ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದೀರಾ, ಹಾಗಾದರೆ ಈ 5 ಪದಾರ್ಥಗಳನ್ನ ತಪ್ಪಿಯೂ ತಿನ್ಬೇಡಿ, ಹೃದಯಕ್ಕೆ ಅಪಾಯ
ಹೈ ಕೊಲೆಸ್ಟ್ರಾಲ್ ಇತ್ತೀಚಿನ ಯವಜನತೆಯನ್ನು ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆ. ಇದರಿಂದಾಗಿ ಹೃದ್ರೋಗ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಅಧಿಕ ಕೊಲೆಸ್ಟ್ರಾಲ್ ಇರುವವರು ಎಂದಿಗೂ ತಿನ್ನಬಾರದಂತಹ 5 ಪದಾರ್ಥಗಳ ಬಗ್ಗೆ ಇಲ್ಲಿದೆ ಮಾಹಿತಿ, ಮಾತ್ರವಲ್ಲ ಇವರು ಹೆಚ್ಚು ಯಾವ ಆಹಾರ ತಿನ್ನಬೇಕು ಎಂಬ ವಿವರವೂ ಇಲ್ಲಿದೆ.
ಕೊಲೆಸ್ಟ್ರಾಲ್ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಆಹಾರಕ್ರಮ ಮತ್ತು ಜೀವನ ಶೈಲಿ. ಇತ್ತೀಚೆಗೆ ಅಧ್ಯಯನದ ವರದಿಯೊಂದು ಸಹ ಇದನ್ನೇ ಬಹಿರಂಗಪಡಿಸಿದೆ. ಇದರ ಪ್ರಕಾರ ಭಾರತದಲ್ಲಿ ಶೇ 25 ರಿಂದ 30 ರಷ್ಟು ಮಂದಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಪೈಕಿ ಶೇ 15-20ರಷ್ಟು ಹಳ್ಳಿಗಳ ಜನರಿರುವುದು ಅಚ್ಚರಿ ಸಂಗತಿ. ಈ ವರದಿಯು ಅಂಕಿ-ಅಂಶವನ್ನು ಬಿಡುಗಡೆ ಮಾಡಿರುವುದರ ಜೊತೆಗೆ ಭಯಾನಕ ಎಂದೂ ಉಲ್ಲೇಖಿಸಿ, ಸಮಸ್ಯೆಯ ತೀವ್ರತೆಯ ಬಗ್ಗೆ ಪ್ರಸ್ತುತಪಡಿಸಿದೆ. ಅಜಾಗರೂಕತೆ ಮತ್ತು ಆಹಾರ-ಪಾನೀಯ ಸೇವಿಸಲು ತೋರುತ್ತಿರುವ ಅಸಡ್ಡೆ ಇದಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ ಅಧಿಕ ಕೊಲೆಸ್ಟ್ರಾಲ್ ಇರುವವರು ಯಾವ ಆಹಾರ ತಿನ್ನಲೇಬಾರದು, ಯಾವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಬೇಕು ಎನ್ನುವ ಕುರಿತು ಒಂದಿಷ್ಟು ಸಲಹೆ ನೀಡುವ ಪ್ರಯತ್ನ ನಾವು ಮಾಡಿದ್ದೇವೆ. ಇದನ್ನು ಅನುಸರಿಸಿದರೆ ಮುಂದಾಗುವ ಅಪಾಯದಿಂದ ದೇಹಾರೋಗ್ಯ ರಕ್ಷಿಸಿಕೊಳ್ಳಬಹುದು. ಇಲ್ಲಿದೆ ವಿವರ.
ಅಧಿಕ ಕೊಲೆಸ್ಟ್ರಾಲ್ ಇರುವವರು ತಿನ್ನಬಾರದಂತಹ ಆಹಾರಗಳು
1. ಫಾಸ್ಟ್‌ಫುಡ್: ಇಂದಿನ ಜನರು ಕಾಲನ ಹಿಂದೆ ಓಡುವವರು. ಸಮಯದ ಅಭಾವದಿಂದ ಫಾಸ್ಟ್‌ಫುಡ್ ಸೇವನೆಗೆ ಮಾರು ಹೋಗಿದ್ದಾರೆ. ಬರ್ಗರ್, ಪಿಜ್ಜಾ, ಫ್ರೆಂಚ್ ಫ್ರೈಸ್ ಮತ್ತು ನೂಡಲ್ಸ್‌ನಂತಹ ಫಾಸ್ಟ್‌ಫುಡ್‌ಗಳು ಹಲವರ ನಿತ್ಯದ ಆಹಾರವಾಗುತ್ತಿವೆ. ಆದರೆ ಇವುಗಳಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಂಶ ಹೆಚ್ಚಿದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಇವುಗಳನ್ನು ನಿಯಮಿತ ಆಹಾರವಾಗಿ ಸೇವಿಸುತ್ತಿದ್ದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಎದುರಿಸಬೇಕಾಗಬಹುದು.
