ಪುರುಷರಲ್ಲಿ ಸದ್ದಿಲ್ಲದೇ ಹರಡುತ್ತಿದೆ ಕ್ಯಾನ್ಸರ್; ಈ ಮಾರಣಾಂತಿಕ ಕಾಯಿಲೆ ತಡೆಯಲು ನಿಮ್ಮ ಜೀವನಶೈಲಿಯನ್ನು ಇಂದೇ ಬದಲಿಸಿಕೊಳ್ಳಿ
ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಕ್ಯಾನ್ಸರ್‌ನ ಪ್ರಮಾಣ ಏರಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅವರ ಜೀವನಶೈಲಿ. ನಮ್ಮ ದೈನಂದಿನ ಕ್ರಮದಲ್ಲಿ ಈ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದರೆ ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಅದಕ್ಕಾಗಿ ಇಂದೇ ಜೀವನಶೈಲಿಯನ್ನು ಬದಲಿಸಿಕೊಳ್ಳುವತ್ತ ಗಮನ ಹರಿಸಬೇಕು. (ಬರಹ: ಮೇಘನಾ ಬಿ.)

ಪ್ರಪಂಚದಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿರುವ ಮಾರಕ ರೋಗಗಳಲ್ಲಿ ಕಾರಣಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಇತ್ತೀಚೆಗೆ ಪುರುಷರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳೆಂದರೆ ಶ್ವಾಸಕೋಶದ ಕ್ಯಾನ್ಸರ್, ಬಾಯಿ-ಗಂಟಲು ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್. ಕಳಪೆ ಜೀವನಶೈಲಿಯು ಈ ಕ್ಯಾನ್ಸರ್‌ಗಳಿಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನಮ್ಮನ್ನು ನಂಬಿ ಒಂದು ಕುಟುಂಬವಿದೆ ಎಂಬುದನ್ನೂ ಯೋಚಿಸದೆ ನಾವು ರೂಢಿಸಿಕೊಳ್ಳುವ ಚಟಗಳು ನಿಮ್ಮ ಜೀವವನ್ನು ಮಾತ್ರ ಬಲಿತೆಗೆದುಕೊಳ್ಳುವುದಿಲ್ಲ, ಬದಲಾಗಿ ನಿಮ್ಮನ್ನು ನಂಬಿದವರ ಜೀವನವನ್ನೇ ನಾಶಮಾಡುತ್ತದೆ. ಪುರುಷರಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಜೀವನಶೈಲಿ ಈ 5 ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ.
ತಂಬಾಕು
ಅನೇಕ ಜನರಲ್ಲಿ ಕ್ಯಾನ್ಸರ್ ಬರಲು ತಂಬಾಕು ಮುಖ್ಯ ಕಾರಣ ಎಂಬುದನ್ನು ವಿವಿಧ ಅಧ್ಯಯನಗಳು ಸಾಬೀತುಪಡಿಸಿವೆ. ತಂಬಾಕು ಸೇವನೆಯಿಂದಾಗಿ ಶ್ವಾಸಕೋಶದ ಕ್ಯಾನ್ಸರ್, ಬಾಯಿ ಮತ್ತು ಗಂಟಲಿನ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್ ಮತ್ತು ಜಠರಗರುಳಿನ ಕ್ಯಾನ್ಸರ್ ಅಪಾಯ ಹೆಚ್ಚಿದೆ. ಹೀಗಾಗಿ ಸಿಗರೇಟ್, ಬೀಡಿ, ಗುಟ್ಕಾ ತ್ಯಜಿಸುವುದು ನಿಮ್ಮ ಪ್ರಾಣವನ್ನು ಉಳಿಸುತ್ತದೆ.
ಮದ್ಯಪಾನ
ಆಲ್ಕೋಹಾಲ್ ಸೇವನೆಯಿಂದಾಗಿ ಬಾಯಿ ಮತ್ತು ಗಂಟಲಿನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಮದ್ಯಪಾನವನ್ನು ಕಡಿಮೆ ಮಾಡುತ್ತಾ ನಿಧಾನವಾಗಿ ಅದನ್ನು ಸಂಪೂರ್ಣ ತ್ಯಜಿಸಬೇಕು.
