹಾರ ಸಂಯೋಜನೆಯು ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ. ಜೊತೆಗೆ ಕರುಳಿನ ಸಮಸ್ಯೆಗಳನ್ನೂ ಉಂಟು ಮಾಡಬಹುದು. ಹಾಗಾದರೆ ಮೊಸರಿನೊಂದಿಗೆ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ನೋಡೋಣ.

ಮೀನು

ಮೀನು ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವ ಅಭ್ಯಾಸ ಹಲವರಿಗಿದೆ. ಕೆಲವರು ಮೀನು ಸಾರಿನ ಜೊತೆ ಮೊಸರನ್ನು ಕಲೆಸಿ ಊಟ ಮಾಡುತ್ತಾರೆ. ಅಂತಹ ತಪ್ಪು ಎಂದಿಗೂ ಮಾಡಬೇಡಿ. ನೀವು ಮೀನು ಊಟ ಮಾಡುತ್ತಿದ್ದರೆ, ಮೊಸರು ತಿನ್ನದಿರುವುದು ಉತ್ತಮ. ಒಂದು ಕಪ್ ಮೊಸರು ತಿಂದ ನಂತರ ಫಿಶ್ ಫ್ರೈ ತಿನ್ನುವುದನ್ನು ಅಥವಾ ಹುರಿದ ಮೀನು ತಿಂದ ನಂತರ ಮೊಸರು ತಿನ್ನುವುದನ್ನು ತಪ್ಪಿಸಿ. ಆಯುರ್ವೇದದ ಪ್ರಕಾರ ಮೊಸರು ಮತ್ತು ಮೀನುಗಳು ವಿರುದ್ಧ ಗುಣಲಕ್ಷಣಗಳನ್ನು ಹೊಂದಿವೆ. ಇವು ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಈ ಸಂಯೋಜನೆಯು ಅಜೀರ್ಣ, ದದ್ದುಗಳು ಮತ್ತು ಅಲರ್ಜಿಯ ಅಪಾಯವನ್ನು ಹೆಚ್ಚಿಸುತ್ತದೆ.

ಮಾವು

ಮೊಸರು ಹಾಗೂ ಮಾವು ಎರಡನ್ನೂ ಒಟ್ಟಾಗಿ ಎಂದಿಗೂ ತಿನ್ನಬಾರದು. ಈ ಎರಡನ್ನು ಒಟ್ಟಿಗೆ ತಿಂದರೆ ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ಪಿಎಚ್‌ ಸಮತೋಲನಕ್ಕೆ ತೊಂದರೆಯಾಗುತ್ತದೆ. ಇದು ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ಇದರಿಂದ ಕರುಳಿನ ಆರೋಗ್ಯಕ್ಕೂ ಹಾನಿಯಾಗಬಹುದು.

ಈರುಳ್ಳಿ

ಮೊಸರು, ಮಜ್ಜಿಗೆ ಅನ್ನದ ಜೊತೆ ಈರುಳ್ಳಿ ತಿನ್ನುವವರ ಸಂಖ್ಯೆಯೂ ಹೆಚ್ಚು. ಈಗಲೂ ಹಳ್ಳಿಗಳಲ್ಲಿ ಹೀಗೆ ತಿನ್ನುವವರಿದ್ದಾರೆ. ಆದರೆ ಮೊಸರಿನ ಜೊತೆಗೆ ಈರುಳ್ಳಿ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ಈರುಳ್ಳಿ ದೇಹದ ಮೇಲೆ ಬೆಚ್ಚಗಾಗುವ ಪರಿಣಾಮವನ್ನು ಬೀರುತ್ತದೆ. ಮೊಸರು ತಂಪಾಗಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಈ ಎರಡನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಗಳು, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಎರಡನ್ನೂ ಒಟ್ಟಿಗೆ ತಿನ್ನದಿರಿ.

ಬಿಳಿಬದನೆ ಮತ್ತು ಟೊಮೆಟೊ

ದಕ್ಷಿಣ ಭಾರತದಲ್ಲಿ ಬದನೆಕಾಯಿ ಮತ್ತು ಟೊಮೆಟೊ ಕರಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಮಾಡುತ್ತಾರೆ. ಈ ಕರಿಗಳನ್ನು ಮೊಸರಿನೊಂದಿಗೆ ತಿನ್ನುವವರೂ ಬಹಳ ಮಂದಿ ಇದ್ದಾರೆ. ವಾಸ್ತವವಾಗಿ ಈ ಮೇಲೋಗರಗಳನ್ನು ಮೊಸರಿನೊಂದಿಗೆ ಒಟ್ಟಿಗೆ ತಿನ್ನಬಾರದು. ಇದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ. ಇದರಿಂದ ಅಸಿಡಿಟಿಯೂ ಉಂಟಾಗಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner