ನೀವು ಸರಿಯಾದ ಸಮಯಕ್ಕೆ ಮಲಗ್ತಾ ಇಲ್ವಾ, ಹೊತ್ತಲ್ಲದ ಹೊತ್ತಲ್ಲಿ ಮಲಗೋದು ಹೃದಯಾಘಾತ, ಪಾರ್ಶ್ವವಾಯುವಿನ ಅಪಾಯ ಹೆಚ್ಚಿಸುತ್ತೆ ತಿಳಿದಿರಲಿ
ಸಮಯವಲ್ಲದ ಸಮಯದಲ್ಲಿ ಮಲಗುವುದು, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೇ ಇರುವುದು ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಸಾಬೀತುಪಡಿಸಿದೆ. ನಿದ್ದೆಗೂ ಹೃದಯಾಘಾತಕ್ಕೂ ಏನು ಸಂಬಂಧ, ಸರಿಯಾದ ನಿದ್ದೆ ಅಂದರೆ ಯಾವ ಸಮಯದಲ್ಲಿ ಮಾಡಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹಾಗೂ ಹೃದಯಾಘಾತ ಪ್ರಪಂಚದಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿದೆ. ಸುಳಿವೇ ನೀಡಿದ ಹೃದಯಾಘಾತವು ಜೀವವನ್ನು ಬಲಿ ಪಡೆಯುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಸರಿಯಾದ ಸಮಯದಲ್ಲಿ ನಿದ್ದೆ ಮಾಡದೇ ಇರುವುದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂಬ ಅಂಶವನ್ನು ಸಾಬೀತು ಪಡಿಸಿದೆ.
ಸಮಯವಲ್ಲದ ಸಮಯದಲ್ಲಿ ಮಲಗುವುದು ಹೃದಯಾಘಾತದೊಂದಿಗೆ ಪಾರ್ಶ್ವವಾಯುವಿನ ಅಪಾಯವನ್ನೂ ಹೆಚ್ಚಿಸಬಹುದು. ತಜ್ಞರ ಪ್ರಕಾರ ನೀವು ಪ್ರತಿದಿನ 8 ರಿಂದ 9 ಗಂಟೆ ಕಾಲ ನಿದ್ದೆ ಮಾಡಿದರೂ ಸರಿಯಾದ ಸಮಯದಲ್ಲಿ ಮಲಗದೇ ಇರುವುದು ಐದನೇ ಒಂದು ಭಾಗದಷ್ಟು ಮಾರಣಾಂತಿಕ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.
ಕೆನಡಾದ ಒಟ್ಟಾವಾ ವಿಶ್ವವಿದ್ಯಾಲಯದ ಸಂಶೋಧಕರು ಒಟ್ಟು 70 ಸಾವಿರ ಮಂದಿ ಮೇಲೆ ಅಧ್ಯಯನ ಮಾಡಿದ್ದಾರೆ. ಅದರ ಪ್ರಕಾರ ಅವರು ನಿದ್ದೆಯ ಕ್ರಮ ಸರಿಯಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಹೃದಯರಕ್ತನಾಳದ ಸಮಸ್ಯೆ ಬಾರದಂತೆ ತಡೆಯಲು ದಿನದಲ್ಲಿ ಇಂತಿಷ್ಟು ಗಂಟೆ ನಿದ್ದೆ ಮಾಡುವಷ್ಟೇ ಸರಿಯಾದ ಸಮಯದಲ್ಲಿ ಮಲಗುವುದು ಕೂಡ ಮುಖ್ಯವಾಗುತ್ತದೆ ಎಂದು ಒಟ್ಟಾವಾ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ಡಾ. ಜೀನ್-ಫಿಲಿಪ್ ಚಾಪುಟ್ ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ. ಅಸಮರ್ಪಕ ಸಮಯದಲ್ಲಿ ನಿದ್ದೆ ಮಾಡುವುದು ಹೃದಯ ರಕ್ತನಾಳ ಹಾಗೂ ರಕ್ತದ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಈ ಅಧ್ಯಯನವು ಕಂಡುಕೊಂಡಿದೆ.
ಯುಕೆ ಬಯೋಬ್ಯಾಂಕ್ ನಡೆಸಿದ ಮತ್ತೊಂದು ಅಧ್ಯಯನವು 70,000 ಕ್ಕೂ ಹೆಚ್ಚು ಜನರ ಡೇಟಾವನ್ನು ಸಂಗ್ರಹಿಸಿ ಪರಿಶೀಲನೆ ಮಾಡಿದ್ದಾಗಿ ಹೇಳಿಕೊಂಡಿದೆ. ಅಸಮರ್ಪಕ ನಿದ್ದೆಯು ನಮ್ಮ ಜೀವನಶೈಲಿಯ ಆಯ್ಕೆಗಳ ಮೇಲೆ ಪರಿಣಾಮ ಬೀರುವ ಮೂಲಕ ಹೃದಯದ ಆರೋಗ್ಯದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಅಧ್ಯಯನಕಾರರು ತೀರ್ಮಾನಿಸಿದ್ದಾರೆ.
ಅಧ್ಯಯನದಲ್ಲಿ ಭಾಗವಹಿಸಿದ 40-79 ವರ್ಷ ವಯಸ್ಸಿನ ಜನರು ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಮಹತ್ವದ ಹೃದಯ ಸಮಸ್ಯೆಗಳ ಇತಿಹಾಸವನ್ನು ಹೊಂದಿಲ್ಲ ಮತ್ತು ಅವರ ನಿದ್ರೆಯ ಮಾದರಿಗಳನ್ನು ದಾಖಲಿಸಲು ಏಳು ದಿನಗಳವರೆಗೆ ಚಟುವಟಿಕೆ ಟ್ರ್ಯಾಕರ್ ಅನ್ನು ಧರಿಸಿದ ನಂತರ ಮೇಲ್ವಿಚಾರಣೆ ಮಾಡಲಾಗಿತ್ತು. ಅನಿಯಮಿತ ನಿದ್ರೆಯ ಮಾದರಿಯನ್ನು ಹೊಂದಿರುವವರು ಹೃದಯಾಘಾತದ ಅಪಾಯವನ್ನು 26 ಪ್ರತಿಶತದಷ್ಟು ಹೊಂದಿರುತ್ತಾರೆ. ಸುಮಾರು 8 ವರ್ಷಗಳ ಕಾಲ ನಡೆಸಿದ ಈ ಅಧ್ಯಯನದಲ್ಲಿ ಕಂಡು ಬಂದ ವಿಚಾರವೆಂದರೆ ಕಾಫಿ ಕುಡಿಯುವುದನ್ನು ನಿಯಂತ್ರಿಸುವುದು, ನಿರಂತರ ವ್ಯಾಯಾಮ ಮಾಡುವುದು ಈ ಎಲ್ಲಾ ಉತ್ತಮ ಜೀವನಶೈಲಿಯನ್ನು ಅನುಸರಿಸಿದವರು ಕೂಡ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಿದ್ದಾರೆ ಎಂಬ ಅಂಶ ಬಯಲಾಗಿದೆ.
ಒಬ್ಬ ಮನುಷ್ಯನಿಗೆ ದಿನದಲ್ಲಿ 7 ರಿಂದ 8ಗಂಟೆಗಳ ಕಾಲ ನಿದ್ದೆ ಬೇಕು. ಇದರೊಂದಿಗೆ ರಾತ್ರಿ ಹೊತ್ತಿನಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಚೆನ್ನಾಗಿ ನಿದ್ದೆ ಮಾಡುವುದು ಕೂಡ ಮುಖ್ಯವಾಗುತ್ತದೆ.