ಉದ್ದನೆಯ ಉಗುರು, ಒದ್ದೆಯಾದ ಶೂ; ಮಳೆಗಾಲದಲ್ಲಿ ಈ ತಪ್ಪು ಮಾಡದಿರಿ: ಶುಚಿತ್ವ ಕಾಪಾಡಲು ಇಲ್ಲಿವೆ ಟಿಪ್ಸ್
Personal Hygiene: ಮಳೆಗಾಲದಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ. ಹಾಗಂತಾ ಆರೋಗ್ಯದ ವಿಚಾರವಾಗಿ ರಾಜಿ ಮಾಡಿಕೊಳ್ಳಲಾಗದು. ಕೆಲವೊಂದು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಆರೋಗ್ಯಕರ ಜೀವನಶೈಲಿಯಲ್ಲಿ ಶುಚಿತ್ವ ಮಹತ್ವದ ಪಾತ್ರ ವಹಿಸುತ್ತದೆ. ಮಳೆಗಾಲದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ. ಬಟ್ಟೆಗಳು ಬೇಗನೆ ಒಣಗುವುದಿಲ್ಲ, ಕೆಸರಿನಲ್ಲಿ ಓಡಾಡಬೇಕಾಗುತ್ತದೆ. ಹೀಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಮಳೆಗಾಲದಲ್ಲಿ ಸೋಂಕುಗಳು ಮತ್ತು ರೋಗಗಳ ಅಪಾಯ ಹೆಚ್ಚಿರುವುದರಿಂದ ವೈಯಕ್ತಿಕ ಸ್ವಚ್ಛತೆ ಹಾಗೂ ಮನೆ ಅಥವಾ ಕಚೇರಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ತೀರಾ ಅನಿವಾರ್ಯ. ಉತ್ತಮ ನೈರ್ಮಲ್ಯ ಅಭ್ಯಾಸಗಳ ಮೂಲಕ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಮಳೆಗಾಲದುದ್ದಕ್ಕೂ ಶುಚಿತ್ವವನ್ನು ಕಾಪಾಡಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ನೀಡಿದ್ದೇವೆ.
ನೀರು: ನೀವು ಕುಡಿಯುವ ನೀರು ಶುದ್ಧವಾಗಿರಲಿ. ಫಿಲ್ಟರ್ ನೀರು ಅಥವಾ ಕಾದಾರಿದ ನೀರಿಗೆ ಆದ್ಯತೆ ಕೊಡಿ. ಅಪರಿಚಿತ ಮೂಲಗಳಿಂದ ನೀರು ಕುಡಿಯುವುದನ್ನು ತಪ್ಪಿಸಿ. ಕೆಲವರ ಮನೆಯಲ್ಲಿ ಮಳೆ ನೀರು ಸಂಗ್ರಹಿಸಿಟ್ಟ ಡ್ರಮ್/ತೊಟ್ಟಿ ಒಳಗೆ ಸಣ್ಣ ಸಣ್ಣ ಕ್ರಿಮಿಗಳಾಗಿರುತ್ತದೆ. ಅದೇ ನೀರನ್ನು ಸ್ನಾನಕ್ಕೆ, ಪಾತ್ರೆ-ಬಟ್ಟೆ ತೊಳೆಯಲು ಬಳಸಲಾಗುತ್ತದೆ. ಕಲುಷಿತ ನೀರು ಕಾಲರಾ, ಟೈಫಾಯಿಡ್ ಮತ್ತು ಗ್ಯಾಸ್ಟ್ರೋಎಂಟರೈಟಿಸ್ ಸೇರಿದಂತೆ ಇತರ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ನೀರು ಸಂಗ್ರಹಿಸುವ ತೊಟ್ಟಿಯನ್ನು ಆಗಾಗ್ಗ ಸ್ವಚ್ಛಗೊಳಿಸುತ್ತಿರಿ. ಹಾಗೆಯೇ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಡೆಂಗ್ಯೂ, ಮಲೇರಿಯಾ ಸೇರಿದಂತೆ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಕೂದಲು: ಮಳೆಗಾಲದಲ್ಲಿ ತಲೆಸ್ನಾನ ಮಾಡಿದರೆ ಹೆಣ್ಣುಮಕ್ಕಳ ಕೂದಲು ಬೇಗ ಒಣಗುವುದಿಲ್ಲ. ಹಾಗಂತ ತಲೆ ಒಣಗಿಸಿಕೊಳ್ಳದೆ ಕೂದಲು ಕಟ್ಟಿಕೊಂಡರೆ ನೆತ್ತಿಯ ಮೇಲೆ ಶಿಲೀಂಧ್ರಗಳ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಒದ್ದೆಯಾದ ಕೂದಲನ್ನು ಕಟ್ಟಿಕೊಳ್ಳದೆ ಅದನ್ನು ಆರಲು ಬಿಡಿ. ತಕ್ಷಣಕ್ಕೆ ಹೊರಗಡೆ ಹೋಗುವುದಿದ್ದರೆ ಸ್ವಲ್ಪ ಕೂದಲಿಗೆ ಮಾತ್ರ ಸೆಂಟರ್ ಕ್ಲಿಪ್ ಹಾಕಿ.
