ಟಾಯ್ಲೆಟ್‌ನಲ್ಲಿ ನೀವು ಎದುರಿಸುವ ಈ ಸಾಮಾನ್ಯ ತೊಂದರೆಯು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು, ಈ ಸಮಸ್ಯೆಯನ್ನ ಕಡೆಗಣಿಸದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಟಾಯ್ಲೆಟ್‌ನಲ್ಲಿ ನೀವು ಎದುರಿಸುವ ಈ ಸಾಮಾನ್ಯ ತೊಂದರೆಯು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು, ಈ ಸಮಸ್ಯೆಯನ್ನ ಕಡೆಗಣಿಸದಿರಿ

ಟಾಯ್ಲೆಟ್‌ನಲ್ಲಿ ನೀವು ಎದುರಿಸುವ ಈ ಸಾಮಾನ್ಯ ತೊಂದರೆಯು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು, ಈ ಸಮಸ್ಯೆಯನ್ನ ಕಡೆಗಣಿಸದಿರಿ

ಹೃದಯಾಘಾತದ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ಹೃದಯದ ಕಾಳಜಿ ಮಾಡುವುದು ಬಹಳ ಮುಖ್ಯವಾಗಿದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಹೃದಯದ ಆರೋಗ್ಯಕ್ಕೆ ಹಾನಿ ಮಾಡಬಹುದು. ಟಾಯ್ಲೆಟ್‌ ಮಾಡುವಾಗ ಕಾಣಿಸುವ ಈ ಲಕ್ಷಣವು ಹೃದಯಾಘಾತ ಹಾಗೂ ಹೃದ್ರೋಗದ ಆರಂಭಿಕ ಲಕ್ಷಣವಾಗಿರಬಹುದು. ಈ ಸಮಸ್ಯೆಯನ್ನು ಎಂದಿಗೂ ಕಡೆಗಣಿಸಬೇಡಿ.

ಟಾಯ್ಲೆಟ್‌ನಲ್ಲಿ ಕಾಣಿಸುವ ಹೃದ್ರೋಗ, ಹೃದಯಾಘಾತದ ಆರಂಭಿಕ ಲಕ್ಷಣ
ಟಾಯ್ಲೆಟ್‌ನಲ್ಲಿ ಕಾಣಿಸುವ ಹೃದ್ರೋಗ, ಹೃದಯಾಘಾತದ ಆರಂಭಿಕ ಲಕ್ಷಣ (PC: Canva)

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ದಿನೇ ದಿನೇ ಸವಾಲಾಗುತ್ತಿದೆ. ಇತ್ತೀಚೆಗೆ ಹೃದಯಾಘಾತದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ ಇದ್ದಕ್ಕಿದ್ದಂತೆ ಹೃದಯ ಸ್ತಂಭನದಿಂದ ಜನ ಸಾವನ್ನಪ್ಪುತ್ತಿದ್ದಾರೆ. ಆದರೆ ಹೃದಯಾಘಾತ ಹಾಗೂ ಹೃದ್ರೋಗದ ಕೆಲವು ಮುನ್ಸೂಚನೆಗಳು ದೇಹದಲ್ಲಿ ವಿವಿಧ ರೂಪದಲ್ಲಿ ಕಾಣಿಸುತ್ತವೆ. ಅಂತಹ ಆರಂಭಿಕ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬಾರದು. ಅಂತಹ ಲಕ್ಷಣಗಳು ಟಾಯ್ಲೆಟ್ ಮಾಡುವಾಗಲೂ ಕಾಣಿಸುತ್ತವೆ.

ಕೆಟ್ಟ ಜೀರ್ಣಕಾರಿ ಸಮಸ್ಯೆಗಳಲ್ಲಿ ಒಂದಾದ ಮಲಬದ್ಧತೆಯು ಈಗ ಹೃದ್ರೋಗದ ಆರಂಭಿಕ ಎಚ್ಚರಿಕೆಯ ಸಂಕೇತವಾಗಿದೆ. ಮೆಲ್ಬೋರ್ನ್‌ನ ಮೊನಾಶ್ ವಿಶ್ವವಿದ್ಯಾನಿಲಯದ ಸಂಶೋಧಕರು ಮಲಬದ್ಧತೆ ಸಮಸ್ಯೆಯು ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ಅವರ ಅಧ್ಯಯನದ ಪ್ರಕಾರ ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯನ್ನು ಸಾಮಾನ್ಯ ಕಾಯಿಲೆ ಎಂದು ಕಡೆಗಣಿಸುವವರೇ ಹೆಚ್ಚು, ಏಕೆಂದರೆ ಮಲಬದ್ಧತೆ ಸಾಮಾನ್ಯದಲ್ಲಿ ಸಾಮಾನ್ಯ ಎಂಬಂತಾಗಿದೆ. ಆದರೆ ಇದು ಹೃದಯರಕ್ತನಾಳದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಸಾಂಪ್ರದಾಯಿಕ ಹೃದಯರಕ್ತನಾಳದ ಅಪಾಯಕಾರಿ ಅಂಶಗಳಾದ ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಮತ್ತು ಧೂಮಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮೊನಾಶ್ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನಗಳ ಶಾಲೆಯ ಪ್ರೊಫೆಸರ್ ಫ್ರಾನ್ಸಿನ್ ಮಾರ್ಕ್ವೆಸ್ ಹೇಳುತ್ತಾರೆ. ಆದರೆ ಈ ಅಂಶಗಳು ಮಾತ್ರ ಹೃದಯ ಸಮಸ್ಯೆಗೆ ಸಂಬಂಧಿಸಿಲ್ಲ. ಇವರು ನಡೆಸಿದ ಅಧ್ಯಯನವು ಮಲಬದ್ಧತೆಯ ಸಂಭಾವ್ಯ ಪಾತ್ರವು ಹೃದಯದ ಆರೋಗ್ಯಕ್ಕೆ ಹೆಚ್ಚುವರಿ ಅಪಾಯಕಾರಿ ಅಂಶ ಎಂಬುದನ್ನು ಕಂಡುಕೊಂಡಿದೆ, ಫಲಿತಾಂಶಗಳನ್ನು ಬಹಿರಂಗಪಡಿಸುತ್ತದೆ.

