ಹೃದಯದ ಕಾಯಿಲೆಗಳ ಅಪಾಯ ದೂರಾಗಬೇಕು ಅಂದ್ರೆ ಪ್ರತಿದಿನ ಈ 10 ಕೆಲಸ ಮಾಡ್ಬೇಕು; ಇಲ್ಲಿದೆ ಹೃದ್ರೋಗ ತಜ್ಞರ ಸಲಹೆ
ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಸಮಸ್ಯೆ ದಿನೇದಿನೇ ಹೆಚ್ಚಾಗ್ತಿದೆ. ನಿಮಗೆ ಹೃದಯದ ಕಾಯಿಲೆಯ ಅಪಾಯ ಎದುರಾಗಬಹುದು ಎನ್ನುವ ಆತಂಕ ಇದ್ದರೆ ಪ್ರತಿದಿನ ಈ ಕೆಲವು ಸರಳ ಅಭ್ಯಾಸಗಳನ್ನು ಪಾಲಿಸಿ. ಹೃದ್ರೋಗ ತಜ್ಞರು ನೀಡಿರುವ ಸಿಂಪಲ್ ಸಲಹೆ ಇಲ್ಲಿದೆ.

ಪ್ರಪಂಚದಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅಗ್ರಸ್ಥಾನವಿದೆ. ಹೃದ್ರೋಗ ಸಂಬಂಧಿತ ಸಮಸ್ಯೆಗಳಿಂದ ಪ್ರತಿ ವರ್ಷ ಅಂದಾಜು 17 ಕೋಟಿಗೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಆ ಕಾರಣಕ್ಕೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ದೈನಂದಿನ ದಿನಚರಿಯಲ್ಲಿ ಕೆಲವೊಂದು ಅಭ್ಯಾಸವನ್ನು ತಪ್ಪದೇ ರೂಢಿಸಿಕೊಳ್ಳಬೇಕಿದೆ.
ಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಸಂಜಯ್ ಭೋಜರಾಜ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೊವೊಂದರಲ್ಲಿ ಹೃದ್ರೋಗದ ಅಪಾಯ ಕಡಿಮೆಯಾಗಲು ಪ್ರತಿದಿನ ಅನುಸರಿಸಬೇಕಾದ 10 ಸಲಹೆಗಳನ್ನು ಹಂಚಿಕೊಂಡಿದ್ದಾರೆ. ‘ಹೃದ್ರಯದ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ಜನರು ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದು ಹಾಗೂ ರೆಡ್ ಮೀಟ್ ಸೇವನೆ ಕಡಿಮೆ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ಆದರೆ ಅದಕ್ಕೂ ಮೀರಿ ನಾನು ನಮ್ಮ ದೈನಂದಿನ ಕೆಲವು ವಿಚಾರಗಳ ಮೇಲೆ ಗಮನ ಹರಿಸಬೇಕಾಗಿದೆ. ನಮ್ಮ ದೈನಂದಿನ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಹೃದ್ರೋಗ ತಡೆಯಲು ಬಹಳ ಅವಶ್ಯವಾಗಿದೆ‘ ಎಂದು ಅವರ ಸಲಹೆ ನೀಡುತ್ತಾರೆ.
ಹೃದಯದ ಸಮಸ್ಯೆಗಳ ಅಪಾಯ ಕಡಿಮೆ ಮಾಡುವ 10 ಅಭ್ಯಾಸಗಳು
ಡಾ. ಸಂಜಯ್ ಅವರ ಪ್ರಕಾರ ನಾವು ನಮ್ಮ ದೈನಂದಿನ ಜೀವನದಲ್ಲಿ ಈ 10 ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
1. 7000 ರಿಂದ 10000 ಹೆಜ್ಜೆ ನಡೆಯುವುದು: ಪ್ರತಿದಿನ ತಪ್ಪದೇ 7000 ರಿಂದ 10000 ಹೆಜ್ಜೆ ನಡೆಯಬೇಕು. ಇದರಿಂದ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬಹುದು ಮತ್ತು ಇನ್ಸುಲಿನ್ ಸಂವೇದನೆಯ ಸುಧಾರಣೆ ಸಾಧ್ಯ.
