Health Tips: ಮಳೆಗಾಲದಲ್ಲಿ ಕಾಡುವ ಶಿಲೀಂಧ್ರ ಸೋಂಕಿನ ಅಪಾಯಕ್ಕೆ ಮನೆಯಲ್ಲೇ ಇದೆ ಪರಿಹಾರ: ಬಳಸಿ ಈ ಮನೆಮದ್ದು
ಶಿಲೀಂಧ್ರ ಸೋಂಕು ಹೇಳಿಕೊಳ್ಳಲು ಸಣ್ಣ ಸಮಸ್ಯೆ ಎನಿಸಿದರೂ ಸಹ ಇದು ಕೊಡುವ ಕಾಟ ಅಷ್ಟಿಷ್ಟಲ್ಲ. ಆದರೆ ಶಿಲೀಂಧ್ರ ಸೋಂಕಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮನೆಯಲ್ಲಿಯೇ ಇರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಶಿಲೀಂಧ್ರ ಸೋಂಕು ನಿಮ್ಮ ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳಬಹುದಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಋತುಮಾನಗಳು ಬದಲಾಗುತ್ತಿದ್ದಂತೆಯೇ ಕಾಯಿಲೆಗಳು ಒಂದೊಂದಾಗಿಯೇ ಅಂಟಿಕೊಳ್ಳಲು ಆರಂಭಿಸುತ್ತದೆ. ಅದರಲ್ಲೂ ಮಳೆಗಾಲದಲ್ಲಂತೂ ಗಂಟಲು ನೋವಿನಿಂದ ಹಿಡಿದು ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳವರೆಗೆ ಬರುವ ರೋಗ ರುಜಿನಗಳು ಒಂದೆರಡಲ್ಲ. ಮಳೆಗಾಲದಲ್ಲಿ ಶಿಲೀಂಧ್ರ ಸೋಂಕುಗಳ ಅಪಾಯ ಅಧಿಕವಾಗಿರುತ್ತದೆ. ಆದರೆ ನಾವು ಕೆಲವೊಂದು ಗಿಡಮೂಲಿಕೆಗಳನ್ನೇ ಬಳಸಿಕೊಂಡು ಶಿಲೀಂಧ್ರ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಿದೆ. ಹಾಗಾದರೆ ಶಿಲೀಂಧ್ರ ಸೋಂಕುಗಳ ವಿರುದ್ಧ ಹೋರಾಡುವ ಪರಿಣಾಮಕಾರಿ ಗಿಡಮೂಲಿಕೆಗಳ ಬಗ್ಗೆ ತಿಳಿಯೋಣ:
ಕಹಿಬೇವಿನ ಎಲೆ: ಯುಗಾದಿ ಹಬ್ಬದ ಸಂದರ್ಭದಲ್ಲಿ ಕಹಿಬೇವಿನ ಕಷಾಯ ಕುಡಿಯುವುದು, ಬೆಲ್ಲದ ಜೊತೆ ಬೇವನ್ನೂ ಸೇರಿಸಿಕೊಂಡು ಸವಿಯುವುದು ನಿಮಗೆ ತಿಳಿದಿರಬಹುದು. ಇವುಗಳು ಕಹಿ ರುಚಿಯನ್ನು ಹೊಂದಿದ್ದರೂ ಸಹ ಸಾಕಷ್ಟು ಔಷಧೀಯ ಮೌಲ್ಯಗಳನ್ನು ಹೊಂದಿದೆ. ಕಹಿಬೇವಿನ ಎಲೆಗಳಲ್ಲಿ ಅಡಕವಾಗಿರುವ ನಿಂಬಿಡಿನ್ ಹಾಗೂ ನಿಂಬಿನ್ ಸಂಯುಕ್ತಗಳು ಶಿಲಿಂಧ್ರಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
ಕಾಡು ಜೀರಿಗೆ: ನೋಡಲು ಥೇಟ್ ಜೀರಿಗೆಯಂತೆ ಕಂಡರೂ ಕೂಡ ಇವುಗಳು ಕಹಿ ರುಚಿಯನ್ನು ಹೊಂದಿರುತ್ತವೆ. ಮುಖ್ಯವಾಗಿ ಇವುಗಳನ್ನು ಮಧುಮೇಹ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಇದರ ಜೊತೆಯಲ್ಲಿ ಕಾಡು ಜೀರಿಗೆಯ ಕಷಾಯವು ಹುಳು ರೋಗಗಳಂತಹ ಶಿಲೀಂಧ್ರ ಸೋಂಕುಗಳನ್ನು ಹೋಗಲಾಡಿಸಲು ಕೂಡ ಸಹಾಯ ಮಾಡುತ್ತದೆ.
