ಪಪ್ಪಾಯ ಹಣ್ಣಷ್ಟೇ ಅಲ್ಲ ಬೀಜದಿಂದಲೂ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ, ಇದರ ಉಪಯೋಗ ತಿಳಿದ್ರೆ ಇನ್ಮುಂದೆ ಖಂಡಿತ ನೀವು ಎಸಿಯೊಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಪಪ್ಪಾಯ ಹಣ್ಣಷ್ಟೇ ಅಲ್ಲ ಬೀಜದಿಂದಲೂ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ, ಇದರ ಉಪಯೋಗ ತಿಳಿದ್ರೆ ಇನ್ಮುಂದೆ ಖಂಡಿತ ನೀವು ಎಸಿಯೊಲ್ಲ

ಪಪ್ಪಾಯ ಹಣ್ಣಷ್ಟೇ ಅಲ್ಲ ಬೀಜದಿಂದಲೂ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ, ಇದರ ಉಪಯೋಗ ತಿಳಿದ್ರೆ ಇನ್ಮುಂದೆ ಖಂಡಿತ ನೀವು ಎಸಿಯೊಲ್ಲ

ಪಪ್ಪಾಯ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಕೆಲವರು ಪ್ರತಿನಿತ್ಯ ತಿನ್ನುತ್ತಾರೆ. ಆದರೆ ಪಪ್ಪಾಯ ತಿಂದು ಬೀಜ ಎಸೆಯುತ್ತಾರೆ. ಆದರೆ ಪಪ್ಪಾಯದಷ್ಟೇ ಬೀಜವು ಆರೋಗ್ಯಕ್ಕೆ ಒಳ್ಳೆಯದು. ಅದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ತಿಳಿದರೆ ಮುಂದಿನ ಬಾರಿಯಿಂದ ಖಂಡಿತ ನೀವು ಪಪ್ಪಾಯದ ಬೀಜ ಎಸೆಯೊಲ್ಲ.

ಪಪ್ಪಾಯ ಬೀಜದ ಆರೋಗ್ಯ ಪ್ರಯೋಜನಗಳು
ಪಪ್ಪಾಯ ಬೀಜದ ಆರೋಗ್ಯ ಪ್ರಯೋಜನಗಳು (PC: Canva)

ಪಪ್ಪಾಯದಲ್ಲಿ ವಿಟಮಿನ್, ಪೋಷಕಾಂಶಗಳು ಇದನ್ನ ಸೂಪರ್‌ಫುಡ್‌ಗಳ ಸಾಲಿಗೆ ಸೇರಿಸಿವೆ. ಪಪ್ಪಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದಲ್ಲದೆ ತೂಕ ಇಳಿಕೆಗೂ ಸಹಕಾರಿ. ಇದನ್ನು ಸೌಂದರ್ಯವರ್ದಕವಾಗಿಯೂ ಬಳಸಲಾಗುತ್ತದೆ. ಹಸಿ ಪಪ್ಪಾಯ ಕೂಡ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಪಪ್ಪಾಯ ಮಾತ್ರವಲ್ಲ, ಪಪ್ಪಾಯ ಬೀಜವೂ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನುವುದು ಹಲವರಿಗೆ ತಿಳಿದಿಲ್ಲ.

ಪಪ್ಪಾಯ ಬೀಜದ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ಖಂಡಿತ ನೀವು ಅದನ್ನು ಎಸೆಯುವುದಿಲ್ಲ. ಪಪ್ಪಾಯಿ ಬೀಜಗಳು ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್‌ಗಳು, ವಿಟಮಿನ್‌ಳು ಮತ್ತು ಸತು, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫೈಬರ್ನಂತಹ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದು ಹೊಟ್ಟೆಯ ಆರೋಗ್ಯದಿಂದ ಮುಟ್ಟಿನ ನೋವಿನವರೆಗೆ ಎಲ್ಲವನ್ನೂ ಕಡಿಮೆ ಮಾಡುತ್ತದೆ. ಪಪ್ಪಾಯಿ ಕಾಳುಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು ಮತ್ತು ಅವುಗಳನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದರ ವಿವರ ತಿಳಿಯಿರಿ.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಪಪ್ಪಾಯಿ ಬೀಜಗಳಲ್ಲಿರುವ ನಾರಿನಾಂಶ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಒಲೀಕ್ ಆಮ್ಲ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ

