Organ Donation: ಅಂತಿಮ ಹಂತದ ಅಂಗ ವೈಫಲ್ಯ ಚಿಕಿತ್ಸೆಯಲ್ಲಿ ಅಂಗಾಂಗ ದಾನದ ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Organ Donation: ಅಂತಿಮ ಹಂತದ ಅಂಗ ವೈಫಲ್ಯ ಚಿಕಿತ್ಸೆಯಲ್ಲಿ ಅಂಗಾಂಗ ದಾನದ ಮಹತ್ವ ತಿಳಿಯಿರಿ

Organ Donation: ಅಂತಿಮ ಹಂತದ ಅಂಗ ವೈಫಲ್ಯ ಚಿಕಿತ್ಸೆಯಲ್ಲಿ ಅಂಗಾಂಗ ದಾನದ ಮಹತ್ವ ತಿಳಿಯಿರಿ

ಭಾರತದಲ್ಲಿ ಮೃತ ವ್ಯಕ್ತಿಗಳ ಅಂಗಾಂಗ ದಾನದ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಸಾರ್ವಜನಿಕ ಶಿಕ್ಷಣ, ಅಂಗ ದಾನದ ಬಗ್ಗೆ ಅರಿವು ಹಾಗೂ ಪ್ರೇರಣೆ ನೀಡುವುದು ಅವಶ್ಯವಾಗಿದೆ. ಸಾರ್ವಜನಿಕ ಶಿಕ್ಷಣದ ಜೊತೆಗೆ ವೈದ್ಯಕೀಯ ವೃತ್ತಿಪರರಲ್ಲಿ ಜಾಗೃತಿ ಮೂಡಿಸುವುದು ಸಹ ಅತ್ಯಗತ್ಯ. ಅಂತಿಮ ಹಂತದ ಅಂಗ ವೈಫಲ್ಯ ಚಿಕಿತ್ಸೆಯಲ್ಲಿ ಅಂಗಾಂಗ ದಾನದ ಮಹತ್ವ ಏನು ಎಂಬುದನ್ನು ನೋಡಿ.

 ಡಾ. ರಾಜೀವ್ ಲೋಚನ್ (ಬಲಚಿತ್ರ)
ಡಾ. ರಾಜೀವ್ ಲೋಚನ್ (ಬಲಚಿತ್ರ)

ಮೆದುಳು ನಿರ್ಷ್ಕ್ರಿಯವಾದ ಅಥವಾ ಮರಣೋತ್ತರ ದೇಹ ದಾನ ಪ್ರಕ್ರಿಯೆಗೆ ಸಹಿ ಮಾಡಿದ ವ್ಯಕ್ತಿಗಳ ದೇಹದ ಅಂಗಾಗವು ಇನ್ನೊಂದು ವ್ಯಕ್ತಿಗೆ ಜೀವದಾನ ನೀಡುತ್ತದೆ. ಮೃತ ವ್ಯಕ್ತಿಗಳ ಅಂಗಾಂಗ ದಾನವು ತೀವ್ರವಾದ ಅಥವಾ ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ನಿರ್ಣಾಯಕ ಅಂಶವಾಗಿದೆ.

ಮೂತ್ರಪಿಂಡದ ಕಾಯಿಲೆ, ಲಿವರ್ ಡಿಕಂಪೆನ್ಸಷನ್ (ಸಿರೋಸಿಸ್ ರೋಗಿಗಳಲ್ಲಿ ಯಕೃತ್ತಿನ ಕಾರ್ಯದಲ್ಲಿ ತೀವ್ರ ಕ್ಷೀಣತೆ), ಕೊನೆಯ ಹಂತದ ಹೃದಯ ವೈಫಲ್ಯ ಮತ್ತು ತೀವ್ರವಾದ ಶ್ವಾಸಕೋಶದ ಕಾಯಿಲೆಯಂತಹ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಅಂಗಾಂಗ ಕಸಿಯ ಅಗತ್ಯತೆ ಅನಿವಾರ್ಯವಾಗಿದೆ. ಕೆಲವರಿಗೆ ಸಂಯೋಜಿತ ಅಂಗ ಕಸಿಯ ಅವಶ್ಯಕವಾಗಬಹುದು. ಆದಾಗ್ಯೂ, ಈ ಜೀವ ಉಳಿಸುವ ಕಾರ್ಯವಿಧಾನಗಳ ಯಶಸ್ಸು ಮೃತ ದಾನಿಗಳಿಂದ ಅಂಗಗಳ ಲಭ್ಯತೆಯ ಮೇಲೆ ನಿರ್ಧರಿತವಾಗಿದೆ.

