ಗಾತ್ರ ಚಿಕ್ಕದು ಆದರೆ ಪ್ರಯೋಜನ ದೊಡ್ಡದು; ಆರೋಗ್ಯಕರ ದೇಹಕ್ಕೆ ಹಸಿರು ತೊಂಡೆಕಾಯಿ ತಿನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗಾತ್ರ ಚಿಕ್ಕದು ಆದರೆ ಪ್ರಯೋಜನ ದೊಡ್ಡದು; ಆರೋಗ್ಯಕರ ದೇಹಕ್ಕೆ ಹಸಿರು ತೊಂಡೆಕಾಯಿ ತಿನ್ನಿ

ಗಾತ್ರ ಚಿಕ್ಕದು ಆದರೆ ಪ್ರಯೋಜನ ದೊಡ್ಡದು; ಆರೋಗ್ಯಕರ ದೇಹಕ್ಕೆ ಹಸಿರು ತೊಂಡೆಕಾಯಿ ತಿನ್ನಿ

ತೊಂಡೆಕಾಯಿಯಿಂದ ಪಲ್ಯ, ಸಾಂಬಾರು ಮುಂತಾದ ಅಡುಗೆ ತಯಾರಿಸಲಾಗುತ್ತದೆ. ಹತ್ತಾರು ಬೀಜ ಹೊಂದಿರುವ ತೊಂಡೆಕಾಯಿಯ ಪ್ರಯೋಜನವು ಹಲವು. ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದರಿಂದ ಹಿಡಿದು ಕಿಡ್ನಿಯ ಆರೋಗ್ಯ ಕಾಪಾಡುವವರೆಗೆ ತರಕಾರಿಯಾಗಿದೆ.

ಗಾತ್ರ ಚಿಕ್ಕದು ಆದರೆ ಪ್ರಯೋಜನ ದೊಡ್ಡದು; ಆರೋಗ್ಯಕರ ದೇಹಕ್ಕೆ ಹಸಿರು ತೊಂಡೆಕಾಯಿ ತಿನ್ನಿ
ಗಾತ್ರ ಚಿಕ್ಕದು ಆದರೆ ಪ್ರಯೋಜನ ದೊಡ್ಡದು; ಆರೋಗ್ಯಕರ ದೇಹಕ್ಕೆ ಹಸಿರು ತೊಂಡೆಕಾಯಿ ತಿನ್ನಿ (Pixabay)

ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಬೇಕೆಂದರೆ ಹಸಿರು ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಹಸಿರು ತರಕಾರಿಗಳನ್ನು ತಿನ್ನುವುದರಿಂದ ದೇಹ ಕ್ರಿಯಾಶೀಲವಾಗುತ್ತದೆ. ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಹಸಿರು ತರಕಾರಿಗಳ ಸಾಲಿಗೆ ತೊಂಡೆಕಾಯಿಯೂ ಸೇರುತ್ತದೆ. ಅದು ವಿಟಮಿನ್‌, ಖನಿಜ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ. ಇಂಗ್ಲೀಷ್‌ನಲ್ಲಿ ಪಾಯಿಂಟೆಡ್‌ ಗಾರ್ಡ್‌ (Pointed gourd) ಎಂದು ಕರೆಯಲ್ಪಡುವ ತೊಂಡೆಕಾಯಿ ಸಾಮಾನ್ಯವಾಗಿ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಸಿಗುವ ತರಕಾರಿ. ಇದು ಕುಕ್ಕುರ್‌ಬಿಟಾಸಿಯಾ ಕುಟುಂಬಕ್ಕೆ ಸೇರಿದ ತರಕಾರಿ. ತೊಂಡೆಕಾಯಿ ಹಸಿರು ಬಣ್ಣದ ಹೊರಮೈ, ಅದರ ಮೇಲೆ ಬಿಳಿ ಬಣ್ಣದ ಉದ್ದ ಗೆರೆಗಳಿದ್ದು ಬೆರಳು ಗಾತ್ರದಲ್ಲಿರುತ್ತದೆ. ಒಳಗಡೆ ಚಿಕ್ಕ ಚಿಕ್ಕ ಬೀಜಗಳಿಂದ ಕೂಡಿದೆ. ಅದರಿಂದ ಪಲ್ಯ, ಸಾಂಬಾರು ಮುಂತಾದ ಬಗೆಬಗೆಯ ಅಡುಗೆಗಳನ್ನು ತಯಾರಿಸಲಾಗುತ್ತದೆ.

ತೊಂಡೆಕಾಯಿ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದರಿಂದ ಹಿಡಿದು ಕಿಡ್ನಿಯ ಆರೋಗ್ಯ ಕಾಪಾಡುವವರೆಗೆ ಉಪಯುಕ್ತ ತರಕಾರಿಯಾಗಿದೆ.