ಹೊಂಗೆ ಎಣ್ಣೆ: ಹೊಂಗೆ ಮರದಿಂದ ತಯಾರಿಸುವ ಎಣ್ಣೆ ಕೂಡ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹುರಿದ ಬೇವಿನ ಎಲೆಯನ್ನು ಹೊಂಗೆ ಎಣ್ಣೆಗೆ ಸೇರಿಸಿ ಬಳಿಕ ಈ ಮಿಶ್ರಣವನ್ನು ಮೈಗೆ ಹಚ್ಚಿಕೊಂಡು ಕೆಲವು ನಿಮಿಷಗಳನ್ನು ಬಿಟ್ಟು ಸ್ನಾನ ಮಾಡುವುದರಿಂದ ಶಿಲೀಂಧ್ರ ಸೋಂಕುಗಳಿಂದ ಪರಿಹಾರ ಕಾಣಬಹುದಾಗಿದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಕೂಡ ಶಿಲೀಂಧ್ರ ಸೋಂಕಿನ ವಿರುದ್ಧ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ರಸ ತೆಗೆದು ಇದನ್ನು ಕೊಬ್ಬರಿ ಎಣ್ಣೆಯೊಂದಿಗೆ ಸೇರಿಸಿ ಶಿಲೀಂಧ್ರ ಸೋಂಕು ತಾಗಿದ ಜಾಗಗಳಿಗೆ ಲೇಪಿಸಿಕೊಂಡು ಬಳಿಕ ಸ್ನಾನ ಮಾಡುವ ಮೂಲಕ ನೀವು ಈ ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ.
ಅರಿಶಿಣ: ಅರಿಶಿಣ ಅತ್ಯಂತ ಪ್ರಮುಖ ಆಂಟಿಆಕ್ಸಿಡಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಮಳೆಗಾಲದಲ್ಲಿ ನೀವು ಅರಿಶಿಣವನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದು ಅಥವಾ ಒಂದು ಸ್ವಲ್ಪ ಬೆಚ್ಚನೆಯ ನೀರಿಗೆ ಶುದ್ಧ ಅರಿಶಿಣದ ಪುಡಿಯನ್ನು ಸೇರಿಸಿ ಕುಡಿಯುವ ಮೂಲಕ ಶಿಲೀಂಧ್ರ ಸೋಂಕಿನಿಂದ ಪಾರಾಗಬಹುದಾಗಿದೆ.
ಅಲೋವೇರಾ: ಅಲೋವೇರಾ ಅಥವಾ ಲೋಳೆಸರ ಸಾಮಾನ್ಯವಾಗಿ ಎಲ್ಲರ ಮನೆ ಅಂಗಳದಲ್ಲಿಯೂ ಬೆಳೆಯುತ್ತದೆ. ಇವುಗಳು ಕೂಡ ಪ್ರಮುಖ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಶಿಲೀಂಧ್ರ ಸೋಂಕು ಬಾಧಿಸಿದ ಜಾಗಗಳಲ್ಲಿ ಇವುಗಳ ರಸವನ್ನು ಲೇಪಿಸಿಕೊಂಡಲ್ಲಿ ಕ್ರಮೇಣವಾಗಿ ಸೋಂಕು ಮಾಯವಾಗುತ್ತದೆ.
ಮಳೆಗಾಲದಲ್ಲಿ ಪ್ರಮುಖವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖ ಕಾರ್ಯವಾಗಿದೆ. ಹೊರಗಡೆ ನೀರಿನಲ್ಲಿ ಕಾಲಿಡುವಾಗ ಪಾದರಕ್ಷೆಗಳ ಬಳಕೆ, ಹೊರಗಡೆಯಿಂದ ಬಂದ ಕೂಡಲೇ ಬಿಸಿ ನೀರಿನಲ್ಲಿ ಸ್ನಾನ, ಚೆನ್ನಾಗಿ ಒಣಗಿದ ಬಟ್ಟೆಗಳನ್ನೇ ಧರಿಸುವುದು ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಶಿಲೀಂಧ್ರ ಸೋಂಕು ನಿಮ್ಮನ್ನು ಬಾಧಿಸುವ ಅಪಾಯ ಕಡಿಮೆ ಇರುತ್ತದೆ.
ವಿಭಾಗ