ಹೃದ್ರೋಗಗಳ ಭಯ ಬಿಡಿ, ಹೃದಯದ ಆರೋಗ್ಯ ಸುಧಾರಿಸಲು ಪ್ರತಿದಿನ 10 ನಿಮಿಷಗಳ ಕಾಲ ಮನೆಯಲ್ಲೇ ಈ ಸರಳ ವ್ಯಾಯಾಮ ಮಾಡಿ
ಹೃದ್ರೋಗಗಳು, ಹೃದಯಾಘಾತ ಹೆಚ್ಚುತ್ತಿರುವ ಈ ಸಮಯದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಾಗಿದೆ. ಆದರೆ ಪ್ರತಿದಿನ ಕೇವಲ 10 ನಿಮಿಷಗಳ ಕಾಲ ಈ ಕೆಲವು ಸರಳ ವ್ಯಾಯಾಮ ಮಾಡಿದ್ರೆ ಹೃದಯ ಬಲವಾಗಿರುತ್ತೆ.

ಬದಲಾಗುತ್ತಿರುವ ಜೀವನಶೈಲಿಯು ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತಿದೆ. ಹಲವರು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಅಸಮರ್ಪಕ ಜೀವನಶೈಲಿ ಹಾಗೂ ಆಹಾರಕ್ರಮದ ಕಾರಣದಿಂದ ಹೃದ್ರೋಗದ ಸಮಸ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ವಯಸ್ಸಿನ ಭೇದವಿಲ್ಲದೇ ಚಿಕ್ಕ ಮಕ್ಕಳಿಂದ ದೊಡ್ಡವವರೆಗೆ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಹಾರ, ಬದಲಾದ ಜೀವನಶೈಲಿಯ ಜೊತೆಗೆ ಅತಿಯಾದ ಒತ್ತಡವೂ ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ. ಆ ಕಾರಣಕ್ಕೆ ಹೃದಯವನ್ನು ಬಲವಾಗಿಟ್ಟುಕೊಳ್ಳಬೇಕು.
ಹೃದಯ ಬಲವಾಗಿರಬೇಕು ಎಂದರೆ ಹೃದಯ ರಕ್ತನಾಳಕ್ಕೆ ಹೊಂದುವಂತಹ ವ್ಯಾಯಾಮಗಳನ್ನು ಮಾಡುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸಬೇಕು, ಯೋಗ ಮಾಡಬೇಕು ಅಂತಿಲ್ಲ. ಮನೆಯಲ್ಲೇ 10 ನಿಮಿಷಗಳ ಕಾಲ ಈ ಕೆಲವು ವ್ಯಾಯಾಮಗಳನ್ನು ಮಾಡಿದರೆ ಸಾಕು.
ಸ್ಕಿಪ್ಪಿಂಗ್
ಸ್ಕಿಪ್ಪಿಂಗ್ ಅಥವಾ ಹಗ್ಗ ಜಿಗಿತ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕೇವಲ ಸ್ಕಿಪ್ಪಿಂಗ್ ರೋಪ್ ಒಂದಿದ್ದರೆ ಸಾಕು ಈ ಸರಳ ವ್ಯಾಯಾಮವನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಪ್ರತಿದಿನ ತಪ್ಪದೇ 10 ರಿಂದ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ರಕ್ತ ಹರಿವು ಸುಧಾರಿಸುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಇದು ಹೃದಯಕ್ಕೆ ಮಾತ್ರವಲ್ಲ ಫಿಟ್‌ನೆಸ್‌ಗೂ ತುಂಬಾ ಸಹಕಾರಿ.
ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು
ಇದು ಅತ್ಯಂತ ಸರಳ ಮತ್ತು ಎಲ್ಲರೂ ಮನೆಯಲ್ಲಿ ಮಾಡಬಹುದಾದ ವ್ಯಾಯಾಮ. ಸುಮ್ಮನೆ ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಮೆಟ್ಟಿಲು ಹತ್ತಿ ಇಳಿಯುವುದರಿಂದ ಸಾಕಷ್ಟು ವ್ಯಾಯಾಮವಾಗುತ್ತದೆ. ಇದಕ್ಕೆ ಯಾವುದೇ ಸಲಕರಣೆಗಳ ಅಗತ್ಯವೂ ಇರುವುದಿಲ್ಲ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಕಾಲುಗಳ ಸ್ನಾಯುಗಳು ಬಲಗೊಳ್ಳುತ್ತವೆ. ಇದು ಒಟ್ಟಾರೆ ದೈಹಿಕ ಫಿಟ್‌ನೆಸ್‌ಗೆ ಸಹಕಾರಿ.
ಡಾನ್ಸ್ ಮಾಡುವುದು
ಡಾನ್ಸ್ ಮನರಂಜನೆಯ ಭಾಗ ಮಾತ್ರವಲ್ಲ, ಇದು ಫಿಟ್‌ನೆಸ್‌ಗೆ ಹೇಳಿ ಮಾಡಿಸಿದ್ದು. ವ್ಯಾಯಾಮ ಮಾಡುವುದು ಕಷ್ಟ ಎನ್ನಿಸುವವರು ಜಂಪಿಂಗ್, ಮೆಟ್ಟಿಲು ಹತ್ತುವುದು ಸಾಧ್ಯ ಇಲ್ಲ ಎನ್ನುವವರು ರೂಮ್‌ನಲ್ಲೇ ತಮಗೆ ಇಷ್ಟವಾದ ಮ್ಯೂಸಿಕ್ ಹಾಕಿಕೊಂಡು ತಮಗೆ ಇಷ್ಟಬಂದ ರೀತಿಯಲ್ಲಿ ಡಾನ್ಸ್ ಮಾಡಬಹುದು. ಪ್ರತಿದಿನ ಕನಿಷ್ಠ 20 ನಿಮಿಷದಿಂದ ಅರ್ಧ ಗಂಟೆಗಳ ಕಾಲ ಡಾನ್ಸ್ ಮಾಡಬೇಕು.
ಜಂಪಿಂಗ್ ಜಾಕ್
ಪ್ರತಿಯೊಬ್ಬರೂ ತಮ್ಮ ಬಾಲ್ಯದಲ್ಲಿ ಈ ಮೋಜಿನ ವ್ಯಾಯಾಮ ಮಾಡಿರಬೇಕು. ಶಾಲೆಯಲ್ಲಿ ಪಿಟಿ ಸಮಯದಲ್ಲಿ ಮಾಡುವ ಈ ಸರಳ ವ್ಯಾಯಾಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಈ ವ್ಯಾಯಾಮ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮನೆಯಲ್ಲಿ ಸ್ವಲ್ಪ ಖಾಲಿ ಜಾಗ ಇದ್ದರೆ ಸಾಕು ಸರಳವಾಗಿ ಈ ವ್ಯಾಯಾಮ ಮಾಡಬಹುದು. ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ಜಿಗಿಯಲು ಆರಂಭಿಸಿ. ಇದನ್ನು 10 ನಿಮಿಷಗಳ ಕಾಲ ಮಾಡಿದರೆ ಹೃದಯದ ಆರೋಗ್ಯ ಚೆನ್ನಾಗಿ ಸುಧಾರಿಸುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