ಕನ್ನಡ ಸುದ್ದಿ  /  ಜೀವನಶೈಲಿ  /  Star Anise: ಅಡುಗೆಯ ಪರಿಮಳ ಹೆಚ್ಚಿಸೋದು ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನ ಕಾಪಾಡುತ್ತೆ ಚಕ್ರಮೊಗ್ಗು

Star Anise: ಅಡುಗೆಯ ಪರಿಮಳ ಹೆಚ್ಚಿಸೋದು ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನ ಕಾಪಾಡುತ್ತೆ ಚಕ್ರಮೊಗ್ಗು

ಬಿರಿಯಾನಿ, ಪಲಾವ್‌ ತಯಾರಿಸುವಾಗ ಬಳಸುವ ಚಕ್ರಮೊಗ್ಗು ಅಡುಗೆಯ ಪರಿಮಳ ಹೆಚ್ಚಿಸುವುದು ಮಾತ್ರವಲ್ಲ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಇದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ (ಬರಹ: ಮೇಘನಾ ಬಿ.)

ಅಡುಗೆಯ ಪರಿಮಳ ಹೆಚ್ಚಿಸಿ, ಹಲವು ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನ ಕಾಪಾಡುತ್ತೆ ಚಕ್ರಮೊಗ್ಗು
ಅಡುಗೆಯ ಪರಿಮಳ ಹೆಚ್ಚಿಸಿ, ಹಲವು ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನ ಕಾಪಾಡುತ್ತೆ ಚಕ್ರಮೊಗ್ಗು

ಭಾರತದ ಮಸಾಲಾ ಪದಾರ್ಥಗಳಲ್ಲಿ ಚಕ್ರಮೊಗ್ಗಿಗೂ ವಿಶೇಷ ಸ್ಥಾನವಿದೆ. ಪಲಾವ್, ಬಿರಿಯಾನಿಯಂತಹ ಭಕ್ಷ್ಯಗಳನ್ನು ತಯಾರಿಸಲು ಚಕ್ರಮೊಗ್ಗನ್ನು ಬಳಸಲಾಗುತ್ತದೆ. ಅಡುಗೆಗೆ ಪರಿಮಳ ನೀಡುವುದು ಮಾತ್ರ ಇದರ ಕೆಲಸ ಅಂದುಕೊಂಡಿರಾ? ಇದು ಅನೇಕ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಅದರಲ್ಲಿಯೂ ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ನಕ್ಷತ್ರಾಕಾರದ ಚಕ್ರಮೊಗ್ಗು. ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಸೋಂಕಿನ ವಿರುದ್ಧ ಹೋರಾಟ

ಚಕ್ರಮೊಗ್ಗು ಅನೆಥೋಲ್ ಮತ್ತು ಲಿನೋಲೆಯಿಕ್‌ನಂತಹ ಕೆಲವು ಫೈಟೊನ್ಯೂಟ್ರಿಯೆಂಟ್‌ಗಳನ್ನು ಒಳಗೊಂಡಿದೆ. ಈ ಫೈಟೊನ್ಯೂಟ್ರಿಯೆಂಟ್‌ಗಳು ಬ್ಯಾಕ್ಟೀರಿಯಾ, ವೈರಸ್ ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಚಕ್ರಮೊಗ್ಗು ವಿಟಮಿನ್ ಎ ಮತ್ತು ಸಿ ಯಲ್ಲಿ ಸಮೃದ್ಧವಾಗಿದ್ದು, ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾನಿಗೊಳಗಾದ ಜೀವಕೋಶಗಳು ಮತ್ತು ಅಂಗಾಂಶಗಳನ್ನು ರಿಪೇರಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಫ್ರಿ ರಾಡಿಕಲ್‌ಗಳ ಹಾನಿಯನ್ನು ತಡೆಯುತ್ತದೆ.

ಚಕ್ರಮೊಗ್ಗಿನ ಸೂಪ್

ಅನೇಕ ಹಣ್ಣುಗಳು ಮತ್ತು ತರಕಾರಿಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಚಕ್ರಮೊಗ್ಗು ರೋಗ ನಿರೋಧಕ ಶಕ್ತಿ ಜೊತೆಗೆ ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದರ ಮುಖ್ಯ ಸಂಯುಕ್ತವೆಂದರೆ ಶಿಕಿಮಿಕ್ ಆಮ್ಲ. ಇದನ್ನು ಒಸೆಲ್ಟಾಮಿವಿರ್ ಎಂಬ ಆಂಟಿವೈರಲ್ ಲಸಿಕೆ ತಯಾರಿಸಲು ಬಳಸಲಾಗುತ್ತದೆ. ನೀವು ಶೀತ, ಸ್ನಾಯು ನೋವು, ತಲೆನೋವು, ಆಯಾಸ ಅಥವಾ ಇತರ ಶೀತದಂತಹ ರೋಗಲಕ್ಷಣಗಳನ್ನು ಅನುಭವಿಸಿದಾಗ ಒಂದು ಕಪ್ ಚಕ್ರಮೊಗ್ಗಿನ ಸೂಪ್ ಅನ್ನು ಕುಡಿಯಿರಿ.

ಆಯುರ್ವೇದದಲ್ಲಿ ಬಳಕೆ

ಹೊಟ್ಟೆನೋವು, ಸೋಂಕು, ಮಲಬದ್ಧತೆ, ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಚಕ್ರಮೊಗ್ಗನ್ನು ಬಳಸಲಾಗುತ್ತದೆ. ಇದು ನಾರಿನಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ. ಹೊಟ್ಟೆಯ ಹುಣ್ಣುಗಳನ್ನು ಉಂಟುಮಾಡುವ ಪರಿಸ್ಥಿತಿಗಳನ್ನು ತೊಡೆದು ಹಾಕುತ್ತದೆ.

ಮಹಿಳೆಯರಿಗೆ ಉಪಯುಕ್ತ

ಋತುಬಂಧದ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಈಸ್ಟ್ರೊಜೆನ್ ಉತ್ಪಾದನೆ, ಅಂಡೋತ್ಪತ್ತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ಈಸ್ಟ್ರೊಜೆನ್ ಉತ್ಪಾದನೆ ಕಡಿಮೆ ಆದಾಗ ಮೂಡ್ ಸ್ವಿಂಗ್, ಆಯಾಸ, ಆತಂಕ, ಕೀಲು ಮತ್ತು ಸ್ನಾಯು ನೋವು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳನ್ನು ನಿಯಂತ್ರಿಸಲು ಚಕ್ರಮೊಗ್ಗನ್ನು ಪ್ರತಿದಿನ ಬಳಸಬಹುದು. ಇದು ಹಾರ್ಮೋನುಗಳ ಸಮತೋಲನ ಕಾಪಾಡುತ್ತದೆ.

ಮಧುಮೇಹ

ಚಕ್ರಮೊಗ್ಗು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಚಕ್ರಮೊಗ್ಗನ್ನು ನೀರಿನಲ್ಲಿ ಸೇರಿಸಿ ಪ್ರತಿನಿತ್ಯ ಕುಡಿದರೆ ಮಧುಮೇಹ ಬರದಂತೆ ತಡೆಯಬಹುದು. ಪ್ರತಿದಿನ ಚಕ್ರಮೊಗ್ಗಿನ ಟೀ ಅಥವಾ ಸೂಪ್ ಕುಡಿಯುವುದರಿಂದ ಹಾಗೂ ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ವಿಭಾಗ