Hereditary Diabetes: ಆನುವಂಶಿಕವಾಗಿ ಕಾಡುವ ಮಧುಮೇಹ ಕಾಯಿಲೆಯಿಂದ ಪಾರಾಗುವುದು ಹೇಗೆ..? ಇಲ್ಲಿದೆ ಸಲಹೆಗಳು-health tips how to avoid hereditary diabetes what are the precautions should be taken for good health rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Hereditary Diabetes: ಆನುವಂಶಿಕವಾಗಿ ಕಾಡುವ ಮಧುಮೇಹ ಕಾಯಿಲೆಯಿಂದ ಪಾರಾಗುವುದು ಹೇಗೆ..? ಇಲ್ಲಿದೆ ಸಲಹೆಗಳು

Hereditary Diabetes: ಆನುವಂಶಿಕವಾಗಿ ಕಾಡುವ ಮಧುಮೇಹ ಕಾಯಿಲೆಯಿಂದ ಪಾರಾಗುವುದು ಹೇಗೆ..? ಇಲ್ಲಿದೆ ಸಲಹೆಗಳು

Hereditary Diabetes: ಕುಟುಂಬದಲ್ಲಿ ಯಾರಾದರೂ ಹಿರಿಯರಿಗೆ ಇರುವ ಆರೋಗ್ಯ ಸಮಸ್ಯೆ ಮಕ್ಕಳು, ಮೊಮ್ಮಕ್ಕಳಿಗೂ ಬರುವುದನ್ನು ಆನುವಂಶಿಕ ಕಾಯಿಲೆ ಎನ್ನಲಾಗುತ್ತದೆ. ಅದರಲ್ಲಿ ಮಧುಮೇಹ ಕಾಯಿಲೆ ಮಕ್ಕಳಿಗೆ ಕಾಡುವುದು ಬಹುತೇಕ ಖಚಿತ. ಆದರೆ ನಾವು ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ದೂರವಿಡಲು ಸಾಧ್ಯವಿದೆ.

ಆನುವಂಶಿಕವಾಗಿ ಬರುವ ಮಧುಮೇಹವನ್ನು ನಿಯಂತ್ರಿಸುವುದು ಹೇಗೆ?
ಆನುವಂಶಿಕವಾಗಿ ಬರುವ ಮಧುಮೇಹವನ್ನು ನಿಯಂತ್ರಿಸುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಮಧುಮೇಹದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಮ್ಮ ಕಳಪೆ ಗುಣಮಟ್ಟದ ಆಹಾರ ಕ್ರಮದಿಂದಾಗಿ ಅನೇಕರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಬಹಳಷ್ಟು ಪ್ರಕರಣಗಳಲ್ಲಿ ಕುಟುಂಬದಲ್ಲಿ ಮಧುಮೇಹಿಗಳು ಜಾಸ್ತಿಯಿದ್ದರೆ ಇದು ಆನುವಂಶಿಕವಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಹೀಗಾಗಿ ನಿಮ್ಮ ಕುಟುಂಬದಲ್ಲಿಯೂ ಮಧುಮೇಹಿಗಳ ಸಂಖ್ಯೆ ಹೆಚ್ಚಿದ್ದರೆ ಈ ಅಪಾಯದಿಂದ ಪಾರಾಗಲು ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಆಹಾರದ ಕಡೆಗೆ ಗಮನ ನೀಡುವುದು. ನೀವು ಉತ್ತಮ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ಖಂಡಿತವಾಗಿಯೂ ಆನುವಂಶಿಕ ಮಧುಮೇಹದಿಂದ ಪಾರಾಗಲು ಸಾಧ್ಯವಿದೆ.

ಮಧುಮೇಹ ಕಾಯಿಲೆ ಎನ್ನುವುದು ಒಂದು ರೀತಿಯಲ್ಲಿ ನಮ್ಮ ಜೀವನದ ಸಾಮಾನ್ಯ ಅಂಶ ಎನಿಸಿಬಿಟ್ಟಿದೆ. ಮುಖ್ಯವಾಗಿ ಇದು ನಾವು ಏನನ್ನು ಸೇವಿಸುತ್ತಿದ್ದೇವೆ ಎಂಬುದನ್ನೇ ಆಧರಿಸಿ ಬರುತ್ತದೆ. ಟೈಪ್ 2 ಡಯಾಬಿಟೀಸ್ ಎನ್ನುವುದು ಒಂದು ಗಂಭೀರ ಸಮಸ್ಯೆಯಾಗಿದ್ದು ಇವುಗಳು ಹೃದಯ ಸಂಬಂಧಿ ಕಾಯಿಲೆ., ಕುರುಡುತನ, ಮೂತ್ರಪಿಂಡ ವೈಫಲ್ಯ ಹೀಗೆ ನಾನಾ ಸಮಸ್ಯೆಗಳನ್ನು ಹೊತ್ತು ತರುತ್ತದೆ. ಹೀಗಾಗಿ ನಿಮ್ಮ ಕುಟುಂಬಕ್ಕೆ ಮಧುಮೇಹದ ಹಿನ್ನೆಲೆ ಇದ್ದರೆ ನೀವು ಖಂಡಿತವಾಗಿಯೂ ಹೆಚ್ಚು ಜಾಗರೂಕರಾಗಿ ಇರುವುದು ಅತ್ಯಗತ್ಯವಾಗಿದೆ. ನಿಮ್ಮ ದಿನಚರಿಯಲ್ಲಿ ಇಲ್ಲಿ ತಿಳಿಸಲಾದ ಬದಲಾವಣೆಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು.

