Bay leaf Water: ದಿನಕ್ಕೊಂದು ದಾಲ್ಚಿನ್ನಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೊಂದು ಪ್ರಯೋಜನ
ಕನ್ನಡ ಸುದ್ದಿ  /  ಜೀವನಶೈಲಿ  /  Bay Leaf Water: ದಿನಕ್ಕೊಂದು ದಾಲ್ಚಿನ್ನಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೊಂದು ಪ್ರಯೋಜನ

Bay leaf Water: ದಿನಕ್ಕೊಂದು ದಾಲ್ಚಿನ್ನಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೊಂದು ಪ್ರಯೋಜನ

ಬಿರಿಯಾನಿ ಎಲೆ ಅಥವಾ ದಾಲ್ಚಿನ್ನಿ ಎಲೆಯು ಬಿರಿಯಾನಿಯಂತಹ ಖಾದ್ಯಗಳಿಗೆ ಪರಿಮಳ ನೀಡುವುದು ಮಾತ್ರವಲ್ಲ, ಈ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಸಿಗುತ್ತವೆ.

ದಾಲ್ಚಿನ್ನಿ ಎಲೆ ಕುದಿಸಿದ ನೀರು ಕುಡಿಯುವುದರ ಪ್ರಯೋಜನ
ದಾಲ್ಚಿನ್ನಿ ಎಲೆ ಕುದಿಸಿದ ನೀರು ಕುಡಿಯುವುದರ ಪ್ರಯೋಜನ

ಅಡುಗೆಮನೆಯಲ್ಲಿ ಬಳಸುವ ಸಾಕಷ್ಟು ಪದಾರ್ಥಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತವೆ. ಅಂತಹ ಪದಾರ್ಥಗಳಲ್ಲಿ ಬಿರಿಯಾನಿ ಎಲೆ ಅಥವಾ ದಾಲ್ಚಿನ್ನಿ ಎಲೆ ಕೂಡ ಒಂದು. ಇದನ್ನು ಅಡುಗೆಯ ಘಮಕ್ಕಾಗಿ ಮಾತ್ರ ಬಳಸುತ್ತಾರೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಇದನ್ನು ಅಡುಗೆಯಲ್ಲಿ ಸೇರಿಸುವುದು ಮಾತ್ರವಲ್ಲ, ನೀರಿನಲ್ಲಿ ಕುದಿಸಿ ಕುಡಿಯುವುದರಿಂದಲೂ ಹಲವು ಪ್ರಯೋಜನಗಳಿವೆ. ಈ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಮಾತ್ರವಲ್ಲದೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವೂ ಸಮೃದ್ಧವಾಗಿದೆ. ಹಾಗಾದರೆ ಇದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ.

ರೋಗನಿರೋಧಕ ಶಕ್ತಿ ಹೆಚ್ಚುವುದು

ಬಿರಿಯಾನಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಈ ಬಿರಿಯಾನಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಜೀರ್ಣಕಾರಿ ಸಮಸ್ಯೆಗಳು

ನೀವು ಆಗಾಗ್ಗೆ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ದಾಲ್ಚಿನ್ನಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಈ ಎಲೆಯಲ್ಲಿರುವ ಪೋಷಕಾಂಶಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಅವು ಆಹಾರವನ್ನು ಸಣ್ಣ ತುಂಡುಗಳಾಗಿ ಒಡೆಯುತ್ತವೆ ಮತ್ತು ಅಜೀರ್ಣವನ್ನು ತಡೆಯುತ್ತವೆ. ಈ ಎಲೆಗಳಲ್ಲಿರುವ ಸಂಯುಕ್ತಗಳು ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತವೆ. ಕರುಳಿನ ಸಮಸ್ಯೆ ಇರುವವರು ಈ ನೀರನ್ನು ಕುಡಿಯುವುದು ಒಳ್ಳೆಯದು.

ಹೃದಯದ ಆರೋಗ್ಯಕ್ಕಾಗಿ

ಬಿರಿಯಾನಿ ಎಲೆಗಳಲ್ಲಿರುವ ನಿರ್ದಿಷ್ಟ ಸಂಯುಕ್ತಗಳು ಹೃದಯದ ಕ್ಯಾಪಿಲ್ಲರಿಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಬಿರಿಯಾನಿ ಎಲೆಯ ನೀರು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ

ಬಿರಿಯಾನಿ ಎಲೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಬಯಸಿದರೆ ಕಾಫಿ ಅಥವಾ ಚಹಾದ ಬದಲಿಗೆ ಬಿರಿಯಾನಿ ಎಲೆಯ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ.

ತೂಕ ಇಳಿಕೆಗೆ ಸಹಕಾರಿ

ಯಾವುದೇ ಅಡ್ಡಪರಿಣಾಮಗಳಿಲ್ಲದೇ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬಿರಿಯಾನಿ ಎಲೆಯ ನೀರು ಉತ್ತಮ ಸಹಾಯ ಮಾಡುತ್ತದೆ. ಏಕೆಂದರೆ ಈ ನೀರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮಹಿಳೆಯರಿಗೆ ಇದರ ಉಪಯೋಗ ಹಲವು

ಮುಟ್ಟಿನ ಸಮಯದಲ್ಲಿ ತೀವ್ರವಾದ ಹೊಟ್ಟೆ ನೋವು ಅನುಭವಿಸುವ ಮಹಿಳೆಯರಿಗೆ ಬಿರಿಯಾನಿ ಎಲೆ ನೀರು ಅತ್ಯುತ್ತಮ ಪರಿಹಾರವಾಗಿದೆ. ಇದು ಅದರ ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿವೆ. ಇವು ಗರ್ಭಾಶಯದ ಸ್ನಾಯುಗಳನ್ನು ಸಡಿಲಗೊಳಿಸಿ, ಹೊಟ್ಟೆಯ ಸೆಳೆತ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಇದು ಮುಟ್ಟಿನ ಆಯಾಸವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

ಈ ನೀರನ್ನು ಹೇಗೆ ತಯಾರಿಸುವುದು?

ಬಿರಿಯಾನಿ ಎಲೆಯ ನೀರನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ 1 ಕಪ್ ನೀರನ್ನು ಹಾಕಿ, ಒಲೆಯ ಮೇಲೆ ಇರಿಸಿ. ಅದಕ್ಕೆ 1 ಅಥವಾ 2 ಬಿರಿಯಾನಿ ಎಲೆಗಳನ್ನು ಸೇರಿಸಿ 5 ನಿಮಿಷ ಕುದಿಸಿ. ನಂತರ ಅದನ್ನು ಸೋಸಿ, ರುಚಿಗೆ ತಕ್ಕಷ್ಟು ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ನೀವು ಆ ನೀರನ್ನು ದಿನಕ್ಕೆ 1-2 ಬಾರಿ ಕುಡಿಯಬಹುದು. ಆದರೆ ಅದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ ನೆನಪಿರಲಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner