30ರ ಆಸುಪಾಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ; ಭಾರತದ ಯುವಜನತೆಗಿದು ಎಚ್ಚರಿಕೆಯ ಗಂಟೆ, ಬದಲಾಗಬೇಕಿದೆ ಜೀವನಶೈಲಿ
ಇತ್ತೀಚಿನ ದಿನಗಳಲ್ಲಿ 30ರ ಆಸುಪಾಸಿನ ವಯಸ್ಸಿನವರು ಹೃದಯಾಘಾತದಿಂದ ಮರಣ ಹೊಂದುವ ಸಂಖ್ಯೆ ಹೆಚ್ಚಾಗಿದೆ. ಇದು ಕೂಡಲೇ ಉಳಿದವರು ಎಚ್ಚೆತ್ತುಕೊಳ್ಳಲು ಕಡೆಗಂಟೆಯಾಗಿದೆ. ಈ ವಯಸ್ಸಿನಲ್ಲ ಹೃದಯದ ಸಮಸ್ಯೆ ಹೆಚ್ಚಲು ಕಾರಣವೇನು, ಹೃದಯದ ಅಪಾಯ ಕಡಿಮೆ ಮಾಡಿಕೊಳ್ಳಲು ಜೀವನಶೈಲಿ ಬದಲಾವಣೆ ಹೇಗಿರಬೇಕು ಎಂಬ ವಿವರ ಇಲ್ಲಿದೆ.

ಕಳೆದ ಮೂರ್ನ್ಕಾಲು ವರ್ಷಗಳಿಂದ ಹೃದಯಾಘಾತದಿಂದ ಮರಣ ಹೊಂದುವವರ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ 25 ರಿಂದ 40 ವರ್ಷದ ಒಳಗಿನವರು ಹೆಚ್ಚು ಹೆಚ್ಚು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇತ್ತೀಚಿಗೆ ಸಾವನ್ನಪ್ಪಿದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ನಾವು ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ದೀರ್ಘಾವಧಿ ಬದುಕಲು ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಲು ಹೃದಯದ ಯೋಗಕ್ಷೇಮವನ್ನು ಕಡೆಗಣಿಸುವಂತಿಲ್ಲ. ಹೃದಯವು ನಮ್ಮ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಆಮ್ಲಜನಕದ ಪೂರೈಕೆ ಮಾಡುವುದು ಹಾಗೂ ದೇಹದ ಇತರ ಅಂಗಾಂಶಗಳಿಗೆ ವಿಟಮಿನ್ ಪೂರೈಕೆ ಮಾಡುವ ಕೆಲಸ ಮಾಡುತ್ತದೆ.
ಆದರೆ ಭಾರತದಲ್ಲಿ ಮಾನವ ದೇಹದ ಪ್ರಮುಖ ಅಂಗವಾಗಿರುವ ಹೃದಯ ಅಪಾಯದಲ್ಲಿದೆ. ಸಾಕಷ್ಟು ಮಂದಿ ಭಾರತೀಯರು ಹೃದ್ರೋಗದ ಸಮಸ್ಯೆ ಎದುರಿಸುತ್ತಿದ್ದಾರೆ. 20 ವಯಸ್ಸಿನಿಂದ 30 ವರ್ಷದವರಲ್ಲಿ ಹೃದಯದ ಸಮಸ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಗಾಬರಿ ಹುಟ್ಟಿಸುತ್ತಿದೆ. ಅಲ್ಲದೇ ಇದು ಭಾರತೀಯ ಯುವಜನಾಂಗಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಈ ವಿಚಾರವಾಗಿ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸುವ ಹಿಮಾಚಲದ ಪ್ರದೇಶದ ತಂಡಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗ ಮುಖ್ಯಸ್ಥ ಮುಕುಲ್ ಭಟ್ನಾಗರ್ ʼಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೃದ್ರೋಗದ ಸಮಸ್ಯೆ ಕಳೆದ 10 ವರ್ಷಗಳಿಂದ ಏರಿಕೆಯಾಗುತ್ತಿದೆ. ಕೆಲವು ದೇಶಗಳಲ್ಲಿ ಹೃದ್ರೋಗ, ಹೃದಯಾಘಾತವು 50 ರಿಂದ 60 ವರ್ಷ ವಯಸ್ಸಿನವರಲ್ಲಿ ಹೆಚ್ಚು ಕಾಣಿಸುತ್ತಿದ್ದರೆ, ಭಾರತದಲ್ಲಿ ಅಪಾಯಕಾರಿ ಎನ್ನುವಂತೆ 40 ವರ್ಷಕ್ಕಿಂತ ಚಿಕ್ಕವರಲ್ಲಿ ಹೃದಯಾಘಾತದ ಪ್ರಮಾಣ ಏರಿಕೆಯಾಗುತ್ತಿದೆ.