ಮಧುಮೇಹದಿಂದ ಪಾರಾಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ

1. ಪ್ರೊಟೀನ್‌ ಯುಕ್ತ ಆಹಾರಗಳ ಸೇವನೆ : ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಪ್ರೊಟೀನ್‌ಗೆ ಹೆಚ್ಚು ಆದ್ಯತೆ ನೀಡಬೇಕು. ಪ್ರತಿ ಕಿಲೋ ದೇಹದ ತೂಕಕ್ಕೆ 1 ಗ್ರಾಂ ಪ್ರೊಟೀನ್ ಎಂಬ ಲೆಕ್ಕಾಚಾರದಲ್ಲಿ ನೀವು ಪ್ರತಿನಿತ್ಯ ಪ್ರೊಟೀನ್ ತೆಗೆದುಕೊಳ್ಳಬೇಕು. ಇದು ನಿಮ್ಮ ದೇಹದ ಸ್ನಾಯುವಿನ ಆರೋಗ್ಯವನ್ನು ಕಾಪಾಡುತ್ತದೆ ಮಾತ್ರವಲ್ಲದೇ ಅನಗತ್ಯವಾಗಿ ಏನನ್ನಾದರೂ ತಿನ್ನಬೇಕು ಎಂಬ ಬಯಕೆಯನ್ನು ನಿಯಂತ್ರಿಸುತ್ತದೆ.

2. ಕಾರ್ಬೋಹೈಡ್ರೇಟ್‌ಗಳ ಸೇವನೆಯಲ್ಲಿರಲಿ ನಿಯಂತ್ರಣ : ಕಾರ್ಬೋಹೈಡ್ರೇಟ್‌ಗಳು ಉತ್ತಮ ಆರೋಗ್ಯಕ್ಕೆ ಖಂಡಿತವಾಗಿಯೂ ಶತ್ರುವಲ್ಲ. ಆದರೆ ಊಟದ ಅವಧಿಯಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ ಸೇವಿಸುವುದನ್ನು ನೀವು ಕಡಿಮೆ ಮಾಡಬೇಕು. ಕಾರ್ಬೋಹೈಡ್ರೇಟ್‌ಗಳ ಸೇವನೆಗೆ ಬದಲಾಗಿ ನೀವು ಪ್ರೊಟೀನ್‌ಗಳು, ತರಕಾರಿಗಳು, ಕಾಳುಗಳು ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಆಹಾರಗಳನ್ನು ಸೇವನೆ ಮಾಡಬೇಕು. ಕಾರ್ಬೋಹೈಡ್ರೇಟ್ ಅಂಶ ಕಡಿಮೆಯಾದಂತೆ ರಕ್ತಕ್ಕೆ ಕಡಿಮೆ ಪ್ರಮಾಣದಲ್ಲಿ ಗ್ಲುಕೋಸ್ ಸರಬರಾಜಾಗುತ್ತದೆ. ಆಗ ದೇಹದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ.

3.ಆ್ಯಪಲ್ ಸೀಡರ್ ವಿನೇಗರ್ : ಕಾರ್ಬೋಹೈಡ್ರೇಟ್‌ಯುಕ್ತ ಅಹಾರ ಸೇವನೆಗೂ 30 ನಿಮಿಷಗಳ ಮುನ್ನ ಒಂದು ಚಮಚ ಆ್ಯಪಲ್ ಸೀಡರ್ ವಿನೇಗರನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ಸೇವಿಸಬೇಕು. ಇವುಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಸರಿದೂಗಿಸುತ್ತವೆ.

4. ಊಟದ ನಡುವೆ ಅಂತರ ಕಾಪಾಡಿಕೊಳ್ಳಿ : ಪ್ರತಿ ಊಟದ ನಡುವೆ ಏನಿಲ್ಲವೆಂದರೂ ನೀವು 4-5 ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಬೇಕು. ರಾತ್ರಿ ಊಟದ ಬಳಿಕ ಏನಾದರೂ ಸ್ನ್ಯಾಕ್ ಸೇವಿಸುವ ಅಭ್ಯಾಸವಿದ್ದರೆ ಅದನ್ನು ಮೊದಲು ನಿಲ್ಲಿಸಿ. ನೀವು ಊಟದ ಮಧ್ಯೆ ಎಷ್ಟು ಹೊತ್ತು ಅಂತರವಿಡುತ್ತಿರೋ ಅಷ್ಟು ಸಮಯಗಳ ಕಾಲ ದೇಹವು ಗ್ಲುಕೋಸ್‌ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

5. ದೈಹಿಕ ಚಟುವಟಿಕೆ : ದೈಹಿಕ ಚಟುವಟಿಕೆಯ ಮೂಲಕ ನೀವು ತೂಕವನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ. ಇದು ಮಧುಮೇಹವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ವಾಕಿಂಗ್, ನೃತ್ಯ ಅಥವಾ ಜಿಮ್‌ ಹಾಗೂ ಯೋಗಾಸನ ಮಾಡುವ ಮೂಲಕ ನೀವು ತೂಕ ನಿಯಂತ್ರಿಸಬಹುದಾಗಿದೆ.

ಮಧುಮೇಹ ಬರುವುದನ್ನು ತಡೆಯುವುದು ಸುಲಭವಲ್ಲ. ಆದರೆ ನಾವು ಉತ್ತಮ ಆರೋಗ್ಯ ಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ಎಂಥಹ ಮಾರಕ ಕಾಯಿಲೆಯನ್ನು ದೂರ ಸರಿಸಲು ಸಾಧ್ಯವಿದೆ.