Health Tips: ಮಕ್ಕಳು, ಯುವಕರು, ವೃದ್ಧರು; ಆಯಾ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಸಮಯ ನಿದ್ರೆ ಮಾಡಬೇಕು?
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಮಕ್ಕಳು, ಯುವಕರು, ವೃದ್ಧರು; ಆಯಾ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಸಮಯ ನಿದ್ರೆ ಮಾಡಬೇಕು?

Health Tips: ಮಕ್ಕಳು, ಯುವಕರು, ವೃದ್ಧರು; ಆಯಾ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಸಮಯ ನಿದ್ರೆ ಮಾಡಬೇಕು?

Health Tips: ಮನುಷ್ಯನ ಆರೋಗ್ಯದ ಮೇಲೆ ನಿದ್ರೆ ಕೂಡಾ ನೇರ ಪರಿಣಾಮ ಬೀರುತ್ತದೆ. ಸರಿಯಾದ ಸಮಯಕ್ಕೆ, ಅವಶ್ಯಕತೆ ಇರುವಷ್ಟು ನಿದ್ರೆ ಮಾಡಿದರೆ ಮಾತ್ರ ನಿಮ್ಮ ಆರೋಗ್ಯ ಚೆನ್ನಾಗಿ ಇರಲು ಸಾಧ್ಯ. ಹೀಗಾಗಿ ಮನುಷ್ಯನ ತನ್ನ ವಯಸ್ಸಿಗೆ ತಕ್ಕಂತೆ ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಆಯಾ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಸಮಯ ನಿದ್ರೆ ಮಾಡಬೇಕು?
ಆಯಾ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಸಮಯ ನಿದ್ರೆ ಮಾಡಬೇಕು? (PC: unsplash)

Health Tips: ಮನುಷ್ಯನ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ನಿದ್ರೆ ಕೂಡ ಅತ್ಯಗತ್ಯ. ಆಗ ಮಾತ್ರ ನಮ್ಮ ಮನಸ್ಸು ಕೂಡಾ ಸರಿಯಾಗಿ ಇರುತ್ತದೆ. ನಾವು ನಿದ್ರೆಯಲ್ಲಿ ಇರುವಾಗ ನಮ್ಮ ಜೀವಕೋಶಗಳ ಬೆಳವಣಿಗೆ, ಜೀರ್ಣಾಂಗ ವ್ಯವಸ್ಥೆ ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಸರಿಯಾದ ನಿದ್ರೆಯೂ ಸಹಕಾರಿಯಾಗಿದೆ.

ನಿದ್ರೆಗೆ ಉಂಟಾಗುವ ಭಂಗವು ನಮ್ಮ ಹಾರ್ಮೋನ್‌ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಸಹ ಉಂಟಾಗಬಹುದು. ಹಾಗಾದರೆ ಯಾವ್ಯಾವ ವಯಸ್ಸಿನಲ್ಲಿ ಮನುಷ್ಯನಿಗೆ ಎಷ್ಟು ನಿದ್ರೆಯ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಳ್ಳೋಣ

ನವಜಾತ ಶಿಶುಗಳು (0-3 ತಿಂಗಳು) : ತಾಯಿಯ ಗರ್ಭದಿಂದ ಹೊರ ಬಂದ ಬಳಿಕವೂ ಮಗುವಿನ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಬೇಕಿರುವ ಹಿನ್ನೆಲೆ ಶಿಶುಗಳಿಗೆ ಹೆಚ್ಚಿನ ಪ್ರಮಾಣದ ನಿದ್ದೆಯ ಅವಶ್ಯಕತೆ ಇರುತ್ತದೆ. ದಿನಕ್ಕೆ ಮಗುವು 14 ರಿಂದ 17 ಗಂಟೆಗಳ ಕಾಲ ನಿದ್ರಿಸುವುದು ಉತ್ತಮ.

4-11 ತಿಂಗಳ ಮಗು : ಈ ವಯಸ್ಸಿನಲ್ಲಿಯೂ ಮಗುವಿನ ದೇಹದಲ್ಲಿ ಬೆಳವಣಿಗೆ ಆಗುತ್ತಲೇ ಇರುತ್ತದೆ. ಹೀಗಾಗಿ ಈ ಪ್ರಾಯದಲ್ಲಿ ಮಕ್ಕಳು 12-15 ಗಂಟೆಗಳ ಕಾಲ ನಿದ್ರೆ ಮಾಡಬೇಕು.