ತೊಂಡೆಕಾಯಿಯ 9 ಆರೋಗ್ಯ ಪ್ರಯೋಜನಗಳು

  • ಪೋಷಕಾಂಶಗಳು ಹೇರಳವಾಗಿವೆ

ತೊಂಡೆಕಾಯಿ ಪೋಷಕಾಂಶಗಳಿಂದ ಕೂಡಿರುವ ತರಕಾರಿ. ಇದರಲ್ಲಿ ವಿಟಮಿನ್‌ ಎ, ಬಿ1, ಬಿ2 ಹಾಗೂ ಸಿ ಜೀವಸತ್ವಗಳಿವೆ. ಜೊತೆಗೆ ಮ್ಯಾಗ್ನೇಸಿಯಂ, ಪೊಟ್ಯಾಸಿಯಂ, ಮತ್ತು ಕಬ್ಬಿಣಾಂಶ ಹೊಂದಿದೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು, ಚಯಾಪಚಯ ಕಾರ್ಯ ಸುಧಾರಿಸಲು ಮತ್ತು ದೇಹದ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ನಿಯಮಿತವಾಗಿ ತೊಂಡೆಕಾಯಿ ಸೇವನೆಯಿಂದ ಪ್ರತಿನಿತ್ಯ ದೇಹಕ್ಕೆ ಅವಶ್ಯಕತೆಯಿರುವ ಪೋಷಕಾಂಶಗಳು ದೊರೆಯುತ್ತವೆ.

  • ಜೀರ್ಣಕ್ರಿಯೆ ಸುಧಾರಿಸುತ್ತದೆ

ತೊಂಡೆಕಾಯಿಯು ಉತ್ತಮ ನಾರಿನಾಂಶದಿಂದ ಕೂಡಿರುವ ತರಕಾರಿಯಾಗಿದೆ. ಹೀಗಾಗಿ ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೊಂಡೆಕಾಯಿಯಲ್ಲಿರುವ ನಾರಿನಾಂಶವು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಹೋಗಲಾಡಿಸುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ವಿರೇಚಕ ಗುಣವು ಜೀರ್ಣಾಂಗವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಜಠರದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

  • ತೂಕ ನಿರ್ವಹಣೆಗೆ ಸಹಕಾರಿ

ತೂಕ ನಿರ್ವಹಣೆಯಲ್ಲಿ ತೊಡಗಿಕೊಂಡಿರುವವರಿಗೆ ತೊಂಡೆಕಾಯಿ ಉತ್ತಮ ಆಹಾರವಾಗಿದೆ. ಇದರಲ್ಲಿರುವ ಕಡಿಮೆ ಕ್ಯಾಲರಿ ಮತ್ತು ಹೆಚ್ಚಿನ ನಾರಿನಾಂಶವು ಹಸಿವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ದೇಹಕ್ಕೆ ಸೇರುವ ಕ್ಯಾಲರಿ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ತೊಂಡೆಕಾಯಿಯಲ್ಲಿರುವ ನಾರಿನಾಂಶವು ಗ್ಲೂಕೋಸ್‌ ಅನ್ನು ನಿಧಾನಗತಿಯಲ್ಲಿ ಬಿಡುಗಡೆ ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಏರಿಳಿತವಾಗುವುದನ್ನು ನಿಯಂತ್ರಣದಲ್ಲಿರುತ್ತದೆ.

  • ಹೃದಯದ ಆರೋಗ್ಯ ಹೆಚ್ಚಿಸುತ್ತದೆ

ತೊಂಡೆಕಾಯಿಯಲ್ಲಿರುವ ಅಗತ್ಯ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯ ಕಾಪಾಡಲು ಉತ್ತಮವಾಗಿದೆ. ಇದರಲ್ಲಿರವು ಆಂಟಿಆಕ್ಸಿಡೆಂಟ್‌ಗಳು ಆಕ್ಸಿಡೇಟಿವ್‌ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದು ಹೃದ್ರೋಗದಿಂದ ನಿಮ್ಮನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೆ ತೊಂಡೆಕಾಯಿಯಲ್ಲಿರುವ ಪೊಟ್ಯಾಸಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಾರಿನಾಂಶವು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗೆ ತೊಂಡೆಕಾಯಿ ಹೃದಯದ ಆರೋಗ್ಯ ಹೆಚ್ಚಿಸುತ್ತದೆ.