ಕೋವಿಡ್ ನಂತರ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂಬುದನ್ನು ವೈದ್ಯರು ಒಪ್ಪಿಕೊಳ್ಳುತ್ತಾರೆ. ಜೊತೆಗೆ ಹೃದಯಾಘಾತದ ಪ್ರಮಾಣವು ಕಳೆದ ಮೂರ್ನ್ಕಾಲು ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಅವರು ಹೇಳುತ್ತಾರೆ.
ಹೆಚ್ಚಿನ ಪ್ರಕರಣಗಳಲ್ಲಿ ಧೂಮಪಾನ ಮಾಡುವ ಪುರುಷರಲ್ಲಿ ಹೃದ್ರೋಗದ ಅಪಾಯ ಹೆಚ್ಚುತ್ತಿದೆ, ಆದರೆ ಮಹಿಳೆಯರಲ್ಲಿ ಋತುಬಂಧದ ನಂತರ ಹೃದಯಾಘಾತದ ಅಪಾಯ ಕಂಡುಬರುತ್ತಿದೆ. ಹೃದ್ರೋಗವು ಕೇವಲ ದೈಹಿಕ ಕಾಯಿಲೆಯಲ್ಲ, ಅನಾರೋಗ್ಯಕರ ಜೀವನಶೈಲಿಯ ಪ್ರತಿಬಿಂಬವೂ ಆಗಿದೆ ಎನ್ನುತ್ತಾರೆ ಡಾ. ಮುಕುಲ್.
ಅನಿಯಮಿತ ದಿನಚರಿ, ಜಂಕ್ ಫುಡ್‌ನ ಅತಿಯಾದ ಸೇವನೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಹೆಚ್ಚಿನ ಒತ್ತಡದ ಮಟ್ಟಗಳು ಇವೆಲ್ಲವೂ ಹೃದಯದ ಮೇಲೆ ಹೆಚ್ಚುತ್ತಿರುವ ಹೊರೆಗೆ ಕಾರಣವಾಗಿವೆ. ಈ ಕಾರಣಕ್ಕೆ ಈ ಸಮಯದಲ್ಲಿ ನಮ್ಮ ಜೀವನಶೈಲಿಯ ಮೇಲೆ ಗಮನ ಹರಿಸುವುದು ಹಾಗೂ ಜೀವನಶೈಲಿಯನ್ನು ಸುಧಾರಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ದೈಹಿಕ ಚಟುವಟಿಕೆಯ ಮೇಲೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಇದರೊಂದಿಗೆ ಜೀವನಶೈಲಿಗೆ ಸಂಬಂಧಿಸಿದ ಈ ಕೆಲವು ಅಂಶಗಳನ್ನು ತಪ್ಪದೇ ಪಾಲಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಹೃದಯದ ಕಾಳಜಿ ಮಾಡಲು ಇಲ್ಲಿದೆ ಟಿಪ್ಸ್
- ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ
- ಕರಿದ ಹಾಗೂ ಎಣ್ಣೆಯಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿ
- ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿ ಅಥವಾ 30 ನಿಮಿಷಗಳ ಕಾಲ ವಾಕ್ ಮಾಡಿ
- ನಿರಂತರ ಆರೋಗ್ಯ ತಪಾಸಣೆಗೆ ಗಮನ ಕೊಡಿ
- ಒತ್ತಡ ನಿಯಂತ್ರಿಸುವ ತಂತ್ರಗಳನ್ನು ರೂಢಿಸಿಕೊಳ್ಳಿ, ಇದರೊಂದಿಗೆ ಸರಿಯಾಗಿ ನಿದ್ದೆ ಮಾಡುವುದು ಕೂಡ ಮುಖ್ಯವಾಗುತ್ತದೆ.
ಹೃದಯದ ಆರೋಗ್ಯ ಸುಧಾರಿಸಲು ದೈಹಿಕ ಚಟುವಟಿಕೆಗೆ ಗಮನ ಕೊಡುವುದು ಅತಿ ಅಗತ್ಯ. ಇತ್ತೀಚಿನ ದಿನಗಳಲ್ಲಿ ಜಡ ಜೀವನಶೈಲಿಯು ಹೃದ್ರೋಗದ ಅಪಾಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದರೊಂದಿಗೆ ತೂಕ ನಿರ್ವಹಣೆಯ ಮೇಲೂ ಗಮನ ಹರಿಸಬೇಕು. ನಾವು ಚೆನ್ನಾಗಿದ್ದೇವೆ ನಮಗೇನೂ ಆಗಲು ಸಾಧ್ಯವಿಲ್ಲ ಎಂದು ಆರೋಗ್ಯ ತಪಾಸಣೆ ಮಾಡಿಸದೇ ಇರುವುದು ಅಪಾಯವನ್ನು ನಾವೇ ಮೈ ಮೇಲೆ ಎಳೆದುಕೊಂಡಂತೆ ನೆನಪಿರಲಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)