ಇಯರ್ ಬಡ್ಸ್ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ 5 ಪರಿಣಾಮಕಾರಿ ಸಲಹೆಗಳು, ಕಿವಿ ಜೋಪಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಇಯರ್ ಬಡ್ಸ್ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ 5 ಪರಿಣಾಮಕಾರಿ ಸಲಹೆಗಳು, ಕಿವಿ ಜೋಪಾನ

ಇಯರ್ ಬಡ್ಸ್ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ 5 ಪರಿಣಾಮಕಾರಿ ಸಲಹೆಗಳು, ಕಿವಿ ಜೋಪಾನ

ಕಿವಿಯಲ್ಲಿ ಇಯರ್ ವ್ಯಾಕ್ಸ್ ಅಥವಾ ಗುಗ್ಗೆಗಳನ್ನು ನೀವು ಪದೇ ಪದೇ ಸ್ವಚ್ಛ ಮಾಡ್ತೀರಾ, ಇಯರ್ ಬಡ್ಸ್, ಹೇರ್ ಪಿನ್ ಇತ್ಯಾದಿ ವಸ್ತುಗಳಿಂದ ನಿಮ್ಮ ಕಿವಿಯನ್ನು ಸ್ವಚ್ಛಗೊಳಿಸುವ ಮುನ್ನ ಎಚ್ಚರ ಅಗತ್ಯ. ಕೊಂಚ ಎಚ್ಚರ ತಪ್ಪಿದ್ರೂ ಶ್ರವಣದೋಷಕ್ಕೆ ಕಾರಣವಾಗಬಹುದು. ಇದರ ಬದಲು ಹೇಗೆ ಕಿವಿ ಸ್ವಚ್ಛ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ (ಬರಹ: ಪ್ರಿಯಾಂಕ ಪಿ.)

ಇಯರ್ ಬಡ್ಸ್ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ 5 ಪರಿಣಾಮಕಾರಿ ಸಲಹೆಗಳು, ನೀವೂ ಪ್ರಯತ್ನಿಸಿ
ಇಯರ್ ಬಡ್ಸ್ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ 5 ಪರಿಣಾಮಕಾರಿ ಸಲಹೆಗಳು, ನೀವೂ ಪ್ರಯತ್ನಿಸಿ

ನಮ್ಮ ದೇಹದ ಪ್ರತಿ ಅಂಗಾಂಗದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನೀವು ಆರೋಗ್ಯಕರ ವಾತಾವರಣವನ್ನು ಅನುಭವಿಸಲು ಹೆಚ್ಚು ನೈರ್ಮಲ್ಯವಿದ್ದಷ್ಟು ಉತ್ತಮ. ಪ್ರತಿಯೊಬ್ಬರು ನೈರ್ಮಲ್ಯವನ್ನು ಅನುಸರಿಸುತ್ತಾರೆ. ಬೇರೆಲ್ಲಾ ಅಂಗಗಳಂತೆ ಕಿವಿಯನ್ನು ಸ್ವಚ್ಛಗೊಳಿಸುವುದು ಕೂಡ ತುಂಬಾನೇ ಮುಖ್ಯ. ಕೆಲವೊಮ್ಮೆ ನಿಮ್ಮ ಕಿವಿ ಮುಚ್ಚಿ ಹೋಗುತ್ತಿವೆಯೇ? ಹೆಚ್ಚುವರಿ ಮೇಣವು (ಕುಗ್ಗೆ) ಸಂಗ್ರಹವಾಗುವುದರಿಂದ ಈ ರೀತಿಯಾಗುತ್ತದೆ. ಇದರಿಂದ ನಿಮಗೂ ಕಿರಿಕಿರಿಯುಂಟಾಗುವುದಲ್ಲದೆ, ನಿಮ್ಮ ಅಕ್ಕ-ಪಕ್ಕದವರಿಗೂ ಅಸಹ್ಯವೆನಿಸುತ್ತದೆ.