2. ಕರಿದ ಆಹಾರಗಳು: ಸಮೋಸಾಗಳು, ಪಕೋಡಗಳು, ಕಚೋರಿಗಳು ಮತ್ತು ಆಲೂಗಡ್ಡೆ ಚಿಪ್ಸ್‌ನಂತಹ ಕರಿದ ಆಹಾರಗಳು ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿರುತ್ತವೆ. ಇವುಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಸಹ ಅಪಾಯಕ್ಕೆ ತಳ್ಳುತ್ತವೆ.
3. ಡೇರಿ ಉತ್ಪನ್ನಗಳು: ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವಲ್ಲಿ ಡೇರಿ ಉತ್ಪನ್ನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ. ಇದಕ್ಕೆ ಕಾರಣವೆಂದರೆ ಇದು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವುದು. ಇದರಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಇದು ಹೃದಯದ ಆರೋಗ್ಯಕ್ಕೂ ಹಾನಿಕಾರಕ. ಹಾಗಾಗಿ ಕೊಲೆಸ್ಟ್ರಾಲ್ ಸಮಸ್ಯೆ ಇದ್ದವರಿಗೆ ಡೇರಿ ಉತ್ಪನ್ನಗಳನ್ನ ತ್ಯಜಿಸಲು ಸಲಹೆ ನೀಡಲಾಗುತ್ತದೆ.
4. ಜಂಕ್ ಫುಡ್ಸ್: ಜಂಕ್ ಫುಡ್‌ಗಳಾದ ಚಾಕೊಲೇಟ್, ಬಿಸ್ಕತ್ತುಗಳು, ಕೇಕ್‌ಗಳು ಮತ್ತು ಸಂಸ್ಕರಿಸಿದ ತಿಂಡಿಗಳು ಹೆಚ್ಚಿನ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಇವು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಲು ಕಾರಣವಾಗುತ್ತದೆ. ಇವುಗಳಲ್ಲಿರುವ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಹೆಚ್ಚಿಸುವುದು ಮಾತ್ರವಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಎದುರಾಗಲು ಕಾರಣವಾಗುತ್ತದೆ. ನೀವು ಹೆಚ್ಚು ಜಂಕ್ ಫುಡ್ ಅನ್ನು ಸೇವಿಸಿದರೆ, ನಿಮ್ಮ ತೂಕ ಹೆಚ್ಚಾಗುವ ಅಪಾಯ ಹೆಚ್ಚಾಗುತ್ತದೆ ಎಂಬುದು ಸುಳ್ಳಲ್ಲ. ಅಧಿಕ ತೂಕವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ.
5. ಸಂಸ್ಕರಿಸಿದ ಮಾಂಸ: ಸಾಸೇಜ್, ಬೇಕನ್, ಹಾಟ್ ಡಾಗ್‌ಗಳು ಮತ್ತು ಪ್ಯಾಟೀಸ್‌ಗಳಂತಹ ಸಂಸ್ಕರಿಸಿದ ಮಾಂಸಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸೋಡಿಯಂನಲ್ಲಿ ಅಧಿಕವಾಗಿರುತ್ತವೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣವೆಂದರೆ ಅವುಗಳನ್ನು ತಯಾರಿಸುವಾಗ ಕೊಬ್ಬು, ಉಪ್ಪು ಮತ್ತು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇದು ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಬಹಳ ಅಪಾಯಕಾರಿ.
ಕೊಲೆಸ್ಟ್ರಾಲ್ ಇರುವವರು ಹೆಚ್ಚು ತಿನ್ನಬೇಕಾದ ಆಹಾರ
- ನಾರಿನಾಂಶ ಸಮೃದ್ಧ ಆಹಾರಗಳು
- ಆರೋಗ್ಯಕರ ಕೊಬ್ಬಿನಾಂಶ ಇರುವ ಪದಾರ್ಥ
- ಒಣ ಹಣ್ಣು ಹಾಗೂ ಬೀಜಗಳು
- ಹಣ್ಣು ಮತ್ತು ತರಕಾರಿ
- ಗ್ರೀನ್ ಟೀ
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