ಉಗುರು: ಮಳೆಗಾಲದಲ್ಲಿ ಉದ್ದನೆಯ ಉಗುರು ಬಿಡಬೇಡಿ. ಏಕೆಂದರೆ ಉದ್ದನೆಯ ಉಗುರುಗಳು ಕೊಳಕು ಮತ್ತು ಸೂಕ್ಷ್ಮಾಣುಗಳನ್ನು ಹಿಡಿದಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚು. ಚಿಕ್ಕ ಉಗುರಿದ್ದರೂ ಕೂಡ ಸ್ವಚ್ಛವಾಗಿಟ್ಟುಕೊಳ್ಳಿ.
ಮುಖ: ಮಳೆಗಾಲದಲ್ಲಿ ಹೆಚ್ಚು ಬೆವರದಿದ್ದರೂ ಕೂಡ ಮುಖದ ಮೇಲೆ ಇರುವ ಹೆಚ್ಚುವರಿ ಎಣ್ಣೆ ಮತ್ತು ಕೊಳೆಯನ್ನು ತೊಡೆದುಹಾಕಲು ದಿನಕ್ಕೆ ಎರಡು ಬಾರಿ ಮುಖ ತೊಳೆಯುವುದನ್ನು ಮಿಸ್ ಮಾಡಬೇಡಿ. ಎಂದಿನಂತೆ ಮಾಯಿಶ್ಚರೈಸರ್ ಕೂಡ ಬಳಸಿ.
ಜೀವನಶೈಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Hair Care: ಮಳೆ ಶುರುವಾದ ಬೆನ್ನಲ್ಲೇ ಅತಿಯಾಗಿ ಕೂದಲು ಉದುರಲು ಆರಂಭವಾಗಿದ್ಯಾ? ಮಳೆಗಾಲದಲ್ಲಿ ಹೀಗಿರಲಿ ಕೂದಲ ಕಾಳಜಿ
ಕೈಗಳ ನೈರ್ಮಲ್ಯ: ಶೌಚಾಲಯವನ್ನು ಬಳಸಿದ ನಂತರ ಮತ್ತು ಆಹಾರವನ್ನು ಸೇವಿಸುವ ಮೊದಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಿರಿ. ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ವಾಶ್ ಬಳಕೆ ಮತ್ತಷ್ಟು ಸೂಕ್ತ.
ಪಾದಗಳು: ಒದ್ದೆಯಾದ ಸಾಕ್ಸ್ ಮತ್ತು ಶೂ/ಬೂಟುಗಳು ಶಿಲೀಂಧ್ರಗಳ ಸೋಂಕನ್ನು ಉಂಟುಮಾಡುತ್ತದೆ. ಹೀಗಾಗಿ ಮಳೆಗಾಲದಲ್ಲಿ ಚಪ್ಪಲ್ ಬಳಕೆ ಹೆಚ್ಚು ಮಾಡಿ. ಇಲ್ಲವಾದಲ್ಲಿ ಒಣಗಿದ ಸಾಕ್ಸ್ ಮತ್ತು ಶೂ/ಬೂಟುಗಳನ್ನು ಮಾತ್ರ ಬಳಸಿ.
ಸಂಪೂರ್ಣ ದೇಹ ಶುಚಿಗೊಳಿಸುವಿಕೆ: ಮಳೆಗಾಲದಲ್ಲಿ ಸ್ನಾನ ಮಾಡಲು ಸೋಮಾರಿತನ ತೋರಿಸುವವರೂ ಇದ್ದಾರೆ. ಆದರೆ ಪ್ರತಿನಿತ್ಯ ಸ್ನಾನ ಮಾಡಿ ಹಾಗೂ ಒಳಉಡುಪು, ಬಟ್ಟೆ ಬದಲಿಸಿ. ಒದ್ದೆಯಾದ ಒಳಉಡುಪು ಬಳಸಬೇಡಿ. ಕಾಲ್ಬೆರಳುಗಳ ನಡುವಿನ ಸ್ಥಳದಿಂದ ಹಿಡಿದು ತಲೆಯವರೆಗೂ ಚೆನ್ನಾಗಿ ಶುಚಿಗೊಳಿಸಿ. ಇತರರ ಟವೆಲ್, ಕರವಸ್ತ್ರಗಳನ್ನು ಬಳಸಬೇಡಿ. ಕರವಸ್ತ್ರವನ್ನು ಪ್ರತಿನಿತ್ಯ ಶುದ್ಧಗೊಳಿಸಿ.
ಆಹಾರ: ಮಳೆಗಾಲದಲ್ಲಿ ಬೀದಿಬದಿ ಆಹಾರಕ್ಕಿಂತ ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನು ಸೇವಿಸಿ. ತಿನ್ನುವ ಮೊದಲು, ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ.
ಉಳಿದಂತೆ ಪ್ರಯಾಣ ಮಾಡುವಾಗ ಹಾಗೂ ಇತರ ಸ್ಥಳಗಳಿಗೆ ತೆರಳಿದಾಗ ಅಲ್ಲಿನ ಶೌಚಾಲಯ ಬಳಸುವಾಗ ಜಾಗೃತೆ ವಹಿಸಿ. ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಟಿಶ್ಯು ಪೇಪರ್ ಜೊತೆಯಲ್ಲಿಯೇ ಇಟ್ಟುಕೊಂಡಿರಿ.