ಕೆಲವರು ಕಿವಿಯನ್ನು ಪದೇ ಪದೇ ಸ್ವಚ್ಛಗೊಳಿಸುತ್ತಿರುತ್ತಾರೆ. ಕಿವಿಗಳನ್ನು ಸ್ವಚ್ಛಗೊಳಿಸಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಹೆಚ್ಚಿನವು ಹಾನಿಕಾರಕವಾಗಿದೆ. ಹತ್ತಿ ಸ್ಟೇಬಲ್‍ ( Ear Buds) ಗಳನ್ನು ಬಳಸಿ ಕುಗ್ಗೆಗಳನ್ನು ತೆಗೆಯುತ್ತಾರೆ. ಆದರೆ, ಇಯರ್ ಬಡ್ಸ್ ಉಪಯೋಗಿಸುವುದು ನಿಮ್ಮ ಶ್ರವಣಕ್ಕೆ ಸುರಕ್ಷಿತವಲ್ಲ. ಇನ್ನೂ ಕೆಲವರು ಹೇರ್‌ಪಿನ್‌ಗಳು ಅಥವಾ ತಮ್ಮ ಕೈಬೆರಳಿನ ಮೂಲಕ ಸ್ವಚ್ಛಗೊಳಿಸುತ್ತಾರೆ. ಇದು ಕೂಡ ನಿಮ್ಮ ಕಿವಿಯ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಲ್ಲ. ಈ ರೀತಿ ಕಿವಿಯನ್ನು ಸ್ವಚ್ಛಗೊಳಿಸುವುದರಿಂದ ಕಿವಿ ನೋವು ಮತ್ತು ಸೋಂಕನ್ನು ಉಂಟು ಮಾಡಬಹುದು.

ಹಾಗಿದ್ದರೆ ಕಿವಿಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ನೀವು ಯೋಚಿಸುತ್ತಿರಬಹುದು. ನಿಮ್ಮ ಕಿವಿಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ..

ಕಿವಿಯು ‘ಕುಗ್ಗೆ’ಯನ್ನು ಯಾಕೆ ಹೊಂದಿರುತ್ತದೆ?

ನಿಮ್ಮ ದೇಹವು ಇಯರ್‌ವಾಕ್ಸ್ ಅಥವಾ ಕುಗ್ಗೆ (ಗುಗ್ಗೆ) ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ಇದರಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಇದು ನೀರು, ಕೊಳಕು ಮತ್ತು ಸೂಕ್ಷ್ಮ ಕಣಗಳಿಂದ ಕಿವಿ ಕಾಲುವೆಯ ಸೂಕ್ಷ್ಮ ಚರ್ಮವನ್ನು ರಕ್ಷಿಸುತ್ತದೆ. ಇದು ಕೊಳೆಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂಲಕ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಇಯರ್‌ವಾಕ್ಸ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅಂದರೆ ನಿಮ್ಮ ಕಿವಿಗಳು ಸ್ವಯಂ ಶುಚಿಗೊಳಿಸುತ್ತವೆ. ಹಾಗೆಯೇ ಕಿವಿ ಕಾಲುವೆಯಿಂದ ಕುಗ್ಗೆಯನ್ನು ನೈಸರ್ಗಿಕವಾಗಿ ತೆಗೆದುಹಾಕಬಹುದು. ಒಟ್ಟಾರೆಯಾಗಿ, ನಿಮ್ಮ ಕಿವಿಗಳನ್ನು ಹಾನಿಯಿಂದ ರಕ್ಷಿಸಲು ಇಯರ್ ವ್ಯಾಕ್ಸ್ ಅತ್ಯಗತ್ಯ.

ನಿಮ್ಮ ಕಿವಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ?

ನಿಮ್ಮ ಕಿವಿಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಇಲ್ಲಿವೆ ಸಲಹೆ

ಕಿವಿಗಳನ್ನು ಒಣಗಿಸುವುದು: ನಿಮ್ಮ ಕಿವಿಯಲ್ಲಿನ ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಇದು ಕಿವಿ ಸೋಂಕುಗಳಿಗೆ ಕಾರಣವಾಗಬಹುದು. ನಿಮ್ಮ ಕಿವಿಗಳನ್ನು ನಿಧಾನವಾಗಿ ಒಣಗಿಸಲು ಕಿವಿಯ ಹೊರ ಭಾಗದಲ್ಲಿ ಮೃದುವಾದ ಟವೆಲ್ ಬಳಸಿ. ವಿಶೇಷವಾಗಿ ಸ್ನಾನ ಮಾಡಿದ ಬಳಿಕ ಅಥವಾ ನೀರಿನಲ್ಲಿ ಈಜಿದ ಬಳಿಕ ಟವೆಲ್ ಉಪಯೋಗಿಸಿ. ಹಾಗೆಯೇ ನಿಮ್ಮ ತಲೆಯನ್ನು ಪ್ರತಿ ಬದಿಗೆ ತಿರುಗಿಸುವುದು ನೀರನ್ನು ನೈಸರ್ಗಿಕವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಕೊಳದಲ್ಲಿ ಈಜುವಾಗ ಅಥವಾ ಸ್ನಾನ ಮಾಡುವಾಗ ನಿಮ್ಮ ಕಿವಿಯನ್ನು ರಕ್ಷಿಸಲು ಇಯರ್‌ಪ್ಲಗ್‌ಗಳು, ಈಜು ಕ್ಯಾಪ್ ಅಥವಾ ಶವರ್ ಕ್ಯಾಪ್ ಅನ್ನು ಧರಿಸಬಹುದು. ಆದರೆ, ಈಯರ್ ಬಡ್ಸ್ ಅಥವಾ ಇತರೆ ವಸ್ತುಗಳನ್ನು ನಿಮ್ಮ ಕಿವಿಯೊಳಗೆ ಹಾಕದಿರಿ. ಇದು ನಿಮ್ಮ ಶ್ರವಣಕ್ಕೆ ಹಾನಿಯುಂಟು ಮಾಡಬಹುದು.

