Dengue: ಏರಿಕೆಯಾಗುತ್ತಿದೆ ಡೆಂಗ್ಯೂ ಪ್ರಕರಣ; ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ 5 ಮನೆಮದ್ದುಗಳನ್ನು ಸೇವಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Dengue: ಏರಿಕೆಯಾಗುತ್ತಿದೆ ಡೆಂಗ್ಯೂ ಪ್ರಕರಣ; ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ 5 ಮನೆಮದ್ದುಗಳನ್ನು ಸೇವಿಸಿ

Dengue: ಏರಿಕೆಯಾಗುತ್ತಿದೆ ಡೆಂಗ್ಯೂ ಪ್ರಕರಣ; ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ 5 ಮನೆಮದ್ದುಗಳನ್ನು ಸೇವಿಸಿ

ಕೆಲವು ಮನೆಮದ್ದುಗಳು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರುತ್ತವೆ. ಇವು ಅತಿಯಾದ ಜ್ವರವನ್ನು ತಗ್ಗಿಸುವ ಜೊತೆಗೆ ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಅಂತಹ ಮನೆಮದ್ದುಗಳು ಯಾವುವು, ಅವುಗಳ ಉಪಯೋಗವೇನು ತಿಳಿಯಿರಿ.

ಡೆಂಗ್ಯೂ ನಿಯಂತ್ರಣಕ್ಕೆ ಮನೆಮದ್ದು
ಡೆಂಗ್ಯೂ ನಿಯಂತ್ರಣಕ್ಕೆ ಮನೆಮದ್ದು

ಕಳೆದ ಕೆಲವು ದಿನಗಳಿಂದ ರಾಜ್ಯ ಹಾಗೂ ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದೆ. ಕರ್ನಾಟಕ ರಾಜ್ಯದಾದ್ಯಂತ 9 ಸಾವಿರಕ್ಕೂ ಹೆಚ್ಚು

ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಕಳವಳಕ್ಕೆ ಕಾರಣವಾಗಿದೆ. ಡೆಂಗ್ಯೂ ಸೊಳ್ಳೆ ಕಡಿತದಿಂದ ಹರಡುತ್ತದೆ. ಈಡಿಸ್ಟ್‌ ಈಜಿಪ್ಟಿ ಎಂಬ ಜಾತಿಯ ಸೊಳ್ಳೆಯು ಡೆಂಗ್ಯೂ ಹರಡಲು ಕಾರಣವಾಗುತ್ತದೆ. ಸೋಂಕಿತ ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಕಚ್ಚುವ ಮೂಲಕ ರೋಗ ಹರಡಲು ಕಾರಣವಾಗುತ್ತದೆ.

ವಿಪರೀತ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಆಯಾಸ, ಮೈಕೈನೋವು, ಚರ್ಮದಲ್ಲಿ ದದ್ದು ಉಂಟಾಗುವುದು, ವಾಂತಿ, ವಾಕರಿಕೆ ಮೊದಲಾದವು ಡೆಂಗ್ಯೂವಿನ ಲಕ್ಷಣಗಳಾಗಿವೆ.

ಆದರೆ ಡೆಂಗ್ಯೂಗೆ ಹೆದರುವ ಅವಶ್ಯಕತೆ ಇಲ್ಲ. ಈ ಕೆಲವು ಮನೆಮದ್ದುಗಳು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರುತ್ತವೆ. ಇವು ಅತಿಯಾದ ಜ್ವರವನ್ನು ತಗ್ಗಿಸುವ ಜೊತೆಗೆ ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಹಾಗಾದರೆ ಆ ಮನೆಮದ್ದುಗಳು ಯಾವುವು ನೋಡಿ.

ಅಮೃತಬಳ್ಳಿ ಕಷಾಯ

ಅಮೃತಬಳ್ಳಿ ಕಷಾಯ ಡೆಂಗ್ಯೂ ಜ್ವರ ನಿವಾರಣೆಗೆ ರಾಮಬಾಣ. ಇದು ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಪ್ರತಿರೋಧ ಶಕ್ತಿಯು ಬಲಗೊಂಡರೆ ಡೆಂಗ್ಯೂ ವಿರುದ್ಧ ದೇಹವು ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗುತ್ತದೆ. ಇದು ಪ್ಲೇಟ್ಲೆಟ್‌ ಸಂಖ್ಯೆಯನ್ನು ವೃದ್ಧಿಸಲು ನೆರವಾಗುತ್ತದೆ. ಅಮೃತಬಳ್ಳಿ ಕಷಾಯವನ್ನು ದಿನಕ್ಕೆರಡು ಬಾರಿ ಕುಡಿಯಬೇಕು.