2. ಪ್ರೊಟೀನ್‌ನೊಂದಿಗೆ ದಿನ ಆರಂಭ ಮಾಡಿ: ಪ್ರತಿದಿನ ಬೆಳಿಗ್ಗೆ ಪ್ರೊಟೀನ್‌ನೊಂದಿಗೆ ದಿನ ಆರಂಭ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನಗೊಳಿಸಲು ಸಾಧ್ಯವಿದೆ. ಇದು ಸ್ನಾಯುಗಳನ್ನು ಬೆಂಬಲಿಸಿ ದೀರ್ಘಾಯಸ್ಸಿಗೆ ಸಹಾಯ ಮಾಡುತ್ತದೆ.
3. ಪ್ರತಿದಿನ ಮೆಗ್ನಿಶಿಯಂ, ಕೆ2 ಗೆ ಆದ್ಯತೆ ನೀಡುವುದು: ಮನುಷ್ಯ ದೇಹಕ್ಕೆ ಅಗತ್ಯವಿರುವ ಈ ಪೋಷಕಾಂಶಗಳು ಅಪಧಮನಿಗಳನ್ನು ರಕ್ಷಿಸುತ್ತವೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
4. ಮಲಗಿ ಎದ್ದ ನಂತರ 30 ನಿಮಿಷದಿಂದ 1 ಗಂಟೆ ಪರದೆಯಿಂದ ದೂರವಿರಿ: ಮಲಗಿ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ಒಳ್ಳೆಯದಲ್ಲ. ಕನಿಷ್ಠ ಅರ್ಧ ಗಂಟೆ ಅಥವಾ 1 ಗಂಟೆ ಬಳಿಕ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ನೋಡಿ. ಇದು ಕಾರ್ಟಿಸೋಲ್ ಮಟ್ಟದ ಏರಿಕೆಯನ್ನು ತಡೆಯುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ.
5. ಬೆಳಗಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ: ಬೆಳಗಿನ ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಸಿರ್ಕಾಡಿಯನ್ ಲಯವನ್ನು ಸ್ಥಿರಗೊಳಿಸುತ್ತದೆ. ಇದರಿಂದ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ.
6. ಕಾಫಿ ಬದಲು ಒಂದು ಲೋಟ ಫಿಲ್ಟರ್ ನೀರು ಕುಡಿಯಿರಿ: ಬೆಳಿಗ್ಗೆ ಎದ್ದಾಕ್ಷಣ ಒಂದು ಗ್ಲಾಸ್ ನೀರು ಕುಡಿಯುವುದು ರಕ್ತದೊತ್ತಡ ಮತ್ತು ಶಕ್ತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
7. ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ: ಅತಿಯಾದ ಸಕ್ಕರೆ ಹಾಗೂ ಬೀಜಗಳಿಂದ ತಯಾರಿಸಿದ ಎಣ್ಣೆಯು ಉರಿಯೂತ ಮತ್ತು ಅಪಧಮನಿಯ ಹಾನಿಯನ್ನು ಉತ್ತೇಜಿಸುತ್ತದೆ.
8. ವಾರಕ್ಕೊಮ್ಮೆ ಬಿಪಿ ಹಾಗೂ ಎಚ್‌ಆರ್‌ವಿ ಮಾನಿಟರ್ ಮಾಡಿ: ಎಚ್‌ಆರ್‌ವಿ ನರಮಂಡಲದ ಒತ್ತಡವನ್ನು ತೋರಿಸುತ್ತದೆ. BP ನಿಮ್ಮ ದೈನಂದಿನ ಹೃದಯರಕ್ತನಾಳದ ತಪಾಸಣೆಯಾಗಿದೆ.
9. ನಡೆಯುವಾಗ ಮೂಗಿನಿಂದ ಉಸಿರಾಡುವುದನ್ನು ಅಭ್ಯಾಸ ಮಾಡಿ: ಈ ರೀತಿ ಮಾಡುವುದರಿಂದ ಪ್ಯಾರಾಸಿಂಪಥೆಟಿಕ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಬೆಂಬಲಿಸುತ್ತದೆ.
10. ವಾರಕ್ಕೆ 30 ವಿವಿಧ ಸಸ್ಯಾಹಾರಗಳನ್ನು ಸೇವಿಸಿ: ಇದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಉರಿಯೂತ ನಿವಾರಣೆಯಾಗುತ್ತದೆ. ಹೃದಯ ಆರೋಗ್ಯ ಸುಧಾರಿಸುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