ಒಂದು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ 2 ಸೇಬುಹಣ್ಣು ತಿಂದ್ರೆ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ನೋಡಿ
ದಿನಕ್ಕೊಂದು ಸೇಬು ತಿಂದ್ರೆ ಡಾಕ್ಟರ್ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ ಎಂಬ ಮಾತಿದೆ. ಆದರೆ ನಾವು ಒಂದು ತಿಂಗಳ ಕಾಲ ಉಪಾಹಾರದ ಸಮಯದಲ್ಲಿ ದಿನಕ್ಕೆ ಎರಡು ಸೇಬು ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಸಿಗುತ್ತೆ ಅಂತ ತಿಳಿದ್ರೆ ನೀವು ಅಚ್ಚರಿ ಪಡ್ತೀರಿ. ತೂಕ ಇಳಿಕೆಯಿಂದ ಹೃದಯದ ಆರೋಗ್ಯ ಸುಧಾರಿಸುವವರೆಗೆ ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
ಸೇಬು ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ, ಇದನ್ನು ಪ್ರತಿದಿನ ತಿನ್ನುವುದರಿಂದ ವೈದ್ಯರ ಬಳಿಗೆ ಹೋಗುವ ಅವಶ್ಯವಿಲ್ಲ ಎನ್ನುವ ಮಾತನ್ನು ಕೇಳಿರುತ್ತೀರಿ. ಹಲವು ಅಧ್ಯಯನಗಳು ಈ ಮಾತನ್ನು ಸಾಬೀತು ಪಡಿಸಿವೆ. ಸೇಬುಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೇ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಸೇಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು ನಮ್ಮ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತವೆ. ಈಗ ಒಂದು ತಿಂಗಳ ಕಾಲ ಪ್ರತಿದಿನ ಬೆಳಗಿನ ಉಪಾಹಾರವಾಗಿ ಸೇಬು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಪ್ರತಿದಿನ ಬೆಳಗ್ಗೆ ಉಪಾಹಾರಕ್ಕೆ ಸೇಬು ತಿನ್ನುವುದರ ಪ್ರಯೋಜನ
ತೂಕ ಇಳಿಕೆ: ಸೇಬು ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದಂತಿರುವ ಕಾರಣ ಮತ್ತೆ ಮತ್ತೆ ತಿನ್ನಬೇಕು ಎನ್ನುವುದಿಲ್ಲ. ಇದು ಹೆಚ್ಚು ಕ್ಯಾಲೋರಿ ಸೇವನೆಯನ್ನು ತಡೆಯುತ್ತದೆ. ಆ ಮೂಲಕ ತೂಕ ನಷ್ಟಕ್ಕೆ ನೆರವಾಗುತ್ತದೆ.
ಕಡಿಮೆ ಕ್ಯಾಲೋರಿ: ಸೇಬು ಹಣ್ಣಿನಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುತ್ತದೆ. ನೀವು ಯಾವುದೇ ಚಿಂತೆಯಿಲ್ಲದೆ ನಿಮ್ಮ ದೈನಂದಿನ ಉಪಹಾರವಾಗಿ ಸೇಬುಹಣ್ಣನ್ನು ತಿನ್ನಬಹುದು.
ಚಯಾಪಚಯವನ್ನು ಹೆಚ್ಚಿಸುತ್ತದೆ: ಸೇಬು ಹಣ್ಣಿನಲ್ಲಿರುವ ಕೆಲವು ಅಂಶಗಳು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ನಿಮ್ಮ ದೇಹವು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಇದರಿಂದಲೂ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಸೇಬು ಹಣ್ಣು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ತೂಕ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮಧುಮೇಹ ಇರುವವರು ಸೇಬು ತಿಂದರೆ ತುಂಬಾ ಆರೋಗ್ಯವಾಗಿರುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ: ಸೇಬಿನಲ್ಲಿರುವ ಕರಗುವ ನಾರಿನಾಂಶ ಪೆಕ್ಟಿನ್ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಸೇಬಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೃದಯಾಘಾತ ತಡೆಗಟ್ಟುವಿಕೆ: ಸೇಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯಕ್ಕೆ ಹಾನಿ ಮಾಡುವ ಫ್ರಿ ರ‍್ಯಾಡಿಕಲ್‌ನೊಂದಿಗೆ ಹೋರಾಟ ಮಾಡುತ್ತದೆ. ಇದರಿಂದ ಹೃದಯಾಘಾತದ ಅಪಾಯವೂ ಕಡಿಮೆ.
1 ತಿಂಗಳು ಉಪಾಹಾರಕ್ಕೆ ಸೇಬು ತಿಂದ್ರೆ ಏನಾಗುತ್ತೆ?
ನಿಯಮಿತವಾಗಿ ಸೇಬು ಹಣ್ಣನ್ನು ತಿನ್ನುವುದರಿಂದ ಒಂದು ತಿಂಗಳಲ್ಲಿ ಕೆಲವು ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಳ್ಳಬಹುದು. ಸೇಬಿನಲ್ಲಿರುವ ನಾರಿನಾಂಶವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಸೇಬಿನಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ನಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ. ಸೇಬಿನಲ್ಲಿರುವ ವಿಟಮಿನ್ ಸಿ ಚರ್ಮವನ್ನು ಆರೋಗ್ಯಕರವಾಗಿ, ಹೊಳೆಯುವಂತೆ ಮಾಡುತ್ತದೆ. ಮುಂಜಾನೆ ಸೇಬು ತಿನ್ನುವುದು ತುಂಬಾ ಪ್ರಯೋಜನಕಾರಿ. ಏಕೆಂದರೆ ಸೇಬಿನ ಸಿಪ್ಪೆಯಲ್ಲಿ ನಾರಿನಾಂಶ ಅಧಿಕವಾಗಿರುತ್ತದೆ. ಆದ್ದರಿಂದ ಸಿಪ್ಪೆ ಸಹಿತ ಸೇಬು ತಿನ್ನುವುದು ಉತ್ತಮ. ಸೇಬುಹಣ್ಣುಗಳನ್ನು ಇತರ ಹಣ್ಣುಗಳೊಂದಿಗೆ ಸೇರಿಸಿ ತಿನ್ನಬಹುದು. ಇದನ್ನು ಸಲಾಡ್ ರೂಪದಲ್ಲೂ ತಿನ್ನಬಹುದು. ಆದರೆ ಸೇಬು ತಿನ್ನುವ ಮುನ್ನ ಚೆನ್ನಾಗಿ ತೊಳೆಯಬೇಕು ಎಂಬುದನ್ನು ಮರೆಯಬೇಡಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