ಪಪ್ಪಾಯ ಎಲೆಯ ರಸ

ಡೆಂಗ್ಯೂ ಕಾಣಿಸಿಕೊಂಡಾಗ ಪ್ಲೇಟ್ಲೆಟ್‌ ಸಂಖ್ಯೆ ಕಡಿಮೆ ಆಗುವುದು ಸಹಜ. ಪಪ್ಪಾಯ ಎಲೆಯ ರಸ ಪ್ಲೇಟ್ಲೆಟ್‌ ಕೌಂಟ್‌ ಹೆಚ್ಚಿಸಲು ಬಹಳ ಉತ್ತಮ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಡೆಂಗ್ಯೂ ನಿವಾರಣೆಗೆ ಸಹಾಯ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಇದನ್ನೂ ದಿನಕ್ಕೆ ಎರಡು ಬಾರಿ ಸೇವಿಸಬೇಕು.

ಸೀಬೆ ರಸ

ಸೀಬೆಹಣ್ಣಿನಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ. ತಾಜಾ ಸೀಬೆಹಣ್ಣಿನ ರಸದ ಸೇವನೆಯಿಂದ ಡೆಂಗ್ಯೂ ಜ್ವರಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸೀಬೆ ಹಣ್ಣಿನ ರಸದಿಂದ ಇತರ ಆರೋಗ್ಯ ಪ್ರಯೋಜನಗಳು ಇವೆ. ದಿನದಲ್ಲಿ ಎರಡು ಬಾರಿ ಸೀಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು, ಜ್ಯೂಸ್‌ ಇಷ್ಟವಿಲ್ಲದೇ ಇದ್ದರೆ ಹಾಗೆಯೇ ತಿನ್ನಬಹುದು.

ಮೆಂತ್ಯೆಕಾಳು

ಮೆಂತ್ಯೆಕಾಳಿನಲ್ಲೂ ಹಲವು ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ಡೆಂಗ್ಯೂ ಜ್ವರ ನಿವಾರಣೆಗೆ ಸಹಾಯ ಮಾಡುತ್ತದೆ. ಒಂದು ಕಪ್‌ ಬಿಸಿನೀರಿನಲ್ಲಿ ಮೆಂತ್ಯೆಯನ್ನು ನೆನೆಹಾಕಬೇಕು. ಈ ನೀರು ತಣ್ಣಗಾದ ಮೇಲೆ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ಮೆಂತ್ಯೆದ ನೀರು ಇತರ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಇದರಲ್ಲಿ ವಿಟಮಿನ್‌ ಸಿ, ಕೆ ಹಾಗೂ ನಾರಿನಾಂಶ ಸಮೃದ್ಧವಾಗಿದೆ. ಮೆಂತ್ಯೆದ ನೀರು ಜ್ವರವನ್ನು ತಗ್ಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ದೇಹದಲ್ಲಿ ಪ್ರತಿರೋಧ ಶಕ್ತಿ ಬಲವಾಗಿದ್ದರೆ, ಡೆಂಗ್ಯೂ ನಿಯಂತ್ರಣ ಸಾಧ್ಯ. ಇದು ಡೆಂಗ್ಯೂ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ನೆರವಾಗುತ್ತದೆ. ರೋಗನಿರೋಧಕ ಶಕ್ತಿ ಬಲವಾಗಿದ್ದರೆ, ಆರಂಭದಲ್ಲೇ ರೋಗಲಕ್ಷಣಗಳನ್ನು ತಡೆ ಹಿಡಿಯುತ್ತದೆ. ಆ ಕಾರಣಕ್ಕೆ ನಿಮ್ಮ ಆಹಾರ ಕ್ರಮದಲ್ಲಿ ಸಾಕಷ್ಟು ರೋಗನಿರೋಧಕ ಅಂಶಗಳಿರುವ ಆಹಾರವನ್ನು ಸೇವಿಸಬೇಕು. ಸಿಟ್ರಸ್‌ ಅಂಶ ಇರುವ ಹಣ್ಣುಗಳು, ಬೆಳ್ಳುಳ್ಳಿ, ಬಾದಾಮಿ, ಅರಿಸಿನ, ಕಿವಿ ಹಣ್ಣು ಇವುಗಳನ್ನು ಹೆಚ್ಚು ಹೆಚ್ಚು ಸೇವಿಸಿ.

ಡೆಂಗ್ಯೂ ರೋಗ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಂಡ ತಕ್ಷಣ ಮನೆಮದ್ದುಗಳನ್ನು ಸೇವಿಸಲು ಆರಂಭಿಸಿದರೆ ಇದರ ಪರಿಣಾಮ ಕಡಿಮೆಯಾಗುತ್ತದೆ. ಆದರೆ ಸಮಸ್ಯೆ ಅತಿಯಾದರೆ ವೈದ್ಯರ ಬಳಿಗೆ ಹೋಗುವುದನ್ನು ನಿರ್ಲಕ್ಷ್ಯ ಮಾಡದಿರಿ.

Whats_app_banner