ಬೇಯಿಸಿದ ಆಹಾರವನ್ನು ಎಷ್ಟು ಸಮಯದವರೆಗೆ ಫ್ರಿಡ್ಜ್‌ನಲ್ಲಿಡಬೇಕು, 3 ದಿನಗಳವರೆಗೆ ಇಡುವುದು ಸರಿಯೇ, ತಪ್ಪೇ?
ಆಹಾರ ಹೆಚ್ಚಿಗೆ ಉಳಿದರೆ ಅದನ್ನು ರೆಫ್ರಿಜರೇಟರ್‌ನಲ್ಲಿ ಶೇಖರಿಸುವುದು ಸಾಮಾನ್ಯ. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು 2-3 ದಿನಗಳಿಗಿಂತ ಹೆಚ್ಚಿಗೆ ಶೇಖರಿಸಿದರೆ ಅದರಿಂದ ಉಪಯೋಗಕ್ಕಿಂತ ಸಮಸ್ಯೆಯೇ ಹೆಚ್ಚು. ಯಾವ ಆಹಾರವನ್ನು ಎಷ್ಟು ಸಮಯ ಶೇಖರಿಸಬೇಕು ನೋಡೋಣ.

ಬಹುತೇಕರ ಮನೆಗಳಲ್ಲಿ ರೆಫ್ರಿಜರೇಟರ್ ಇರುತ್ತದೆ. ಚಳಿಗಾಲ, ಮಳೆಗಾಲ ಅಥವಾ ಬೇಸಿಗೆ ಯಾವುದೇ ಆಗಿರಲಿ, ಎಲ್ಲಾ ಸಮಯದಲ್ಲೂ ರೆಫ್ರಿಜರೇಟರ್ ಬಳಕೆ ಇದ್ದೇ ಇರುತ್ತದೆ. ತರಕಾರಿ, ಮಾಂಸ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ಲ್ಲಿ ಕೆಡದಂತೆ ಸಂರಕ್ಷಿಸಬಹುದು. ಇದಿಷ್ಟೇ ಅಲ್ಲದೆ ಬೇಯಿಸಿದ ಅಡುಗೆ ಹೆಚ್ಚಾಗಿ ಉಳಿದರೆ ಅದನ್ನೂ ರೆಫ್ರಿಜರೇಟರ್‌ನಲ್ಲಿ ಇಡುತ್ತೇವೆ. ಆದರೆ ಈ ರೀತಿ, ಮಾಡಿದ ಅಡುಗೆಯನ್ನು ನೀವು ಎಷ್ಟು ದಿನಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಮರುಬಳಕೆ ಮಾಡುತ್ತಿದ್ದೀರಿ? ಈ ರೀತಿ ಬಳಸಿದ ಸಾಮಾಗ್ರಿಗಳು ಆರೋಗ್ಯಕ್ಕೆ ಹಾನಿಕಾರಕವೇ ಇದರ ಬಗ್ಗೆ ಹೆಚ್ಚಿನ ಜನರು ಯೋಚಿಸುವುದಿಲ್ಲ.
ರೆಫ್ರಿಜರೇಟರ್‌ನಲ್ಲಿ ಯಾವ ಆಹಾರವನ್ನು ಎಷ್ಟು ಸಮಯ ಶೇಖರಿಸಬೇಕು?
ಕಲಸಿದ ಹಿಟ್ಟು
ಚಪಾತಿ, ದೋಸೆ ಅಥವಾ ರೊಟ್ಟಿ ಹಿಟ್ಟು ಹೆಚ್ಚಾಗಿ ಉಳಿದರೆ ಕೆಲವರು ಅದನ್ನು ರೆಫ್ರಿಜರೇಟರ್‌ನಲ್ಲಿಟ್ಟು ಮಧ್ಯಾಹ್ನ ಅಥವಾ ಸಂಜೆ ತಿನ್ನುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರು ವಾರಗಟ್ಟಲೆ ಇರುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ದೀರ್ಘಕಾಲದವರೆಗೆ ರೆಫ್ರಿಜರೇಟರ್‌ನಲ್ಲಿ ಇಡಲಾದ ಹಿಟ್ಟು ಆರೋಗ್ಯಕ್ಕೆ ಬಹಳ ಹಾನಿಕಾರಕ ಎಂಬುದು ನೆನಪಿರಲಿ. ಹೆಚ್ಚೆಂದರೆ ನೀವು ಸಂಜೆವರೆಗೂ ಹಿಟ್ಟನ್ನು ರೆಫ್ರಿಜರೇಟರ್‌ನಲ್ಲಿ ಇಡಬಹುದು. ಆದರೆ 2-3 ದಿನಗಳಷ್ಟು ಹಳೆಯದಾದ ಹಿಟ್ಟನ್ನು ಯಾವ ಕಾರಣಕ್ಕೂ ಬಳಸಬೇಡಿ. ಅದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದು ಮಲಬದ್ಧತೆ, ಆಮ್ಲೀಯತೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಬೇಯಿಸಿದ ಅನ್ನ
ಬೇಯಿಸಿದ ಅನ್ನವನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚು ಕಾಲ ಸಂಗ್ರಹಿಸಬಾರದು. ದೀರ್ಘಕಾಲದವರೆಗೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾದ ಅನ್ನದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ, ಇದು ಹೊಟ್ಟೆಗೆ ಹಾನಿಕಾರಕವಾಗಿದೆ. ಬೇಯಿಸಿದ ಅನ್ನವನ್ನು ರೆಫ್ರಿಜರೇಟರ್‌ನಲ್ಲಿ ಗರಿಷ್ಠ ಒಂದು ದಿನ ಶೇಖರಿಸಿಡುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಇದಕ್ಕಿಂತ ಹೆಚ್ಚು ಕಾಲ ಶೇಖರಿಸಿ ತಿನ್ನುವುದರಿಂದ ಅಜೀರ್ಣ ಉಂಟಾಗುತ್ತದೆ.