ಕೆಲವು ರೋಗಿಗಳಿಗೆ ಜೀವಂತ ದಾನಿಗಳ ಕಸಿ ಸಾಧ್ಯವಿದ್ದರೂ, ಮೂತ್ರಪಿಂಡ ವೈಫಲ್ಯ ಅಥವಾ ಲಿವರ್ ಡಿಕಂಪೆನ್ಸಷನ್, ಹೃದಯ, ಶ್ವಾಸಕೋಶ ಅಥವಾ ಮೇದೋಜ್ಜೀರಕ ಗ್ರಂಥಿಯ ವೈಫಲ್ಯ ಹೊಂದಿರುವ ವ್ಯಕ್ತಿಗಳು ಹೆಚ್ಚಾಗಿ ಮೆದುಳು ಸತ್ತ (ಬ್ರೈನ್ ಡೆಡ್) ಅಥವಾ ಮರಣೋತ್ತರ ದಾನಿಗಳ ಅಂಗಗಳ ಮೇಲೆ ಅವಲಂಬಿತರಾಗಿರುತ್ತಾರೆ. ಹೆಚ್ಚಿನ ಬೇಡಿಕೆಯ ಹೊರತಾಗಿಯೂ, ಅಂಗಗಳ ಪೂರೈಕೆ ಮತ್ತು ಬೇಡಿಕೆಯ ನಡುವೆ ಗಮನಾರ್ಹ ಅಸಮಾನತೆ ಇದೆ.

ಭಾರತದಲ್ಲಿ, ಅಂಗಾಂಗ ದಾನದ ಪ್ರಮಾಣವು ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿದೆ, ಪ್ರತಿ ಮಿಲಿಯನ್ ಜನಸಂಖ್ಯೆಗೆ 0.2 ರಿಂದ 1ರಷ್ಟಿದೆ, ಇದು ಅಂಗಾಂಗ ಕಸಿ ಅಗತ್ಯವಿರುವ ಮೂರರಿಂದ ನಾಲ್ಕು ಲಕ್ಷ ವ್ಯಕ್ತಿಗಳಿಗೆ ಹೋಲಿಸಿದರೆ ಕ್ಷೀಣಿಸುತ್ತದೆ. ಈ ಅಂಕಿ-ಅಂಶಗಳು ಬದಲಾಗುತ್ತಿದ್ದರೂ, ಹೆಚ್ಚಿನ ಪ್ರಮಾಣದ ಅಂಗದಾನದ ಅಗತ್ಯವನ್ನು ಕಡೆಗಣಿಸಲಾಗದು.

ಭಾರತದಲ್ಲಿ ಮೃತ ವ್ಯಕ್ತಿಗಳ ಅಂಗಾಂಗ ದಾನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸಾರ್ವಜನಿಕ ಶಿಕ್ಷಣ, ಅಂಗಾಂಗ ದಾನದ ಬಗ್ಗೆ ಅರಿವು ಮತ್ತು ಹೆಚ್ಚೆಚ್ಚು ಜನರನ್ನು ಅಂಗಾಂಗ ದಾನಕ್ಕೆ ಮುಂದಾಗುವಂತೆ ಪ್ರೇರೇಪಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕ ಶಿಕ್ಷಣದ ಜೊತೆಗೆ ವೈದ್ಯಕೀಯ ವೃತ್ತಿಪರರಲ್ಲಿ ಜಾಗೃತಿ ಮೂಡಿಸುವುದು ಸಹ ಅತ್ಯಗತ್ಯ. ಇದಕ್ಕಾಗಿ ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವುದು ಪ್ರಯೋಜನಕಾರಿಯಾಗಬಹುದು.