1-2 ವರ್ಷದ ಮಗು : ಈ ವಯಸ್ಸಿನಲ್ಲಿ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ವಿಶ್ರಾಂತಿಯ ಅಗತ್ಯ ಕೂಡ ಇರುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ಮಕ್ಕಳಿಗೆ 11-14 ಗಂಟೆಗಳ ನಿದ್ರೆಯ ಅವಶ್ಯಕತೆ ಇರುತ್ತದೆ.

3-5 ವರ್ಷದ ಮಗು : ಈ ವಯಸ್ಸಿನಲ್ಲಿ ಮಕ್ಕಳು ಶಾಲೆಗೆ ಹೋಗಲು ಆರಂಭಿಸುವುದರಿಂದ ಮಕ್ಕಳಿಗೆ ವಿಶ್ರಾಂತಿಯ ಅಗತ್ಯ ಕೂಡ ಇರುತ್ತದೆ. ಹೀಗಾಗಿ ಈ ವಯಸ್ಸಿನ ಮಕ್ಕಳಿಗೆ 10-13 ಗಂಟೆಗಳ ನಿದ್ರೆಯ ಅನಿವಾರ್ಯತೆ ಇರುತ್ತದೆ.

6-12 ವರ್ಷದ ಮಗು : ಶಾಲೆಗೆ ಹೋಗುವ ವಯಸ್ಸಿನ ಮಕ್ಕಳ ದೇಹದ ಬೆಳವಣಿಗೆ ಕೂಡ ವೇಗವಾಗಿ ಸಾಗುತ್ತಿರುತ್ತದೆ. ಈ ವಯಸ್ಸಿನ ಮಕ್ಕಳು ಬೆಳೆಯುತ್ತಿರುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು 9-12 ಗಂಟೆಗಳ ಕಾಲ ನಿದ್ರೆ ಮಾಡಬೇಕು.

13-18 ವರ್ಷದವರು : ಇದು ಹದಿಹರೆಯದ ವಯಸ್ಸು. ಈ ಸಮಯದಲ್ಲಿ ಯುವಕರು ಓದಿನಲ್ಲಿ, ತಮ್ಮದೇ ಆದ ಹವ್ಯಾಸಗಳಲ್ಲಿ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಈ ವಯಸ್ಸಿನಲ್ಲಿ 8 ರಿಂದ 10 ಗಂಟೆಗಳವರೆಗೆ ನಿದ್ರೆ ಮಾಡಿದರೆ ಸಾಕು .

18-60 ವರ್ಷದವರು : ಈ ವಯಸ್ಸಿನಲ್ಲಿ ಕೆಲಸ ಹಾಗೂ ಸಂಸಾರದ ಜಂಜಾಟಗಳಲ್ಲಿ ಸರಿಯಾಗಿ ವಿಶ್ರಾಂತಿ ಮಾಡಲು ಸಮಯವೇ ಸಿಗುವುದಿಲ್ಲ. ಆದರೂ ಕೂಡ ಈ ವಯಸ್ಸಿನಲ್ಲಿ 7-9 ಗಂಟೆಯಾದರೂ ಮನುಷ್ಯ ನಿದ್ರೆ ಮಾಡಬೇಕು.

61 ವರ್ಷ ಮೇಲ್ಪಟ್ಟವರು : ಈ ವಯಸ್ಸಿನಲ್ಲಿ ಮನುಷ್ಯನ ದೇಹದ ನಿಧಾನವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಅನೇಕರಿಗೆ ಈ ವಯಸ್ಸಿನಲ್ಲಿ ಸರಿಯಾಗಿ ನಿದ್ರೆಯೇ ಬರುವುದಿಲ್ಲ. ಈ ವಯಸ್ಸಿನಲ್ಲಿ ಸಂಧಿ ನೋವುಗಳಂತಹ ಸಮಸ್ಯೆಗಳೂ ಸಹ ಇರುತ್ತವೆ. ಆದರೂ ಸಹ ಈ ವಯಸ್ಸಿನಲ್ಲಿ ಮನುಷ್ಯ 7-8 ಗಂಟೆಗಳ ಕಾಲ ನಿದ್ರಿಸಬೇಕು.

ಆಯಾ ವಯಸ್ಸಿಗೆ ಅನುಗುಣವಾಗಿ ನಿದ್ರೆ ಮಾಡುವುದರ ಜೊತೆಗೆ ಬೇಗ ಮಲಗಿ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಂಡರೆ ಉತ್ತಮ.

Whats_app_banner