ಬೆಳಿಗ್ಗೆ ಎದ್ದಾಕ್ಷಣ ಈ ಲಕ್ಷಣಗಳು ಕಾಣಿಸುತ್ತಿದ್ಯಾ? ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರಬಹುದು ಗಮನಿಸಿ
ನಮ್ಮ ದೇಹದಲ್ಲಾಗುವ ಕೆಲವು ಬದಲಾವಣೆಗಳೇ ಮುಂದಿನ ಅಪಾಯಗಳ ಮುನ್ಸೂಚನೆ ನೀಡುತ್ತಿರುತ್ತದೆ. ಎಷ್ಟೋ ಬಾರಿ ಅವುಗಳನ್ನು ಸರಿಯಾದ ಸಮಯದಲ್ಲಿ ಗುರುತಿಸುವಲ್ಲಿ ನಾವು ಎಡವಿ ಬಿಡುತ್ತೇವೆ. ಅದೇ ರೀತಿ ಅಧಿಕ ರಕ್ತದೊತ್ತಡ ಸಮಸ್ಯೆ ಕೂಡ ನಿಮಗೆ ಸಾಕಷ್ಟು ಆರಂಭಿಕ ಲಕ್ಷಣಗಳನ್ನು ತೋರಿಸುತ್ತದೆ. ಅವುಗಳನ್ನು ಪತ್ತೆ ಹಚ್ಚುವುದು ಹೇಗೆ ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಅಧಿಕ ರಕ್ತದೊತ್ತಡ ಎನ್ನುವುದು ಒಂದು ರೀತಿಯ ಸೈಲೆಂಟ್ ಕಿಲ್ಲರ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸರಿಯಾದ ಸಮಯದಲ್ಲಿ ನೀವು ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡಿಕೊಂಡಿಲ್ಲ ಎಂದಾದಲ್ಲಿ ನಿಮಗೆ ಹೃದಯ ವೈಫಲ್ಯದ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಕೇವಲ ಹೃದ್ರೋಗ ಮಾತ್ರವಲ್ಲದೇ ಕಿಡ್ನಿ ವೈಫಲ್ಯ, ಪಾರ್ಶ್ವವಾಯು ಸೇರಿದಂತೆ ಇನ್ನೂ ಹತ್ತು ಹಲವಾರು ಕಾಯಿಲೆಗಳನ್ನು ಅಧಿಕ ರಕ್ತದೊತ್ತಡ ಹೊತ್ತು ತರುತ್ತದೆ. ಅಧಿಕ ರಕ್ತದೊತ್ತಡ ಆರಂಭಗೊಳ್ಳುವ ಸಂದರ್ಭದಲ್ಲಿ ಅದು ನಿಮಗೆ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ನಿಮಗೆ ಬೆಳಗ್ಗಿನ ಜಾವ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ.
ಅತೀವ ತಲೆನೋವು
ಅಧಿಕ ರಕ್ತದೊತ್ತಡ ಆರಂಭಗೊಂಡಿದೆ ಎಂದು ತಿಳಿಸುವ ಸರ್ವೇ ಸಾಮಾನ್ಯ ಲಕ್ಷಣಗಳಲ್ಲಿ ಇದು ಒಂದು. ಬೆಳಗ್ಗಿನ ಜಾವವೇ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಎದ್ದು ನೀವು ಯಾವುದೇ ದೈಹಿಕ ಚಟುವಟಿಕೆಗಳಿಗೆ ಮುಂದಾಗುತ್ತಿದ್ದಂತೆಯೇ ನಿಮಗೆ ತಲೆನೋವು ಹಾಗೂ ತಲೆತಿರುಗುವಿಕೆ ಶುರುವಾಗುತ್ತದೆ. ಅಲ್ಲದೇ ದೃಷ್ಟಿ ಕೂಡ ಮಂದವಾಗುತ್ತದೆ. ನಿಮಗೂ ಬೆಳಗ್ಗಿನ ಜಾವ ಈ ಲಕ್ಷಣಗಳು ಕಾಣಿಸಿಕೊಂಡರೆ ಖಂಡಿತ ವೈದ್ಯರನ್ನು ಭೇಟಿ ಮಾಡಿ.
ಆಯಾಸ
ರಾತ್ರಿ ಉತ್ತಮವಾಗಿ ನಿದ್ರೆ ಮಾಡಿರುತ್ತೀರಿ. ಆದರೂ ಬೆಳಗ್ಗೆ ಎದ್ದ ಕೂಡಲೇ ಆಯಾಸ ಅಥವಾ ದಣಿವಾದಂತಹ ಭಾವನೆ ಉಂಟಾಗುತ್ತದೆ. ಇದು ಕೂಡ ಅಧಿಕ ರಕ್ತದೊತ್ತಡದ ಸಂಕೇತವಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆ ಆರಂಭಗೊಂಡಾಗ ಹೃದಯಕ್ಕೆ ರಕ್ತ ಪಂಪ್ ಮಾಡುವುದು ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ .
ದೃಷ್ಠಿ ಮಂಜಾಗುವುದು
ರಕ್ತದೊತ್ತಡದ ಸಂಭಾವ್ಯ ಲಕ್ಷಣಗಳ ಪೈಕಿ ಇದೂ ಒಂದಾಗಿದೆ. ಅಧಿಕ ರಕ್ತದೊತ್ತಡವು ಕಣ್ಣಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ದೃಷ್ಠಿಗೆ ಅಡ್ಡಿಪಡಿಸುತ್ತದೆ. ದೃಷ್ಠಿಯಲ್ಲಿ ಆದ ಹಠಾತ್ ಬದಲಾವಣೆಯು ಅಧಿಕ ರಕ್ತದೊತ್ತಡದ ಸಂಕೇತ ಆಗಿರಬಹುದು.
ಎದೆ ನೋವು ಕಾಣಿಸಿಕೊಳ್ಳುವುದು
ಬೆಳಗ್ಗೆ ಎದ್ದ ಕೂಡಲೇ ಎದೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ಕೂಡ ಅಧಿಕ ರಕ್ತದೊತ್ತಡದ ಆರಂಭಿಕ ಲಕ್ಷಣವಾಗಿದೆ. ಹೃದಯಕ್ಕೆ ರಕ್ತ ಪಂಪ್ ಮಾಡುವುದು ಕಷ್ಟವೆನಿಸಿದಾಗ ಈ ರೀತಿ ಎದೆ ನೋವು ಅಥವಾ ಎದೆ ಹಿಡಿದುಕೊಂಡಂತೆ ಭಾಸವಾಗುತ್ತದೆ.
ಉಸಿರಾಡಲು ತೊಂದರೆ
ಬೆಳಿಗ್ಗೆ ಎದ್ದು ಯಾವುದೋ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಕೂಡಲೇ ಉಸಿರಾಡಲು ಗಾಳಿಯೇ ಸಾಲುತ್ತಿಲ್ಲ ಎಂಬ ಭಾವನೆ ಮೂಡಬಹುದು. ಈ ಸ್ಥಿತಿಯು ಭವಿಷ್ಯದಲ್ಲಿ ನಿಮ್ಮ ಶ್ವಾಸಕೋಶಗಳಿಗೂ ಹಾನಿಯುಂಟು ಮಾಡಬಹುದು. ಹೀಗಾಗಿ ಇಂಥಾ ಲಕ್ಷಣಗಳು ನಿಮಗೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಅಧಿಕ ರಕ್ತದೊತ್ತಡ ಪರೀಕ್ಷೆಗೆ ಒಳಗಾಗುವುದು ಉತ್ತಮ.
ವಿಭಾಗ