ನಿಮ್ಮ ಕಿವಿಗಳನ್ನು ಅತಿಯಾಗಿ ಸ್ವಚ್ಛಗೊಳಿಸುವುದನ್ನು ತಪ್ಪಿಸಿ: ನಿಮ್ಮ ಕಿವಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾದರೂ, ಅತಿಯಾದ ಶುಚಿಗೊಳಿಸುವಿಕೆಯು ಹೆಚ್ಚು ಹಾನಿ ಮಾಡುತ್ತದೆ. ಕಿವಿಯು ನೈಸರ್ಗಿಕವಾಗಿ ಮೇಣವನ್ನು (ಸೆರುಮೆನ್) ಉತ್ಪಾದಿಸುತ್ತದೆ, ಇದು ಧೂಳು, ಕೊಳಕು ಮತ್ತು ಕೀಟಗಳನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಕಿವಿ ಕಾಲುವೆಯನ್ನು ನೀರು, ಸೋಂಕುಗಳು ಮತ್ತು ಸೂಕ್ಷ್ಮ ಕಣಗಳಿಂದ ರಕ್ಷಿಸುತ್ತದೆ. ತುಂಬಾ ಬಲವಾಗಿ ಶುಚಿಗೊಳಿಸುವುದರಿಂದ ಈ ರಕ್ಷಣಾತ್ಮಕ ಮೇಣವನ್ನು ತೆಗೆದುಹಾಕಬಹುದು. ಇದು ಶುಷ್ಕತೆ, ತುರಿಕೆ ಮತ್ತು ಕಿವಿ ಸೋಂಕಿಗೆ ಕಾರಣವಾಗುತ್ತದೆ. ಬದಲಾಗಿ, ನಿಮ್ಮ ಕಿವಿಗಳು ಸ್ವಾಭಾವಿಕವಾಗಿ ಸ್ವಚ್ಛವಾಗಿರಲಿ. ಒಂದು ವೇಳೆ ಕಿವಿಯೊಳಗೆ ಅತಿಯಾಗಿ ಕುಗ್ಗೆಯಿದೆ ಎಂದೆನಿಸಿದರೆ, ವೈದ್ಯರನ್ನು (ENT Specialist) ಸಂಪರ್ಕಿಸಿ, ಅವರ ಸಲಹೆ ಪಡೆಯಿರಿ.

ಕಿವಿಗೆ ಈಯರ್ ಬಡ್ಸ್ ಹಾಕದಿರಿ: ಜನರು ಸಾಮಾನ್ಯವಾಗಿ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್ ಬಡ್ಸ್ ಅನ್ನು ಬಳಸುತ್ತಾರೆ. ನಿಮ್ಮ ಕಿವಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬದಲು, ಇದು ಇಯರ್‌ವಾಕ್ಸ್ ಅನ್ನು ಆಳವಾಗಿ ಒಳಗೆ ತಳ್ಳಬಹುದು. ಇದರಿಂದ ಸೂಕ್ಷ್ಮ ಚರ್ಮಕ್ಕೆ ಹಾನಿಯುಂಟಾಗಬಹುದು. ಅಲ್ಲದೆ, ಈ ಮೂಲಕ ಕಿವಿಯೊಳಗೆ ಬ್ಯಾಕ್ಟೀರಿಯಾದ ಪ್ರವೇಶವೂ ಉಂಟಾಗಬಹುದು. ಇದು ಕಿವಿ ಸೋಂಕಿನ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದಕ್ಕೆ ಬದಲಾಗಿ ನೀವು ಒದ್ದೆಯಾದ ತೊಳೆಯುವ ಬಟ್ಟೆ ಅಥವಾ ಮೃದುವಾದ, ಒದ್ದೆಯಾದ ಟವೆಲ್ ಅನ್ನು ಬಳಸಿ ಹೊರ ಕಿವಿ ಮತ್ತು ಕಿವಿಯ ಹಿಂದೆ ನಿಧಾನವಾಗಿ ಒರೆಸಿ.