ಸ್ಥೂಲಕಾಯ
ಅತಿಯಾಗಿ ತಿನ್ನುವುದರಿಂದ ಮಾತ್ರ ಸ್ಥೂಲಕಾಯತೆ ಬರುತ್ತದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಆರೋಗ್ಯಕರ ಆಹಾರ ತಿನ್ನದೇ ಅನಾರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದಲೂ ಬೊಜ್ಜು ಬರುತ್ತದೆ. ಬೊಜ್ಜು ಮತ್ತು ಕೊಲೆಸ್ಟ್ರಾಲ್ ಮಟ್ಟ ಜಾಸ್ತಿ ಇದ್ದರೆ ಕೊಲೊರೆಕ್ಟಲ್, ಪ್ರಾಸ್ಟೇಟ್, ಯಕೃತ್ತು, ಹೊಟ್ಟೆ, ಬಾಯಿ ಮತ್ತು ಗಂಟಲಿನ ಕ್ಯಾನ್ಸರ್ ಬರುವ ಅಪಾಯವಿದೆ. ಸ್ಯಾಚುರೇಟೆಡ್ ಕೊಬ್ಬುಗಳು, ಕೆಂಪು ಮಾಂಸ, ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರ, ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಸೇವನೆಯು ಸ್ಥೂಲಕಾಯತೆ ಹೆಚ್ಚಿಸಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಹೀಗಾಗಿ ಹಣ್ಣು, ತರಕಾರಿ, ಧಾನ್ಯ ಸೇರಿದಂತೆ ಆರೋಗ್ಯಕರ ಮತ್ತು ಪೋಷಕಾಂಶಭರಿತ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ಬೆಳವಣಿಗೆಯನ್ನು ಶೇ 30 ರಿಂದ 50 ರಷ್ಟು ತಡೆಯಬಹುದು ಎಂದು ಅಧ್ಯಯನಗಳು ತಿಳಿಸಿವೆ. ಕೆಂಪು ಮಾಂಸದ ಬದಲಾಗಿ ಚಿಕನ್ ಮತ್ತು ಮೀನು ಸೇವನೆ ಒಳ್ಳೆಯದು.
ದೈಹಿಕ ಚಟುವಟಿಕೆ ಇಲ್ಲದಿರುವುದು
ಪ್ರಸ್ತುತ ಹೆಚ್ಚಿನವರದು ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ. ದೈಹಿಕ ಚಟುವಟಿಕೆಯೇ ಇರುವುದಿಲ್ಲ. ಪ್ರತಿಯೊಬ್ಬರೂ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಅದರಲ್ಲಿಯೂ ಒಂದೇ ಬದಿ ಕುಳಿತು ಅಥವಾ ನಿಂತು ಕೆಲಸ ಮಾಡುವವರು ಯೋಗ, ವ್ಯಾಯಾಮ, ವಾಕಿಂಗ್, ಸ್ಕಿಪ್ಪಿಂಗ್ ಹೀಗೆ ಯಾವುದಾದರೂ ದೈಹಿಕ ಚಟುವಟಿಕೆ ಮಾಡಿ ದೇಹವನ್ನು ದಂಡಿಸಲೇ ಬೇಕು. ಇದು ನಿಮ್ಮ ತೂಕ ಹೆಚ್ಚಳ ಮತ್ತು ಬೊಜ್ಜನ್ನು ನಿಯಂತ್ರಿಸುವ ಜೊತೆಗೆ ಕ್ಯಾನ್ಸರ್ ಅಪಾಯವನ್ನು ಶೇಕಡಾ 10 ರಿಂದ 15 ರಷ್ಟು ಕಡಿಮೆ ಮಾಡುತ್ತದೆ.
ಆನುವಂಶಿಕ ಕಾರಣಗಳು
ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅದು ನಿಮಗೆ ಬರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ನಿಮ್ಮ ಕುಟುಂಬದ ಕ್ಯಾನ್ಸರ್ ಇತಿಹಾಸವನ್ನು ತಿಳಿದುಕೊಳ್ಳಿ. ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ. ಇದರಿಂದ ಆನುವಂಶೀಯವಾಗಿ ಬರುವ ಕ್ಯಾನ್ಸರ್ ಅಪಾಯ ತಡೆಗಟ್ಟಲು ಇರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು ಹಾಗೂ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಗುಣಪಡಿಸಬಹುದು.