ಸಾರ್ವಜನಿಕರಲ್ಲಿ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸುವುದು

ಅಂಗಾಂಗ ದಾನದ ಬಗ್ಗೆ ಸಾಮಾನ್ಯ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಅತ್ಯಗತ್ಯ. ಪ್ರಚಲಿತ ಧಾರ್ಮಿಕ ತಪ್ಪುಗ್ರಹಿಕೆಯಿಂದಾಗಿ ಅನೇಕ ವ್ಯಕ್ತಿಗಳು ಅಂಗ ದಾನವು ಮರಣಾನಂತರದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಗಳನ್ನು ಹೊಂದಿದ್ದಾರೆ. ಅಂಗಾಂಗ ದಾನವನ್ನು ಜೀವಗಳನ್ನು ಉಳಿಸುವ ಉದಾತ್ತ ಕಾರ್ಯವೆಂದು ನೋಡುವುದು ಮುಖ್ಯವಾಗಿದೆ. ಅಂಗಾಂಗ ದಾನ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ದೇಹದಿಂದ ಅಂಗಾಂಗಗಳನ್ನು ತಗೆಯುವಾಗ ನಿಖರವಾದ ಕಾರ್ಯವಿಧಾನಗಳ ಅಳವಡಿಕೆಯಿಂದಾಗಿ ದೇಹದ ವಿಕಾರವನ್ನು ಕಡಿಮೆ ಮಾಡುವ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುವುದು ಈ ತಪ್ಪುಗ್ರಹಿಕೆಗಳನ್ನು ಪರಿಹರಿಸುವಲ್ಲಿ ಪ್ರಮುಖವಾಗಿದೆ.

ಸಾರ್ವಜನಿಕ ವರ್ತನೆ, ನಂಬಿಕೆಗಳನ್ನು ಬದಲಾಯಿಸುವುದು

ಅಂಗಾಂಗ ದಾನದ ಕಡೆಗೆ ಧನಾತ್ಮಕ ವರ್ತನೆಗಳನ್ನು ಉತ್ತೇಜಿಸುವುದು ಅತ್ಯಗತ್ಯ. ಅಂಗಾಂಗ ದಾನವನ್ನು ನಿಸ್ವಾರ್ಥ, ಪರಹಿತಚಿಂತನೆಯ ಕ್ರಿಯೆಯಾಗಿ ನೋಡಬೇಕು. ದಾನ ಮಾಡಿದ ಅಂಗಗಳು ಮತ್ತು ಅಂಗಾಂಶಗಳನ್ನು ಅವಲಂಬಿಸಿ ಒಬ್ಬ ದಾನಿ ಅನೇಕ ಜೀವಗಳನ್ನು (ಕೆಲವೊಮ್ಮೆ ಹತ್ತಕ್ಕಿಂತ ಹೆಚ್ಚು) ಉಳಿಸಬಹುದು. ಈ ದೃಷ್ಟಿಕೋನವು ದಾನದ ಸಂಸ್ಕೃತಿಯನ್ನು ಉದಾತ್ತ ಮತ್ತು ಉದಾರ ಕಾರ್ಯವಾಗಿ ಬೆಳೆಸಲು ಸಹಾಯ ಮಾಡುತ್ತದೆ.