ಅತಿ ಹೆಚ್ಚು ಇಯರ್ ಫೋನ್‍ನಂತಹ ಸಾಧನಗಳನ್ನು ಉಪಯೋಗಿಸದಿರಿ: ದೀರ್ಘಕಾಲದವರೆಗೆ ಇಯರ್ ಫೋನ್ ಬಳಸುವುದರಿಂದ ಹಾಗೂ ಅತಿ ಹೆಚ್ಚಿನ ಮಟ್ಟದಲ್ಲಿ ವಾಲ್ಯೂಮ್ ಇಟ್ಟು ಸಂಗೀತವನ್ನು ಕೇಳುವುದರಿಂದ ಶ್ರವಣ ದೋಷಕ್ಕೆ ಕಾರಣವಾಗಬಹುದು. ನಿಮ್ಮ ಕಿವಿ ಹಾನಿಯನ್ನು ತಡೆಯಲು ಈ ರೀತಿಯ ಸಾಧನಗಳನ್ನು ಉಪಯೋಗಿಸುವುದು ಉತ್ತಮವಲ್ಲ. ಸಂಗೀತ ಕಚೇರಿಗಳು, ಕಟ್ಟಡ ಅಥವಾ ಇನ್ನಿತರೆ ನಿರ್ಮಾಣ ಸ್ಥಳಗಳು ಅಥವಾ ಕ್ರೀಡಾಕೂಟಗಳಂತಹ ಜೋರಾಗಿ ಶಬ್ಧ ಇರುವಂತಹ ಕಡೆಗಳಲ್ಲಿ ಹೆಚ್ಚು ಹೊತ್ತು ಇದ್ದರೆ, ನಿಮ್ಮ ಕಿವಿಯ ರಕ್ಷಣೆಗಾಗಿ ಇಯರ್‌ಪ್ಲಗ್‌ಗಳು ಅಥವಾ ಇಯರ್‌ಮಫ್‌ಗಳಂತಹ ಸಾಧನಗಳನ್ನು ಬಳಸಿ. ಸಂಗೀತವನ್ನು ಕೇಳುವಾಗ, ವಾಲ್ಯೂಮ್ ಅನ್ನು ಮಧ್ಯಮ ಮಟ್ಟದಲ್ಲಿ ಇರಿಸಿ. ಹಾಗೆಯೇ ನಿಮ್ಮ ಕಿವಿಗಳಿಗೆ ಸ್ವಲ್ಪ ವಿಶ್ರಾಂತಿ ನೀಡಲು ವಿರಾಮಗಳನ್ನು ತೆಗೆದುಕೊಳ್ಳಿ.

ವೃತ್ತಿಪರರ ಸಹಾಯವನ್ನು ಪಡೆಯಿರಿ: ಕಿವಿನೋವು, ಕೇಳಲು ತೊಂದರೆ ಮುಂತಾದ ಅತಿಯಾದ ಇಯರ್‌ವಾಕ್ಸ್ (ಕುಗ್ಗೆ) ರಚನೆಯ ಲಕ್ಷಣಗಳನ್ನು ನೀವು ಅನುಭವಿಸಿದರೆ, ಕೂಡಲೇ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಇಎನ್‍ಟಿ ವೈದ್ಯರು, ವಿಶೇಷ ಉಪಕರಣಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ಇಯರ್‌ವಾಕ್ಸ್ ಅನ್ನು ಸುರಕ್ಷಿತವಾಗಿ ತೆಗೆದುಹಾಕಬಹುದು. ಮಕ್ಕಳಿಗೂ ಎಂದಿಗೂ ಈಯರ್ ಬಡ್ಸ್ ಹಾಕಲೇ ಬಿಡಿ. ಮಕ್ಕಳ ಕುಗ್ಗೆ ತೆಗಿಸಲು ನೀವು ವೈದ್ಯರನ್ನು (ಇಎನ್‍ಟಿ) ಸಂಪರ್ಕಿಸುವುದೇ ಉತ್ತಮ.

ಈ ಸಲಹೆಗಳ ಹೊರತಾಗಿ, ನೀವು ನಿಮ್ಮ ಕಿವಿಯ ಆರೋಗ್ಯವನ್ನು ಪರೀಕ್ಷಿಸುತ್ತಿರಿ. ನಿಯಮಿತ ತಪಾಸಣೆಗಾಗಿ ಇಎನ್‍ಟಿ ವೈದ್ಯರನ್ನು ಸಂಪರ್ಕಿಸಬಹುದು. ವಿಶೇಷವಾಗಿ ನೀವು ಕಿವಿಯ ಸೋಂಕುಗಳು, ಶ್ರವಣ ನಷ್ಟ ಅಥವಾ ಇತರ ಕಿವಿ-ಸಂಬಂಧಿತ ಅನಾರೋಗ್ಯವನ್ನು ಹೊಂದಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

Whats_app_banner