  • ಚರ್ಮದ ಆರೋಗ್ಯ ಕಾಪಾಡುತ್ತದೆ

ಜೀವಸತ್ವ ಮತ್ತು ಆಂಟಿಒಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ತೊಂಡೆಕಾಯಿಯು ತ್ವಚೆಯ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಕೊಲಾಜಿನ್‌ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ವಿಟಮಿನ್‌ ಸಿ ಇದರಲ್ಲಿರುವುದರಿಂದ ಅದು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸುಕ್ಕುಗಟ್ಟುವಿಕೆ ಮತ್ತು ಚರ್ಮ ಕಳೆಗುಂದುವುದನ್ನು ತಡೆಯುತ್ತದೆ. ಸ್ವತಂತ್ರ ರ್‍ಯಾಡಿಕಲ್‌ಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯುತ್ತದೆ. ಅಕಾಲಿಕ ಮುಪ್ಪಾಗುವುದನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಆರೋಗ್ಯ ಕಾಪಾಡುವುದರ ಜೊತೆಗೆ ಹೊಳೆಯುವ ಮೈಬಣ್ಣವನ್ನು ನೀಡುತ್ತದೆ.

  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತೊಂಡೆಕಾಯಿಯು ಜೀವಸತ್ವಗಳಿಂದ ಸಮೃದ್ಧವಾಗಿದೆ. ಅದರಲ್ಲಿರುವ ವಿಟಮಿನ್‌ ಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಿಟಮಿನ್‌ ಸಿ ಯು ಬಿಳಿ ರಕ್ತ ಕಣಗಳನ್ನು ಉತ್ಪಾದಿಸುವುದರಿಂದ ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ತೊಂಡಕಾಯಿಯನ್ನು ನಿಯಮಿತವಾಗಿ ತಿನ್ನುವುದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ಋತುಮಾನದ ಸಾಮಾನ್ಯ ಕಾಯಿಲೆಗಳಾದ ಶೀತ, ಜ್ವರ ಮುಂತಾದವುಗಳಿಂದ ರಕ್ಷಣೆ ಒದಗಿಸುತ್ತದೆ.

  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಮಧುಮೇಹಿಗಳಿಗೆ ತೊಂಡೆಕಾಯಿ ಉತ್ತಮವಾಗಿದೆ. ಇದರಲ್ಲಿರುವ ಫೈಬರ್‌ ಅಂಶವು ರಕ್ತವು ಗ್ಲೂಕೋಸ್‌ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಅದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಸೇರುವುದು ಕಡಿಮೆಯಾಗುತ್ತದೆ. ಇದರಿಂದ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ತೊಂಡೆಕಾಯಿಯು ಕಡಿಮೆ ಗ್ಲೈಸೆಮಿಕ್‌ ಸೂಚಿಯನ್ನು ಹೊಂದಿದೆ. ಇದು ಮಧುಮೇಹಿಗಳಿಗೆ ಸುರಕ್ಷಿತ ಆಹಾರವಾಗಿದೆ.

  • ಶ್ವಾಸಕೋಶದ ಆರೋಗ್ಯ ಕಾಪಾಡುತ್ತದೆ

ತೊಂಡೆಕಾಯಿಯು ಕಫ ನಿವಾರಿಸುವ ಗುಣ ಹೊಂದಿದೆ. ಅದು ಶ್ವಾಸನಾಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೂಡಾ ಮಾಡುತ್ತದೆ. ತೊಂಡೆಕಾಯಿಯಲ್ಲಿರುವ ವಿಟಮಿನ್‌ ಎ ಶ್ವಾಸಕೋಶದ ಆರೋಗ್ಯ ಕಾಪಾಡಲು ಉತ್ತಮವಾಗಿದೆ. ನಿಯಮಿತವಾಗಿ ತೊಂಡೆಕಾಯಿಯನ್ನು ತಿನ್ನುವುದರಿಂದ ಶ್ವಾಸಕೋಶ ಮತ್ತು ಶ್ವಾಸನಾಳದ ಕಾಯಿಲೆಗಳು ದೂರವಾಗುತ್ತದೆ. ಜೊತೆಗೆ ಇದು ಉಸಿರಾಟದ ಸೋಂಕು ಮತ್ತು ರೋಗಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

  • ಮೂತ್ರಪಿಂಡದ ಆರೋಗ್ಯಕ್ಕೂ ಉತ್ತಮ

ತೊಂಡೆಕಾಯಿಯು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ಮೂತ್ರಪಿಂಡದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿರುವ ವಿಷ ಮತ್ತು ಹೆಚ್ಚುವರಿ ದ್ರವವನ್ನು ಹೊರಹಾಕಲು ಸಹಾಯಮಾಡುತ್ತದೆ. ಇದರಿಂದ ಮೂತ್ರಪಿಂಡದ ಆರೋಗ್ಯ ವರ್ಧಿಸುತ್ತದೆ. ಕಿಡ್ನಿಯ ಕಾರ್ಯವನ್ನು ಉತ್ತೇಜಿಸುತ್ತದೆ. ಕಿಡ್ನಿ ಸ್ಟೋನ್‌ ಆಗುವುದನ್ನು ತಪ್ಪಿಸುತ್ತದೆ.

Whats_app_banner