ಈ ಅಧ್ಯಯನದ ಬಗ್ಗೆ ಅಮೆರಿಕನ್ ಜರ್ನಲ್ ಆಫ್ ಸೈಕಾಲಜಿ-ಹಾರ್ಟ್ ಅಂಡ್ ಸರ್ಕ್ಯುಲೇಟರಿ ಫಿಸಿಯಾಲಜಿಯಲ್ಲಿ ಪ್ರಕಟಿಸಲಾಗಿದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಮಲಬದ್ಧತೆ ಇಲ್ಲದಿರುವವರಿಗಿಂತ ಎರಡು ಪಟ್ಟು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹೃದಯಾಘಾತ, ಪಾರ್ಶ್ವವಾಯು ಮಲಬದ್ಧತೆಗೂ ಸಂಬಂಧವೇನು?

ನಮ್ಮ ಒಟ್ಟಾರೆ ದೇಹದ ಆರೋಗ್ಯ ಮತ್ತು ಕರುಳಿನ ಆರೋಗ್ಯವು ನಮ್ಮ ಹೃದಯದ ಆರೋಗ್ಯವನ್ನು ಒಳಗೊಂಡಂತೆ ವಿವಿಧ ಆರೋಗ್ಯ ಸಮಸ್ಯೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ನೀವು ವ್ಯಾಯಾಮ ಮಾಡದಿದ್ದರೆ ಅಥವಾ ಸಮತೋಲಿತ ಊಟವನ್ನು ಸೇವಿಸದಿದ್ದರೆ ಅಥವಾ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸಿದರೆ ಇದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಿ ಮಲವಿಸರ್ಜನೆಗೆ ತೊಂದರೆಯಾಗುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. ಇದಕ್ಕೆ ಕರುಳಿನ ಚಲನೆಯ ಕೊರತೆಯ ಜೊತೆಗೆ ಜೀವನಶೈಲಿಯು ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.  

ಮಲಬದ್ಧತೆ ಸಮಸ್ಯೆ ಇರುವವರು ಮಲವಿಸರ್ಜನೆ ಮಾಡುವಾಗ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಅದು ಅವರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ರಕ್ತದೊತ್ತಡ ಏರಿಕೆಯಾಗುವುದು ಹೃದಯಕ್ಕೆ ಹಾನಿಯಾಗುವ ಅಂಶವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ‘ನಮ್ಮ ಸಂಶೋಧನೆಯು ಮಲಬದ್ಧತೆ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಹೃದಯರಕ್ತನಾಳದ ಅಪಾಯಗಳನ್ನು ಉಲ್ಬಣಗೊಳಿಸಬಹುದು ಎಂದು ಸೂಚಿಸುತ್ತದೆ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ" ಎಂದು ಪ್ರೊಫೆಸರ್ ಮಾರ್ಕ್ವೆಸ್ ಹೇಳಿದ್ದಾರೆ.