ದಾನ ಮಾಡುವ ಇಚ್ಛೆಯನ್ನು ಪ್ರೋತ್ಸಾಹಿಸುವುದು ಭಾರತದಾದ್ಯಂತ ವಿವಿಧ ಉಪಕ್ರಮಗಳು ಅಂಗಾಂಗಗಳನ್ನು ದಾನ ಮಾಡುವ ಇಚ್ಛೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಶಾಲೆಗಳು ಮತ್ತು ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ಶಿಕ್ಷಣ ಅಭಿಯಾನಗಳು ವಿಶೇಷವಾಗಿ ಪರಿಣಾಮಕಾರಿಯಾಗಿದೆ, ಏಕೆಂದರೆ ಅವು ಯುವ ಪೀಳಿಗೆಯಲ್ಲಿ ಸಕಾರಾತ್ಮಕ ಮನೋಭಾವವನ್ನು ಹುಟ್ಟುಹಾಕುತ್ತವೆ, ಇದು ಅಂಗಾಂಗ ದಾನದ ಬಗ್ಗೆ ಕುಟುಂಬದ ಮೌಲ್ಯಗಳು ಮತ್ತು ಸಾಮಾಜಿಕ ನಿಯಮಗಳ ಮೇಲೆ ಪ್ರಭಾವ ಬೀರಬಹುದು.

ನೀತಿ, ಕಾನೂನು ಚೌಕಟ್ಟನ್ನು ಅರ್ಥಮಾಡಿಕೊಳ್ಳುವುದು

ಭಾರತದಲ್ಲಿ ಅಂಗಾಂಗ ದಾನವನ್ನು ನಿಯಂತ್ರಿಸುವ ಕಾನೂನು ಚೌಕಟ್ಟಿನ ಬಗ್ಗೆ, ನಿರ್ದಿಷ್ಟವಾಗಿ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯಿದೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ. ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಬೆಳೆಸುವುದು, ಅಂಗಾಂಗಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬುದರಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅಂಗಾಂಗ ಕಸಿಯಲ್ಲಿ ಅವರ ಪಾತ್ರಕ್ಕೆ ಆಸ್ಪತ್ರೆಗಳನ್ನು ಹೊಣೆಗಾರರನ್ನಾಗಿ ಮಾಡುವುದು ಇವೆಲ್ಲವೂ ಮೃತ ಅಂಗಾಂಗ ದಾನದ ಸಾರ್ವಜನಿಕ ಸ್ವೀಕಾರವನ್ನು ಸುಧಾರಿಸುವಲ್ಲಿ ನಿರ್ಣಾಯಕ ಹಂತಗಳಾಗಿವೆ.

ಮಾಧ್ಯಮದೊಂದಿಗೆ ತೊಡಗಿಸಿಕೊಳ್ಳುವುದು

ಅಂಗದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂಟೆನ್ಸಿವಿಸ್ಟ್‌ಗಳು ಮತ್ತು ಕಸಿ ಶಸ್ತ್ರಚಿಕಿತ್ಸಕರು ಸೇರಿದಂತೆ ಆರೋಗ್ಯ ವೃತ್ತಿಪರರೊಂದಿಗೆ ಸಹಕರಿಸುವ ಮೂಲಕ, ಮಾಧ್ಯಮವು ಅಂಗಾಂಗ ದಾನಗಳ ತುರ್ತು ಅಗತ್ಯವನ್ನು ಮತ್ತು ಅಂತಿಮ ಹಂತದ ಅಂಗ ವೈಫಲ್ಯದ ರೋಗಿಗಳ ಮೇಲೆ ಜೀವ ಉಳಿಸುವ ಪರಿಣಾಮವನ್ನು ಎತ್ತಿ ತೋರಿಸಬಹುದು.

(ಲೇಖನ: ಡಾ. ರಾಜೀವ್ ಲೋಚನ್, ಲೀಡ್ ಕನ್ಸಲ್ಟೆಂಟ್ - HPB, ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಮತ್ತು ರೋಬೋಟಿಕ್ ಸರ್ಜರಿ, ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಏರ್‌ಪೋರ್ಟ್ ರಸ್ತೆ & ಯಶವಂತಪುರ)

Whats_app_banner