ಪಪ್ಪಾಯಿ ಬೀಜದಲ್ಲಿರುವ ಕ್ಯಾರೋಟಿನ್ ದೇಹದಲ್ಲಿನ ಈಸ್ಟ್ರೊಜೆನ್ ಹಾರ್ಮೋನ್ ಅನ್ನು ನಿಯಂತ್ರಿಸುತ್ತದೆ. ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಇಳಿಕೆ

ಪಪ್ಪಾಯಿ ಬೀಜಗಳು ತೂಕ ಇಳಿಕೆಗೂ ಸಹಾಯವಾಗಬಹುದು. ಪಪ್ಪಾಯಿ ಬೀಜಗಳಲ್ಲಿ ಇರುವ ನಾರಿನಾಂಶದಂತಹ ಪೋಷಕಾಂಶಗಳು ತೂಕ ನಷ್ಟಕ್ಕೆ ಪ್ರಯೋಜನಕಾರಿ. ವಾಸ್ತವವಾಗಿ, ನಾರಿನಾಂಶ ಇರುವ ಆಹಾರ ಸೇವಿಸುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಿರುತ್ತದೆ. ಇದು ವ್ಯಕ್ತಿಯು ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುವುದನ್ನು ತಡೆಯುತ್ತದೆ. ಇದಲ್ಲದೆ, ಪಪ್ಪಾಯಿ ಬೀಜಗಳಲ್ಲಿ ಇರುವ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕರುಳಿನ ಆರೋಗ್ಯ ಸುಧಾರಿಸುತ್ತದೆ

ಪಪ್ಪಾಯಿ ಬೀಜಗಳಲ್ಲಿ ಇರುವ ಕಾರ್ಪೆನ್ ಎಂಬ ಆಲ್ಕಲಾಯ್ಡ್ ಕರುಳಿನ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆದರೆ ಇದರಲ್ಲಿರುವ ಪಾಪೈನ್ ಮತ್ತು ಚೈಮೊಪಪೈನ್‌ನಂತಹ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.

ಪಪ್ಪಾಯಿ ಬೀಜಗಳ ಬಳಕೆ ಹೇಗೆ?

ನೀವು ತಯಾರಿಸುವ ಸ್ಮೂಥಿಗಳಲ್ಲಿ ಪಪ್ಪಾಯ ಬೀಜಗಳನ್ನು ಬೆರೆಸಬಹುದು. ಇದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತವೆ.

ಸಲಾಡ್‌ಗೆ ಪಪ್ಪಾಯಿ ಬೀಜ ಸೇರಿಸುವುದು ಪಪ್ಪಾಯಿ ಕಾಳುಗಳನ್ನು ರುಬ್ಬಿ ಸಲಾಡ್‌ನಲ್ಲಿ ಬೆರೆಸಿ ಸೇವಿಸುವುದರಿಂದ ಮಸಾಲೆಯುಕ್ತ ಮತ್ತು ಕುರುಕುಲಾದ ರುಚಿಯನ್ನು ನೀಡುತ್ತದೆ.

ನೀವು ಪಪ್ಪಾಯಿ ಬೀಜಗಳನ್ನು ಪುಡಿಮಾಡಿ ತಾಜಾ ಪಾನೀಯವನ್ನು ತಯಾರಿಸಲು ಬಳಸಬಹುದು. ಯಾವುದೇ ಹಣ್ಣು ಹಾಗೂ ತರಕಾರಿ ಜೊತೆ ಪಪ್ಪಾಯ ಬೀಜಗಳನ್ನು ಸೇರಿಸಿ ರುಬ್ಬಬಹುದು. ಪಪ್ಪಾಯ ಬೀಜಗಳ ಪುಡಿಯನ್ನು ನೀರಿಗೆ ಸೇರಿಸಿ, ಅದನ್ನು ಕುಡಿಯಬಹುದು.

ನೋಡಿದ್ರಲ್ಲಾ ಪಪ್ಪಾಯ ಬೀಜದಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು. ಈ ಪ್ರಯೋಜನಗಳನ್ನು ತಿಳಿದ ಮೇಲೆ ನೀವು ಖಂಡಿತ ಇದನ್ನು ಎಸೆಯುವುದಿಲ್ಲ.

Whats_app_banner