ಮಲಬದ್ಧತೆ ಮತ್ತು ಹೃದ್ರೋಗಗಳ ನಡುವೆ ಆನುವಂಶಿಕ ಸಂಬಂಧವಿದೆ ಎಂದು ಪ್ರೊಫೆಸರ್ ಮಾರ್ಕ್ವೆಸ್ ಹೇಳಿದ್ದಾರೆ. ‘ಮಲಬದ್ಧತೆ ಮತ್ತು ಹೃದಯಕ್ಕೆ ಸಂಬಂಧಿಸಿ ಪ್ರಮುಖ ಸಮಸ್ಯೆಗಳು ಅನುವಂಶಿಕ ಕಾರಣದ ಆಧಾರದ ಮೇಲೆ ಧನಾತ್ಮಕ ಸಂಬಂಧ ಹೊಂದಿದೆ. ಈ ಎರಡೂ ಕೂಡ ಅನುವಂಶಿಕವಾಗಿ ಬರುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

ಜಾಗತಿಕ ಸಮಸ್ಯೆಯಾಗಿದೆ ಮಲಬದ್ಧತೆ 

ಅಂಕಿ–ಅಂಶಗಳ ಪ್ರಕಾರ, ಪ್ರಪಂಚದಾದ್ಯಂತ 14 ಪ್ರತಿಶತಕ್ಕಿಂತ ಹೆಚ್ಚು ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ - ಜನಸಂಖ್ಯೆಯ ಗಮನಾರ್ಹ ಭಾಗವು ಅವರ ಕರುಳಿನ ಆರೋಗ್ಯದ ಕಾರಣದಿಂದಾಗಿ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.

ಮಲಬದ್ಧತೆ ತಡೆಯುವ ಕ್ರಮಗಳು 

ಮಲಬದ್ಧತೆ ನಿವಾರಿಸಲು ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆ ಮೂಲಕ ಹೃದಯದ ಆರೋಗ್ಯವನ್ನೂ ಸುಧಾರಿಸಿಕೊಳ್ಳಲು ಸಾಧ್ಯವಿದೆ. ಮಲಬದ್ಧತೆ ನಿವಾರಣೆಗೆ ಸರಳ ಉಪಾಯಗಳು ಯಾವುದಿದೆ ನೋಡಿ.

ಹೆಚ್ಚು ನಾರಿನಾಂಶ ಇರುವ ಆಹಾರ ಸೇವನೆ: ಹಣ್ಣುಗಳು, ತರಕಾರಿಗಳು, ಬೀನ್ಸ್ ಮತ್ತು ಧಾನ್ಯಗಳಂತಹ ನಾರಿನಾಂಶ ಸಮೃದ್ಧವಾಗಿರುವ ಆಹಾರಗಳು ಕರುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಆಹಾರಗಳು ದೇಹದಲ್ಲಿ ದ್ರವವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ಕೊಲೊನ್ ಮೂಲಕ ಚಲಿಸಲು ಸರಿಯಾದ ಆಕಾರ ಮತ್ತು ತೂಕವನ್ನು ನೀಡುತ್ತದೆ. ವೈದ್ಯರ ಪ್ರಕಾರ, ನಿಮ್ಮ ಆಹಾರದಲ್ಲಿ ಗೋಧಿ ಹೊಟ್ಟು, ಓಟ್ಸ್ ಅಥವಾ ಲಿನ್ಸೆಡ್ ಅನ್ನು ಸೇರಿಸುವ ಮೂಲಕ ಅಥವಾ ಸೇಬುಗಳು, ಏಪ್ರಿಕಾಟ್‌ಗಳು, ದ್ರಾಕ್ಷಿಗಳು, ರಾಸ್‌ಬೆರ್ರಿಸ್ ಮತ್ತು ಸ್ಟ್ರಾಬೆರಿಗಳಂತಹ ಸೋರ್ಬಿಟೋಲ್ ಹೊಂದಿರುವ ಹಣ್ಣುಗಳನ್ನು ತಿನ್ನುವ ಮೂಲಕ ದೇಹದಲ್ಲಿ ನಾರಿನಾಂಶ ಹಾಗೂ ದ್ರವಾಂಶ ಹೆಚ್ಚಿರುವಂತೆ ನೋಡಿಕೊಳ್ಳಬಹುದು.

ಸಾಕಷ್ಟು ನೀರು ಕುಡಿಯಿರಿ: ವೈದ್ಯರು ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರಿನ ಗುರಿಯನ್ನು ಶಿಫಾರಸು ಮಾಡುತ್ತಾರೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುವ ಕೆಫೀನ್ ಅಂಶ ಇರುವ ಪಾನೀಯ ಹಾಗೂ ಆಹಾರವನ್ನ ತ್ಯಜಿಸಬೇಕು.

ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತ ದೈಹಿಕ ಚಟುವಟಿಕೆಯು ಕರುಳಿನ ಮೂಲಕ ಮಲವನ್ನು ಚಲಿಸುವಂತೆ ಮಾಡುತ್ತದೆ. ಮಲಬದ್ಧತೆಯು ಹೃದಯದ ಆರೋಗ್ಯಕ್ಕೆ ನೇರವಾಗಿ ಸಂಬಂಧ ಹೊಂದಿರುವ ಕಾರಣ ಮಲಬದ್ಧತೆಯನ್ನು ನಿರ್ಲಕ್ಷ್ಯ ಮಾಡದಿರಿ. ಇದು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು ಎಂಬುದನ್ನ ಮರೆಯದಿರಿ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಧ್ಯಯನ ಆಧಾರಿತವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ)

Whats_app_banner