ಸಾಂಬಾರ್
ಬಹಳ ಜನರು ಸಾಂಬಾರನ್ನು ಕೂಡಾ ಬಹಳ ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಆದರೆ ಅದು ಪ್ರಯೋಜನಗಳ ಬದಲಿಗೆ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಸಾಂಬಾರನ್ನು ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲ ಸಂಗ್ರಹಿಸಿದರೆ, ಅದರ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ಇದಲ್ಲದೆ ಇದನ್ನು ತಿನ್ನುವುದು ಅಜೀರ್ಣ, ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಉದರ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಬೇಯಿಸಿದ ತರಕಾರಿಗಳು
ಯಾವುದೇ ಬೇಯಿಸಿದ ತರಕಾರಿಯನ್ನು ರೆಫ್ರಿಜರೇಟರ್‌ನಲ್ಲಿ 4-5 ಗಂಟೆಗಳ ಕಾಲ ಮಾತ್ರ ಸಂಗ್ರಹಿಸಬೇಕು. ನಂತರ ಅದನ್ನು ಬಳಸಬೇಕು. ವಿಶೇಷವಾಗಿ ಮಸಾಲೆಯುಕ್ತ ತರಕಾರಿಗಳನ್ನು ಇದಕ್ಕಿಂತ ಹೆಚ್ಚು ಕಾಲ ಸಂಗ್ರಹಿಸಬಾರದು. ವಾಸ್ತವವಾಗಿ, ತರಕಾರಿಗಳನ್ನು ದೀರ್ಘಕಾಲದವರೆಗೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೆ, ಅದರ ರುಚಿ ಹಾಳಾಗುತ್ತದೆ. ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿದೆ.
ಫ್ರಿಡ್ಜ್‌ನಲ್ಲಿ ಆಹಾರವನ್ನು ಸಂಗ್ರಹಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ರೆಫ್ರಿಜಿರೇಟರ್‌ನಲ್ಲಿ ಬೇಯಿಸಿದ ಆಹಾರವನ್ನು ಸಂಗ್ರಹಿಸುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮೊದಲನೆಯದಾಗಿ, ನಿಮ್ಮ ಫ್ರಿಡ್ಜ್ ಸ್ವಚ್ಛವಾಗಿದೆಯೇ ಖಚಿತಪಡಿಸಿಕೊಳ್ಳಿ, ಏಕೆಂದರೆ ಕೊಳಕು ಫ್ರಿಡ್ಜ್‌ನಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಆಹಾರವನ್ನು ಬೇಗ ಹಾಳು ಮಾಡಬಹುದು ಮತ್ತು ಸೋಂಕು ತಗುಲಬಹುದು. ಇದಲ್ಲದೆ, ಒಂದೇ ಸಮಯದಲ್ಲಿ ರೆಫ್ರಿಜರೇಟರ್‌ನಲ್ಲಿ ಬಹಳಷ್ಟು ಆಹಾರವನ್ನು ಸಂಗ್ರಹಿಸುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ಫ್ರಿಡ್ಜ್‌ನಲ್ಲಿ ಗಾಳಿ ಆಡಲು ಸ್ಥಳಾವಕಾಶವಿರುವುದಿಲ್ಲ, ಇದರಿಂದಾಗಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ರೆಫ್ರಿಜರೇಟರ್‌ನಲ್ಲಿಟ್ಟ ಆಹಾರ ಪದಾರ್ಥಗಳನ್ನು ಬಳಸುವ ಮುನ್ನ ಬಿಸಿ ಮಾಡುವುದು ಮರೆಯಬೇಡಿ. ಫ್ರಿಡ್ಜ್‌ನಲ್ಲಿ ಆಹಾರ ಸಂಗ್ರಹಿಸುವಾಗ, ಅದರ ತಾಪಮಾನವನ್ನು 2 ರಿಂದ 3 ಡಿಗ್ರಿಗಳಷ್ಟು ಮಾತ್ರ ಇರಿಸಿ.
